Mysore
31
broken clouds

Social Media

ಮಂಗಳವಾರ, 14 ಜುಲೈ 2026
Light
Dark

ಗೋಪಾಲಸ್ವಾಮಿ ಬೆಟ್ಟ: ಕೊನೆಗೂ ಭಕ್ತರಿಗೆ ಸಿಕ್ಕಿತು ನೆರಳು!

ಬೆಟ್ಟದಲ್ಲಿ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಿದ ಶಾಸಕ; ಸಮಸ್ಯೆ ಕುರಿತು ಬೆಳಕು ಚೆಲ್ಲಿದ್ದ ‘ಆಂದೋಲನ’

ಗುಂಡ್ಲುಪೇಟೆ: ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದೇಶದ ವಿವಿಧಮೂಲೆಗಳಿಂದ ಹಾಗೂ ವಿದೇಶಗಳಿಂದ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಆಗಮಿಸುತ್ತಾರೆ. ಬೆಟ್ಟದ ತಪ್ಪಲಿನಿಂದ ದೇವಸ್ಥಾನಕ್ಕೆ ಸರ್ಕಾರಿ ಬಸ್‌ನಲ್ಲೇ ಪ್ರಯಾಣಿಸಬೇಕಿದ್ದು, ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯಲು ಕೌಂಟರ್, ಬಸ್ ನಿಲ್ದಾಣದ ಸೂಕ್ತ ವ್ಯವಸ್ಥೆಯಿಲ್ಲದೆಹಿರಿಯರು, ಮಕ್ಕಳು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಹೈರಾಣಾಗುತ್ತಿದ್ದರು.

ಈ ವಿಚಾರವಾಗಿ ‘ಆಂದೋಲನ’ ದಿನ ಪತ್ರಿಕೆ ವರದಿ ಮಾಡಿತ್ತು. ಈ ವಿಚಾರವಾಗಿ ಶಾಸಕ ಗಣೇಶ್ ಪ್ರಸಾದ್ ಅವರು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ, ಶಾಸಕರ ಅನುದಾನದಲ್ಲಿ ನೆರಳಿನ ವ್ಯವಸ್ಥೆ ಮಾಡಿ ಕೊಡುವ ಭರವಸೆ ನೀಡಿದ್ದರು. ಅದರಂತೆ ಹತ್ತು ತಿಂಗಳ ಅವಧಿಯಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿ ಉದ್ಘಾಟನೆ ಮಾಡಲಾಗಿದೆ.

ಸೋಮವಾರ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ೨೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಶೆಲ್ಟರ್ ನಿರ್ಮಿಸಲು ಅವಕಾಶವಿರಲಿಲ್ಲ. ಜಿಲ್ಲಾಧಿಕಾರಿಯಾಗಿದ್ದ ಶಿಲ್ಪಾನಾಗ್ ಅವರ ಜತೆ ಮಾತನಾಡಿ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿತ್ತು.  ಮುಂದುವರಿದ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.

ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಿಬುದ್ಧಿ, ಕಾಡಾ ಮಾಜಿ ಅಧ್ಯಕ್ಷ ನಂಜಪ್ಪ, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಸಿಎಫ್ ನಂದೀಶ್, ಎಸಿಎಫ್ ಶುಕ್ಲಾ, ಎಸಿಎಫ್ ಸುರೇಶ್, ಆರ್‌ಎ-ಓ ಸತೀಶ್, ಟಿಎಪಿಸಿ ಎಂಎಸ್ ಅಧ್ಯಕ್ಷ ಮಡಿವಾಳಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ರವಿ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜಶೇಖರ್, ಕೆಆರ್‌ಐಡಿಎಲ್ ಇಇ ತಿಪ್ಪಾ ರೆಡ್ಡಿ, ಎಇಇ ಪ್ರಸನ್ನಕುಮಾರ್, ಕೆಎಸ್‌ಆರ್‌ಟಿಸಿ ಕುಮಾರ್ ನಾಯಕ್, ಇಂಜಿನಿಯರ್ ಪ್ರಸನ್‌ಕುಮಾರ್, ಮತ್ತಿತರರು ಹಾಜರಿದ್ದರು

” ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸರತಿ ಸಾಲಿನ ಶೆಡ್, ಟಿಕೆಟ್ ಕೌಂಟರ್ ಅವಶ್ಯವಿತ್ತು. ‘ಆಂದೋಲನ’ ದಿನಪತ್ರಿಕೆ ಇದರ ಬಗ್ಗೆ ಬೆಳಕು ಚೆಲ್ಲಿ ವರದಿ ಮಾಡಿತ್ತು. ಇದಕ್ಕೆ ಶಾಸಕರು ಸ್ಪಂದಿಸಿ ಕೊನೆಗೂ ಬಸ್ ನಿಲ್ದಾಣ ಉದ್ಘಾಟನೆ ಮಾಡಿದ್ದು, ಸಂತಸದ ವಿಚಾರ. ಇದಕ್ಕಾಗಿ ಪತ್ರಿಕೆಗೆ, ಶಾಸಕ ಗಣೇಶ್ ಪ್ರಸಾದ್ ಅವರಿಗೆ ಧನ್ಯವಾದಗಳು.”

-ಲೋಕೇಶ್, ಗೋಪಾಲಪುರ ಗ್ರಾಪಂ ಮಾಜಿ ಸದಸ್ಯ

” ಬೆಟ್ಟಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಬಿಸಿಲು, ಮಳೆಯಿಂದ ರಕ್ಷಣೆಗಾಗಿ ಟಿಕೆಟ್ ಕೌಂಟರ್ ಹಾಗೂ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಿದೆ. ಇದನ್ನು ಉಳಿಸಿಕೊಂಡು ಹೋಗಲು ಸಾರ್ವಜನಿಕರು, ಪ್ರವಾಸಿಗರು ಕೈ ಜೋಡಿಸಬೇಕು.”

-ಎಚ್.ಎಂ.ಗಣೇಶ್ ಪ್ರಸಾದ್, ಶಾಸಕರು

 

 

Tags:
error: Content is protected !!