ರೇಣುಕಾ ನಿಡುಗುಂದಿ
ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿಗಳ ಧ್ವನಿಯನ್ನು ಇನ್ನು ಮುಂದೆ ಸಂಪೂರ್ಣವಾಗಿ ಕಡೆಗಣಿಸಲಾಗದು ಎಂಬುದನ್ನು ತೋರಿಸಿದೆ. ಆದರೆ ಈ ಗೆಲುವಿನ ಹಿಂದೆ ರಕ್ತಸಿಕ್ತ ನೋವು, ಅವಮಾನ ಮತ್ತು ದಮನದ ಇತಿಹಾಸವಿದೆ.
ಈ ಹೋರಾಟವನ್ನು ನಿಗ್ರಹಿಸಲು ವಿದ್ಯಾರ್ಥಿಗಳ ಮೇಲೆ ಕ್ರೂರವಾಗ ಲಾಠಿಚಾರ್ಜ್ ನಡೆಸಲಾಯಿತು. ಪ್ರತಿಭಟನಾಕಾರರನ್ನು ಚದುರಿಸಲು ಅತಿರೇಕದ ಬಲಪ್ರಯೋಗ ಮಾಡಲಾಯಿತು. ಆಹಾರ ಪೂರೈಕೆಯನ್ನೂ ಕಡಿತಗೊಳಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದವು. ಕೆಲವು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಬಾರದೆಂದು ಎಚ್ಚರಿಕೆ ನೀಡಿದವು. ಆದರೂ ಸಾವಿರಾರು ವಿದ್ಯಾರ್ಥಿಗಳು ಭಯಕ್ಕೂ ದಮನಕ್ಕೂ ಮಣಿಯದೆ, ತಮ್ಮ ಭವಿಷ್ಯ ಮತ್ತು ಶಿಕ್ಷಣದ ಗೌರವಕ್ಕಾಗಿ ಬೀದಿಗಿಳಿದು ಹೋರಾಡಿದರು. ದೆಹಲಿಯಲ್ಲಿ ಸಿಎಎ ಎನ್‌ಆರ್‌ಸಿ ವಿರೋಧದಲ್ಲಿ ಶಾಹೀನ್ ಬಾಗಿನಲ್ಲಿ ಸತತ ನೂರು ದಿನಗಳ ಕಾಲ ನಡೆದ ಶಾಂತಿಯುತ ಧರಣಿ ಪ್ರದರ್ಶನ ನಡೆದರೆ, ಕಿಸಾನ್ ಆಂದೋಲನ ಹನ್ನೊಂದು ತಿಂಗಳು ನಡೆಯಿತು. ಆಗ ದೆಹಲಿಯ ಗಡಿಭಾಗವನ್ನು ದಾಟದಂತೆ ಬೀದಿಯಲ್ಲಿ ಮೊಳೆಗಳನ್ನು ಜಡಿಯಲಾಗಿತ್ತು. ದೊಡ್ಡ ದೊಡ್ಡ ಸಿಮೆಂಟ್ ಚಪ್ಪಡಿಗಳನ್ನು ತಡೆಗೋಡೆಯಾಗಿಸಲಾಗಿತ್ತು.
ಈಗ ನೀಟ್ ಹಗರಣದಿಂದ ಸರ್ಕಾರದ ನಿರ್ಲಕ್ಷ್ಯ ಪ್ರಶ್ನಿಸಿ ವಿದ್ಯಾರ್ಥಿಗಳು, ಯುವಜನತೆ ಬೀದಿಗಳಿಯುವ ಸನ್ನಿವೇಶ ಎದುರಾಯ್ತು. ಪ್ರಜಾಪ್ರಭುತ್ವದ ಚೆಲುವು ಇರುವುದು ಇಂತಹ ಆಂದೋಲನಗಳಲ್ಲಿ. ಸಂವಿಧಾನವು ನಮಗೆ ಕೊಟ್ಟ ಅಧಿಕಾರಗಳಲ್ಲಿ ಅನ್ಯಾಯಕ್ಕಾಗಿ ದನಿ ಎತ್ತುವ, ಭಿನ್ನಾಭಿಪ್ರಾಯವನ್ನು ದಾಖಲಿಸುವ ಅಧಿಕಾರವನ್ನೂ ನೀಡಿದೆ. ಇಂತಹ ಆಂದೋಲನಗಳೇ ನಮ್ಮನ್ನು ಜೀವಂತವಾಗಿಟ್ಟಿವೆ. ಜಾಗೃತವಾಗಿರುವಂತೆ ನೋಡಿಕೊಂಡಿದೆ. ಅಲ್ಲಿರುವ ಮಕ್ಕಳು ನಮ್ಮ ಮನೆಯ ಮಕ್ಕಳೇ ಯಾವ ಕ್ಷಣ ಏನಾಗುತ್ತದೋ ಎನ್ನುವ ಆತಂಕದಲ್ಲಿ ಈ ಕಳೆದ ಎಪ್ಪತ್ತಾರು ದಿನಗಳಿಂದ ಬೆಂಕಿಯ ಮೇಲೆ ಕುಳಿತಂತೆ ಬದುಕುತ್ತಿದ್ದೆವು. ಇಂದು ದೊರೆತಿರುವ ರಾಜೀನಾಮೆ ಈ ಹೋರಾಟದ ಅಂತಿಮ ಗುರಿಯಲ್ಲ. ವ್ಯವಸ್ಥಿತ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸದ ಕುಸಿತ, ಪಾರದರ್ಶಕತೆಯ ಕೊರತೆ ಮತ್ತು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ನಡೆಯುವ ಸಂಸ್ಥಾತ್ಮಕ ನಿರ್ಲಕ್ಷ್ಯ ಇವೆಲ್ಲವೂ ಇನ್ನೂ ಪರಿಹಾರ ಕಂಡಿಲ್ಲ. ಒಬ್ಬ ಸಚಿವರ ರಾಜೀನಾಮೆಯಿಂದ ಸಮಸ್ಯೆಯ ಬೇರುಗಳು ಉಳಿದೇ ಇರುತ್ತವೆ.
ಒಂದು ಸಂತಸದ ಸಂಗತಿ ಎಂದರೆ, ಇದು ಕೇವಲ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲ, ಈಡೀ ದೇಶವೇ ಜಂತರ್ ಮಂತರ್ ಆಗಿ ಬದಲಾಗಿದ್ದು ಮಹತ್ವದ್ದು. ದೇಶಾದ್ಯಂತ ನಡೆದ ಹೋರಾಟ, ಆಕ್ರೋಶ ಈ ಯುವ ಪೀಳಿಗೆಯ ಮೇಲಿನ ಭರವಸೆಯನ್ನು ಗಟ್ಟಿಗೊಳಿಸಿತು.
ಈ ಹೋರಾಟವು ಭಾರತದ ಯುವಜನತೆಗೆ ಒಂದು ಕಠಿಣ ಸತ್ಯವನ್ನು ನೆನಪಿಸಿದೆ- ಪ್ರಜಾಪ್ರಭುತ್ವದಲ್ಲಿ ಹಕ್ಕುಗಳು ದಯೆಯಾಗಿ ಸಿಗುವುದಿಲ್ಲ; ಅವುಗಳನ್ನು ಸಂಘಟಿತ, ಶಾಂತಿಯುತ ಮತ್ತು ನಿರಂತರ ಹೋರಾಟದ ಮೂಲಕವೇ ಪಡೆಯಬೇಕು. ಈಗ ಅಗತ್ಯವಿರುವುದು ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ, ಪರೀಕ್ಷಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ವಿದ್ಯಾರ್ಥಿಗಳ ವಿಶ್ವಾಸವನ್ನು ಮರುಸ್ಥಾಪಿಸುವ ತುರ್ತು ಕ್ರಮಗಳು. ಇಂದು ವಿದ್ಯಾರ್ಥಿಗಳು ಒಂದು ಹಂತದಲ್ಲಿ ಗೆದ್ದಿದ್ದಾರೆ. ಆದರೆ ನಿಜವಾದ ಪೂರ್ಣ ಗೆಲುವು ನ್ಯಾಯಸಮ್ಮತ, ಪಾರದರ್ಶಕ ಮತ್ತು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆ ನಿರ್ಮಾಣವಾದಾಗ ಮಾತ್ರ ಸಾಧ್ಯ. ಆದ್ದರಿಂದ ಇದು ಅಂತ್ಯವಲ್ಲ-ಉತ್ತರದಾಯಿತ್ವ, ನ್ಯಾಯ ಮತ್ತು ಶಿಕ್ಷಣದ ಗೌರವಕ್ಕಾಗಿ ಆರಂಭವಾಗಿರುವ ಕಠಿಣ ಹೊಸ ಅಧ್ಯಾಯ. ಆದ್ದರಿಂದ ಸರಕಾರ ವಿದ್ಯಾರ್ಥಿ- ಯುವಜನರ ವಿರುದ್ಧ ದಾಖಲಿಸಲಾದ ಎಲ್ಲ ಪ್ರಕರಣಗಳು ಮತ್ತು ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು. ದೆಹಲಿಯಲ್ಲಿ ನಡೆದ ಕ್ರೂರ ಪೊಲೀಸ್ ದಮನಕ್ಕೆ ಹೊಣೆಗಾರರಾದ ಎಲ್ಲ ಅಧಿಕಾರಿಗಳನ್ನೂ ಅಮಾನತುಗೊಳಿಸಬೇಕು. ದೆಹಲಿ ಪೊಲೀಸರ ಕ್ರಮಗಳ ಕುರಿತು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು. ಈ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಯಬೇಕು.
ಈ ಹೋರಾಟ ಈಗ ದೇಶದಾದ್ಯಂತ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಗ್ರಾಮೀಣ ಪ್ರದೇಶಗಳಿಂದ ನಗರಗಳವರೆಗೆ ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಾರೆ. ಬರೀ ರೀಲ್ಸ್ ಮಾಡಿಕೊಂಡು ಕಾಲ ಕಳೆಯುತ್ತಾರೆ ಎಂದು ಕರೆಯಲ್ಪಡುವ ಈ ವರ್ಗ ತಮ್ಮ ಆಗಾಧ ಶಕ್ತಿಯ ಅರಿವನ್ನು ಮೂಡಿಸಿದ್ದಾರೆ. ಮಾಧ್ಯಮಗಳಲ್ಲಿ ಈ ವಿಷಯವು ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ ಬೆಂಬಲವೂ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಈ ಚಳವಳಿ ಕೇವಲ ಒಂದು ಘಟನೆಯಾಗಿ ಉಳಿಯದೆ,ಶಿಕ್ಷಣ ವ್ಯವಸ್ಥೆಯ ಮೂಲಭೂತ ಬದಲಾವಣೆಗೆ ದಾರಿ ಮಾಡಿಕೊಡುವಂತಾಗಲಿ ಭ್ರಷ್ಟರು ಎಚ್ಚೆತ್ತುಕೊಳ್ಳಲಿ ಎಂಬುದೇ ಸದ್ಯದ ಆಶಯ.
” ಈ ಹೋರಾಟ ಈಗ ದೇಶದಾದ್ಯಂತ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಗ್ರಾಮೀಣ ಪ್ರದೇಶಗಳಿಂದ ನಗರಗಳವರೆಗೆ ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಾರೆ. ಬರೀ ರೀಲ್ಸ್ ಮಾಡಿಕೊಂಡು ಕಾಲ ಕಳೆಯುತ್ತಾರೆ ಎಂದು ಕರೆಯಲ್ಪಡುವ ಈ ವರ್ಗ ತಮ್ಮ ಆಗಾಧ ಶಕ್ತಿಯ ಅರಿವನ್ನು ಮೂಡಿಸಿದ್ದಾರೆ.”





