Mysore
24
broken clouds

Social Media

ಮಂಗಳವಾರ, 11 ಆಗಸ್ಟ್ 2026
Light
Dark

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ 

ಮಂಜು ಕೋಟೆ

ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ

ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ ಎಚ್.ಆರ್.ಮೂರ್ತಿರವರು ಬೆಳೆದಿರುವ ಬರೋಬ್ಬರಿ ೧ ಕೆಜಿ ೫೨೦ ಗ್ರಾಂ ತೂಕ ಹೊಂದಿರುವ ಅಮೆರಿಕ ಮೂಲದ ‘ರೀಡ್’ ತಳಿಯ ಬಟರ್ ಫ್ರೂಟ್ (ಅವಕಾಡೊ) ಹಣ್ಣು ಎಲ್ಲರ ಗಮನ ಸೆಳೆಯುತ್ತಿದೆ.

ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಸಾವಯವ ಕೃಷಿಕ ಎಚ್.ಆರ್.ಮೂರ್ತಿ ಅವರ ತೋಟದಲ್ಲಿ ಬೆಳೆದಿರುವ, ಕರ್ನಾಟಕದ ಮಟ್ಟಿಗೆ ಅತ್ಯಂತ ಹೆಚ್ಚು ತೂಕ ಹೊಂದಿರುವ ಬಟರ್ಫ್ರೂಟ್ ಇದಾಗಿದೆ. ಬಟರ್ಫ್ರೂಟ್ಟ್ ಹೆಚ್ಚಿನ ಎಣ್ಣೆ ಅಂಶ, ನೈಜ ಬಟರ್ ರುಚಿ ಹಾಗೂ ನಟ್ಟಿ ಫ್ಲವರ್ ಹೊಂದಿದ್ದು, ಸಂಪೂರ್ಣವಾಗಿ ಶೇ.೧೦೦ ಸಾವಯವ ಪದ್ಧತಿಯಲ್ಲಿ, ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕಗಳನ್ನು ಬಳಸದೆ ಬೆಳೆದಿ ರುವುದು ವಿಶೇಷ.

ಪ್ರಸ್ತುತ ವಿಶ್ವ ಮಟ್ಟದಲ್ಲಿ ಅಮೆರಿಕದಲ್ಲಿ ಬೆಳೆದ ೨ ಕೆಜಿ ೫೪೦ ಗ್ರಾಂ ತೂಕದ ಬಟರ್ ಫ್ರೂಟ್ ಗಿನ್ನಿಸ್ ದಾಖಲೆ ಹೊಂದಿದೆ. ಆದರೆ ಅದು ‘ರೀಡ್’ ತಳಿಯದ್ದಲ್ಲ. ಭಾರತದಲ್ಲಿ ಸಾಮಾನ್ಯವಾಗಿ ೬೦೦ ರಿಂದ ೮೦೦ ಗ್ರಾಂ ತೂಕದ ಹಣ್ಣುಗಳೇ ಹೆಚ್ಚಿನ ತೂಕದ್ದು ಎಂದು ಪರಿಗಣಿಸಲಾಗಿದೆ.

ಕ್ಯಾತನಹಳ್ಳಿಯಲ್ಲಿ ಜಮೀನು ಖರೀದಿಸಿ ಸಾವಯವ ಕೃಷಿ ಮಾಡುತ್ತಿರುವ ಎಚ್.ಆರ್.ಮೂರ್ತಿ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ವೃತ್ತಿಯಿಂದ ಹೋಟೆಲ್ ಉದ್ಯಮಿಯಾಗಿದ್ದು, ಮೈಸೂರು ನಗರದ ಹುಣಸೂರು ರಸ್ತೆಯಲ್ಲಿ ಗ್ರಾಂಡ್ ಪಾಸ್ ಹೋಟೆಲ್ ಅನ್ನೂ ನಡೆಸುತ್ತಿದ್ದಾರೆ. ಕೃಷಿ ಅವರ ಕುಟುಂಬದ ಪರಂಪರೆಯಾಗಿದ್ದು, ಅದನ್ನು ಆಧುನಿಕ ಸಾವಯವ ತಂತ್ರಜ್ಞಾನದೊಂದಿಗೆ ಮುಂದುವರಿಸಿದ್ದಾರೆ. ತೋಟದಲ್ಲಿ ಒಂದೇ ಒಂದು ಹಂತದಲ್ಲಿಯೂ ರಾಸಾಯನಿಕ ಗೊಬ್ಬರ ಬಳಸದೆ, ದನದ ಗೊಬ್ಬರ, ಜೀವಾಮೃತ, ತರಗೆಲೆಯಿಂದ ತಯಾರಿಸಿದ ಸಾವಯವ ಗೊಬ್ಬರ ಹಾಗೂ ನೈಸರ್ಗಿಕ ಪೋಷಕಾಂಶಗಳ ಮೂಲಕವೇ ವೈವಿಧ್ಯಮಯ ಹಣ್ಣಿನ ಹಾಗೂ ಇತರ ಬೆಳೆಗಳನ್ನು ಬೆಳೆಸಲಾಗಿದೆ. ಅವುಗಳಲ್ಲಿ ರೀಡ್ ತಳಿಯ ಬಟರ್ ಫ್ರೂಟ್ಟ್‌ನ ೮ ಮರಗಳು, ಇತರೆ ತಳಿಯ ೩೦೦ ಮರಗಳು, ಡ್ರಾಗನ್ ಫ್ರೂಟ್ ೩,೬೦೦ ಗಿಡಗಳು, ಸಪೋಟ ೩೦೦ ಮರಗಳು, ಕೇಸರ್ ಹಾಗೂ ಮಲ್ಲಿಕಾ ತಳಿಯ ಮಾವು ೪೦೦ ಮರಗಳು, ತೆಂಗು ೭೦೦, ಅಡಕೆ ೫,೫೦೦, ಮೆಣಸು ೧,೫೦೦ ಗಿಡಗಳು, ಪಯಾನಿ ೧,೨೦೦ ಗಿಡಗಳು ಅಲ್ಲದೆ, ಬಾಳೆ, ಲಿಂಬೆ, ಹಲಸು ಸೇರಿದಂತೆ ವಿವಿಧ ಹಣ್ಣಿನ ಬೆಳೆಗಳನ್ನು ಸಮಗ್ರ ಕೃಷಿ ಪದ್ಧತಿಯಲ್ಲಿ ಬೆಳೆಸಲಾಗಿದೆ.

ದಾಖಲೆ ತೂಕದ ಬಟರ್ ಫ್ರೂಟ್ ಬೆಳೆಯುವ ಮೂಲಕ ಎಚ್.ಆರ್. ಮೂರ್ತಿ ಅವರು ಸಾವಯವ ಕೃಷಿ ಯಲ್ಲಿಯೂ ಉತ್ತಮ ಗುಣಮಟ್ಟದ ಹಾಗೂ ಹಾಗೂ ಹೆಚ್ಚಿನ ತೂಕದ ಹಣ್ಣುಗಳನ್ನು ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.

” ಸಾವಯವ ಕೃಷಿ ಪದ್ಧತಿ, ಮುಂದಾಲೋಚನೆಯಿಂದ ಪರ್ಯಾಯ ತೋಟದ ಬೆಳೆಗಳು ಮತ್ತು ಹಣ್ಣಿನ ಬೆಳೆಗಳನ್ನು ಬೆಳೆದರೆ ರೈತ ಏನನ್ನಾದರೂ ಸಾಧಿಸಬಹುದು ಹಾಗೂ ಆರ್ಥಿಕವಾಗಿ ಮೇಲೆ ಬರಬಹುದು. ಇದಕ್ಕೆ ತಾಳ್ಮೆ ಮತ್ತು ಬುದ್ಧಿವಂತಿಕೆ ಮುಖ್ಯ. ವಿದೇಶದ ಹಣ್ಣಿನ ಬೆಳೆಗಳನ್ನು ಅವರಿಗೆ ಸರಿಸಮನಾಗಿ ನಾವೂ ಬೆಳೆಯಬಹುದು ಎಂಬುದನ್ನು ನಮ್ಮ ಮಣ್ಣಿನಲ್ಲಿ ಬೆಳೆದು ತೋರಿಸಿದ್ದೇನೆ.”

-ಎಚ್.ಆರ್.ಮೂರ್ತಿ, ಸಾವಯವ ಕೃಷಿಕ

 

 

Tags:
error: Content is protected !!