Mysore
25
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

ಮೈಸೂರು ಸ್ವಚ್ಛವಾಗಿಡಲು ಜನರಿಗೆ ಕೆಲ ಅಭ್ಯಾಸ ಅಗತ್ಯ

ಟಿ.ಕೆ.ಹರೀಶ್

ಮನೆ ಮುಂದಿನ ರಸ್ತೆಯ ಕಸ ವಿಲೇವಾರಿಗೆ ನಾಗರಿಕರು ಜಾಗೃತರಾಗಬೇಕು

ಮೈಸೂರು ಎಂದರೆ ಕೇವಲ ಒಂದು ನಗರವಲ್ಲ. ಅದು ಕರ್ನಾಟಕದ ಹೆಮ್ಮೆ. ಅರಮನೆ, ಚಾಮುಂಡಿಬೆಟ್ಟ, ಉದ್ಯಾನಗಳು, ಪಾರಂಪರಿಕ ಕಟ್ಟಡಗಳು, ಸಾಂಸ್ಕೃತಿಕ ವೈಭವ ಮತ್ತು ಪ್ರವಾಸೋದ್ಯಮದಿಂದ ದೇಶ-ವಿದೇಶಗಳ ಜನರನ್ನು ಆಕರ್ಷಿಸುವ ನಗರ. ಸ್ವಚ್ಛತೆ, ಸೌಂದರ್ಯ ಮತ್ತು ಶಿಸ್ತಿಗೆ ಹೆಸರಾದ ಮೈಸೂರಿನ ಚಿತ್ರಣ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಆದರೆ ಇದೇ ಮೈಸೂರಿನ ರಸ್ತೆಯ ಬದಿಯಲ್ಲಿ, ಖಾಲಿ ಜಾಗಗಳಲ್ಲಿ, ಚರಂಡಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ಕಾಣಿಸಿಕೊಂಡಾಗ ಒಂದು ಪ್ರಶ್ನೆ ಕಾಡುತ್ತದೆ-ಮೈಸೂರು ಬದಲಾಗಿದೆಯೇ? ಅಥವಾ ಮೈಸೂರಿಗರ ನಾಗರಿಕ ಪ್ರಜ್ಞೆಯೇ ಕುಸಿದಿದೆಯೇ?

ನಗರವನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರು ಬೆಳಿಗ್ಗೆಯೇ ರಸ್ತೆಗಿಳಿಯುತ್ತಾರೆ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಾರೆ. ಕಸ ವಿಲೇವಾರಿಗೆ ವ್ಯವಸ್ಥೆ ಮಾಡಲಾಗಿದೆ. ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೂ ಕೆಲವೇ ಗಂಟೆಗಳಲ್ಲಿ ಸ್ವಚ್ಛಗೊಳಿಸಿದ ಜಾಗದಲ್ಲೇ ಮತ್ತೆ ಕಸದ ರಾಶಿ ಕಾಣಿಸಿಕೊಳ್ಳುತ್ತದೆ. ಇದರ ಹಿಂದೆ ಕೇವಲ ವ್ಯವಸ್ಥೆಯ ವೈಫಲ್ಯವಿಲ್ಲ; ನಮ್ಮ ನಡವಳಿಕೆಯ ವೈಫಲ್ಯವೂ ಇದೆ.

ಮನೆ ಸ್ವಚ್ಛ, ರಸ್ತೆ ಮಾತ್ರ ಏಕೆ ಕೊಳಕು?; ನಮ್ಮ ಮನೆಯೊಳಗೆ ಒಂದು ಸಣ್ಣ ಕಾಗದ ಬಿದ್ದರೂ ತಕ್ಷಣ ಎತ್ತಿ ಕಸದ ಬುಟ್ಟಿಗೆ ಹಾಕುತ್ತೇವೆ. ಆದರೆ ಅದೇ ಕಾಗದವನ್ನು ರಸ್ತೆ ಮೇಲೆ ಎಸೆಯಲು ನಮಗೆ ಯಾವುದೇ ಹಿಂಜರಿಕೆ ಇರುವುದಿಲ್ಲ. ಮನೆಯಲ್ಲಿ ಕಸ ಇರಬಾರದು ಎಂಬ ಅರಿವು ನಮಗಿದೆ; ಆದರೆ ಮನೆಯ ಹೊರಗಿನ ರಸ್ತೆ ಕೂಡ ನಮ್ಮದೇ ಎಂಬ ಭಾವನೆ ಇನ್ನೂ ಬಂದಿಲ್ಲ. ತಿಂಡಿ ತಿಂದ ನಂತರ ಪ್ಯಾಕೆಟ್ ರಸ್ತೆಗೆ ಎಸೆಯುವುದು, ನೀರಿನ ಬಾಟಲಿಯನ್ನು ವಾಹನದಿಂದ ಹೊರಗೆ ಬಿಸಾಕುವುದು, ಪ್ಲಾಸ್ಟಿಕ್ ಕವರ್‌ಗಳನ್ನು ಖಾಲಿ ಜಾಗದಲ್ಲಿ ಹಾಕುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು- ಇವೆಲ್ಲವೂ ಸಣ್ಣ ವಿಷಯಗಳೆಂದು ನಾವು ಭಾವಿಸುತ್ತೇವೆ. ಆದರೆ ಇಂತಹ ಸಾವಿರಾರು ‘ಸಣ್ಣ’ ತಪ್ಪುಗಳೇ ನಗರದ ದೊಡ್ಡ ಸಮಸ್ಯೆಯಾಗಿ ರೂಪುಗೊಳ್ಳುತ್ತವೆ. ಸ್ವಚ್ಛತೆ ಸರ್ಕಾರದ ಕೆಲಸ ಮಾತ್ರವೇ?: “ನಗರವನ್ನು ಸ್ವಚ್ಛವಾಗಿಡುವುದು ಮಹಾನಗರ ಪಾಲಿಕೆಯ ಕೆಲಸ” ಎನ್ನುವುದು ಸುಲಭವಾದ ಮಾತು. ಆದರೆ ಪೌರ ಕಾರ್ಮಿಕರು ಎಷ್ಟು ಬಾರಿ ಕಸವನ್ನು ತೆರವುಗೊಳಿಸಿದರೂ, ನಾಗರಿಕರು ಮತ್ತೆ ಅದೇ ಜಾಗದಲ್ಲಿ ಕಸ ಹಾಕುತ್ತಿದ್ದರೆ ಸಮಸ್ಯೆ ಎಂದಿಗೂ ಮುಗಿಯುವುದಿಲ್ಲ.

ಸರ್ಕಾರ ಮೂಲಸೌಕರ್ಯ ಒದಗಿಸಬಹುದು. ಕಸದ ಬುಟ್ಟಿಗಳನ್ನು ಇಡಬಹುದು. ವಾಹನಗಳ ಮೂಲಕ ಕಸ ಸಂಗ್ರಹಿಸಬಹುದು. ನಿಯಮ ರೂಪಿಸಬಹುದು. ದಂಡ ವಿಧಿಸಬಹುದು. ಆದರೆ ನಾಗರಿಕನ ಕೈಯಲ್ಲಿರುವ ಕಸವನ್ನು, ಕಸದ ಬುಟ್ಟಿಗೆ ಹಾಕಿಸುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದು ನಮ್ಮ ವೈಯಕ್ತಿಕ ಜವಾಬ್ದಾರಿ.

ಮೈಸೂರಿನ ಗೌರವಕ್ಕೆ ಧಕ್ಕೆ: ಪ್ರವಾಸಿಗರು ಮೈಸೂರಿಗೆ ಬರುವಾಗ ಅರಮನೆ ಮತ್ತು ಚಾಮುಂಡಿಬೆಟ್ಟವನ್ನು ಮಾತ್ರ ನೋಡುವುದಿಲ್ಲ. ಅವರು ನಗರದ ರಸ್ತೆಗಳನ್ನೂ ನೋಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಾವು ಹೇಗೆ ವರ್ತಿಸುತ್ತೇವೆ ಎಂಬುದೂ ಮೈಸೂರಿನ ಸಂಸ್ಕ ತಿಯ ಒಂದು ಭಾಗವಾಗುತ್ತದೆ. ಒಂದೆಡೆ ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಮತ್ತೊಂದೆಡೆ ರಸ್ತೆ ಬದಿಗೆ ಕಸ ಎಸೆಯುತ್ತೇವೆ. ಇದು ನಮ್ಮಮಾತು ಮತ್ತು ಕೃತ್ಯದ ನಡುವಿನ ವೈರುಧ್ಯವಲ್ಲವೇ? ಸ್ವಚ್ಛ ಮೈಸೂರು ಎಂಬ ಹೆಗ್ಗಳಿಕೆಯನ್ನು ಕೇವಲ ಫಲಕಗಳಲ್ಲಿ ಬರೆಯುವುದರಿಂದ ಸಾಲದು; ಅದು ನಮ್ಮ ನಡವಳಿಕೆಯಲ್ಲಿ ಕಾಣಬೇಕು.

ಮೈಸೂರನ್ನು ಸ್ವಚ್ಛವಾಗಿಡಲು ದೊಡ್ಡ ದೊಡ್ಡ ಘೋಷಣೆಗಳಿಗಿಂತ ಸಣ್ಣ ಸಣ್ಣ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದೂ ಅಗತ್ಯ. “ನಾನು ಕಸ ಎಸೆಯುವುದಿಲ್ಲ” ಎಂಬ ಒಂದು ನಿರ್ಧಾರದಿಂದ ಆರಂಭವಾಗಬೇಕು.“ನನ್ನ ಮನೆ ಮಾತ್ರವಲ್ಲ, ನನ್ನ ನಗರದ ಪ್ರತಿಯೊಂದು ರಸ್ತೆಯೂ ನನ್ನದೇ” ಎಂಬ ಮನೋಭಾವ ಬರಬೇಕು. “ಪೌರ ಕಾರ್ಮಿಕರು ಸ್ವಚ್ಛಗೊಳಿಸುತ್ತಾರೆ”ಎನ್ನುವ ಬದಲು, “ನಾನು ಕಸ ಹಾಕುವುದಿಲ್ಲ” ಎನ್ನುವ ಜವಾಬ್ದಾರಿ ಬೆಳೆಸಿಕೊಳ್ಳಬೇಕು.

ಮೈಸೂರಿನ ಸೌಂದರ್ಯವನ್ನು ಕಾಪಾಡುವ ಜವಾಬ್ದಾರಿ ಕೇವಲ ಅಧಿಕಾರಿಗಳದ್ದಲ್ಲ; ಅದು ಮೈಸೂರಿನಲ್ಲಿ ವಾಸಿಸುವ ಪ್ರತಿಯೊಬ್ಬರದ್ದೂ ಹೌದು. ಮೈಸೂರನ್ನು ಸ್ವಚ್ಛಗೊಳಿಸಲು ಮೊದಲು ರಸ್ತೆಯನ್ನು ಅಲ್ಲ, ನಮ್ಮ ಮನಸ್ಥಿತಿಯನ್ನು ಸ್ವಚ್ಛಗೊಳಿಸಬೇಕು. ಏಕೆಂದರೆ ನಗರವನ್ನು ಕೊಳಕು ಮಾಡುವ ಕಸ ಕೇವಲ ರಸ್ತೆಯ ಮೇಲಿಲ್ಲ? ಜವಾಬ್ದಾರಿಯಿಲ್ಲದ ಮನೋಭಾವದಲ್ಲಿಯೂ ಇದೆ.

“ನನ್ನ ನಗರ- ನನ್ನ ಜವಾಬ್ದಾರಿ” ಎಂಬ ಮನೋಭಾವ ಪ್ರತಿಯೊಬ್ಬ ಮೈಸೂರಿಗನಲ್ಲೂ ಮೂಡಿದಾಗ ಮಾತ್ರ ಮೈಸೂರು ನಿಜವಾದ ಅರ್ಥದಲ್ಲಿ ಸ್ವಚ್ಛ, ಸುಂದರ ಮತ್ತು ಮಾದರಿ ನಗರವಾಗಲಿದೆ.

(ಲೇಖಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು)

ನಾಗರಿಕ ಪ್ರಜ್ಞೆಯ ವಿಧಾನಗಳು: 

* ರಸ್ತೆಗೆ ಕಸ ಎಸೆಯದಿರುವುದು

* ಸಾರ್ವಜನಿಕ ಸ್ಥಳವನ್ನು ಹಾಳು ಮಾಡದಿರುವುದು

* ಚರಂಡಿಗೆ ಪ್ಲಾಸ್ಟಿಕ್ ಹಾಕದಿರುವುದು

* ಇತರರು ಸ್ವಚ್ಛಗೊಳಿಸುತ್ತಾರೆ ಎಂದು ಕಸವನ್ನು ಎಲ್ಲೆಂದರಲ್ಲಿ

ಎಸೆಯದಿರುವುದು

* ನಮ್ಮಿಂದಲೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದು

* ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು

” ಜನರು ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ನಾಗರಿಕ ಪ್ರಜ್ಞೆ ಎಂದರೆ ಕೇವಲ ಟ್ರಾಫಿಕ್ ನಿಯಮ ಪಾಲಿಸುವುದು ಅಥವಾ ಮತದಾನ ಮಾಡುವುದು ಮಾತ್ರವಲ್ಲ. ನಾವು ವಾಸಿಸುವ ಸಮಾಜದ ಬಗ್ಗೆ ಜವಾಬ್ದಾರಿ ಹೊಂದಿರುವುದೇ ನಿಜವಾದ ನಾಗರಿಕ ಪ್ರಜ್ಞೆ.”

 

 

Tags:
error: Content is protected !!