ಭೇರ್ಯ ಮಹೇಶ್
ಪ್ರತಿನಿತ್ಯ ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವವರಿಗೆ ಸಮಸ್ಯೆ; ಅಧಿಕಾರಿಗಳ ವಿರುದ್ಧ ಆಕ್ರೋಶ
ಕೆ.ಆರ್.ನಗರ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಉತ್ತಮ ರಸ್ತೆ ಸಂಪರ್ಕ ಸೌಲಭ್ಯವೂ ಸಹಕಾರಿ. ಆದರೆ, ಸರ್ಕಾರ ‘ನಮ್ಮ ಗ್ರಾಮ, ನಮ್ಮ ರಸ್ತೆ’, ‘ಪ್ರಧಾನ ಮಂತ್ರಿ ಗ್ರಾಮ ಸಡಕ್’ ಯೋಜನೆ ಮತ್ತು ನಬಾರ್ಡ್ ಯೋಜನೆ ಮುಂತಾದವುಗಳಿದ್ದರೂ ಹೊಸ ಅಗ್ರಹಾರ ರೈಲ್ವೆ ನಿಲ್ದಾಣದಿಂದ (ಹಾಸನ-ಮೈಸೂರು ಹೆದ್ದಾರಿ ಯಿಂದ) ಮಿರ್ಲೆ- ಭೇರ್ಯ- ಕೊಡಿಯಾಲ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸದೇ ಇರುವುದು ವಿಪರ್ಯಾಸ.
ಸ್ವಾತಂತ್ರ್ಯ ಪೂರ್ವದಿಂದಲೂ ಡಾಂಬರನ್ನು ಕಾಣದ ರಸ್ತೆ ಇದಾಗಿದ್ದು, ಕಲ್ಲುಗಳಿಂದಲೇ ಕೂಡಿದ ರಸ್ತೆಯಲ್ಲಿ ರೈತರು ಹಾಗೂ ಸಾರ್ವಜನಿಕರು ನಿತ್ಯ ಸಂಚರಿಸುವುದು ದುಸ್ತರವಾಗಿದೆ. ಹೊಸ ಅಗ್ರಹಾರ ರೈಲ್ವೆ ನಿಲ್ದಾಣದಿಂದ( ಹಾಸನ- ಮೈಸೂರು ಹೆದ್ದಾರಿಯಿಂದ) ಮಿರ್ಲೆ- ಭೇರ್ಯ ಕೊಡಿಯಾಲ ಸಂಪರ್ಕಿಸುವ ರಸ್ತೆಯ ಮೂಲಕ ನಿತ್ಯ ನೂರಾರು ರೈತರು ಹಾಗೂ ಜನರು ಸಂಚರಿಸುತ್ತಾರೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ವೇಳೆ ಕೂಲಿ ಮತ್ತು ಉದ್ಯೋಗಕ್ಕಾಗಿ ಹೊಸ ಅಗ್ರಹಾರ ರೈಲ್ವೆ ನಿಲ್ದಾಣದಿಂದ ಮೈಸೂರಿಗೆ ಹೋಗಿ ಬರುವ ಜನರೇ ಹೆಚ್ಚಾಗಿದ್ದು, ಕಲ್ಲುಗಳಿಂದ ಹಾಗೂ ಗುಂಡಿಗಳಿಂದ ಕೂಡಿರುವ ಈ ಮಣ್ಣಿನ ರಸ್ತೆಯಲ್ಲಿಯೇ ಸಾಗಬೇಕಿದೆ.
ಈ ಬಗ್ಗೆ ಯಾವ ಜನಪ್ರತಿನಿಧಿಗಳೂ ಗಮನ ಹರಿಸಿಲ್ಲ. ಪ್ರತಿ ದಿನ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ೩ ನಿಮಿಷದಲ್ಲಿ ತಲುಪುವ ಜಾಗಕ್ಕೆ ಈ ರಸ್ತೆಯಲ್ಲಿ ತೆರಳಿದರೆ ಕನಿಷ್ಠ ಆರೇಳು ನಿಮಿಷಗಳು ಬೇಕಾಗುತ್ತದೆ. ಸರ್ಕಾರ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ. ಖರ್ಚು ಮಾಡುತ್ತಿದ್ದರೂ ಈ ರಸ್ತೆ ಅಭಿವೃದ್ಧಿ ಕಂಡಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.
ಹಳ್ಳಿಗಳಲ್ಲಿ ಸಾಮಾನ್ಯವಾಗಿ ೧೫ ರಿಂದ ೨೦ ಅಡಿ ಅಗಲದ ರಸ್ತೆಗಳಿದ್ದು, ಇದನ್ನು ಸರಿಪಡಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶಗಳಿದ್ದರೂ ಬ್ಯಾಂಕ್‌ಗಳ ಕಿರಿಕಿರಿ ಮತ್ತು ನಿಗದಿತ ಸಮಯಕ್ಕೆ ಹಣ ಬಿಡುಗಡೆಯಾಗದಿರುವು ದರಿಂದ ಗ್ರಾಪಂ ಎಷ್ಟೇ ಕ್ರಮ ಕೈಗೊಂಡರೂ ಅಭಿವೃದ್ಧಿಪಡಿಸಲು ಜನ ಮುಂದೆ ಬರುತ್ತಿಲ್ಲ. ಸಮುದಾಯದ ಸಹಭಾಗಿತ್ವವಿಲ್ಲದೆ ಯಾವ ಕೆಲಸವೂ ನಡೆಯುವುದು ಕಷ್ಟ.
ಹಳ್ಳಿ ಬದುಕು ಹಸನಾಗಲು ರಸ್ತೆ ಸಂಪರ್ಕಮ ಬಹಳ ಮುಖ್ಯ. ಅದು ಗ್ರಾಮದ ಚಿತ್ರಣವನ್ನೇಬದಲಿಸುತ್ತದೆ. ಹಾಗಾಗಿ ಕ್ಷೇತ್ರದ ಶಾಸಕರು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗ ಬೇಕು ಎಂದು ಈ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
” ಚುನಾವಣಾ ಪೂರ್ವದಲ್ಲಿ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಹೊಸ ಅಗ್ರಹಾರ ರೈಲ್ವೆ ಸ್ಟೇಷನ್‌ನಿಂದ(ಹಾಸನ-ಮೈಸೂರು ಹೆದ್ದಾರಿಯಿಂದ) ಮಿರ್ಲೆ-ಭೇರ್ಯ-ಕೊಡಿಯಾಲಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಲಾಗಿತ್ತು. ಅದರಂತೆ ಈ ರಸ್ತೆಯನ್ನು ಎಂ.ಡಿ.ಆರ್.ಯೋಜನೆಯಡಿ ಮೇಲ್ದರ್ಜೆಗೆ ಏರಿಸಿ ಅಂದಾಜು ೩ ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗುವುದು.ʼ
-ಡಿ.ರವಿಶಂಕರ್, ಶಾಸಕರು





