ಎಸ್.ಎಸ್.ಭಟ್
ನಂ.ಗೂಡು: ಕಳಚಿ ಬೀಳುತ್ತಿದೆ ಸೀಲಿಂಗ್ ಕಾಂಕ್ರೀಟ್; ವಾಹನ ಸವಾರರಲ್ಲಿ ಆತಂಕ
ನಂಜನಗೂಡು: ನಗರದ ರೈಲು ನಿಲ್ದಾಣಕ್ಕೆ ತಾಗಿದಂತೆ ಮಹಾತ್ಮ ಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳಸೇತುವೆಯ ಸೀಲಿಂಗ್ ಕಾಂಕ್ರೀಟ್ ಚಾವಣಿ ಸಹಿತ ಕಳಚಿ ಬೀಳುತ್ತ ತುಕ್ಕು ಹಿಡಿದ ಕಬ್ಬಿಣದ ಸರಳುಗಳ ದರ್ಶನವಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
೨೦೦೪ರಲ್ಲಿ ಕಾಮಗಾರಿ ಆರಂಭವಾಗಿ ೨೦೦೯ರಲ್ಲಿ ನಂಜನಗೂಡು-ಚಾಮರಾಜನಗರಕ್ಕೆ ರೈಲು ಸಂಚಾರಕ್ಕೆ ಅನುವಾದ ಈ ಸೇತುವೆಯ ಕೆಳಭಾಗದ ಸೀಲಿಂಗ್ ಕಾಂಕ್ರೀಟ್ ಕೇವಲ ೨೪ ವರ್ಷಗಳಲ್ಲಿ ಉದುರಿ ಬೀಳುವಂತಾಗಿರುವುದು ಈ ಸೇತುವೆಯ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ಗುರುವಾರ ತಡ ರಾತ್ರಿ ಹಗಲಿನವೇಳೆ ಈ ಸೇತುವೆಯ ಕೆಳ ಭಾಗದ ಸೀಲಿಂಗ್ ಕಾಂಕ್ರೀಟ್ ಪ್ಲಾಸ್ಟರ್ ಕಳಚಿ ಬಿದ್ದಿದೆ. ಆ ಸಮಯದಲ್ಲಿ ಯಾವುದೇ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸದಿದ್ದರಿಂದ ಅನಾಹುತ ತಪ್ಪಿದೆ. ಹಗಲಿನ ವೇಳೆ ಏನಾದರೂ ಈ ಸೀಲಿಂಗ್ ಕಾಂಕ್ರೀಟ್ ಕಳಚಿ ಬಿದ್ದಿದ್ದರೆ ಭಾರಿ ಅನಾಹುತ ವಾಗುತ್ತಿತ್ತು. ಹಾಗಾಗಿ ಈಗ ಈ ಕೆಳಸೇತುವೆಯಲ್ಲಿ ಸಂಚರಿಸುವುದಕ್ಕೆ ಭಯಪಡು ವಂತಾಗಿದೆ.
೨೦೦೪ರಲ್ಲಿ ಕಾಮಗಾರಿ ಆರಂಭವಾದಾಗಲೇ ಕೆಳ ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂಬ ಕೂಗು ಕೇಳಿ ಬಂದಿತ್ತು. ಕಪಿಲೆಯಲ್ಲಿ ಪ್ರವಾಹ ಬಂದಾಗಲೆಲ್ಲ ನದಿಯಿಂದ ಸಾಕಷ್ಟು ದೂರವಿರುವ ಇಲ್ಲಿ ಪ್ರವಾಹದ ನೀರು ೨-೩ ಅಡಿಯವರೆಗೂ ಬಂದು ನಿಲ್ಲುತ್ತಿರುವುದು ಈ ಸೇತುವೆಯ ಅವೈಜ್ಞಾನಿಕತೆಗೆ ಸಾಕ್ಷಿಯಾಗಿದೆ. ನಾಲ್ಕು ಶತಮಾನಗಳ ಹಿಂದೆ ಕಪಿಲಾ ನದಿಗೆ ನಿರ್ಮಿಸಿದ ಸೇತುವೆ ಮೂರೂ ದಶಕಗಳಿಂದ ನಿರ್ವ ಹಣೆಯೇ ಇಲ್ಲದಿದ್ದರೂ ಇಂದಿಗೂ ಸಾಕಷ್ಟು ಭದ್ರವಾಗಿಯೇ ಇದೆ. ಆದರೆ, ಈ ಕೆಳಸೇತುವೆ ೨೪ ವರ್ಷಕ್ಕೇ ಉದುರಿ ಬೀಳುವಂತಾಗಿರುವುದು ನಮ್ಮ ಆಧುನಿಕ ತಾಂತ್ರಿಕತೆಯ ವೈ-ಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಶಾಸಕ ದರ್ಶನ್ ಧ್ರುವನಾರಾಯಣ ಅವರು ಎರಡೂ ಕಡೆಯ ಗೋಡೆಗಳಿಗೆ ಬಣ್ಣ ಬಳಿಸಿ ಆ ಗೋಡೆಯ ಮೇಲೆ ಕಲಾಕೃತಿಗಳ ಚಿತ್ರ ಬಿಡಿಸಿ ಆಕರ್ಷಕ ರೂಪ ಕೊಡುತ್ತಿರುವ ಹೊತ್ತಿನಲ್ಲೇ ಸೇತುವೆಯ ಕೆಳಭಾಗದ ಕಾಂಕ್ರೀಟ್ ಕಳಚಿ ಬೀಳಲಾರಂಭಿಸಿರುವುದು ವಿಪರ್ಯಾಸ.
” ರೈಲ್ವೆ ಕೆಳಸೇತುವೆಯ ಸೀಲಿಂಗ್ ಕಾಂಕ್ರೀಟ್ ಬೀಳುತ್ತಿದ್ದು ಅದನ್ನು ದುರಸ್ತಿಪಡಿಸುವ ಹೊಣೆಗಾರಿಕೆ ರೈಲ್ವೆ ಇಲಾಖೆಯದ್ದಾಗಿದ್ದು , ತಕ್ಷಣ ದುರಸ್ತಿಪಡಿಸಿ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕು ಎಂದು ನಗರಸಭೆಯಿಂದ ಶುಕ್ರವಾರವೇ ರೈಲ್ವೆ ಇಲಾಖೆಯ ಹಿರಿಯ ಇಂಜಿನಿಯರ್‌ಗೆ ಪತ್ರ ಬರೆಯಲಾಗಿದೆ. ಅನಾಹುತವಾದಲ್ಲಿ ರೈಲ್ವೆ ಇಲಾಖೆಯೇ ಜವಾಬ್ದಾರಿ.”
ಬಸವರಾಜು, ಪೌರಾಯುಕ್ತ, ಮಹೇಶ, ಇಂಜಿನಿಯರ್




