ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ ಅವರು ಪುನಃ ಅದೇ ಸ್ಥಳದಲ್ಲಿ ವ್ಯಾಪಾರ, ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿದೆ. ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕರ್ಜನ್ ಪಾರ್ಕ್ ಪಕ್ಕದ ಪಾದಚಾರಿ ರಸ್ತೆಯಲ್ಲಿ ಎಂದಿನಂತೆ ಫುಟ್‌ಪಾತ್ ವ್ಯಾಪಾರಸ್ಥರು ತಮ್ಮ ಕಸುಬನ್ನು ಪ್ರಾರಂಭಿಸಿದ್ದಾರೆ. ಅಲ್ಲಿ ಬಟ್ಟೆ, ವಾಚ್, ಗೋಲ್‌ಗುಪ್ಪ, ಹಣ್ಣು, ಚಪ್ಪಲಿಗಳ ವ್ಯಾಪಾರವನ್ನು ನಡೆಸುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ಓಡಾಡಲು ತೊಂದರೆಯಾಗುತ್ತಿದೆ. ಇದಲ್ಲದೇ ಸಯ್ಯಾಜಿರಾವ್ ರಸ್ತೆಯ ಎರಡೂ ಬದಿಗಳಲ್ಲಿ ಫುಟ್‌ಪಾತ್ ವ್ಯಾಪಾರ ಮುಂದುವರಿದಿದೆ. ಮೈಸೂರು ನಗರಪಾಲಿಕೆ ಆಯುಕ್ತರು ಈ ಸ್ಥಳಗಳನ್ನು ಪರಿಶೀಲಿಸಿ ಫುಟ್‌ಪಾತ್ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಪಾದಚಾರಿಗಳಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು.
-ಜಿ.ಪಿ.ಹರೀಶ್, ವಿ.ವಿ.ಮೊಹಲ್ಲಾ, ಮೈಸೂರು





