ಭಾರತಿ ಬಿ ವಿ
ವ್ಯಾಲಿ ಆಫ್ ಮಾನ್ಯುಮೆಂಟ್ಸ್ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ ಹೇಳಿದಾಗ ಸಮಯ ಸಂಜೆಯ ೫ ಗಂಟೆ. ಅಲ್ಲಿಂದ ವ್ಯಾಲಿ ಆಫ್ ಮಾನ್ಯು ಮೆಂಟ್ಸ್ಗೆ ೩೦೦ ಕಿಮೀ ಎಂದು ತೋರಿಸಿತು. ಮೂರು ಗಂಟೆಗಳ ಪ್ರಯಾಣ. ಹೇಗೂ ಸೂರ್ಯಾಸ್ತ ೯ಕ್ಕೆ. ೮ಕ್ಕೆ ಸೇರಿದರೆ ಸರಿಯಾಯ್ತಲ್ಲ… ಹೀಗೆ ಲೆಕ್ಕ ಹಾಕಿ ಹೊರಟೇಬಿಟ್ಟೆವು. ಬೆಳಿಗ್ಗೆ ತಿಂಡಿ ತಿಂದಿದ್ದು. ಹಸಿವಿನಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. ದಾರಿಯಲ್ಲಿ ಏನೋ ತಿಂದರಾಯಿತು ಎಂದು ಹೊರಟೆವು.
ನಮ್ಮ ದುರದೃಷ್ಟಕ್ಕೆ ದಾರಿಯಲ್ಲಿ ಯಾವುದೇ ರೆಸ್ಟೋರೆಂಟ್ ಸಿಗಲಿಲ್ಲ. ಸಿಕ್ಕರೂ ಗಮನಿಸದಷ್ಟು ಆತಂಕದಲ್ಲಿ ಇದ್ದೆವೆನ್ನಿ. ನಮ್ಮ ಗುರಿ ಸೂರ್ಯಾಸ್ತದ ವೇಳೆಗೆ ವ್ಯಾಲಿಯನ್ನು ತಲುಪುವುದಾಗಿತ್ತು. ಆಗ ಸಮಯ ೭.೩೦. Forrest Gump ಸಿನಿಮಾ ಚಿತ್ರಣಗೊಂಡಿದ್ದ ರಸ್ತೆಯಲ್ಲಿದ್ದೆವು! ದೂರದಲ್ಲಿ ಅದ್ಭುತವಾದ ಬೃಹದಾಕಾರದ ಕಲ್ಲು ಕಾಣಿಸಲಾರಂಭಿಸಿತು! ಎಡಭಾಗದಲ್ಲಿ ಸೂರ್ಯ ಮುಳುಗುತ್ತಿರುವ ಕೆಂಪು ಆಗಸ, ನಡುವೆ ರಸ್ತೆಯಲ್ಲಿ ನಾವು… ‘ಇನ್ನೊಂದು ಅರ್ಧ ಗಂಟೆಯ ಪ್ರಯಾಣ ಮಾಡಿ ತಲುಪಿ, ನಂತರ ಅಲ್ಲಿ ಒಂದು ಗಂಟೆ ಓಡಾಡುವುದರಲ್ಲಿ ಸೂರ್ಯಾಸ್ತವಾಗುತ್ತದೆ. ಆಹ್! Perfect plan’ ಎಂದುಕೊಳ್ಳುತ್ತಿರುವಾಗಲೇ ಸೂರ್ಯ ಮುಳುಗುವ ವಾತಾವರಣ. ಇದೇನಿದು ಹೀಗೆ ಕತ್ತಲು ಆವರಿಸುತ್ತಿದೆಯಲ್ಲ ಅಂತ ಗಾಬರಿಯಾಗಿ ಸಮಯ ನೋಡಿದರೆ ಅದಾಗಲೇ ೮.೪೦ ಅಂತ ತೋರಿಸುತ್ತಿದೆ! ಈಗ ತಾನೇ ೭.೩೦ ಆಗಿತ್ತಲ್ಲ ಅಂತ ಚೆಕ್ ಮಾಡಿದರೆ ವ್ಯಾಲಿ ಆಫ್ ಮಾನ್ಯುಮೆಂಟ್ ಯೂಟಾ ಮತ್ತು ಅರಿಜ಼ೋನಾ ಸ್ಟೇಟ್ಗಳ ನಡುವಿನ ಬಾರ್ಡರ್ನಲ್ಲಿ ಇರುವುದರಿಂದ ಅಲ್ಲಿ ಸಮಯ ಒಂದು ಗಂಟೆ ಮುಂದಿದೆ! ಗ್ರಾಂಡ್ ಕ್ಯಾನ್ಯನ್ ಯೂಟಾದಲ್ಲಿ ಇರುವುದರಿಂದ ನಾವು ಅಲ್ಲಿನ ಸಮಯ ನೋಡಿ ತಪ್ಪು ಲೆಕ್ಕ ಹಾಕಿ ಹೊರಟಿದ್ದೆವು! ಬಾರ್ಡರ್ ಹತ್ತಿರವಾದ ಕೂಡಲೇ ಗಡಿಯಾರ ಒಂದು ಗಂಟೆ ಮುಂದೆ ಜಿಗಿದಿತ್ತು. ಒಂದೇ ದೇಶದಲ್ಲಿ ೯ ಟೈಮ್ ಜ಼ೋನ್ ಇದ್ದರೆ ಇದೇ ಹಣೆಬರಹ.
ಕ್ಷಣಕ್ಷಣಕ್ಕೂ ಟೈಮ್ ನೋಡುತ್ತಿರುವಾಗಲೇ ತಲುಪಲು ಇನ್ನೇನು ೧೩ ನಿಮಿಷ ಪ್ರಯಾಣ ಬಾಕಿ ಇದೆ ಅನ್ನುವಾಗ ಸೂರ್ಯ ಮುಳುಗಿಯೇಬಿಟ್ಟ. ೩ ಗಂಟೆಗಳ ಪ್ರಯಾಣ ವ್ಯರ್ಥವಾದಂತೆನಿಸಿ ನಿರಾಸೆಯ ಮೌನ ಹರಡಿತು. ಸಮಯ ಕಳೆಯಿತು. ಇದ್ದಕ್ಕಿದ್ದಂತೆ ಸಂದೀಪ್ ‘ಅಯ್ಯೋ’ ಎಂದು ಜೋರಾಗಿ ಕಿರುಚಿದ. ಏನಾದರೂ ಪ್ರಾಣಿ ಎದುರಾಯಿತಾ ಅಂತ ಗಾಬರಿಯಾದೆವು. ಅವನು ‘ಅಲ್ಲಲ್ಲ, ಇಲ್ಲಿ ಇಲ್ಲಿ’ ಅಂತ ಕಿರುಚುತ್ತಿದ್ದಾನೆ. ಎಲ್ಲಿ ಅಂತ ನೋಡಿದರೆ ಬಲಕ್ಕೆ ಆಗಸದಲ್ಲಿ ಹೆಚ್ಚುಕಡಿಮೆ ನಮ್ಮದೇ ಕಣ್ಣಿನ ಎತ್ತರದಲ್ಲಿ ಹುಣ್ಣಿಮೆಯ ಚಂದ್ರ ಎತ್ತರದ ಕೋಡುಗಲ್ಲೊಂದರ ಪಕ್ಕದಲ್ಲಿ ಹೊಳೆಯುತ್ತಿದ್ದಾನೆ! ಕಾರನ್ನು ಅಲ್ಲಿಯೇ ನಿಲ್ಲಿಸಿ ಚಂದ್ರನನ್ನು ನೋಡುತ್ತಾ ನಿಂತುಬಿಟ್ಟೆವು. ಮಾಮೂಲಿಗಿಂತ ಎರಡರಷ್ಟು ದೊಡ್ಡ ಗಾತ್ರ… ನಮಗಿಂತ ಸ್ವಲ್ಪವೇ ದೂರದಲ್ಲಿ… ಕೈಗೆ ಎಟಕುವಂತೆ! ನಸುಗತ್ತಲು, ನಿರ್ಜನ ಪ್ರದೇಶ, ತಂಗಾಳಿ ಮತ್ತು ಹೊಳೆವ ಚಂದ್ರ! ಅಂಥ ಸುಂದರವಾದ ಹುಣ್ಣಿಮೆ ಬದುಕಿನಲ್ಲಿ ಈವರೆಗೆ ಕಂಡಿರಲಿಲ್ಲ! ನಾವು ಸೂರ್ಯಾಸ್ತ ನೋಡಲು ಹೊರಟಿದ್ದೆವು ಅನ್ನುವುದನ್ನೇ ಮರೆಸಿತ್ತು ಈ ಚಂದ್ರೋದಯ!
” ಒಂದು ನಿರಾಶೆಯಲ್ಲಿ ನಾವು ಮುಳುಗೇಳುತ್ತಿರುವಾಗಲೇ ದೇವರು ನಮಗಾಗಿ ಇನ್ನೊಂದು ಅದ್ಭುತವಾದುದನ್ನು ನೀಡುವ ತಯಾರಿ ನಡೆಸಿದ್ದ..!”



