Mysore
21
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಓದುಗರ ಪತ್ರ: ಸತ್ಪ್ರಜೆಗಳಾಗಿ ಜೀವಿಸುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ನೀಡುವ ಗೌರವ

ಓದುಗರ ಪತ್ರ

ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು ಜೋರಾಗಿರುತ್ತವೆ. ಈ ಸಂಭ್ರಮ ಕೇವಲ ಆ ಒಂದು ದಿನಕ್ಕೆ ಮಾತ್ರ ಸೀಮಿತವಾಗುತ್ತಿದೆಯಾ ಅಥವಾ ಇದರ ಆಳವನ್ನು ನಾವು ನಿಜಕ್ಕೂ ಅರ್ಥ ಮಾಡಿಕೊಳ್ಳುತ್ತಿದ್ದೀವಾ ಎಂದು ಒಮ್ಮೆ ಯೋಚಿಸಬೇಕು.

ಈ ಸ್ವಾತಂತ್ರ್ಯದ ಹಿಂದೆ ಎಷ್ಟೋ ಮಹನೀಯರ ತ್ಯಾಗ ಮತ್ತು ಬಲಿದಾನವಿದೆ. ಮಹಾತ್ಮ ಗಾಂಧೀಜಿಯವರ ಅಹಿಂಸಾ ಮಾರ್ಗ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ನೂರಾರು ಜನ ತಮ್ಮ ಕಷ್ಟ-ಸುಖಗಳನ್ನು ಬದಿಗಿಟ್ಟು, ದೇಶಕ್ಕಾಗಿ ಜೀವನ, ಪ್ರಾಣವನ್ನೇ ಅರ್ಪಿಸಿದ್ದಾರೆ. ಅವರ ಆ ತ್ಯಾಗದ ಫಲವಾಗಿಯೇ ಇಂದು ನಾವು ತಲೆಎತ್ತಿ ಬದುಕುತ್ತಿದ್ದೇವೆ. ಬರೀ ಧ್ವಜ ಹಾರಿಸಿ, ಚಾಕೊಲೇಟ್ ಕೊಟ್ಟು ಮುಗಿಸುವುದಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಸರಳವಾಗಿ ತಿಳಿಸಿಕೊಡಬೇಕು. ಆ ಮಹನೀಯರು ನಡೆದುಬಂದ ಹಾದಿ, ಅವರ ಶಿಸ್ತು ಮತ್ತು ದೇಶಪ್ರೇಮವನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಶಿಕ್ಷಕರು ಹಾಗೂ ಪೋಷಕರು ಮಾರ್ಗದರ್ಶನ ಮಾಡಬೇಕು. ಹಿರಿಯರು ಕಷ್ಟಪಟ್ಟು ದೊರಕಿಸಿಕೊಟ್ಟಿರುವ ಈ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸ್ವಾತಂತ್ರ್ಯ ದಿನಾಚರಣೆ ಬರೀ ಒಂದು ದಿನದ ಭಾಷಣಕ್ಕೆ ಸೀಮಿತವಾಗಬಾರದು. ಬದಲಿಗೆ, ನಮ್ಮ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು, ಪರಸ್ಪರ ಪ್ರೀತಿಯಿಂದ ಬಾಳುವುದು, ದೇಶದ ಕಾನೂನನ್ನು ಗೌರವಿಸುವುದು ಮತ್ತು ಒಳ್ಳೆಯ ಪ್ರಜೆಗಳಾಗಿ ಬದುಕುವುದು – ಇವೆಲ್ಲವೂ ಆ ಮಹನೀಯರಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗುತ್ತದೆ.

 – ಬಿ. ಗಣೇಶ, ಮೈಸೂರು

Tags:
error: Content is protected !!