Mysore
22
overcast clouds

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ

ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್ ಮಾಡಲಾಗಿದೆ.

ತಿಂಗಳ ಪ್ರಾರಂಭದಲ್ಲಿ ಕೇರಳದ ವಯನಾಡು ಪ್ರದೇಶ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದ್ದರಿಂದ ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಐದು ದಿನಗಳ ಹಿಂದೆ ಜಲಾಶಯದ ನಾಲ್ಕು ಗೇಟ್‌ಗಳ ಮೂಲಕ ೧೦,೦೦೦ ಕ್ಯೂಸೆಕ್ಸ್‌ನಿಂದ ೨೭ ಸಾವಿರ ಕ್ಯೂಸೆಕ್ಸ್‌ತನಕ ಪ್ರತಿನಿತ್ಯ ನೀರು ಬಿಡಲಾಗಿದ್ದು, ೬ ಟಿಎಂಸಿಗೂ ಹೆಚ್ಚಿನ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸರ್ಕಾರಕ್ಕೆ ಕಬಿನಿ ಜಲಾಶಯ ವರದಾನವಾಗಿತ್ತು. ಪ್ರಾಧಿಕಾರ ನೀಡಿದ ಆದೇಶಕ್ಕಿಂತ ಒಂದೂವರೆ ಟಿಎಂಸಿ ನೀರು ಹೆಚ್ಚಾಗಿ ಹರಿದುಹೋಗಿದೆ.

ಬುಧವಾರದಿಂದ ಕೇರಳದ ವಯನಾಡು ಪ್ರದೇಶದಲ್ಲಿ ಮಳೆ ಪ್ರಮಾಣ ತೀವ್ರ ಕುಸಿತ ಕಂಡಿದ್ದರಿಂದ ಜಲಾಶಯಕ್ಕೆ ಒಳಹರಿವು ೯ ಕ್ಯೂಸೆಕ್ಸ್ ನಷ್ಟು ಮಾತ್ರ ಬರುತ್ತಿದೆ. ಹೀಗಾಗಿ ಜಲಾಶಯದಿಂದ ನಾಲ್ಕು ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ.

ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆಗಳ ರೈತರು ಮತ್ತು ಕೆರೆಕಟ್ಟೆಗಳಿಗೆ ೨,೦೦೦ ಕ್ಯೂಸೆಕ್ಸ್ ನೀರು, ಹುಲ್ಲಹಳ್ಳಿ, ರಾಂಪುರ ನಾಲೆಗಳಿಗೆ, ಮೈಸೂರು, ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಸುಭಾಷ್ ವಿದ್ಯುತ್ ಘಟಕದ ಮೂಲಕ ೫,೦೦೦ ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ. ಜಲಾಶಯದ ಗರಿಷ್ಟ ಮಟ್ಟ ೮೪ ಅಡಿಗಳಿದ್ದು ಜಲಾಶಯದ ಸುರಕ್ಷತೆ ದೃಷ್ಟಿಯಿಂದ ೮೨ ಅಡಿಗಳಿಗೆ ನೀರನ್ನು ಶೇಖರಣೆ ಮಾಡಿಕೊಳ್ಳಲಾಗಿದೆ.

” ವಯನಾಡು ಪ್ರದೇಶದಲ್ಲಿ ಮಳೆ ಪ್ರಮಾಣ ಎರಡು ಮೂರು ದಿನಗಳಿಂದ ಕಡಿಮೆಯಾಗಿದ್ದು ಜಲಾಶಯಕ್ಕೆ ಒಳಹರಿವಿನ ಪ್ರಮಾಣ ೯,೦೦೦ ಕ್ಯೂಸೆಕ್ಸ್ ಬರುತ್ತಿದ್ದು, ನದಿಗೆ ಬಿಡಲಾಗುತ್ತಿದ್ದ ಭಾರೀ ಪ್ರಮಾಣದ ನೀರನ್ನು ಸ್ಥಗಿತಗೊಳಿಸಲಾಗಿದೆ.”

ಗಣೇಶ್, ಎಇಇ, ಕಬಿನಿ ಜಲಾಶಯ

 

 

Tags:
error: Content is protected !!