Mysore
22
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಬಿಡದಿ ಹೋರಾಟಕ್ಕೆ ಜೆನ್‌-ಝೀ ಗಳು ಬರಲಿ ; ದೇವನೂರು ಮಹದೇವ ಕರೆ

ಮೈಸೂರು: ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಆಕಾಂಕ್ಷೆ ಪ್ರಭುತ್ವಕ್ಕೆ ಇರಬೇಕು. ಭೂಮಿ ನೀಡುವ ರೈತರ ಬದುಕಿನ ಹೊಣೆಗಾರಿಕೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆಯೇ ಎಂಬುದನ್ನು ಮೊದಲು ಯೋಚಿಸಬೇಕು. ಈ ನಿಟ್ಟಿನಲ್ಲಿ ಜೆನ್ ಝೀ ಸಮುದಾಯ ಬಿಡದಿ ಟೌನ್‌ಶಿಪ್ ನಿರ್ಮಾಣದ ವಿರುದ್ಧ ಹೋರಾಟವನ್ನು ಕೈಗೆತ್ತಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ನಗರದ ಜಲದರ್ಶಿನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.೮೦ರಷ್ಟು ಜನರು ಭೂಮಿ ನೀಡಲು ಸಿದ್ಧರಿದ್ದಾರೆ ಎಂಬುದಾಗಿ ರಾಜ್ಯ ಸರ್ಕಾರದ ಹೇಳಿತ್ತು. ಆದರೆ, … ಸಮೀಕ್ಷೆ ನಡೆಸಿದ ವರದಿಯಲ್ಲಿ ಶೇ.೮೦ರಷ್ಟು ಜನರು ಭೂಮಿ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ ಎಂದರು.

ಈ ಸಮೀಕ್ಷೆಯ ವರದಿ ಮಾಡಿರುವವರು ನಿವೃತ್ತ ನ್ಯಾಯಾಧೀಶರಾದ ವಿ.ಗೋಪಾಲಗೌಡರ, ಡಿ.ಉಮಾಪತಿ, ಎಚ್.ವಿ.ವಾಸು ಹಾಗೂ ಪ್ರಕಾಶ ಕಮ್ಮರಡಿ ಅವರು. ಅವರೆಲ್ಲ ಅತ್ಯಂತ ಗೌರವಾನ್ವಿತರು. ತಮ್ಮ ಜವಾಬ್ದಾರಿಯನ್ನು ಅರಿತು ವರದಿ ಮಾಡಿದ್ದಾರೆ. ಹೊಸ ಜನಾಂಗ ಜೆನ್ ಝೀ ಈಗ ಆಕ್ಟೀವ್ ಆಗಿದ್ದಾರೆ. ಅವರು ಹೋರಾಟಕ್ಕೆ ಬರಬೇಕು ಎಂದರು.

ಒಂದು ವೇಳೆ ರೈತರು ತಮ್ಮ ಭೂಮಿಯನ್ನೆಲ್ಲ ಅರ್ಧ ಬೆಲೆಗೆ ನೀಡುತ್ತಾರೆ ಎಂದುಕೊಳ್ಳೋಣ. ಜಮೀನು ಕೊಟ್ಟವರಿಗೆ ಏನು ಕೊಡುತ್ತಾರೆ? ಉದ್ಯೋಗ ನೀಡುತ್ತಾರೆಯೇ? ಭೂಮಿ ಕೊಟ್ಟ ರೈತರ ಜೀವನ ನಿರ್ವಹಣೆಯನ್ನು ಸರ್ಕಾರ ವಹಿಸಿಕೊಳ್ಳುತ್ತದೆಯೇ? ಜನರು ಗುಳೆ ಹೋಗುವುದನ್ನು ತಪ್ಪಿಸುತ್ತೀರಾ? ಹಳ್ಳಿಗಳನ್ನು ಬಿಟ್ಟು ನಗರಗಳಿಗೆ ಬಂದ ಜನರು ಸ್ಲಂಗಳಲ್ಲಿ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಸರ್ಕಾರ ಯೋಚನೆ ಮಾಡಬೇಕಲ್ಲವೇ, ಜನರ ಜೀವದ ಹೊಣೆಯನ್ನು ಸರ್ಕಾರ ಯೋಚನೆ ಮಾಡದಿದ್ದರೆ ನಾವು ಯೋಚನೆ ಮಾಡಬಾರದೇ ಎಂದು ದೇವನೂರ ಪ್ರಶ್ನಿಸಿದರು.

ಬಿಲ್ಡಿಂಗ್ ಕಟ್ಟುವುದು, ರಸ್ತೆ ನಿರ್ಮಿಸುವುದೇ ಸರ್ಕಾರದ ಕೆಲಸವಲ್ಲ. ಬಿಲ್ಡಿಂಗ್, ರಸ್ತೆ, ದುಡ್ಡು ಸರ್ಕಾರದ ಮಕ್ಕಳಾಗಬಾರದು. ಜನರನ್ನು ತಮ್ಮ ಮಕ್ಕಳಂತೆ ಸರ್ಕಾರ ಕಾಣಬೇಕು. ಜನರ ಬದುಕಿನ ಬಗ್ಗೆ ಕಾಳಜಿ ವಹಿಸದೆ ರಸ್ತೆ, ಬಿಲ್ಡಿಂಗ್ ಮತ್ತು ಹಣವನ್ನೇ ಅಭಿವೃದ್ಧಿಯ ಮಾನದಂಡ ಎಂದುಕೊಂಡರೆ ಆಗುವುದಿಲ್ಲ. ಅತಿಯಾದಾಗ ಅದಕ್ಕೊಂದು ಕಾಲ ಬರಲಿದೆ ಎಂದು ಅವರು ಎಚ್ಚರಿಸಿದರು.

ಡಿಕೆ, ಎಚ್‌ಡಿಕೆ, ಆರ್.ಅಶೋಕ್ ಸಮಾನ ಅಪರಾಧಿಗಳು:

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ.ಎಚ್.ಡಿ.ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮೂವರೂ ಅಪರಾಧಿಗಳೇ. ಒಬ್ಬರಲ್ಲ, ಮೂವರು ಕೂಡ ಸಮಾನ ಅಪರಾಧಿಗಳು. ಕಣ್ಣೀರೆಲ್ಲ ಸುಳ್ಳು, ಇದು ರಾಜ್ಯದ ದುರಂತ ಎಂದು ದೇವನೂರ ಮಹಾದೇವ ಟೀಕಿಸಿದರು.

ಅನ್ನದ ಹೋರಾಟ ಆಗಬೇಕು:

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಆ.೨೫ರಂದು ಭೈರಮಂಗಲದಿಂದ ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನಾಡಿನಾದ್ಯಂತ ರೈತರು, ದಲಿತರು ಭಾಗವಹಿಸುತ್ತಾರೆ ಎಂದರು.

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಎಚ್.ಡಿ.ಕುಮಾರ ಸ್ವಾಮಿ ವರ್ಸಸ್ ಡಿ.ಕೆ.ಶಿವಕುಮಾರ್, ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳ ಸಂಘರ್ಷ ಎನ್ನುವಂತೆ ಬಿಂಬಿಸಲಾಗುತ್ತಿದೆ. ಸತ್ಯವನ್ನು ಹೊರತೆಗೆಯುವ ಉದ್ದೇಶದಿಂದ ಸಂಯುಕ್ತ ಹೋರಾಟ ಕರ್ನಾಟಕ, ಸ್ಥಳೀಯ ಭೂಸ್ವಾಧೀನ ಹೋರಾಟ ಸಮಿತಿ ಜಂಟಿಯಾಗಿ ನಿವೃತ್ತ ನ್ಯಾಯಾಽಶರಾದ ವಿ.ಗೋಪಾಲಗೌಡ, ಎಚ್.ವಿ.ವಾಸು, ಡಿ.ಉಮಾಪತಿ, ಪ್ರಕಾಶ ಕಮ್ಮರಡಿ ನೇತೃತ್ವದಲ್ಲಿ ನಾಲ್ಕು ಜನರ ಕಮಿಟಿ ಸಿದ್ಧಪಡಿಸಿದ ವರದಿಯನ್ನು ಸಲ್ಲಿಸಲಾಗಿದೆ. ವರದಿಯಲ್ಲಿ ಬಿಡದಿ ಟೌನ್‌ಶಿಪ್‌ಗೆ ಕಾನೂನು ಮಾನ್ಯತೆ ಇಲ್ಲ. ಸಮಾಜದ ಮೇಲೆ ಬೀರುವ ಪರಿಣಾಮವನ್ನು ಪರಿಗಣಿಸಿಲ್ಲ. ಪರಿಸರಕ್ಕೆ ವ್ಯತಿರಿಕ್ತವಾಗಿದ್ದು ಅನುಷ್ಠಾನಕ್ಕೆ ಯೋಗ್ಯವಾಗಿಲ್ಲ. ಕೈ ಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ದೇವನಹಳ್ಳಿ ಭೂಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ರೈತರೊಂದಿಗೆ ಎಲ್ಲ ವರ್ಗದ ಜನರು ಕೈಜೋಡಿಸಿದ್ದರು. ಅದೇ ರೀತಿಯಲ್ಲಿ ಬಿಡದಿ ಹೋರಾಟದಲ್ಲೂ ಕರ್ನಾಟಕ ಎಚ್ಚೆತ್ತುಕೊಂಡು ಹೋರಾಟವನ್ನು ಮುನ್ನಡೆಸಬೇಕು. ಇದು ಕೇವಲ ರೈತರ ಹೋರಾಟವಾಗದೇ ಅನ್ನ ತಿನ್ನುವವರ ಹೋರಾಟವಾಗಬೇಕು ಎಂದರು.

ಕೊಡಗಿನ ಮಲೆನಾಡಿನಲ್ಲಿರುವ ಕೃಷಿ ಭೂಮಿಯ ತದ್ರೂಪದಂತೆ ಬಿಡದಿ ಭಾಗದ ಭೂಮಿಗಳಿವೆ. ಇಂತಹ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರ ಜೀವನವನ್ನು ಕಸಿದುಕೊಳ್ಳಬಾರದು ಎಂದು ಕಿಡಿಕಾರಿದರು.

Tags:
error: Content is protected !!