ದಾಸೇಗೌಡ ಸರಗೂರು
ಅಸಮರ್ಪಕ ವ್ಯವಸ್ಥೆಯಿಂದ ನೀರು ಪೋಲು;ನಿರ್ವಹಣೆಯಿಲ್ಲದ ಶೌಚಾಲಯ, ಕಸದ ರಾಶಿ ತಾಂಡವ
ಸರಗೂರು: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶೌಚಾಲಯ ಹಾಗೂ ಹೋಟೆಲ್ಗಳಿಗೆ ನೀರು ಪೂರೈಕೆ ಮಾಡುವ ವ್ಯವಸ್ಥೆಯಲ್ಲಿ ಎರಡು ಓವರ್‌ಹೆಡ್ ಟ್ಯಾಂಕ್‌ಗಳ ನಡುವೆ ತಪ್ಪಾದ ಸಂಪರ್ಕ ಆಗಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಪ್ರತಿ ದಿನ ಸಾವಿರಾರು ಲೀಟರ್ ನೀರು ಪೋಲಾಗುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರು ಹರಿಯುತ್ತಾ ಪಾಚಿ ಕಟ್ಟಿರುವುದರಿಂದ ಎಷ್ಟೋ ಬಾರಿ ಪ್ರಯಾಣಿಕರು ಓಡಾಡುವಾಗ ಜಾರಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಹತ್ತು ವರ್ಷಗಳ ಹಳೆಯದಾದ ಶೌಚಾಲಯದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ದುರ್ವಾಸನೆ ಬರುತ್ತಿದೆ. ಕೆಲವು ಶೌಚಾಲಯದ ಬಾಗಿಲುಗಳಿಗೆ ಯಾವುದೇ ಚಿಲಕಗಳು ಇಲ್ಲ. ಮುಖ್ಯ ರಸ್ತೆಯ ಎರಡು ಭಾಗಗಳಲ್ಲೂ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ನೀರು ಬಸ್ ನಿಲ್ದಾಣದ ಒಳಗೆ ಹರಿದುಬರುತ್ತಿದೆ.
ಇಲ್ಲಿನ ಪ್ಲಾಟ್‌ಫಾರಂಗಳಂತೂ ಗುಂಡಿಗಳಿಂದ ಕೂಡಿದ್ದು, ಪ್ರಯಾಣಿಕರು ಬಸ್ ಹತ್ತಲು ಹೋಗುವಾಗ, ಇಳಿಯುವಾಗ ಗಾರೆ ಇಲ್ಲದೆ ರಾಡುಗಳು ಪ್ರಯಾಣಿಕರಿಗೆ ತಗುಲಿ ಗಾಯಗಳಾಗುತ್ತಿವೆ.
ಬಸ್ ನಿಲ್ದಾಣದ ನೀರು ಮುಖ್ಯ ಚರಂಡಿಗೆ ಸೇರಿದಾಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ಪ್ರಯಾಣಿಕ ಲಕ್ಷ್ಮಣ್ ಅವರು. ಈ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕಾಂಪೌಂಡ್ ಪಕ್ಕದ ರಸ್ತೆಯ ಬದಿಯಲ್ಲಿ ಅಂಗಡಿ ನಡೆಸುತ್ತಿದ್ದು, ಕಸದ ರಾಶಿ, ಹೋಟೆಲ್‌ಗಳಿಂದ ಬರುವ ತ್ಯಾಜ್ಯದ ನೀರಿನಿಂದ ದುರ್ವಾಸನೆ ಉಂಟಾಗಿ ನಮ್ಮ ಅಂಗಡಿ ಒಳಗಡೆ ಕೂರಲು ಆಗುವುದಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸುತ್ತಾರೆ.
” ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಸಮರ್ಪಕ ವ್ಯವಸ್ಥೆ ಇಲ್ಲದೆ ನೆಲದ ಮೇಲೆಯೇ ಕುಳಿತುಕೊಳ್ಳುತ್ತಾರೆ. ಕುಡಿಯುವ ನೀರಿನ ಫಿಲ್ಟರ್ ವ್ಯವಸ್ಥೆ ಇಲ್ಲ. ಇಲ್ಲಿನ ಟಿ ಸಿಕೊಠಡಿ ಮುಂಭಾಗ ಬಲ್ಬ್‌ಗಳೆಲ್ಲ ಕೆಟ್ಟು ಹೋಗಿದ್ದು ಅದನ್ನು ಸರಿಪಡಿಸಿಲ್ಲ. ಜನರೇಟರ್, ಸಿಸಿಟಿವಿ ವ್ಯವಸ್ಥೆ ಇಲ್ಲ.”
-ಚಿ.ಕು.ಗೋವಿಂದರಾಜು, ಪ್ರಯಾಣಿಕರು
” ಸದ್ಯದಲ್ಲೇ ಕೇಂದ್ರ ಕಚೇರಿಗೆ ಸಮಸ್ಯೆ ಕುರಿತು ಮಾಹಿತಿ ಕಳುಹಿಸುತ್ತೇವೆ. ಅಲ್ಲಿಂದ ಉತ್ತರ ಬಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ.”
-ವೀರೇಶ್, ಸಾರಿಗೆ ನಿಯಂತ್ರಣಾಧಿಕಾರಿ
” ಬಸ್ ನಿಲ್ದಾಣದಲ್ಲಿನ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುತ್ತದೆ.”
-ತ್ಯಾಗರಾಜು, ಹೆಚ್.ಡಿ ಕೋಟೆ ಸಾರಿಗೆ ಘಟಕ ವ್ಯವಸ್ಥಾಪಕರು





