Mysore
27
overcast clouds

Social Media

ಸೋಮವಾರ, 24 ಆಗಸ್ಟ್ 2026
Light
Dark

ಅಧಿಕಾರಿಗಳಿಗೆ ಚೆಲ್ಲಾಟ; ಅಲೆಮಾರಿಗಳ ಅಲೆದಾಟ

ರಮೇಶ್ ಹೆಚ್.ಕೆ.

ಒಳ ಮೀಸಲಾತಿ ಜಾತಿ ಪ್ರಮಾಣ ಪತ್ರ ವಿತರಣೆ ಗೊಂದಲ

ಸುದೀರ್ಘವಾದ ಒಳ ಮೀಸಲಾತಿ ಹೋರಾಟದ ಬಳಿಕ ಸದ್ಯ ಇರುವ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯಗಳನ್ನು ಎ, ಬಿ, ಸಿ ಎಂದು ಮೂರು ವಿಭಾಗಗಳಾಗಿ ವಿಭಾಗಿಸಿದ್ದು ಮೀಸಲಾತಿ ಪ್ರಮಾಣವನ್ನೂ ೬/೬/೫ ರ ಅನುಪಾತದಲ್ಲಿ ನಿಗದಿಪಡಿಸಿದೆ.

ಈ ಪೈಕಿ ಔದ್ಯೋಗಿಕವಾಗಿ ಅಳವಡಿಸಲ್ಪಡುವ ಒಳ ಮೀಸಲಾತಿ ಸೌಲಭ್ಯವು ಇದೀಗ ಪರಿಶಿಷ್ಟ ಜಾತಿಯ ಅಲೆಮಾರಿಗಳ ಪಾಲಿಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಪರಿಶಿಷ್ಟ ಜಾತಿ ಅಲೆಮಾರಿ ಪಟ್ಟಿಯಲ್ಲಿ ಸುಮಾರು ೪೯ರಿಂದ ೫೧ ಜಾತಿಗಳು ಇದ್ದು, ಅವುಗಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಸರ್ಕಾರದ ಹಲವು ಆಶಯಗಳ ನಡುವೆಯೂ ಕೂಡ ಇನ್ನೂ ಇರುವುದಕ್ಕೊಂದು ಪುಟ್ಟ ಮನೆ ಮತ್ತೆ ಉಳಲು ಒಂದು ಎಕರೆ ಭೂಮಿಯಿಲ್ಲದೇ ಇರುವಂತಹ ಸ್ಥಿತಿಯಲ್ಲಿ ಅಲೆಮಾರಿಗಳು ಜೀವನ ಸಾಗಿಸುತ್ತಿದ್ದು, ಅವರ ಪರಿಸ್ಥಿತಿಯು ದಯನೀಯವಾಗಿ ಮುಂದುವರೆದಿದೆ.

ಇದೀಗ ಉದ್ಯೋಗಕ್ಕಾಗಿ ಕಾತರದಿಂದ ಇದ್ದ ಸಾವಿರಾರು ಅಭ್ಯರ್ಥಿಗಳ ಹೋರಾಟಕ್ಕೆ ಮಣಿದು ನೂತನ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ಹಲವು ಇಲಾಖೆಗಳ ನೇಮಕಾತಿಗೆ ಅಽಸೂಚನೆಯನ್ನು ಹೊರಡಿಸಿದ್ದು, ಇದು ಉದ್ಯೋಗ ಬಯಸಿ ಅದಕ್ಕಾಗಿ ಶ್ರಮ ಹಾಕುತ್ತಿರುವ ಅಭ್ಯರ್ಥಿಗಳ ಪಾಲಿಗೆ ಅತ್ಯಂತ ಆಶಾದಾಯಕವಾದಂತಹ ಬೆಳವಣಿಗೆ ಆಗಿದೆ. ಆದರೆ ಇನ್ನೂ ಕೂಡ ಒಳ ಮೀಸಲಾತಿಯ ‘ಸಿ’ ಗುಂಪಿನ ಒಳಗೆ ಸೇರ್ಪಡೆಗೊಂಡಿದ್ದರೂ ಕೂಡ ಪರಿಶಿಷ್ಟ ಜಾತಿ ಸಮುದಾಯದ ಒಳಗೆ ಬರುವ ಅಲೆಮಾರಿ ಮತ್ತು ಅರೆ ಅಲೆಮಾರಿ ವರ್ಗದ ಸುಮಾರು ೪೯ರಿಂದ ೫೧ ಜಾತಿಯ ಸಮುದಾಯಗಳು ನವೀಕೃತ ಜಾತಿ ಪ್ರಮಾಣ ಪತ್ರವನ್ನು ಪಡೆಯಲು ಒದ್ದಾಟ ನಡೆಸಿವೆ. ಮುಖ್ಯವಾಗಿ ರಾಜ್ಯದ ಒಳಗಿರುವ ರಾಜಸ್ವ ನಿರೀಕ್ಷರಿಂದ ಹಿಡಿದು ತಹಸಿಲ್ದಾರರವರೆಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿಯ ಈ ಅಲೆಮಾರಿ ಜಾತಿಗಳಿಗೆ ಜಾತಿ ಪ್ರಮಾಣವನ್ನು ವಿತರಿಸುವುದು ಸವಾಲಿನ ಕೆಲಸವಾಗಿದೆ.

ಉದಾಹರಣೆಗೆ, ಬೆಂಗಳೂರಿನಲ್ಲಿ ಹತ್ತಾರು ವರ್ಷಗಳಿಂದ ವಾಸವಾಗಿರುವ ಶಿಳ್ಳೇಕ್ಯಾತ ಸಮುದಾಯದ ವ್ಯಕ್ತಿಯೊಬ್ಬರು ಈಗಾಗಲೇ ಇರುವ ತಮ್ಮ ಜಾತಿ ಪ್ರಮಾಣ ಪತ್ರವನ್ನು ‘ಸಿ’ ಗುಂಪಿಗೆ ನವೀಕರಿಸಿಕೊಳ್ಳುವ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಕೆ ಮಾಡಿ ೨೦ ದಿನಗಳ ನಂತರ ಹೋಗಿ ವಿಚಾರಿಸಿದರೆ ಬೆಂಗಳೂರು ಉತ್ತರ ವಲಯದ ಗ್ರೇಡ್-೨ ತಹಸಿಲ್ದಾರ್ ‘ನಿಮ್ಮ ಜಾತಿಯ ಹೆಸರು, ಸಕಾಲ ವೆಬ್ ಸೈಟ್‌ನ ಪಟ್ಟಿಯಲ್ಲಿ ತೋರಿಸುತ್ತಿಲ್ಲ, ನಿಮ್ಮಂತೆಯೇ ಸುಮಾರು ೧೭ ಜಾತಿಗಳ ಹೆಸರು ಈ ಪಟ್ಟಿಯಲ್ಲಿ ಇಲ್ಲ, ನಿಮಗೆ ಜಾತಿ ಪ್ರಮಾಣ ಪತ್ರವನ್ನು ನೀಡಲು ಆಗುವುದಿಲ್ಲ’ ಎಂದು ಹೇಳುತ್ತಿದ್ದಾರೆ. ಈಗಾಗಲೇ ಆರ್‌ಡಿ ಸಂಖ್ಯೆ ಸಮೇತ ಇದ್ದಂತಹ ಮತ್ತು ಸರ್ಕಾರವೇ ವಿತರಿಸಿದಂತಹ ಜಾತಿ ಪ್ರಮಾಣದ ಪ್ರತಿಯನ್ನು ತೋರಿಸಿ ಪ್ರಶ್ನಿಸಿದರೆ ‘ಸರ್ಕಾರಿ ವೆಬ್‌ಸೈಟ್‌ನಲ್ಲಿ ಜಾತಿಯ ಹೆಸರೇ ಇಲ್ಲದೆ ಇದ್ದರೆ ನಾವೇನು ಮಾಡಲಾಗುತ್ತದೆ, ೨೦೧೭ರ ನಂತರದ ಯಾವುದೇ ದತ್ತಾಂಶವು ನಮ್ಮಲ್ಲಿ ಇಲ್ಲ, ನಿಮ್ಮ ಮೂಲ ಊರಿಗೆ ಹೋಗಿ, ಅಲ್ಲಿ ತಹಸಿಲ್ದಾರರ ಬಳಿ ನೀವು ಅಲ್ಲಿ ಇದ್ದದ್ದಕ್ಕೆ ಮತ್ತು ನಿಮ್ಮ ಜಾತಿ ಅಲ್ಲಿತ್ತು, ಎನ್ನುವುದಕ್ಕೆ ಅಫಿಡವಿಟ್ ಮಾಡಿಸಿ, ಅದನ್ನು ದೃಢೀಕರಿಸಿ ತೆಗೆದುಕೊಂಡು ಬನ್ನಿ ಎನ್ನುತ್ತಿದ್ದಾರೆ. ನಾವು ಊರು ಬಿಟ್ಟು ಬಹಳ ವರ್ಷವಾಗಿದೆ ಎಂದರೂ ಅವರ ಮನಸ್ಸು ಕರಗುತ್ತಿಲ್ಲ. ಇದರಿಂದಾಗಿ ನಿರ್ವಾಹವಿಲ್ಲದೇ ಶಿಳ್ಳೇಕ್ಯಾತ ಸಮುದಾಯದ ಆ ವ್ಯಕ್ತಿಯ ಇಬ್ಬರು ಮಕ್ಕಳು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆದರೆ ಅವರ ಅರ್ಜಿ ಸಲ್ಲಿಕೆ ದಿನಾಂಕ ಮುಗಿಯುತ್ತಿದೆ.

ಒಂದೆಡೆ ತಡವಾಗಿ ಕರೆಯುತ್ತಿರುವ ಸರ್ಕಾರದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಕೆಯ ಅವಧಿ ಮುಕ್ತಾಯ ಆಗುತ್ತಿದೆ, ಇನ್ನೊಂದೆಡೆ ಸಕಾಲ  ವೆಬ್‌ಸೈಟ್‌ನಲ್ಲಿ ಶಿಳ್ಳೇಕ್ಯಾತ ಸಮುದಾಯದ ಹೆಸರು ಕಾಣೆಯಾಗಿದೆ. ಹೋಗಲಿ ಹುಟ್ಟೂರಿಗೆ ಹೋಗಿ ದೃಢೀಕರಣ ಪತ್ರ ಪಡೆಯೋಣ ಎಂದರೆ ಅಲ್ಲಿ, ಜಾತಿಯ ಜನರು ಇದ್ದ ಕುರುಹೂ ಇಲ್ಲ, ಅಲ್ಲಿ ತಹಸಿಲ್ದಾರರಿಗೆ ಹೇಳಲು ಅಕ್ಕ ಪಕ್ಕ ಇದ್ದ ಜನರೂ ಬದಲಾಗಿದ್ದಾರೆ, ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಆರೇಳು ಲಕ್ಷಗಳಷ್ಟಿರುವ ಪರಿಶಿಷ್ಟ ಜಾತಿ ಸಮುದಾಯದ ಅಲೆಮಾರಿಗಳು ಏನು ಮಾಡಬೇಕು? ಎಂಬುದಕ್ಕೆ ಸರ್ಕಾರವೇ ಉತ್ತರಿಸಬೇಕು.

ತಹಸಿಲ್ದಾರರಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದರೆ, ಜಾತಿ ಪ್ರಮಾಣ ಪತ್ರ ವಿತರಿಸಲೆಂದೇ ಹೊಸ ಕೋಶವೊಂದನ್ನು ತೆರೆದು, ಅದರಲ್ಲಿ ಎ ಬಿ ಸಿ ವರ್ಗದ ಪರಿಶಿಷ್ಟ ಜಾತಿಗಳ ಕೌಂಟರ್ ಅನ್ನು ಮಾಡಿ, ನಿಗದಿತ ವೇಳೆಗೆ ಜಾತಿ ಪತ್ರವನ್ನು ಒದಗಿಸುವ ಕೆಲಸ ಮಾಡಬೇಕು. ಇಲ್ಲವೇ ನೂತನ ಮುಖ್ಯಮಂತ್ರಿಗಳು ಈಗಾಗಲೇ ಘೋಷಿಸಿರುವ ಆದಿವಾಸಿ ಮತ್ತು ಅಲೆಮಾರಿ ಆಯೋಗಕ್ಕೆ ಪರಿಶಿಷ್ಟ ಜಾತಿ ಅಲೆಮಾರಿಗಳ ಜಾತಿ ಪ್ರಮಾಣ ಪತ್ರ ವಿತರಣೆಯ ಜವಾಬ್ದಾರಿಯನ್ನು ನೀಡಬೇಕು. ಕೊನೆಯಲ್ಲಿ ಹೇಳುದಾದರೆ, ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ವರ್ಗೀಕೃತಗೊಂಡಿರುವ ಒಳ ಮೀಸಲಾತಿ ಸೌಲಭ್ಯವು ಜಾರಿ ಆಗುವಾಗ ಯಾವ ಸಮುದಾಯಗಳನ್ನು ಅದು ಹೊರಗಿಡಬಾರದು ಎಂದುಕೊಂಡಿತ್ತೋ ಅದೇ ಸಮುದಾಯಗಳನ್ನು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಹೊರಗಿಡುವ ಕೆಲಸ ಮಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು ಮತ್ತು ಪರಿಶಿಷ್ಟ – ಹಿಂದುಳಿದ ವರ್ಗಗಳಿಗೆ ಸೇರಿದ ಅಲೆಮಾರಿ ಸಮುದಾಯಗಳ ಬದುಕು ಹಸನಾಗುವ ನಿಟ್ಟಿನಲ್ಲಿ, ಈಗ ತಾತ್ಕಾಲಿಕ ಮತ್ತು ಕ್ರಮೇಣ ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು ಪ್ರಮಾಣ ಪತ್ರ ಪಡೆಯದ ಕಾರಣಕ್ಕಾಗಿ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಅವಕಾಶದಿಂದ ವಂಚಿತರಾದ ಅಭ್ಯರ್ಥಿಗಳಿಗೆ ಅನುಕೂಲ ಆಗುವಂತೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಬೇಕು.

” ಒಳ ಮೀಸಲಾತಿ ಸೌಲಭ್ಯವು ಜಾರಿ ಆಗುವಾಗ ಯಾವ ಸಮುದಾಯಗಳನ್ನು ಅದು ಹೊರಗಿಡಬಾರದು ಎಂದುಕೊಂಡಿತ್ತೋ ಅದೇ ಸಮುದಾಯಗಳನ್ನು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಹೊರಗಿಡುವ ಕೆಲಸ ಮಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು.”

 

 

Tags:
error: Content is protected !!