ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ ವಾಹನ ಸೇರಿದಂತೆ ಒಟ್ಟು 8 ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ದಾಳಿ ನಡೆಸಿ ಪೀಠೋಪಕರಣ ಹಾಗೂ ದಾಖಲೆಗಳನ್ನು ಜಖಂಗೊಳಿಸಿದ್ದಾರೆ. ಈ ಸಂಬಂಧ ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಮಾಹಿತಿ ಪ್ರಕಾರ, ಆಗಸ್ಟ್ 15ರಂದು ಹನೂರು ವಲಯದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನು ಜಿಲ್ಲಾಧಿಕಾರಿಗಳಿಂದ ನೇಮಕಗೊಂಡ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ರವರು ನಡೆಸುತ್ತಿದ್ದಾರೆ.
ಆದರೆ ಅದೇ ವಾರದಲ್ಲಿ ದುಷ್ಕರ್ಮಿಗಳು ಸಂಖ್ಯೆ KA 10 G 0466 ಇಲಾಖಾ ವಾಹನ ಧ್ವಂಸಗೊಳಿಸಿದ್ದಾರೆ. ಕೊತ್ತನೂರು ವಲಯದ ಸುಂಡಳ್ಳಿ, ನಾಲಾಬೋಳಿ, ಮಿಂಚಿನಾರಹಳ್ಳಿ, ಹನೂರು ವಲಯದ ಹೊಳೆಮುರಿದಟ್ಟಿ, ಬೇಟೇಗಾರನ ಗುಡ್ಡ, ಬೂದಿಕೆರೆ, ಕಳ್ಳಿದೊಡ್ಡಿ ಹಾಗೂ ಮಲೆ ಮಹದೇಶ್ವರ ವಿಭಾಗದ ಸೆಲ್ಲಿಪುರ ಸೇರಿ 8 ಕಳ್ಳಬೇಟೆ ತಡೆ ಶಿಬಿರಗಳನ್ನು ನಾಶಪಡಿಸಿದ್ದಾರೆ.
ಇದಲ್ಲದೆ, ಆಗಸ್ಟ್ 19ರ ಮುಂಜಾನೆ 4.30ರ ಸುಮಾರಿಗೆ ಮಲೆ ಮಹದೇಶ್ವರ ವಿಭಾಗದ ಕೊಳ್ಳೇಗಾಲ ಬಫರ್ ವಲಯದ ಸತ್ತೇಗಾಲ ಜಾಗೀರಿ ಶಾಖೆಯ ಚಿಕ್ಕಮಾಕಳ್ಳಿ ಅರಣ್ಯ ಪ್ರದೇಶದಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಸುಮಾರು 2.50 ಹೆಕ್ಟೇರ್ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಇದರಿಂದ ಸರ್ಕಾರಕ್ಕೆ ಅಪಾರ ನಷ್ಟ ಸಂಭವಿಸಿದೆ.
ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲಾ ಪ್ರಕರಣಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಆಧಾರದ ಮೇಲೆ FIR ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




