Mysore
23
overcast clouds

Social Media

ಭಾನುವಾರ, 26 ಜುಲೈ 2026
Light
Dark

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ

ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ ವಿಚಾರದಲ್ಲಿ ಪರಸ್ಪರ ರಾಜಕೀಯ ಕೆಸರೆರೆರಾಚಾಟ ಮುಂದುವರಿದಿದೆ.

ಈ ಬಾರಿ ಹೆಚ್ಚು ಮಳೆ ಬಾರದಿರುವುದರಿಂದ ಸ್ವಲ್ಪ ಮಟ್ಟಿಗೆ ರಸ್ತೆಗಳು ಉಳಿದಿವೆ. ಆದರೂ ಕೆಲವು ಕಡೆ ಹದಗೆಟ್ಟ ರಸ್ತೆಯಿಂದ ವಾಹನ ಸವಾರರಿಗೆ ಸವಾಲಾಗಿದೆ. ಅದರಲ್ಲಿಯೂ ಮುಖ್ಯ ಸಂಪರ್ಕ ರಸ್ತೆಯೇ ದುಸ್ಥಿತಿಯಲ್ಲಿದ್ದು, ಗ್ರಾಮೀಣ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಆದರೆ ಈ ವಿಚಾರ ವೃಥಾ ಪರಸ್ಪರ ರಾಜಕೀಯ ಕೆಸರೆರಚಾಟಕ್ಕೆ ನಾಂದಿಯಾಗಿದೆ.

ರಾಜ್ಯ ಹೆದ್ದಾರಿ ದುಸ್ಥಿತಿ ಮುಖ್ಯವಾಗಿ ದಕ್ಷಿಣ ಕೊಡಗು ಮತ್ತು ಜಿಲ್ಲಾ ಕೇಂದ್ರ ಮಡಿಕೇರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ವಿರಾಜಪೇಟೆ ಯಲ್ಲೇ ದುಸ್ಥಿತಿಯಲ್ಲಿದೆ. ವಿರಾಜಪೇಟೆ ವ್ಯಾಪ್ತಿಯ ಭೇತ್ರಿವರೆಗೆ ಕೆಲವೇ ಕೆಲವು ಭಾಗ ಹೊರತುಪಡಿಸಿ ಸಂಪೂರ್ಣ ರಸ್ತೆ ಗುಂಡಿಬಿದ್ದಿದೆ. ಕದನೂರು ಸೇತುವೆಯ ಒಂದು ಬದಿ ತೀವ್ರ ಗುಂಡಿಗಳಿಂದ ಆವೃತವಾಗಿದೆ. ಕಳೆದ ವರ್ಷವೂ ಗುಂಡಿಗಳಿಗೆ ತಾತ್ಕಾಲಿಕವಾಗಿ ತೇಪೆ ಹಾಕಲಾಗಿತ್ತು.

ಮಲ್ಲಮಟ್ಟಿಯಿಂದ ಕಾಕೋಟು ಪರಂಬು ಮಾರ್ಗದ್ದೂ ಇದೇ ಕಥೆ. ನಂತರ ಕಾಕೋಟುಪರಂಬಿನ ಅಂಚಿನಿಂದ ಭೇತ್ರಿಯವರೆಗೆ ಅಂದಾಜು ೨ ಕಿ.ಮೀ. ದೂರದ ರಸ್ತೆಗೆ ಕಳೆದ ಸಾಲಿನಲ್ಲಿಡಾಂಬರೀಕರಣಕ್ಕೆ ಸಿದ್ಧತೆ ನಡೆದಿತ್ತಾದರೂ ಕಾಮಗಾರಿ ನಡೆಯಲಿಲ್ಲ. ಪರಿಣಾಮ ಈಗ ಸಂಚಾರ ಸವಾಲಾಗಿದೆ. ನಂತರ ಮಡಿಕೇರಿ ಕ್ಷೇತ್ರದ ಶಾಸಕರ ಭಾಗದಲ್ಲಿ ಮೂರ್ನಾಡು, ಮೆಕೇರಿವರೆಗೂ ಇದೇ ಸ್ಥಿತಿ ಎನ್ನುತ್ತಾರೆ ಸ್ಥಳೀಯರು. ಗುಂಡಿಗಳ ನಡುವೆ ರಸ್ತೆ ಇತ್ತೀಚೆಗೆ ಮಾಕುಟ್ಟ ಅಂತರರಾಜ್ಯ ರಸ್ತೆ ಕಾಮಗಾರಿ ನಡೆದಿತ್ತು. ಮೊದಲು ನಡೆದ ಕಾಮಗಾರಿಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಆದರೆ, ೨ನೇ ಹಂತದ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡದೇ ಇರುವುದರಿಂದ ಗುಂಡಿಗಳ ನಡುವೆ ರಸ್ತೆ ಇದೆಯೇ ಎಂಬ ಅನುಮಾನ ಕಾಡಲಾರಂಭಿದೆ. ಗುಂಡಿಮಯವಾದ ರಸ್ತೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಅಪಘಾತದ ಭೀತಿಯೂ ಕಾಡುತ್ತಿದೆ.

೨ನೇ ಹಂತದ ಡಾಂಬರೀಕರಣ ಸಂದರ್ಭದಲ್ಲಿ ಡಾಂಬರ್ ಬೆಲೆ ಏರಿಕೆಯಾ ಗಿದ್ದರಿಂದ ಕಾಮಗಾರಿ ಅಪೂರ್ಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಮಾರ್ಗವಾಗಿ ಬಸ್, ಸರಕು ಸಾಗಣೆ ಲಾರಿಗಳು ಸೇರಿದಂತೆ ಭಾರೀ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತವೆ. ವಿರಾಜಪೇಟೆ-ಅಮ್ಮತ್ತಿ ಹೆದ್ದಾರಿಯ ಬಿಳುಗುಂದ ಜಂಕ್ಷನ್ ಮುಂದಿನಿಂದ ಕಾವಾಡಿವರೆಗೆ ಸಾಕಷ್ಟು ಗುಂಡಿಮಯವಾಗಿದೆ.

ಅಮ್ಮತ್ತಿ-ಸಿದ್ದಾಪುರ ರಸ್ತೆ ಚೆನ್ನಾಗಿದ್ದರೂ ಅಲ್ಲಲ್ಲಿ ಬಾಯಿ ತೆರೆದ ಹೊಂಡಗಳು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಸಿದ್ದಾಪುರದಿಂದ ಕಾವೇರಿ ಸೇತುವೆವರೆಗೆ ರಸ್ತೆ ದುಸ್ಥಿತಿಯಲ್ಲಿದೆ. ಗೋಣಿಕೊಪ್ಪ ಪಾಲಿಬೆಟ್ಟ ರಸ್ತೆಯ ಲೋಪಮುದ್ರ ಆಸ್ಪತ್ರೆಯ ನಂತರ ರಸ್ತೆ ತೀರಾ ಹದಗೆಟ್ಟಿದೆ. ಕದನೂರು ಕಡಂಗ ಹೆದ್ದಾರಿಯ ಅರಮೇರಿ ಕೊನೆಭಾಗದಿಂದ ಕಡಂಗದವರೆಗೆ ರಾಜ್ಯಹೆದ್ದಾರಿ ದುಸ್ಥಿತಿಯಲ್ಲಿದೆ. ಕುಟ್ಟ ರಸ್ತೆಯೂ ಇದೀಗ ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದೆ.

ಒಟ್ಟಾರೆ ವಿರಾಜಪೇಟೆ ವ್ಯಾಪ್ತಿಯ ಅನೇಕ ಮುಖ್ಯರಸ್ತೆ ಗಳು ದುಸ್ಥಿತಿಯಲ್ಲಿವೆ. ಸಂಬಂಧಪಟ್ಟವರು ಕೂಡಲೇ ರಸ್ತೆಗಳನ್ನು ದುರಸ್ತಿ ಮಾಡಿಸುವ ಮೂಲಕ ವಾಹನ ಸವಾರರಿಗೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

” ಹದಗೆಟ್ಟ ರಸ್ತೆಯಿಂದ ಬಸ್‌ಗಳು ಮಡಿಕೇರಿಗೆ ತಲುಪಲು ನಿಗದಿತ ಒಂದು ಗಂಟೆಗಿಂತ ಹೆಚ್ಚುಕಾಲ ಬೇಕಾಗುತ್ತಿದೆ. ಭಾರೀ ಮಳೆಯಾದರೆ ವಿರಾಜಪೇಟೆ-ಮಡಿಕೇರಿ ರಸ್ತೆ ಸಂಚಾರಸ್ಥಗಿತವಾದರೂ ಅಚ್ಚರಿ ಇಲ್ಲ. ಮಾಕುಟ್ಟ ಹೆದ್ದಾರಿ ನಮ್ಮ ಹಾಗೂ ಕೇರಳಂ ರಾಜ್ಯದಜನರನ್ನು ಭಾವನಾತ್ಮಕವಾಗಿ ಬೆಸೆಯುತ್ತದೆ. ಸಾರ್ವಜನಿಕರ ವಾಹನಗಳು ಹಾಗೂ ಸರಕುಸಾಗಣೆ ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿದ್ದು, ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕಾಗಿದೆ.”

-ದಿನೇಶ್ ನಾಯರ್, ಕಾರ್ಯದರ್ಶಿ, ವಿರಾಜಪೇಟೆ ಬಸ್ ಕಾರ್ಮಿಕರ ಸಂಘ

” ವಿರಾಜಪೇಟೆ ತಾಲ್ಲೂಕಿನ ಹಲವಾರು ಮುಖ್ಯ ರಸ್ತೆಗಳ ದುರಸ್ತಿ ಕಾರ್ಯ ಕಳೆದ ಬೇಸಿಗೆಯಲ್ಲಿಯೇ ನಡೆಯಬೇಕಿತ್ತು. ಮಧ್ಯ ಪ್ರಾಚ್ಯದಲ್ಲಿ ಅಮೆರಿಕ- ಇರಾನ್ ನಡುವೆ ಯುದ್ಧ ನಡೆಯುತ್ತಿರುವುದರಿಂದ ಟೆಂಡರ್‌ನಲ್ಲಿ ನಾವು ನಮೂದಿಸಿರುವ ದರಕ್ಕಿಂತ ಡಾಂಬರಿನ ಬೆಲೆ ಹೆಚ್ಚಾದ ಕಾರಣ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಮಾಕುಟ್ಟ ರಸ್ತೆಯಲ್ಲಿ ಎರಡನೇ ಹಂತದ ಕಾಮಗಾರಿ ಸಂದರ್ಭದಲ್ಲಿ ಎರಡನೇ ಬಾರಿ ಡಾಂಬರೀಕರಣ ಕಾಮಗಾರಿಯ ವೇಳೆ ಡಾಂಬರಿನ ಬೆಲೆ ಏರಿಕೆಯಾದ ಕಾರಣ ರಸ್ತೆ ಕಾಮಗಾರಿ ಸ್ಥಗಿತವಾಗಿದ್ದು, ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಮಡಿಕೇರಿ ರಸ್ತೆಯಲ್ಲಿಯೂ ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗುತ್ತಿದೆ. ಮುಂದಿನ ವರ್ಷ ರಸ್ತೆಗಳ ದುರಸ್ತಿ ಕಾಮಗಾರಿ ನಡೆಯಲಿದೆ.”

-ಸತೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ 

 

 

Tags:
error: Content is protected !!