ಕುಗ್ರಾಮಗಳಲ್ಲಿ ವೈದ್ಯಕೀಯ ಶಿಬಿರಗಳ ಆಯೋಜನೆ
ಬಿಹಾರದ ಪಟ್ನಾ ಜಿಲ್ಲೆಯ ದರ್ಭಾಂಗಾದ ಭುರವನ್ ಗ್ರಾಮದ ರಮಣ್ ಕಿಶೋರ್ ಅವರದ್ದು ಒಂದು ಸಾಧಾರಣ ರೈತ ಕುಟುಂಬ. ಇಂತಹ ಕುಟುಂಬಗಳಲ್ಲಿ ಸಾಧಾರಣವಾಗಿ ಪ್ರತೀದಿನದ ಎರಡು ಹೊತ್ತಿನ ಊಟದ ಚಿಂತೆ ಬೇರೆಲ್ಲ ಕನಸುಗಳನ್ನು ಚಿವುಟಿ ಹಾಕುತ್ತದೆ. ಭುರವನ್ ಹಳ್ಳಿಯ ಮಕ್ಕಳಿಗೆ ಉನ್ನತ ಶಿಕ್ಷಣವೆಂದರೆ ದರ್ಭಾಂಗ ನಗರದಲ್ಲಿರುವ ಕಾಲೇಜು ಸೇರುವುದು. ಆದರೆ, ರಮಣ್ ಕಿಶೋರ್ ಪೋಕಿವಾಲಾದ ಕಿಸನ್ ಉಚ್ಚಯ್ಯ ವಿದ್ಯಾಲಯದಲ್ಲಿ ಹತ್ತನೇ ತರಗತಿ ಪಾಸು ಮಾಡಿದ ನಂತರ ಅವನು ತಾನೊಬ್ಬ ಡಾಕ್ಟರ್ ಆಗುವ ಕನಸು ಕಂಡ. ಆದರೆ, ತನ್ನ ಕನಸನ್ನು ಹೆತ್ತವರಿಗೆ ಹೇಳಿದಾಗ ಅವರು ಅದನ್ನು ವಿರೋಽಸಿದರು. ಅವರ ಹೆತ್ತವರಿಗೆ ತಮ್ಮ ಮಗ ಡಾಕ್ಟರ್ ಆಗುವುದು ಇಷ್ಟರಲಿಲ್ಲ ಅಂತಲ್ಲ. ಆದರೆ, ಅದಕ್ಕೆ ಬೇಕಾದ ಆರ್ಥಿಕ ಅನುಕೂಲತೆ ಅವರಲ್ಲಿಲ್ಲದ ಕಾರಣ ಅಸಹಾಯಕತೆಯಿಂದಾಗಿ ವಿರೋಧಿಸಿದರು. ದುಬಾರಿ ಪುಸ್ತಕಗಳಿಗೆ ಎಲ್ಲಿಂದ ಹಣ ತರುವುದು? ಅಷ್ಟು ದೊಡ್ಡ ಫೀಸು ಎಲ್ಲಿಂದ ಹೊಂದಿಸುವುದು? ಪಟ್ನಾದಲ್ಲಿ ಅವನು ಉಳಿದುಕೊಳ್ಳಲು ಏನು ವ್ಯವಸ್ಥೆ? ತಮ್ಮ ಮಗನ ಕನಸನ್ನು ನನಸಾಗಿಸಲು ಅವರ ಬಳಿ ಏನೂ ಇರಲಿಲ್ಲ.
ರಮಣ್ ಕಿಶೋರ್ ತನ್ನ ಹೆತ್ತವರ ಪರಿಸ್ಥಿತಿಯನ್ನು ಚೆನ್ನಾಗಿ ಅರಿತಿರುವುದರಿಂದ ಅವರಿಂದ ಯಾವುದೇ ಆರ್ಥಿಕ ನೆರವನ್ನು ಅವನು ಬಯಸಿರಲಿಲ್ಲ. ತನ್ನ ಕನಸನ್ನು ಹೇಗೆ ನನಸಾಗಿಸಬೇಕೆಂದು ಮೊದಲೇ ಲೆಕ್ಕ ಹಾಕಿದ್ದ ರಮಣ್ ಕಿಶೋರ್ ಮನೆಯವರ ವಿರೋಧದ ನಡುವೆಯೇ ಪಟ್ನಾಕ್ಕೆ ಹೋದನು. ಡಾಕ್ಟರಾಗಲು ಬೇಕಾಗುವ ಹಣವನ್ನು ಟ್ಯೂಷನ್ ಕೊಡುವ ಮೂಲಕ ಗಳಿಸಲು ಯೋಜನೆ ಹಾಕಿದನು. ಅದರಂತೆಯೇ ಎರಡು ವರ್ಷ ಕಠಿಣ ಶ್ರಮ ಪಟ್ಟು, ೨೦೧೨ರಲ್ಲಿ ಎಐಐಎಮ್‌ಎಸ್‌ನಲ್ಲಿ ಸೀಟು ಪಡೆದನು. ಕಾಕತಾಳೀಯ ಎಂಬಂತೆ, ಹಲವು ವರ್ಷಗಳಿಂದ ಸರ್ಕಾರಿ ಶಾಲೆಯ ಶಿಕ್ಷಕರಾಗಲು ಪ್ರಯತ್ನಿಸುತ್ತಿದ್ದ ಅವನ ತಂದೆ ಆ ವರ್ಷ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದರು. ಆದರೆ, ರಮಣ್ ಕಿಶೋರ್ ಮೊದಲ ವರ್ಷದ ಎಂಬಿಬಿಎಸ್ ಮಾಡುತ್ತಿರುವಾಗ ದುರಂತವೊಂದು ಅಪ್ಪಳಿಸಿತು. ಹಲವು ವರ್ಷಗಳಿಂದ ಏನೋ ಕಾಯಿಲೆಯಿಂದ ನರಳುತ್ತಿದ್ದ ಅವನ ತಾಯಿ ಗಂಭೀರವಾಗಿ ಅಸ್ವಸ್ಥರಾದರು. ಆಸ್ಪತ್ರೆಗೆ ಒಯ್ದು ಪರೀಕ್ಷಿಸಿದಾಗ ಅವರಿಗೆ ಲಿವರ್ ಕ್ಯಾನ್ಸರ್ ಇರುವುದು ತಿಳಿದು ಬಂದಿತು. ನಂತರ ಅವರನ್ನು ಕ್ಯಾನ್ಸರಿಗೆ ಉಚಿತ ವೈದ್ಯಕೀಯ ಆರೈಕೆ ಸಿಗುವ ಮುಂಬೈಯ ಟಾಟಾ ಮೆಮೊರಿಯಲ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ, ಅಲ್ಲಿನ ಡಾಕ್ಟರುಗಳು ಕೆಲ ಕಾಲ ಮೊದಲು ಕರೆ ತಂದಿದ್ದರೆ ಉಳಿಯುವ ಸಾಧ್ಯತೆ ಇತ್ತು, ಈಗ ತೀರಾ ತಡವಾಯಿತು ಎಂದು ಕೈ ಚೆಲ್ಲಿದರು. ತಾಯಿ ಕ್ಯಾನ್ಸರಿಗೆ ಬಲಿಯಾದುದು ರಮಣ್ ಕಿಶೋರ್ ಮೇಲೆ ಅತೀವ ಪರಿಣಾಮ ಬೀರಿತು. ಅವನಿಗೆ ಮೊದಲು ತಾನೊಬ್ಬ ಹೃದಯತಜ್ಞ ಅಥವಾ ಬೇರಾವುದಾದರೂ ಸ್ಪೆಶಲಿಸ್ಟ್ ಡಾಕ್ಟರ್ ಆಗುವ ಗುರಿ ಇತ್ತು. ಆದರೆ, ಈಗ ಅವನು ಒಬ್ಬ ಸಾಮಾನ್ಯ ಡಾಕ್ಟರ್ ಆಗಿ ಜನ ಸಾಮಾನ್ಯರ ಆರೈಕೆ ಮಾಡಿ, ಆದಷ್ಟು ಮಟ್ಟಿಗೆ ಪ್ರಾರಂಭದ ಹಂತಗಳಲ್ಲಿ ಗಂಭೀರ ಕಾಯಿಲೆಗಳನ್ನು ಪತ್ತೆ ಹಚ್ಚಿ ಅವರಿಗೆ ನೆರವಾಗಲು ನಿರ್ಧರಿಸಿದನು. ಗ್ರಾಮೀಣ ಭಾಗಗಳ ಬಡ ಹೆತ್ತವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಆರೋಗ್ಯ, ಬದುಕನ್ನು ಕಡೆಗಣಿಸುವುದನ್ನು ರಮಣ್ ಕಿಶೋರ್ ತನ್ನ ಎಳವೆಯಿಂದಲೇ ನೋಡಿ ತಿಳಿದಿದ್ದನು. ಇನ್ನು ಮುಂದೆ ಅಂತಹ ತಂದೆ ತಾಯಿಗಳಿಗೆ ತನ್ನ ವೈದ್ಯಕೀಯ ಸೇವೆಯನ್ನು ಮುಡುಪಾಗಿರಿಸಲು ಅವನು ಪಣ ತೊಟ್ಟನು.
ವೈದ್ಯಕೀಯ ಶಿಕ್ಷಣ ಮುಗಿಸಿ, ಡಾಕ್ಟರಾದ ಮೇಲೆ ರಮಣ್ ಕಿಶೋರ್ ಬಿಹಾರದ ಕುಗ್ರಾಮಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಪ್ರಾರಂಭಿಸಿದರು.೨೦೨೦ರಿಂದ ಏಳು ವರ್ಷಗಳ ಅವಧಿಯಲ್ಲಿ ಅವರು ೨೯೬ ಶಿಬಿರಗಳನ್ನು ನಡೆಸಿ, ೫೦,೦೦೦ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದರು. ರಮಣ್ ಕಿಸೊರ್ ಯಾರಿಂದಲೂ ದೇಣಿಗೆಯನ್ನು ಪಡೆಯುವುದಿಲ್ಲ. ಏಕೆಂದರೆ, ಹಾಗೆ ಪಡೆದರೆ ಮುಂದೆ ದೇಣಿಗೆ ಕೊಟ್ಟವರ ಹಿತಾಸಕ್ತಿಗಾಗಿ ತನ್ನ ಆದರ್ಶದೊಂದಿಗೆ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು ಎಂದು ಅವರು ಆತಂಕಪಡುತ್ತಾರೆ.
ರಮಣ್ ಕಿಶೋರ್ ಈಗಲೂ ಅವಿವಾಹಿತರು. ಇದರಿಂದಾಗಿ ತನ್ನ ವೈಯಕ್ತಿಕ ಖರ್ಚುವೆಚ್ಚಗಳನ್ನು ಕನಿಷ್ಠ ಪ್ರಮಾಣದಲ್ಲಿಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ. ಬಡವರಿಗೆ ಉಚಿತ ವೈದ್ಯಕೀಯ ಆರೈಕೆ ನೀಡಲು ಬೇಕಾಗುವ ವೈದ್ಯಕೀಯ ಸಲಕರಣೆ ಹಾಗೂ ಔಷಧಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲೇ ಖರೀದಿಸುತ್ತಾರೆ. ಇದಕ್ಕಾಗಿ ಅವರು ತಮ್ಮ ಸಂಬಳದ ಶೇ.೮೦-೯೦ ಹಣವನ್ನು ವಿನಿಯೋಗಿಸುತ್ತಾರೆ. ಔಷಧಿ ಕಂಪೆನಿಗಳು ಶಿಫಾರಸು ಮಾಡುವ ಔಷಽಗಳನ್ನು ಅವರು ಹಂಚುವುದಿಲ್ಲ. ಹಲವು ವೈದ್ಯರು ಹಾಗೂ ಆಸ್ಪತ್ರೆಗಳು ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿದರೂ ಆ ಉದ್ದೇಶದ ಹಿಂದೆ ರೋಗಿಗಳನ್ನು ತಮ್ಮತ್ತ ಸೆಳೆಯುವ ಒಳ ಉದ್ದೇಶರುತ್ತದೆ. ಆದರೆ, ರಮಣ್ ಕಿಶೋರ್ ವೈದ್ಯಕೀಯ ಶಿಬಿರಗಳನ್ನು ನಡೆಸುವುದು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಸಲುವಾಗಿ ಮಾತ್ರ. ಮತ್ತು, ಇದೇ ಕಾರಣಕ್ಕೆ ಅವರು ‘ಪ್ರೈವೇಟ್ ಪ್ರ್ಯಾಕ್ಟೀಸ್’ ಕೂಡ ನಡೆಸುವುದಿಲ್ಲ. ಈ ಎಲ್ಲ ಕಾರಣಗಳಿಂದಾಗಿ ರಮಣ್ ಕಿಶೋರ್ ತಮ್ಮ ಸುತ್ತಮುತ್ತಲ ಹಳ್ಳಿಗಳ ಬಡ ರೋಗಿಗಳ ಪಾಲಿಗೆ ‘ಗಾಂವ್ ಕಾ ಡಾಕ್ಟರ್ (ಊರ ಡಾಕ್ಟರ್)’ ಆಗಿದ್ದಾರೆ.
ಸ್ವಂತ ಖರ್ಚಿನಲ್ಲೇ ಖರೀದಿ: ರಮಣ್ ಕಿಶೋರ್ ಈಗಲೂ ಅವಿವಾಹಿತರು. ಇದರಿಂದಾಗಿ ತನ್ನ ವೈಯಕ್ತಿಕ ಖರ್ಚುವೆಚ್ಚಗಳನ್ನು ಕನಿಷ್ಠ ಪ್ರಮಾಣದಲ್ಲಿಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ. ಬಡವರಿಗೆ ಉಚಿತ ವೈದ್ಯಕೀಯ ಆರೈಕೆ ನೀಡಲು ಬೇಕಾಗುವ ವೈದ್ಯಕೀಯ ಸಲಕರಣೆ ಹಾಗೂ ಔಷಧಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲೇ ಖರೀದಿಸುತ್ತಾರೆ.




