ಚಿರಂಜೀವಿ ಸಿ ಹುಲ್ಲಹಳ್ಳಿ
ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ ಇಲ್ಲ. ಗ್ರಾಮ ಪಂಚಾಯಿತಿ, ವಾರ್ಡ್ ಕಚೇರಿ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಹಾಯಕೇಂದ್ರಗಳನ್ನು ತೆರೆಯಬೇಕು.
ಮೈಸೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಲು ಸಾಮಾನ್ಯ ಜನರು ಪರದಾಡುತ್ತಿದ್ದು, ಬಿಎಲ್‌ಒಗಳ ಜೊತೆಗೆ ನಿಯೋಜಿಸಲಾದ ವಿವಿಧ ಪಕ್ಷಗಳ ಏಜೆಂಟ್‌ಗಳ ಸಹಕಾರವೂ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ. ಇದರಿಂದ ಜನರಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿ ಆವರಿಸಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅಥವಾ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅನೇಕರು ದಿನಗಟ್ಟಲೆ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ಕೊರತೆಯಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಹಿರಿಯ ನಾಗರಿಕರು, ವಿಶೇಷಚೇತನರು ಮತ್ತು ಕಡಿಮೆ ಶಿಕ್ಷಣ ಹೊಂದಿರುವ ಜನರಿಗೆ ಅರ್ಜಿಗಳನ್ನು ಭರ್ತಿ ಮಾಡುವುದು ದೊಡ್ಡ ಸವಾಲಾಗಿದೆ. ವೃದ್ಧರು, ವಯಸ್ಕರು, ಯುವಕ ಯುವತಿಯರು ಅರ್ಜಿಗಳನ್ನು ಭರ್ತಿ ಮಾಡಲು ಹೆಣಗಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬಿಎಲ್‌ಒಗಳೇ ಮತದಾರರ ವಿವರಗಳನ್ನು ಅರ್ಜಿಗಳಲ್ಲಿ ಭರ್ತಿಮಾಡಿಕೊಳ್ಳುತ್ತಿದ್ದರು. ಆದರೆ, ಎಸ್ ಐಆರ್ ಕುರಿತು ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರ ಚಾಟದಿಂದ ಕೆಲ ದಿನಗಳಿಂದ ಮತದಾರರೇ ಅರ್ಜಿಗಳನ್ನು ಭರ್ತಿ ಮಾಡಬೇಕು ಎಂದು ಬಿಎಲ್‌ಒಗಳು ತಿಳಿಸಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಕೆಲ ಬಿಎಲ್‌ಒಗಳೇ ಮರುಕ ವ್ಯಕ್ತಪಡಿಸಿದ್ದಾರೆ.
ಪಕ್ಷದ ಏಜೆಂಟ್‌ಗಳು ಬರುತ್ತಿಲ್ಲ:
ರಾಜಕೀಯ ಪಕ್ಷಗಳ ಪರವಾಗಿ ನೇಮಿಸಲಾದ ಏಜೆಂಟ್‌ಗಳು ಮತದಾರರಿಗೆ ಮಾರ್ಗದರ್ಶನ ನೀಡ ಬೇಕಾಗಿದ್ದರೂ, ಅನೇಕ ಕಡೆಗಳಲ್ಲಿ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ಕೆಲವರು ತಮ್ಮ ಪಕ್ಷದ ಕಾರ್ಯ ಕರ್ತರ ಮಟ್ಟಿಗೆ ಮಾತ್ರ ಸೀಮಿತವಾಗಿದ್ದು, ಸಾಮಾನ್ಯ ಮತದಾರರಿಗೆ ನೆರವಾಗುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇದರಿಂದ ಮತದಾರರು ಯಾರನ್ನು ಸಂಪರ್ಕಿಸಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಬಿಎಲ್‌ಎಗಳು ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡದೆ ಕೈಕೊಟ್ಟಿರುವುದು ಬಿಎಲ್‌ಒಗಳ ಒತ್ತಡವನ್ನು ಹೆಚ್ಚಿಸಿದೆ. ಒಂದೊಂದು ಬಿಎಲ್‌ಒಗಳಿಗೆ ವಾರ್ಡ್, ಬ್ಲಾಕ್… ಹೀಗೆ ವಿಂಗಡಿಸಿ ೮೦೦ರಿಂದ ೧,೫೦೦ ಮತದಾರರಿಗೆ ಅರ್ಜಿಗಳನ್ನು ವಿತರಿಸಲಾಗಿದೆ. ನಿತ್ಯ ಬಿಎಲ್‌ಒಗಳು ಮತದಾರರ ವಿಳಾಸವನ್ನು ಹುಡುಕಿ ಕರ್ತವ್ಯ ಆರಂಭಿಸುತ್ತಾರೆ. ಪ್ರತಿದಿನ ಕನಿಷ್ಠ ೧೦೦ ಮನೆಗಳನ್ನು ತಲುಪುವ ಗುರಿ ಹೊಂದಿರುತ್ತಾರೆ. ಇದಕ್ಕೆ ರಾಜಕೀಯ ಪಕ್ಷಗಳ ಏಜೆಂಟ್‌ಗಳು ಸಹಕಾರ ನೀಡಬೇಕು. ಆದರೆ, ಅವರು ಕೈಗೆ ಸಿಗದೆ, ಕರೆ ಮಾಡಿದರೆ ಬರುತ್ತೇವೆ, ನೀವು ಮಾಡುತ್ತಿರಿ ಎಂ ಬೇಜವಾಬ್ದಾರಿಯಾಗಿ ವರ್ತಿಸು ತ್ತಿದ್ದಾರೆ ಎಂದು ಹೆಸರು ಹೇಳದ ಬಿಎಲ್‌ಒ ಒಬ್ಬರು ತಿಳಿಸಿದರು.
ಕಾಂಗ್ರೆಸ್ ಮತದಾರರು, ಬಿಜೆಪಿ ಮತದಾರರು ಎಂದು ಆಯಾಯ ರಾಜಕೀಯ ಪಕ್ಷಗಳು ಮೊದಲೇ ಸಾರ್ವಜನಿಕರನ್ನು ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಮತ ಹಾಕುವವರಿಗೆ ಸಹಾಯ ಮಾಡುವ ಪಕ್ಷಪಾತದ ಘಟನೆಗಳೂ ನಡೆದಿವೆ. ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಸಮಸ್ಯೆ ಎಸ್‌ಐಆರ್ ಫಾರ್ಮ್‌ಗಳನ್ನು ನಗರ ಪ್ರದೇಶದ ಮನೆಗಳಿಗೆ ಕೊಟ್ಟು ಬಂದು ಭರ್ತಿ ಮಾಡಲು ಸೂಚನೆ ನೀಡಿ ತೆರಳುತ್ತೇವೆ. ಕೆಲವರು ಭರ್ತಿ ಮಾಡಿ ನಮಗೆ ಕರೆ ಮಾಡುತ್ತಾರೆ. ಕೆಲವರು ಭರ್ತಿ ಮಾಡಲಾಗದೆ ನಮಗೆ ಕರೆ ಮಾಡುತ್ತಾರೆ. ನಗರ ಪ್ರದೇಶದಲ್ಲಿ ಹೇಗೋ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶ ದಲ್ಲಿರುವ ಸಾರ್ವಜನಿಕರಿಗೆ ಭರ್ತಿ ಮಾಡಲಾಗದೆ ಬಿಎಲ್‌ಒಗಳನ್ನೇ ನಂಬಿ ಕುಳಿತಿರುತ್ತಾರೆ. ಬಿಎಲ್‌ಒಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದರೂ, ಅವರ ಮೇಲೆ ಹೆಚ್ಚಿನ ಕಾರ್ಯಭಾರ ಇರುವುದರಿಂದ ಎಲ್ಲ ಮತದಾರ ರನ್ನೂ ತಲುಪಲು ಸಾಧ್ಯವಾಗುತ್ತಿಲ್ಲ. ಕೆಲವು ಪ್ರದೇಶಗ ಳಿಗೆ ಬಿಎಲ್‌ಒಗಳು ಭೇಟಿ ನೀಡಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಮತದಾರರು ಸಂಪರ್ಕಿಸಿದರೂ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ವಲಸೆ ಹೋದವರಿಗೆ ಆತಂಕ: ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ಮರುಪರಿಶೀಲನೆ ವೇಳೆ ಅರ್ಜಿ ನಮೂನೆಯಲ್ಲಿ ತಪ್ಪಾಗಿ ಭರ್ತಿ ಮಾಡಿ ಹೆಸರು ಕೈಬಿಡಬಹುದು ಎಂಬ ಆತಂಕ ವ್ಯಾಪಿಸಿದೆ. ವಿಶೇಷವಾಗಿ ಬಾಡಿಗೆ ಮನೆಗಳಲ್ಲಿ ವಾಸಿಸುವವರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಉದ್ಯೋಗ ನಿಮಿತ್ತ ಸ್ಥಳಾಂತರಗೊಂಡಿರುವವರು ಹೆಚ್ಚು ಕಳವಳಕ್ಕೀಡಾಗಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ ಇಲ್ಲ. ಗ್ರಾಮ ಪಂಚಾಯಿತಿ, ವಾರ್ಡ್ ಕಚೇರಿ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಬೇಕು. ಹಿರಿಯ ನಾಗರಿಕರು ಮತ್ತು ವಿಶೇಷಚೇತನ ಮತದಾರರು ಅರ್ಜಿ ಭರ್ತಿ ಮಾಡಲು ವಿಶೇಷ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜನರ ಆತಂಕವನ್ನು ನಿವಾರಿಸಿ, ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡದಂತೆ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗ ಕ್ರಮ ವಹಿಸಬೇಕು. ಇಲ್ಲವಾದರೆ ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ಮತದಾನದಿಂದ ವಂಚಿತರಾಗು ವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
” ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ವಿಶೇಷ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ನಡೆಯುತ್ತಿದೆ. ಬಿಎಲ್‌ಓಗಳೊಂದಿಗೆ ರಾಜಕೀಯ ಪಕ್ಷಗಳ ಬಿಎಲ್‌ಎಗಳು ತೆರಳಬೇಕಿದೆ. ಬಹುತೇಕ ಭಾಗಗಳಿಗೆ ಅವರು ತೆರಳುತ್ತಿದ್ದಾರೆ. ಆದರೆ, ಕೆಲವೆಡೆ ಸಮಸ್ಯೆ ಆಗಿರಬಹುದು. ಆದರೆ, ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ.”
– ಜಿ.ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾಧಿಕಾರಿ
” ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ ಇಲ್ಲ. ಗ್ರಾಮ ಪಂಚಾಯಿತಿ, ವಾರ್ಡ್ ಕಚೇರಿ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಹಾಯಕೇಂದ್ರಗಳನ್ನು ತೆರೆಯಬೇಕು. ಚುನಾವಣಾ ಆಯೋಗ ನಡೆಸುತ್ತಿರುವ ಪ್ರಕ್ರಿಯೆಯಿಂದ ನಮ್ಮಂತಹವರಿಗೆ ತೊಂದರೆಯಾಗಿದೆ. ನಮಗೆ ಯಾರು ಅರ್ಜಿಗಳನ್ನು ಭರ್ತಿ ಮಾಡಿಕೊಡುತ್ತಾರೆ? ನಮ್ಮಿಂದ ಓಟು ಪಡೆಯುವ ರಾಜಕೀಯ ಪಕ್ಷಗಳಿಗೆ ನಮ್ಮ ಮತ ಬೇಡವೇ? ಅವರು ನೇಮಿಸಿರುವ ಮುಖಂಡರಾದರೂ ಅರ್ಜಿಗಳನ್ನು ಸಮರ್ಪಕವಾಗಿ ಭರ್ತಿ ಮಾಡಿಸಿಕೊಡಬೇಕು.”
– ಚೆನ್ನಾಜಮ್ಮ, ಮೈಸೂರು





