ಅನ್ಬುರಾಜ್
ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ ಜನರ ಬದುಕಿನಲ್ಲಿ ಭಯ ಮತ್ತು ಜೀವನೋಪಾಯದ ಸಂಕಷ್ಟವನ್ನು ಸೃಷ್ಟಿಸುವ ಒಂದು ಅಧಿಕಾರದ ಸಾಧನವಾಗಿ ಅದು ಬದಲಾಗುತ್ತಿರುವುದು ದೊಡ್ಡ ಅಪಾಯದ ಸೂಚನೆಯಾಗಿದೆ. ತಮಿಳುನಾಡು ಅರಣ್ಯ ಇಲಾಖೆಯಾಗಿರಲಿ, ಕರ್ನಾಟಕ ಅರಣ್ಯ ಇಲಾಖೆಯಾಗಿರಲಿ, ಅವುಗಳ ಕಾರ್ಯವೈಖರಿಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುವುದಿಲ್ಲ. ತಲೆತಲಾಂತರಗಳಿಂದ ಅರಣ್ಯದ ಅಂಚಿನಲ್ಲಿ ಬದುಕುತ್ತಿರುವ ಜನರು ತಮ್ಮ ಜೀವನೋಪಾಯಕ್ಕಾಗಿ ಅರಣ್ಯವನ್ನು ಅವಲಂಬಿಸಿರುವ ಸಂದರ್ಭದಲ್ಲಿ, ಅವರನ್ನು ರಕ್ಷಿಸುವ ಬದಲು ಭಯಭೀತರನ್ನಾಗಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಮೂವರ ಮರಣವನ್ನೂ ಪ್ರತ್ಯೇಕ ಘಟನೆಗಳಾಗಿ ಮಾತ್ರ ನೋಡಬಾರದು; ಅರಣ್ಯ ಇಲಾಖೆಯ ಅಧಿಕಾರದ ಧೋರಣೆಗೂ, ಅರಣ್ಯವನ್ನು ಅವಲಂಬಿಸಿ ಬದುಕುತ್ತಿರುವ ಜನರಿಗೂ ನಡುವೆ ಉಂಟಾಗುತ್ತಿರುವ ಆಳವಾದ ಸಂಘರ್ಷವನ್ನು ಅದು ಬಹಿರಂಗಪಡಿಸುತ್ತದೆ.
ಒಂದು ಗಣರಾಜ್ಯದ ನಿಜವಾದ ಅರ್ಹತೆ, ಅದು ಅಧಿಕಾರದಲ್ಲಿರುವವರ ಪರವಾಗಿ ಎಷ್ಟು ಬಲವಾಗಿ ನಿಲ್ಲುತ್ತದೆ ಎಂಬುದರಲ್ಲಿ ಇಲ್ಲ. ಅಧಿಕಾರವಿಲ್ಲದವರ ಪರವಾಗಿ ಅದು ಎಷ್ಟು ಪ್ರಾಮಾಣಿಕವಾಗಿ ನಿಲ್ಲುತ್ತದೆ ಎಂಬುದರಲ್ಲಿದೆ. ಇಂದು ಅರಣ್ಯ ಇಲಾಖೆಯವರಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ಮೂವರು ರೈತರ ಕುಟುಂಬಗಳೂ ಅಸಹಾಯಕ ಸ್ಥಿತಿಯಲ್ಲಿ ನಿಂತಿವೆ. ಅವರ ಬಳಿ ಬಂದೂಕಿಲ್ಲ. ಅಧಿಕಾರವಿಲ್ಲ. ಅವರ ಬಳಿ ಇರುವುದು ಒಂದೇ ಒಂದು – ಸತ್ಯವನ್ನು ತಿಳಿದುಕೊಳ್ಳುವ ಹಕ್ಕು. ಆ ಹಕ್ಕನ್ನು ಸರ್ಕಾರ ಗೌರವಿಸಬೇಕು. ಈ ಮೂವರು ಜೀವಗಳ ಮರಣವನ್ನು ಕೇವಲ ಒಂದು ಪ್ರತ್ಯೇಕ ಘಟನೆಯಾಗಿ ನೋಡಬಾರದು. ಅದರ ಹಿಂದೆ ಇರುವ ಸಾಮಾಜಿಕ ಪರಿಸ್ಥಿತಿಯನ್ನು, ಅರಣ್ಯವನ್ನು ಅವಲಂಬಿಸಿ ಬದುಕುತ್ತಿರುವ ಜನರ ಜೀವನವನ್ನು, ಅಧಿಕಾರಕ್ಕೂ ಜನರಿಗೂ ನಡುವೆ ಹೆಚ್ಚಾಗುತ್ತಿರುವ ಅಪನಂಬಿಕೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಅರಣ್ಯವನ್ನು ಅವಲಂಬಿಸಿ ಬದುಕುವ ಜನರು ಅರಣ್ಯದ ಶತ್ರುಗಳಲ್ಲ. ಅವರು ಹಲವು ತಲೆಮಾರುಗಳಿಂದ ಆ ನೈಸರ್ಗಿಕ ಪರಿಸರದೊಂದಿಗೆ ಬದುಕಿದವರು. ಅವರ ಆಹಾರ, ಜಾನುವಾರು ಸಾಕಣೆ, ಸಣ್ಣ ಕೃಷಿ, ಔಷಧಿಯ ಜ್ಞಾನ, ಸಂಸ್ಕ ತಿ, ಜೀವನೋಪಾಯ – ಅವರ ಬದುಕಿನ ಅನೇಕ ಅಂಶಗಳು ಅರಣ್ಯದೊಂದಿಗೆ ಬೆಸೆದುಕೊಂಡಿವೆ. ಒಂದು ಸಮು ದಾಯದ ಆರ್ಥಿಕ ಬದುಕನ್ನು ಹಾಳು ಮಾಡಿ ದರೆ, ಅದರ ಪರಿಣಾಮ ಕೇವಲ ಆರ್ಥಿಕ ಸಮಸ್ಯೆಯಾಗಿ ಉಳಿಯುವುದಿಲ್ಲ. ಅದು ಇಡೀ ಕುಟುಂಬದ ಸಮಸ್ಯೆಯಾಗುತ್ತದೆ. ಸಾಮಾಜಿಕ ಸಮಸ್ಯೆಯಾಗುತ್ತದೆ.
ಕೊನೆಗೆ ಅದು ಸರ್ಕಾರ ಮತ್ತು ಜನರ ನಡುವಿನ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಅರಣ್ಯವನ್ನು ರಕ್ಷಿಸುವ ಸರ್ಕಾರದ ನೀತಿಯಲ್ಲಿ, ಅರಣ್ಯವನ್ನು ಅವಲಂಬಿಸಿ ಬದುಕುತ್ತಿರುವ ಜನರ ಜೀವಕ್ಕೂ ಹಾಗೂ ಸುರಕ್ಷತೆಗೂ ಸಮಾನ ಮಹತ್ವ ನೀಡಬೇಕು ಎಂದು ಜನರು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ.
ಈಗ ಈ ಮೂವರು ರೈತರ ಸಾವಿನ ಕುರಿತು ಜನರು ಮುಂದಿಡುತ್ತಿರುವ ಆರೋಪವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಅರಣ್ಯ ಇಲಾಖೆಯವರು ಅವರು ಜಿಂಕೆ ಬೇಟೆಯಾಡಲು ಹೋಗಿದ್ದವರು ಎಂಬ ಆರೋಪವನ್ನು ಮುಂದಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆ ಪ್ರದೇಶದ ಗ್ರಾಮಸ್ಥರು ಸಂಪೂರ್ಣವಾಗಿ ಬೇರೆಯದೇ ಮಾಹಿತಿಯನ್ನು ನೀಡಿದ್ದಾರೆ. ಈ ಮೂವರು ರೈತರು ತಮ್ಮ ಹಸುಗಳು ಅರಣ್ಯ ಪ್ರದೇಶಕ್ಕೆ ಮೇಯಲು ಹೋಗಿ ಹಿಂದಿರುಗದೆ ಇದ್ದುದರಿಂದ, ಅವುಗಳನ್ನು ಹುಡುಕಿಕೊಂಡು ಹೋಗಿದ್ದವರು ಎಂದು ಅವರು ಹೇಳುತ್ತಾರೆ. ರಾತ್ರಿ ಆಗಿದ್ದರಿಂದ ಅಲ್ಲಿಯೇ ಉಳಿದುಕೊಂಡು, ಬೆಳಿಗ್ಗೆ ಹಸುಗಳನ್ನು ಹುಡುಕಿಕೊಂಡು ಹಿಂದಿರುಗಬಹುದು ಎಂಬ ಉದ್ದೇಶದಿಂದ ಅವರು ಮಲಗಿದ್ದಾಗ, ಅರಣ್ಯ ಇಲಾಖೆಯವರು ಅವರನ್ನು ಹಿಡಿದುಕೊಂಡು ಹೋಗಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆಯ ವಶದಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿಯೊಬ್ಬರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಈ ಎರಡು ಹೇಳಿಕೆಗಳಲ್ಲಿ ಯಾವುದು ಸತ್ಯ? ಎಂಬ ಪ್ರಶ್ನೆಯನ್ನು ನಾವು ಕೇಳಬಾರದು ಎಂಬುದಲ್ಲ; ಸತ್ಯವನ್ನು ತಿಳಿದುಕೊಳ್ಳಲು ಸಮಗ್ರ ಮತ್ತು ಸ್ವತಂತ್ರ ತನಿಖೆ ನಡೆಯಬೇಕು. ಬಾಧಿತರು ಹೇಳುವ ಮಾತುಗಳಿಗೆ ನ್ಯಾಯಯುತವಾದ ಮಹತ್ವ ನೀಡಬೇಕು. ಅರಣ್ಯ ಇಲಾಖೆಯವರ ಹೇಳಿಕೆಯೊಂದನ್ನೇ ಅಂತಿಮ ಸತ್ಯವೆಂದು ಪರಿಗಣಿಸಬಾರದು.
ಸರ್ಕಾರ ತಕ್ಷಣ ಮಾಡಬೇಕಾದ ಕೆಲಸವೆಂದರೆ, ಈ ಸಾವಿಗೆ ಕಾರಣರಾದವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಗುಂಡು ಹಾರಿಸಲು ಆದೇಶ ನೀಡಿದ ಮೇಲಧಿಕಾರಿಯ ಪಾತ್ರವೂ ತನಿಖೆಗೆ ಒಳಪಡಬೇಕು. ತಪ್ಪಿತಸ್ಥರೆಂದು ತನಿಖೆಯಲ್ಲಿ ದೃಢಪಟ್ಟರೆ ಅವರ ಮೇಲೂ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು. ಬಾಧಿತ ಕುಟುಂಬಗಳಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಅದೇ ಸಮಯದಲ್ಲಿ, ಬಾಧಿತ ಜನರ ನಂಬಿಕೆಯನ್ನು ಮರಳಿ ಪಡೆಯುವ ರೀತಿಯಲ್ಲಿ, ಈ ಪ್ರಕರಣದ ಕುರಿತು ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ನಡೆಯಬೇಕು.
ಬಂಧಿಸುವುದಕ್ಕೂ ಕೊಲ್ಲುವುದಕ್ಕೂ ವ್ಯತ್ಯಾಸವಿದೆ. ಪರಿಹಾರ ನ್ಯಾಯಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ. ಹಣ ನೀಡಿಬಿಟ್ಟರೆ ಒಂದು ಜೀವದ ಮೌಲ್ಯ ಮುಗಿದು ಹೋಗುವುದಿಲ್ಲ. ಪರಿಹಾರ ಕುಟುಂಬದ ಬದುಕನ್ನು ಸಾಗಿಸಲು. ನ್ಯಾಯ ಸತ್ಯವನ್ನು ಸ್ಥಾಪಿಸಲು. ಈ ಕುಟುಂಬಗಳ ಮಕ್ಕಳ ಶಿಕ್ಷಣ, ಜೀವನೋಪಾಯ ಮತ್ತು ಕುಟುಂಬದ ಭವಿಷ್ಯವನ್ನು ಸರ್ಕಾರ ಗಮನಿಸಬೇಕು. ಅದೇ ಸಮಯದಲ್ಲಿ, ತನಿಖೆಯಲ್ಲಿ ಕಾನೂನುಬಾಹಿರ ಹತ್ಯೆ ಅಥವಾ ಅಧಿಕಾರದ ಅತಿಕ್ರಮಣ ನಡೆದಿದೆ ಎಂಬುದು ದೃಢಪಟ್ಟರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಅಪರಾಧಾತ್ಮಕ ಕ್ರಮ ಕೈಗೊಳ್ಳಬೇಕು.
ಸಮವಸ್ತ್ರ ಧರಿಸಿರುವುದು ಯಾರಿಗೂ ಕಾನೂನಿಗಿಂತ ಮೇಲಿನ ಅಧಿಕಾರವನ್ನು ನೀಡುವುದಿಲ್ಲ.ಸರ್ಕಾರಿ ಸೇವೆಯಲ್ಲಿರುವುದು ಅಧಿಕಾರವನ್ನು ಮಾತ್ರವಲ್ಲ; ಹೊಣೆಗಾರಿಕೆಯನ್ನೂ ಕೂಡ ಹೆಚ್ಚಿಸುತ್ತದೆ. ಇಂದು ಸರ್ಕಾರ ಮಾಡಬೇಕಾದದ್ದು ಅರಣ್ಯ ಪ್ರದೇಶದ ಜನರ ಜೀವನವನ್ನು ಅರ್ಥಮಾಡಿಕೊಳ್ಳುವುದು. ಅವರ ಜೀವನೋಪಾಯವನ್ನು ರಕ್ಷಿಸುವುದು.ಅವರ ಹಕ್ಕುಗಳನ್ನು ಗೌರವಿಸುವುದು. ಅರಣ್ಯ ಸಂರಕ್ಷಣೆ ಮತ್ತು ಜನರ ಜೀವ ನೋಪಾಯದ ನಡುವೆ ಸಮತೋಲನವನ್ನು ನಿರ್ಮಿಸುವುದು. ಅಧಿಕಾರಿಗಳ ಕಾರ್ಯವೈಖರಿಯ ಕುರಿತು ಆರೋಪಗಳು ಕೇಳಿಬಂದಾಗ, ಅವುಗಳನ್ನು ಸ್ವತಂತ್ರವಾಗಿ ಮತ್ತು ಪಾರದರ್ಶಕವಾಗಿ ತನಿಖೆ ಮಾಡಬೇಕು. ಬಾಧಿತರ ಪರವಾಗಿ ಸರ್ಕಾರ ನಿಲ್ಲಬೇಕು. ಒಂದು ಗಣರಾಜ್ಯದ ನಿಜವಾದ ಪರೀಕ್ಷೆ, ಅಧಿಕಾರ ಚಲಾಯಿಸುವವರನ್ನು ರಕ್ಷಿಸುವುದ ರಲ್ಲಿ ಇಲ್ಲ. ಅಧಿಕಾರದ ಮುಂದೆ ಧ್ವನಿಯಿಲ್ಲದವನಾಗಿ ನಿಂತಿರುವ ಮನುಷ್ಯನ ಪರವಾಗಿ ನಿಲ್ಲುವುದರಲ್ಲಿದೆ.
ಈ ಮೂರೂ ಕುಟುಂಬಗಳ ಬಳಿ ಇಂದು ಅಧಿಕಾರವಿಲ್ಲ. ಆದರೆ ಅವರಿಗೂ ಕಾನೂನು ಇದೆ. ಅವರಿಗೂ ಹಕ್ಕುಗಳಿವೆ. ಅವರ ಜೀವಗಳಿಗೂ ಬೆಲೆಯಿದೆ. ಅವರ ಪ್ರಶ್ನೆಗಳಿಗೂ ಉತ್ತರ ಸಿಗಬೇಕು. ಸರ್ಕಾರ ಎಂದರೆ ಅಧಿಕಾರದ ಮುಖ ಮಾತ್ರವಲ್ಲ. ಅನ್ಯಾಯಕ್ಕೆ ಒಳಗಾದ ಮನುಷ್ಯನ ಪರವಾಗಿ ನಿಲ್ಲುವ ನಂಬಿಕೆಯ ಮುಖವೂ ಆಗಿರಬೇಕು.
(ಲೇಖಕ ಅನ್ಬು ರಾಜ್ ವೀರಪ್ಪನ್ ಪ್ರಕರಣದಲ್ಲಿ ೨೦ ವರ್ಷಗಳಿಗೂ ಹೆಚ್ಚು ಕಾಲ ಮೈಸೂರು ಜೈಲಿನಲ್ಲಿದ್ದು ಬಿಡುಗಡೆಯಾದ ತಮಿಳುನಾಡಿನ ಈರೋಡ್ ಜಿಲ್ಲೆಯ ಅಂದಿ ಯೂರಿನವರು. ಜೈಲಿನಲ್ಲಿದ್ದಾಗಲೇ ಕನ್ನಡ ಕಲಿತವರು. ರಂಗ ಕಲಾವಿದರು. ಈಗ ಅಂದಿಯೂರಿನಲ್ಲಿ ಸಾವಯವ ಕೃಷಿ ಉತ್ಪನ್ನಗಳು ಹಾಗೂ ಕಾಡು ಉತ್ಪನ್ನಗಳ ಮಾರಾಟ ಮಳಿಗೆ ನಡೆಸುತ್ತಾ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ)
” ಈ ಮೂವರ ಮರಣವನ್ನು ಕೇವಲ ಒಂದು ಪ್ರತ್ಯೇಕ ಘಟನೆಯಾಗಿ ನೋಡಬಾರದು. ಅದರ ಹಿಂದೆ ಇರುವ ಸಾಮಾಜಿಕ ಪರಿಸ್ಥಿತಿಯನ್ನು, ಅರಣ್ಯವನ್ನು ಅವಲಂಬಿಸಿ ಬದುಕುತ್ತಿರುವ ಜನರ ಜೀವನವನ್ನು, ಅಧಿಕಾರಕ್ಕೂ ಜನರಿಗೂ ನಡುವೆ ಹೆಚ್ಚಾಗುತ್ತಿರುವ ಅಪನಂಬಿಕೆಯನ್ನು ನಾವು ಅರ್ಥಮಾಡಿಕೊಳ್ಳಬೇಕು.”



