Mysore
23
overcast clouds

Social Media

ಭಾನುವಾರ, 09 ಆಗಸ್ಟ್ 2026
Light
Dark

ಹಳೆಯ ಹಳವಂಡಗಳಿಲ್ಲದ ಭವಿಷ್ಯದ ಬೆಳಕು ಈ ಜೆನ್ ಝೀಗಳು  

ಸುಧಾ ಆಡುಕಳ

ಶುಭಂ ಹದಿಹರಯವನ್ನು ಇತ್ತೀಚೆಗಷ್ಟೇ ದಾಟಿದ ಹೊಸ ತಲೆಮಾರಿನ ಹುಡುಗ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅವನಮ್ಮ ಹೇಳುವ ಕತೆಗಳೆಂದರೆ ಅವನಿಗೆ ಅಚ್ಚುಮೆಚ್ಚು. ಆದರೆ ಕತೆ ಹೇಳುವ ನೆಪದಲ್ಲಿ ಕೆಲವೊಮ್ಮೆ ಆ ಊರಿನ ಯಾರು ಯಾರಿಗೋ ತಾನು ಸಹಾಯ ಮಾಡಿದ್ದನ್ನು, ಮತ್ತೀಗ ಅವರು ಅದ್ಯಾವುದರ ದರಕಾರವಿಲ್ಲದೇ ಅಹಂಕಾರ ತೋರುವುದನ್ನೆಲ್ಲ ಹೇಳುವ ಹುಕಿ ಅವನಮ್ಮನಿಗೆ. ಮೊನ್ನೆ ಅಮ್ಮನಿಗೆ ಹೇಳಿದ್ದಾನೆ, “ಒಂದೋ ಯಾರು ಯಾರಿಗೋ ಸಹಾಯ ಮಾಡುವುದನ್ನು ಇನ್ನಾದರೂ ನಿಲ್ಲಿಸು ಅಥವಾ ಅವರಿಂದ ಕೃತಜ್ಞತೆಯ ಅಪೇಕ್ಷೆಯನ್ನು ಇಲ್ಲವಾಗಿಸು”. ಹಳವಂಡಗಳನ್ನು ಕೆದಕಿ ರಾಡಿಯಾಗಿಸಿಕೊಂಡು ಅದರೊಳಗೆ ಮುಳುಗಿಹೋಗುವಷ್ಟು ಸಮಯ, ಸಹನೆ ಎರಡೂ ಇಲ್ಲದ ಜೆನ್ ಝೀ ತಲೆಮಾರಿನ ಹುಡುಗ ಅವನು.

ಸಾನ್ವಿ ಎಂಜಿನಿಯರಿಂಗ್ ಕೋರ್ಸನ್ನು ರ‍್ಯಾಂಕ್‌ನೊಂದಿಗೆ ಮುಗಿಸಿದ ಪ್ರತಿಭಾನ್ವಿತೆ. ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮನೆಯಲ್ಲಿ ಕ್ಲೀನರ್, ಕುಕ್ ಎಂದೆಲ್ಲ ಇಟ್ಟುಕೊಂಡು ಝಂ ಎಂದು ಬದುಕಿದವಳು. ಇದೀಗ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ಮಾಡಿದ ಸಾಲ ಏರುತ್ತಿರುವ ಡಾಲರ್‌ನ್ನು ಸರಿಗಟ್ಟಲಾಗದೇ ಇದ್ದಾಗ ಪಾರ್ಟ್ ಟೈಂ ಜಾಬಿಗೆ ಸೇರಿ ಹಣವನ್ನು ಸರಿದೂಗಿಸುತ್ತಿದ್ದಾಳೆ. ಸುಕುಮಾರಿ ಮಗಳು ಅದ್ಯಾವುದೋ ದೇಶದ ಬೇಕರಿಯಲ್ಲಿ ದುಡಿಯಬೇಕಾಯಿತಲ್ಲ ಎಂಬ ವ್ಯಥೆ ಹಡೆದಮ್ಮನಿಗೆ.

ಅದನ್ನೇ ಅವಳಿಗೆ ಹೇಳಿದರೆ, “ಅಮ್ಮಾ, ಈ ಕೆಲಸ ನನಗೆ ಮಸ್ತ್ ಮಜಾ ಬರ್ತಿದೆ. ವಿಧವಿಧದ ಕೇಕ್‌ಗಳನ್ನು ಬೇಕ್ ಮಾಡುವುದು, ಬಗೆಬಗೆಯಾಗಿ ಅವುಗಳನ್ನು ಅಲಂಕರಿಸುವುದು, ಕೇಕ್‌ಗಳು ಚೆಲ್ಲುವ ಸುವಾಸನೆ? ವಾವ್? ಐ ಆಮ್ ಎಂಜಾಯಿಂಗ್ ಮೈ ಜಾಬ್” ಎಂದು ಅಮ್ಮನನ್ನು ಬೇಸ್ತು ಬೀಳಿಸುತ್ತಾಳೆ. ಮಂಜುಳಾ ಈಗಿನ್ನೂ ಹದಿನೇಳರ ಪೋರಿ. ಬೆನ್ನಿಗೆ ಹುಟ್ಟಿದ ಮೂವರು ಸಹೋದರಿಯರನ್ನು ಅವಳ ಸುಪರ್ದಿಗೆ ಬಿಟ್ಟು ಅವಳಮ್ಮ ಎಂದೋ ಪರಲೋಕವಾಸಿಯಾಗಿದ್ದಾಳೆ. ಅನಾರೋಗ್ಯ ಪೀಡಿತ ಅಪ್ಪನೂ ಇತ್ತೀಚೆಗೆ ಆಸ್ಪತ್ರೆಯಲ್ಲಿ ಮರಣಿಸಿದ್ದಾನೆ. ಅಪ್ಪನ ಕೊನೆಯ ಆಸೆಯಂತೆ ಹುಟ್ಟೂರಿನಲ್ಲಿಯೇ ಅವನನ್ನು ಮಣ್ಣಾಗಿಸಲು ಏಕಾಂಗಿಯಾಗಿ ಅವನ ಶವದೊಂದಿಗೆ ಅವಳು ಐನೂರು ಕಿ.ಮೀ. ಆಂಬ್ಯುಲೆನ್ಸಿನಲ್ಲಿ ಪ್ರಯಾಣಿಸಿದ್ದಾಳೆ. ಬಂಧು ಬಳಗದವರ ತಿರಸ್ಕಾರಗಳನ್ನು ಲೆಕ್ಕಿಸದೇ ಅಮ್ಮನ ಒಡವೆಗಳನ್ನು ಮಾರಿ ಉತ್ತರಕ್ರಿಯೆಗಳನ್ನು ಮಾಡಿ ಮುಗಿಸಿದ್ದಾಳೆ.

ಸಿಕ್ಕಿದವರೊಂದಿಗೆ ಮದುವೆ ಮಾಡಿ ಜವಾಬ್ದಾರಿಯನ್ನು ಕಳಕೊಳ್ಳುವ ಅವರ ಹುನ್ನಾರಕ್ಕೆ ಬಲಿಯಾಗದೇ ಬೆನ್ನಿಗಿದ್ದವರನ್ನು ಕಟ್ಟಿಕೊಂಡು ಮತ್ತೆ ಕೆಲಸದೂರಿಗೆ ಮರಳಿದ್ದಾಳೆ. ಬೆಳಿಗ್ಗೆ, ಸಂಜೆ ಅವರಿವರ ಮನೆಯ ಕೆಲಸ ಮಾಡುತ್ತಲೇ ಕಾಲೇಜು ಶಿಕ್ಷಣವನ್ನು ಮುಂದುವರಿಸಿರುವ ಅವಳಿಗೆ ತಮ್ಮ, ತಂಗಿಯರನ್ನು ಸಾಕುವ ಛಲ ಬಂದುದಾದರೂ ಹೇಗೆ? ಅವರನ್ನೆಲ್ಲ ಹಾಸ್ಟೆಲ್ಲಿಗಾದರೂ ಸೇರಿಸಬಾರದೆ? ಎಂದರೆ, “ಅವರಿಗೆ ಮನಸ್ಸಿಲ್ಲ ಮೇಡಂ. ಹೇಗೆ ಸೇರಿಸೋದು?” ಎಂದು ಪ್ರಶ್ನೆಯಾಗಿ ಎದುರು ನಿಲ್ಲುತ್ತಾಳೆ.

ಅಪ್ಪ- ಅಮ್ಮ ಇಬ್ಬರೂ ಒಳ್ಳೆಯ ಕೆಲಸದಲ್ಲಿರುವ ಮನೆತನದ ಹುಡುಗ ಆಕಾಶ್. ವಿದೇಶದಲ್ಲಿ ಸಂಶೋಧನೆ ಮಾಡಬೇಕೆಂಬ ಹಠದಿಂದ ಹಗಲಿರುಳು ಪ್ರಯತ್ನಿಸುತ್ತಾನೆ. ಯಾವುದಾದರೂ ಪ್ರತಿಷ್ಠಿತ ಯೂನಿವರ್ಸಿಟಿಯಿಂದ ಸ್ಕಾಲರ್‌ಶಿಪ್ ಪಡೆದು ಉನ್ನತ ಶಿಕ್ಷಣ ಪಡೆಯಬೇಕೆಂಬುದು ಅವನ ಹಠ. ತಾವೇ ಓದಿಸುತ್ತೇವೆಂದು ಪೋಷಕರು ನೀಡಿದ ಸಲಹೆಯನ್ನವನು ಖಡಾಖಂಡಿತವಾಗಿ ನಿರಾಕರಿಸಿದ್ದಾನೆ. “ಸ್ನಾತಕೋತ್ತರ ಡಿಗ್ರಿಯವರೆಗೆ ನಿಮ್ಮದೇ ಹಣದಲ್ಲಿ ಓದಿರುವೆ. ಇನ್ನು ಮುಂದೆ ಓದುವುದಾದರೆ ನನ್ನ ಹಣದಲ್ಲಿ ಮಾತ್ರ. ಅದಕ್ಕಾಗಿ ಎಷ್ಟು ಶ್ರಮವಹಿಸಲೂ ಸಿದ್ಧ, ಎಷ್ಟು ತಡವಾದರೂ ಸರಿ”. ಅವನ ಹಠದ ಮುಂದೆ ಪೋಷಕರು ಮಾತಿಲ್ಲದವರಾಗಿದ್ದಾರೆ.

ಮೋಹನ್ ಓದು ಮುಗಿಸಿ ಒಳ್ಳೆಯ ಹುದ್ದೆಯಲ್ಲಿರುವ ಯುವಕ. ಆರಂಕಿಯ ಸಂಬಳ ಕೊಡುವ ಬಹುರಾಷ್ಟ್ರೀಯ ಕಂಪೆನಿಗಾಗಿ ಅವನು ಕೆಲವೊಮ್ಮೆ ನಡುರಾತ್ರಿಯವರೆಗೂ ಕೆಲಸ ಮಾಡಬೇಕಾಗುತ್ತದೆ. ಶಾಲಾ ಶಿಕ್ಷಕರಾದ ಅವನ ಪೋಷಕರಿಗೆ ಸಮಾಜ ಸೇವೆಯೊಂದು ಚಟ. ಎಲ್ಲೋ, ಯಾರೋ ಕಷ್ಟದಲ್ಲಿದ್ದಾರೆಂದರೆ ಅವರಿಗಿಷ್ಟು ಸಹಾಯ ಮಾಡುವ ಹಂಬಲ ಅವರದ್ದು. ಕೆಲವೊಮ್ಮೆ ಕೈ ನಿಲುಕದಿದ್ದಾಗ ಮಗನ ಸಹಾಯವನ್ನು ಕೇಳುತ್ತಾರೆ. ಮೊದಲೆಲ್ಲ ಕೇಳಿದಷ್ಟು ಕೊಡುತ್ತಿದ್ದ ಮಗ ಇತ್ತೀಚೆಗೆ ಹೇಳಿದ್ದಾನೆ, “ನನಗೆ ಬರೋ ಸಂಬಳವನ್ನೆಲ್ಲ ನನಗೆ ಮಾತ್ರ ಅಂದಕೊಳ್ಳಬೇಡಿ. ಅದರಲ್ಲಿ ಮೂರನೇ ಒಂದಂಶವನ್ನು ಸರ್ಕಾರಕ್ಕೇ ತೆರಿಗೆಯಾಗಿ ಕಟ್ಟುತ್ತಿದ್ದೇನೆ. ಪರೋಕ್ಷವಾಗಿ ಬಡವರಿಗೆಂದು ನಾನು ಕೊಡುತ್ತಿರುವ ಸಹಾಯ ಅದು. ಬಡತನವನ್ನು ಇಲ್ಲವಾಗಿಸೋದು ಸರ್ಕಾರದ ಕೆಲಸ.

ಅದನ್ನು ಸರಿಯಾಗಿ ಮಾಡಿಲ್ಲವೆಂದರೆ ಸರ್ಕಾರವನ್ನು ಪ್ರಶ್ನಿಸಬೇಕೇ ಹೊರತು ಕೊಟ್ಟವರಲ್ಲೇ ಮತ್ತೆ ಕೇಳುವುದಲ್ಲ”. ಮಗನ ಮಾತು ಪೋಷಕರಿಗೆ ಅಚ್ಚರಿ ಮೂಡಿಸಿದೆ. ಹೊರಗಿನವರ ದರಕಾರವಿಲ್ಲವೆಂಬಂತೆ ಮಾತನಾಡುವ ಇದೇ ಮಗ ತನ್ನ ಸ್ನೇಹಿತನೊಬ್ಬನ ವಿಷಾದಭರಿತ ಸ್ಟೇಟಸ್ ನೋಡಿ, ಅವನು ಕಷ್ಟದಲ್ಲಿದ್ದಾನೆಂದು ನಡುರಾತ್ರಿಯಲ್ಲಿ ಅವನ ಕೋಣೆಗೆ ಹೋಗಿ ಸಮಾಧಾನ ಮಾಡಿದ್ದನ್ನು ಅರ್ಥೈಸಲಾಗದೇ ಒದ್ದಾಡುತ್ತಿದ್ದಾರೆ.

ಮೇಲಿನ ಘಟನೆಗಳೆಲ್ಲವೂ ಜೆನ್ ಝೀ ತಲೆಮಾರಿನ ಹೊಸ ಸಂಕಥನವನ್ನು ನಮಗೆ ಅರ್ಥ ಮಾಡಿಸುತ್ತಿವೆ. ಉಪನ್ಯಾಸಕಿಯಾಗಿ ಮೂರು ದಶಕಗಳಿಂದ ಯುವ ತಲೆಮಾರಿನೊಂದಿಗೆ ಪ್ರತಿದಿನವೂ ಒಡನಾಡುತ್ತಿರುವ ನನಗೆ ಬದಲಾಗುತ್ತಿರುವ ಅವರ ವರ್ತನೆಗಳು ಮತ್ತು ವಿಚಾರಧಾರೆಗಳನ್ನು ಅರಿಯುವುದು ಅನಿವಾರ್ಯ ಮತ್ತು ಆಸಕ್ತಿಕರವಾದ ಸಂಗತಿಯಾಗಿದೆ. ಮೊದಲೆಲ್ಲ ನಮ್ಮ ಬಾಲ್ಯದ ಕಷ್ಟ ಕಾರ್ಪಣ್ಯಗಳ ಕತೆಯನ್ನು ಹೇಳಿದಾಗ ಕಣ್ಣರಳಿಸುತ್ತಿದ್ದ ವಿದ್ಯಾರ್ಥಿವೃಂದ ಇಂದು ಅದನ್ನು ಕೇಳಿ ಆಕಳಿಸುತ್ತದೆ. “ಮೇಡಂ, ಯಾವ ಕೋರ್ಸ್ ಮಾಡಿದ್ರೆ ಬೇಗ ಜಾಬ್ ಸಿಗಬಹುದು ಹೇಳಿ. ಕಷ್ಟದ ಕೆಲಸವಾದರೂ ಪರವಾಗಿಲ್ಲ, ಕೈತುಂಬ ಹಣ ಸಿಕ್ಕಿದರೆ ರೀಲ್ಸ್ ಗೀಲ್ಸ್ ಮಾಡಿಕೊಂಡು ಮಜವಾಗಿರಬಹುದು” ಎನ್ನುತ್ತಾರೆ.

ವರ್ಷದ ಕೊನೆಯಲ್ಲಿ ಅನಿಸಿಕೆಗಳನ್ನು ಬರೆಯಲು ಹೇಳಿದರೆ ಶಿಕ್ಷಕರನ್ನು ಹಾಡಿ ಹೊಗಳುವ ಬದಲು ಸರಿತಪ್ಪುಗಳೆಲ್ಲವನ್ನೂ ಬರೆದು ಬೇಸ್ತು ಬೀಳಿಸುತ್ತಾರೆ. ದಪ್ಪ ಪುಸ್ತಕಗಳಲ್ಲಿ ನಾವು ಹುಡುಕುತ್ತಿದ್ದ ಸಂಗತಿಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಮೊಬೈಲಲ್ಲಿ ಹುಡುಕಿ ತೆಗೆಯುತ್ತಾರೆ. ರಬ್ಬರಿನಂತೆ ಎಳೆಯುವ ಧಾರಾವಾಹಿಗಳಂತೆ ನಾವಿದ್ದರೆ ಹತ್ತೇ ಸೆಕೆಂಡಿನಲ್ಲಿ ಎಲ್ಲವನ್ನೂ ಹೇಳಿ ಮುಗಿಸುವ ಜಾಹೀರಾತಿನಂತಹವರು ಇವರು.

ಅಲ್ಲೆಲ್ಲೋ ಸೋಶಿಯಲ್ ಮೀಡಿಯಾದ ರೀಲ್ಸ್‌ಗಳಲ್ಲಿ ಮುಳುಗಿ ವಾಸ್ತವ ಜಗತ್ತನ್ನೆ ಮರೆತುಬಿಟ್ಟಿದ್ದಾರೆ, ಕಿವಿಗೊಂದು ಉಪಕರಣವನ್ನು ಸಿಕ್ಕಿಸಿಕೊಂಡು ಸುತ್ತಲಿನ ಶಬ್ದಗಳಿಗೆ ಕಿವುಡಾಗಿದ್ದಾರೆ ಎಂದು ನಾವೆಲ್ಲರೂ ಭಾವಿಸಿದ್ದ ಈ ಜೆನ್ ಝೀಗಳು, ಇದ್ದಕ್ಕಿದ್ದಂತೆ ಜಗತ್ತಿನಾದ್ಯಂತ ಮಾತನಾಡತೊಡಗಿದ್ದಾರೆ. ವರ್ತಮಾನಕ್ಕೆ ಕನ್ನಡಿ ಹಿಡಿಯುವಂತಿರುವ ಅವರ ಮಾತುಗಳು ವಿಷಯಗಳ ಬಗ್ಗೆ ಅವರಿಗಿರುವ ಆಳವಾದ ಜ್ಞಾನ ಮತ್ತು ಅರಿವಿನ ಸಂಕೇತಗಳಂತೆ ಕಾಣುತ್ತಿವೆ. ಮಕ್ಕಳೆಂದರೆ ಭವಿಷ್ಯದ ಗಳಿಕೆಯ ಯಂತ್ರಗಳೆಂದು ಭಾವಿಸಿ ಭಾಷೆ, ಕಲೆ, ಸಂವಹನ, ಮಾನವಿಕ ವಿಷಯಗಳನ್ನೆಲ್ಲ ಸೋಕಿಸದೇಬೆಳೆಸಿದ ತಲೆಮಾರಿನ ಕುಡಿಗಳಿವು. ಸಂವಹನಕ್ಕೆ,  ಸಂಭ್ರಮಕ್ಕೆ ತಮ್ಮದೇ ಭಾಷೆಯನ್ನು ಸೃಷ್ಟಿಸಿಕೊಂಡ ಅವರನ್ನು ವಿಮರ್ಶಿಸುವ ಅಧಿಕಾರ ನಮಗೆಲ್ಲಿದೆ?

” ನಿಮ್ಮ ಭೂತದ ಹಳಹಳಿಕೆಗಳು ನಮಗೆ ಬೇಡ, ಭವಿಷ್ಯದ ಬಣ್ಣನೆಗಳಂತೂ ಬೇಡವೇ ಬೇಡ. ವರ್ತಮಾನವಷ್ಟೇ ಸತ್ಯ, ಅದನ್ನು ಸಹ್ಯವಾಗಿಸಿ ಎಂಬ ಜೆನ್ ಝೀ ತಲೆಮಾರಿನ ಮಾತುಗಳನ್ನು ‘ದೊಡ್ಡ’ವರಾದ ನಾವು ಕೇಳಿಸಿಕೊಳ್ಳಲೇಬೇಕಿದೆ”

 

 

Tags:
error: Content is protected !!