ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ ಕೈಗೊಳ್ಳಲಾಗಿದೆ. ಇದು ಕರಾವಳಿ ಪ್ರದೇಶದ ಸಾಂಪ್ರದಾಯಿಕ ಪದ್ಧತಿಯಾಗಿದೆ. ದಸರಾಗೆ ಇದರ ಮಿಶ್ರಣ ಬೇಡ. ಅಲ್ಲದೆ, ಇದರಿಂದ ಪರಿಸರಕ್ಕೂ ಧಕ್ಕೆಯಾಗುತ್ತದೆ ಎಂಬ ಕಾರಣದಿಂದ ಪರಿಸರವಾದಿಗಳು ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಕಂಬಳ ಸಾಹಸ ಕ್ರೀಡೆಯಾಗಿ ಮಾನ್ಯತೆ ಪಡೆದಿದೆ. ಕರಾವಳಿಯೂ ಕರ್ನಾಟಕಕ್ಕೇ ಸೇರಿರುವುದರಿಂದ ಕಂಬಳವನ್ನು ಮೈಸೂರಿನಲ್ಲಿ ಆಯೋಜಿಸಲು ಅಡ್ಡಿ ಸರಿಯಲ್ಲ ಎಂಬ ವಾದವೂ ಇದೆ. ಈ ಹಿನ್ನೆಲೆಯಲ್ಲಿ ಕಂಬಳದ ಆಯೋಜನೆ ಕುರಿತು ವಾದ- ವಿವಾದದ ಲೇಖನಗಳನ್ನು ಪ್ರಕಟಿಸಲಾಗಿದೆ.
ನೋಟ
ದಸರಾ ಹಬ್ಬಕ್ಕೆ ಮೆರುಗು ತರಬಲ್ಲ ಕಂಬಳ
-ದೇವಿಪ್ರಸಾದ್ ಶೆಟ್ಟಿ, ಬಿಳುಪು
ಅಧ್ಯಕ್ಷ, ರಾಜ್ಯ ಕಂಬಳ ಅಸೋಸಿಯೇಷನ್
ಮೈಸೂರು ದಸರಾ ಮಹೋತ್ಸವದಲ್ಲಿ ಅವಕಾಶ ನೀಡುವುದರಿಂದ ಕಂಬಳಕ್ಕೆ ಇನ್ನಷ್ಟು ಪ್ರಾತಿನಿಧ್ಯ ದೊರೆಯುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಬಳ ಕ್ರೀಡೆಗಳು ಸುಪ್ರಸಿದ್ಧಿಯಾಗಿವೆ. ಒಟ್ಟು ೨೭ ಬಗೆಯ ಕಂಬಳಗಳಿವೆ. ಅದರಲ್ಲಿ ೮ ಮಾತ್ರ ಸಾಂಪ್ರದಾಯಿಕವಾಗಿದ್ದು, ಇವು ಭೂತಾರಾಧನೆ, ದೈವಾರಾಧನೆ ಮತ್ತ ನಾಗಾರಾಧನೆಯೊಂದಿಗೆ ಒಂಟಿ ಕೆರೆ (ಒಂದೇ ಗದ್ದೆ)ಯಲ್ಲಿ ನಡೆಯುತ್ತವೆ. ಇದರ ಹೊರತಾಗಿ ಜೋಡು ಕರೆ (ಎರಡು ಕೆರೆ)ಯಲ್ಲಿ ಸಾಂಪ್ರದಾಯಿಕವಲ್ಲದ ಕಂಬಳ ಕ್ರೀಡೆಯನ್ನು ಆಯೋಜಿಸಲಾಗುತ್ತದೆ. ಇವುಗಳಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಹೊನಲು- ಬೆಳಕು ಸ್ಪರ್ಧೆ ನಡೆಸುತ್ತೇವೆ. ವಿದ್ಯುತ್ ದೀಪಗಳ ಬೆಳಕಿನಲ್ಲಿ ಕೂಡ ಕಂಬಳ ಆಯೋಜಿಸಲಾಗುತ್ತದೆ. ಐದು ವಿಭಾಗಗಳಲ್ಲಿ ಸ್ಪರ್ಧೆ ಇರುತ್ತದೆ.
ಸ್ಪರ್ಧೆಯಲ್ಲಿ ಹಗ್ಗದ ಹಿರಿಯ, ಹಗ್ಗದ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ಮತ್ತು ಕನಹಲಗೆ ಎಂಬುದಾಗಿ ಐದು ವಿಭಾಗಗಳಿರುತ್ತವೆ. ಕೋಣಗಳಿಗೆ ಹಲಗೆಯನ್ನು ಕಟ್ಟಿ ಓಡಿಸುವ ಕಂಬಳ ರೋಮಾಂಚನಕಾರಿಯಾಗಿರುತ್ತದೆ. ಈ ಕೋಣಗಳ ಓಟ ವಿಶ್ವದ ಶರವೇಗದ ಓಟಗಾರ ಖ್ಯಾತಿಯ ಹುಸೇನ್ ಬೋಲ್ಟ್ ಅವರನ್ನೂ ಮೀರಿಸುವಂತಿರುತ್ತದೆ. ಇದನ್ನು ರಾಜ್ಯ ಸರ್ಕಾರ ಸಾಹಸ ಕ್ರೀಡೆ ಎಂದು ಮಾನ್ಯತೆ ಕೊಟ್ಟಿದೆ. ಮೈಸೂರು ಅಂದರೆ ಮಹಿಷನ ಊರು ಎನ್ನಲಾಗಿದೆ. ಮಹಿಷ ಎಂದರೆ ಕೋಣ ಅಥವಾ ಎತ್ತುಗಳು ಅಂತ ಅರ್ಥ. ಕೋಣಗಳು ಮತ್ತು ಎತ್ತುಗಳು ಹೆಚ್ಚಾಗಿದ್ದ ಊರು ಮೈಸೂರು. ಹಾಗಾಗಿ ಮೈಸೂರಿಗೂ ಕೋಣಗಳಿಗೂ ಅವಿನಾಭಾವ ಸಂಬಂಧ ಇದೆ. ನಮ್ಮ ಕರಾವಳಿ ಜಿಲ್ಲೆಯಲ್ಲಿ ಹಿಂದೆ ನಡೆಯುತ್ತಿದ್ದ ಕಂಬಳಗಳನ್ನು ಮೈಸೂರು ರಾಜವಂಶಸ್ಥರ ಮೂಲಕವೇ ನಡೆಯುತ್ತಿದ್ದವು. ದಸರಾ ಹಬ್ಬವು ಮೊದಲು ವಿಜಯನಗರ, ನಂತರ ಹಂಪಿ, ಬಳಿಕ ಶ್ರೀರಂಗಪಟ್ಟಣದಲ್ಲಿ, ಅಂತಿಮವಾಗಿ ಮೈಸೂರಿನಲ್ಲಿ ನಡೆಸಲಾಗುತ್ತಿದೆ. ಹೀಗಿರುವಾಗ ದಸರಾದಲ್ಲಿ ಕಂಬಳ ನಡೆಸಲು ಆಕ್ಷೇಪ ಮಾಡುವುದರಲ್ಲಿ ಯಾವುದೇ ರೀತಿಯಲ್ಲಿ ಅರ್ಥವಿಲ್ಲ.
ಇನ್ನೊಂದು ಮುಖ್ಯವಾದ ಅಂಶವೆಂದರೆ, ಕಂಬಳ ನಡೆಸುವ ಸ್ಥಳಗಳಲ್ಲಿ ಮಳೆ – ಬೆಳೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಕೃಷಿ ಮತ್ತು ಕೋಣಗಳಿಗೆ ಸಂಬಂಧ ಇತ್ತು. ಕಂಬಳದಲ್ಲಿ ಕೋಣಗಳನ್ನು ಓಡಿಸುವುದರಿಂದ ಭೂಮಿ ಹದವಾಗುತ್ತದೆ. ಇದು ರೈತರ ಕ್ರೀಡೆಯಾಗಿದೆ. ನಮ್ಮ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಂದ ವಿರಾಮ ಇದ್ದಾಗ ಈ ಕಂಬಳ ಆಯೋಜಿಸಲಾಗುತ್ತದೆ. ಇದು ಎಲ್ಲಾ ವರ್ಗಗಳ ಜನರನ್ನು ಆಕರ್ಷಿಸುವಂತಹ ಕ್ರೀಡೆ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣರಾಜ ಒಡೆಯರ್ ಅವರು ಕಂಬಳು ನೋಡುವುದಕ್ಕೆ ಇಲ್ಲಿಗೆ ಬಂದು ಎರಡೆರಡು ದಿನಗಳು ವಾಸ್ತವ್ಯ ಇರುತ್ತಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿರುವ ಅರಮನೆ ಅಂಗಳದಲ್ಲಿಯೇ ಕಂಬಳ ಅದ್ಧೂರಿಯಾಗಿಯೇ ನಡೆದಿತ್ತು.
ಕಂಬಳ ಸಾಮರಸ್ಯವನ್ನೂ ಬಿತ್ತುತ್ತದೆ. ಕಂಬಳದ ಕೋಣಗಳ ಒಡೆಯರು ಮುಸ್ಲಿಮ್, ಕ್ರಿಶ್ಚಿಯನ್, ಹಿಂದೂಗಳು ಸೇರಿದಂತೆ ಬಹುತೇಕ ಎಲ್ಲ ಧರ್ಮಗಳವರೂ ಇದ್ದಾರೆ. ಅವರೆಲ್ಲರೂ ಕೋಣಗಳನ್ನು ಮಗುವಿನಂತೆ ಸಾಕುತ್ತಾರೆ. ಕಂಬಳದ ಕೋಣಗಳಿಗೆ ಪೌಷ್ಟಿಕ ಆಹಾರ, ಎಣ್ಣೆ ಮಸಾಜ್, ವಾಕಿಂಗ್ ಇರುತ್ತದೆ. ಮಾಲೀಕರು, ಅವರ ಸಂಸಾರಕ್ಕಿಂತ ಹೆಚ್ಚಾಗಿ ಕೋಣಗಳನ್ನು ಪ್ರೀತಿಸುತ್ತಾರೆ. ಅಲ್ಲದೆ, ಈ ಕೋಣಗಳು ವರ್ಷದಲ್ಲಿ ೯೦ ದಿನಗಳು ಮಾತ್ರ ಕಂಬಳದಲ್ಲಿ ಪಾಲ್ಗೊಳ್ಳುತ್ತವೆ. ಅದು ಒಂದು ವಾರದಲ್ಲಿ ಎರಡು ದಿನಗಳಷ್ಟೆ. ಹಾಗಂತ ಉಳಿದ ದಿನಗಳಲ್ಲಿ ಕೋಣಗಳನ್ನು ಕೃಷಿ ಮತ್ತಿತರ ಚಟುವಟಿಕೆಗಳಿಗೆ ಬಳಸುವುದಿಲ್ಲ. ಕಂಬಳದ ಕೋಣಗಳು ‘ರೋಲ್ ಮಾಡೆಲ್’ ಇದ್ದಂತೆ. ಅಲ್ಲದೆ, ಕಂಬಳ ಇಲ್ಲದಿದ್ದರೆ, ಕೋಣಗಳ ಸಂತತಿಯನ್ನು ಇಂದಿನ ಪೀಳಿಗೆ ನೋಡುವುದಕ್ಕೂ ಸಾಧ್ಯವಾಗುವುದಿಲ್ಲ ಅನಿಸುತ್ತದೆ. ಕಂಬಳದಿಂದ ಕೋಣಗಳನ್ನು ಯುವಪೀಳಿಗೆಗೆ ತೋರಿಸಲು ಅನುಕೂಲವಾಗುತ್ತದೆ. ನಾಡಹಬ್ಬದಲ್ಲಿ ಕಂಬಳ ನಡೆಯುವುದರಿಂದ ಯಾರದ್ದೇ ಸಂಪ್ರದಾಯಕ್ಕೆ ಧಕ್ಕೆಯಾಗುವುದಿಲ್ಲ. ಹಾಗಾಗಿ ದಸರಾದಲ್ಲಿ ಕಂಬಳ ಆಯೋಜನೆಗೆ ಅವಕಾಶ ಕೊಡಬೇಕು.
ಪ್ರತಿನೋಟ
ದಸರಾ ಹೆಸರಿನಲ್ಲಿ ಪ್ರಕೃತಿಗೆ ಗಾಯ ಬೇಡ
– ಶ್ರೇಯಸ್ ದೇವನೂರು
ಮೈಸೂರು ದಸರಾ ವಿಶ್ವಪ್ರಸಿದ್ಧ ಸಾಂಸ್ಕೃತಿಕ ಉತ್ಸವ. ಇದು ಕೇವಲ ಹಬ್ಬವಲ್ಲ, ಕರ್ನಾಟಕದ ಪರಂಪರೆ, ಸಂಸ್ಕೃತಿ ಮತ್ತು ಜನಭಾವನೆಯ ಪ್ರತೀಕವಾಗಿದೆ. ಪ್ರತಿವರ್ಷ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸುವ ಪ್ರಯತ್ನಗಳು ನಡೆಯುವುದು ಸಹಜ. ಆದರೆ ಯಾವುದೇ ಹೊಸ ಕಾರ್ಯಕ್ರಮವನ್ನು ಸೇರಿಸುವಾಗ ಅದರಿಂದ ಉಂಟಾಗುವ ಸಾಮಾಜಿಕ, ಪರಿಸರ ಮತ್ತು ನಗರಾಭಿವೃದ್ಧಿಯ ಪರಿಣಾಮಗಳನ್ನೂ ಸಮಾನವಾಗಿ ಪರಿಗಣಿಸಬೇಕು.
ಈ ವರ್ಷ ಮೈಸೂರು ದಸರಾದ ಅಂಗವಾಗಿ ಕಂಬಳ ಸ್ಪರ್ಧೆಯನ್ನು ಆಯೋಜಿಸುವ ಕುರಿತು ಚರ್ಚೆ ನಡೆಯುತ್ತಿದೆ. ಅದಕ್ಕಾಗಿ ಸುಮಾರು ೩೦ ಎಕರೆ ಪ್ರದೇಶವನ್ನು ಕಂಬಳ ನಡೆಸಲು ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಈ ಬೆಳವಣಿಗೆ ಒಂದು ಮಹತ್ವದ ಪ್ರಶ್ನೆಯನ್ನು ಎತ್ತುತ್ತದೆ. ಒಂದು ಸಂಭ್ರಮಕ್ಕಾಗಿ ಪ್ರಕೃತಿಯ ನೆಮ್ಮದಿಯನ್ನು ಕದಡುವುದು ಎಷ್ಟು ಸಮಂಜಸ?
ಕಂಬಳ ನಡೆಸಲು ಗುರುತಿಸಿರುವ ಪ್ರದೇಶ ಕೇವಲ ಪೊದೆಗಳನ್ನು ಹೊಂದಿರುವ ಖಾಲಿ ಜಾಗವಲ್ಲ. ವರ್ಷಗಳಿಂದ ಬೆಳೆದಿರುವ ಗಿಡಗಂಟಿಗಳು, ಪೊದೆಗಳು, ಸಣ್ಣ ಮರಗಳು ಮತ್ತು ಹುಲ್ಲುಗಾವಲುಗಳು ಅನೇಕ ಜೀವಿಗಳಿಗೆ ಆಶ್ರಯವಾಗಿರಬಹುದು. ವಿವಿಧ ಪಕ್ಷಿಗಳು, ಸರೀಸೃಪಗಳು, ಮೊಲಗಳು, ಮುಂಗುಸಿಗಳು, ನವಿಲುಗಳು, ಕಾಡುಬೆಕ್ಕುಗಳು ಸೇರಿದಂತೆ ಅನೇಕ ಸಣ್ಣ ಜೀವಿಗಳು ಇಂತಹ ಪ್ರದೇಶಗಳ ಮೇಲೆ ಅವಲಂಬಿತವಾಗಿರುತ್ತವೆ. ನಗರ ಹೊರವಲಯದ ಇಂತಹ ಹಸಿರು ತಾಣಗಳು ಚಿರತೆಗಳಂತಹ ದೊಡ್ಡ ಕಾಡುಪ್ರಾಣಿಗಳ ಸಂಚಾರ ಮಾರ್ಗದ ಭಾಗವಾಗಿರುವ ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲ.
ಅಂತಹ ವಾಸಸ್ಥಳಗಳನ್ನು ಏಕಾಏಕಿ ತೆರವುಗೊಳಿಸಿದರೆ, ಅಲ್ಲಿದ್ದ ಜೀವಿಗಳು ಹೊಸ ಆಶ್ರಯಕ್ಕಾಗಿ ಮಾನವ ವಸತಿ ಪ್ರದೇಶಗಳತ್ತ ಚಲಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಇಂದು ಮೈಸೂರಿನ ಹೊರವಲಯಗಳಲ್ಲಿ ಆಗಾಗ ಚಿರತೆ ಕಾಣಿಸಿಕೊಂಡಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಈ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸುವಂತಹ ಯಾವುದೇ ನಿರ್ಧಾರವನ್ನು ಅತ್ಯಂತ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ನಾವು ಅರಣ್ಯ ಇಲಾಖೆಯ ಮೂಲಕ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ ಮತ್ತು ಮಾನವ – ವನ್ಯಜೀವಿ ಸಂಘರ್ಷ ಕಡಿಮೆ ಮಾಡುವ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ. ಇನ್ನೊಂದೆಡೆ, ಉತ್ಸವದ ಹೆಸರಿನಲ್ಲಿ ಪ್ರಾಣಿಗಳ ವಾಸಸ್ಥಳವನ್ನೇ ನಾಶ ಮಾಡುವುದಾದರೆ ಅದು ನಮ್ಮ ಸಂರಕ್ಷಣಾ ತತ್ವಗಳಿಗೆ ವಿರುದ್ಧವಾಗುತ್ತದೆ.
ಇಲ್ಲಿ ಪ್ರಶ್ನೆ ಕಂಬಳದ ವಿರುದ್ಧವಲ್ಲ. ಕಂಬಳವು ಕರಾವಳಿ ಕರ್ನಾಟಕದ ಹೆಮ್ಮೆಯ ಸಂಪ್ರದಾಯ. ಅದಕ್ಕೆ ತನ್ನದೇ ಆದ ಐತಿಹಾಸಿಕ ಮತ್ತು ಸಾಂಸ್ಕ ತಿಕ ಮಹತ್ವವಿದೆ. ಆದರೆ ಪ್ರತಿಯೊಂದು ಸಂಪ್ರದಾಯಕ್ಕೂ ಅದರ ಭೌಗೋಳಿಕ ಹಾಗೂ ಪರಿಸರದ ಹಿನ್ನೆಲೆ ಇರುತ್ತದೆ. ಒಂದು ಸಂಸ್ಕ ತಿಯನ್ನು ಮತ್ತೊಂದು ನಗರಕ್ಕೆ ತರುವಾಗ, ಅಲ್ಲಿನ ಪರಿಸರ ಮತ್ತು ಜನಜೀವನದ ಮೇಲೆ ಬೀರುವ ಪರಿಣಾಮಗಳನ್ನು ಮೊದಲೇ ಅಧ್ಯಯನ ಮಾಡಬೇಕು. ಒಂದು ವೇಳೆ ಕಂಬಳವನ್ನು ಮೈಸೂರು ದಸರಾದ ಭಾಗವಾಗಿಯೇ ನಡೆಸಬೇಕೆಂದರೆ, ಅದಕ್ಕಾಗಿ ಪರಿಸರಕ್ಕೆ ಹಾನಿಯಾಗದ ಸ್ಥಳವನ್ನು ಆಯ್ಕೆ ಮಾಡುವುದು ಉತ್ತಮ. ಒಮ್ಮೆ ಶಾಂತ ನಗರವೆಂದು ಹೆಸರಾದ ಮೈಸೂರು ಇಂದು ಬೆಂಗಳೂರು ಮಾದರಿಯ ವಾಹನ ದಟ್ಟಣೆಯತ್ತ ಸಾಗುತ್ತಿದೆ. ದಸರಾ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ನಗರಕ್ಕೆ ಆಗಮಿಸುತ್ತಾರೆ. ರಸ್ತೆಗಳು ತುಂಬಿ ತುಳುಕುತ್ತವೆ. ಅನೇಕ ಸಾರ್ವಜನಿಕ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಪಾರ್ಕಿಂಗ್, ರಸ್ತೆ ನಿರ್ವಹಣೆ, ಸಾರ್ವಜನಿಕ ಸಾರಿಗೆ ಮತ್ತು ಮೂಲಸೌಕರ್ಯಗಳ ಸಮಸ್ಯೆಗಳು ಈಗಾಗಲೇ ಜನರನ್ನು ಕಾಡುತ್ತಿವೆ.
ಒಂದು ಹಬ್ಬವನ್ನು ಇನ್ನಷ್ಟು ಭವ್ಯಗೊಳಿಸುವ ಉತ್ಸಾಹದಲ್ಲಿ, ಮೈಸೂರಿನ ಹಸಿರು ಉಸಿರನ್ನು ಕಸಿದುಕೊಳ್ಳಬಾರದು. ಮುಂದಿನ ಪೀಳಿಗೆಗೆ ನಾವು ಕೇವಲ ವೈಭವದ ನೆನಪುಗಳನ್ನು ಮಾತ್ರವಲ್ಲ, ಜೀವವೈವಿಧ್ಯದಿಂದ ಸಮೃದ್ಧವಾದ ನಗರವನ್ನೂ ಉಳಿಸಿಕೊಡಬೇಕಾಗಿದೆ.



