ಶಾಸಕ ಜಿ.ಡಿ. ಹರೀಶ್ ಗೌಡರ ಮನವಿಗೆ ಸರ್ಕಾರದ ಸ್ಪಂದನೆ
ಬೆಂಗಳೂರು : ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಬೆಳೆಗಳಿಗೆ ಅನುಕೂಲ ಕಲ್ಪಿಸುವಂತೆ ಶಾಸಕ ಜಿ.ಡಿ. ಹರೀಶ್ ಗೌಡ ಅವರ ಮನವಿಗೆ ಸರ್ಕಾರ ಸ್ಪಂದಿಸಿ, ಸಂಬಂಧಿಸಿದಂತೆ ಅಧಿಕಾರಿಗಳಿಗೆ ನೀರು ಬಿಡುಗಡೆ ಮಾಡುವಂತೆ ಸೂಚಿಸಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಸಚಿವ ನರೇಂದ್ರ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ನೀರಾವರಿ ನಿಗಮ ನಿಯಮಿತದಿಂದ ಆಯೋಜಿಸಿದ್ದ 2026-27ನೇ ಸಾಲಿನ ಹಾರಂಗಿ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಡಿ. ಹರೀಶ್ ಗೌಡ, ಹುಣಸೂರು ತಾಲೂಕಿನ ಗಾವಡಗೆರೆ, ಜಾಬಗೆರೆ, ಚಿಕ್ಕಕಾಡನಹಳ್ಳಿ, ಹುಲ್ಯಾಳು, ಮಾಚಾಬಾಯನಹಳ್ಳಿ, ಮುಳ್ಳೂರು, ಅಗ್ರಹಾರ ಕೆರೆ ಸೇರಿದಂತೆ ಇನ್ನೂ ಹಲವು ಕೆರೆಗಳಿಗೆ ನೀರು ಪೂರೈಕೆ ಮಾಡುವಂತೆ ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವ ನರೇಂದ್ರ ಸ್ವಾಮಿ, ಕಳೆದ 20 ವರ್ಷಗಳಿಂದ ಹಾರಂಗಿ ಜಲಾಶಯಕ್ಕೆ ಬಂದಿರುವ ಒಳಹರಿವಿನ ಪ್ರಮಾಣವನ್ನು ಪರಿಗಣಿಸಿ, ಹಾರಂಗಿ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ವ್ಯವಸಾಯಕ್ಕೆ ಅನುಕೂಲವಾಗುವಂತೆ ಕಟ್ಟು ನೀರಿನ ಪದ್ಧತಿಯನ್ನು ಅಳವಡಿಸಿ ನೀರನ್ನು ಹರಿಸಿ, ನೀರು ನಿರ್ವಹಣೆ ಮಾಡುವಂತೆ ಸೂಚಿಸಿದರು. ಅಲ್ಲದೇ ಈ ಬಗ್ಗೆ ರೈತರಿಗೆ ಸೂಕ್ತ ತಿಳುವಳಿಕೆ ನೀಡಲು ಹಾಗೂ ಸೂಕ್ತ ಪ್ರಕಟಣೆ ಹೊರಡಿಸುವಂತೆ ಹಾಗೂ ಪ್ರಸ್ತುತ ಜಲ ವರ್ಷದಲ್ಲಿ ಬೇಸಿಗೆ ಅವಧಿಯಲ್ಲಿ ನೀರಿನ ಅಭಾವವಿದ್ದಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆ ಹಾಗೂ ಕಟ್ಟೆಗಳನ್ನು ತುಂಬಿಸಲು ನಾಲೆಗಳ ಮೂಲಕ ನೀರನ್ನು ಹರಿಸಲು ತಿಳಿಸಿದರು.
ಇದಕ್ಕೂ ಮುನ್ನ ಸಭೆಯ ಆರಂಭದಲ್ಲಿ ಮಾತನಾಡಿದ ಹಾರಂಗಿ ಯೋಜನಾ ವೃತ್ತ ಅಧೀಕ್ಷಕ ಇಂಜಿನಿಯರ್, ಹಾರಂಗಿ ಜಲಾಶಯ ಭರ್ತಿಯಾಗಿದೆ. ಪ್ರಸ್ತುತ ನೀರಿನ ಮಟ್ಟ 2856.79 ಅಡಿಗಳಿದ್ದು, 7 ಟಿಎಂಸಿ ಉಪಯುಕ್ತ ನೀರಿನ ಸಂಗ್ರಹವಿದೆ. ಈವರೆಗಿನ ಕನಿಷ್ಠ ಒಳಹರಿವು ಪರಿಗಣಿಸಿದರೆ ಜಲಾಶಯಕ್ಕೆ ಕನಿಷ್ಠ 9.51 ಟಿಎಂಸಿ ನೀರು ಬರುವ ಬಗ್ಗೆ ಅಂದಾಜಿಸಲಾಗಿದೆ. ಈ ಆಧಾರದ ಮೇಲೆ ಕಟ್ಟು ನೀರಾವರಿ ಪದ್ಧತಿಯಂತೆ ನೀರು ಹರಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಕೆ.ವೆಂಕಟೇಶ್, ಮಂತರ್‌ಗೌಡ, ಎ. ಮಂಜು, ಭೋಸ್‌ರಾಜ್, ಡಿ. ರವಿಶಂಕರ್, ಹಾರಂಗಿ ಮಹಾಮಂಡಲದ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ. ಚೌಡೇಗೌಡ ಸೇರಿದಂತೆ ಇತರರಿದ್ದರು.




