Mysore
29
overcast clouds

Social Media

ಭಾನುವಾರ, 12 ಜುಲೈ 2026
Light
Dark

ಹಾಡುಪಾಡು | ಯರಕನಗದ್ದೆ ಪೋಡಿನಲ್ಲಿ ವೋಟು ಕಾರ್ಡಿನ ಪರದಾಟ

  • ಜಯಶಂಕರ್

ನಾನು ಶಾಲೆಯ ಅಂಗಳದಲ್ಲಿ ಕುಳಿತುಕೊಂಡು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವಂತಹ ಸಂದರ್ಭದಲ್ಲಿ ನಾಲ್ಕಾರು ಸೋಲಿಗರು ಗುಂಪಿನಲ್ಲಿ ಏನೇನೋ ಗೊಣಗಾಡಿಕೊಂಡು ಹೋಗುತ್ತಿದ್ದರು. ಅದರಲ್ಲಿ ಯರಕನಗದ್ದೆ ಕಾಲೋನಿಯ ಮಾದಮ್ಮ ಮತ್ತು ಯರಕನಗದ್ದೆ ಪೋಡಿನ ಮಾದೇಗೌಡ ನನಗೆ ತುಂಬಾ ಚಿರಪರಿಚಿತರು. ಈ ದಿನ ಇಷ್ಟೊಂದು ಬಿಡುವು ಮಾಡಿಕೊಂಡು ಲೋಕ ವಿರಾಮವಾಗಿ ಹರಟಿಕೊಂಡು ಹೋಗುತ್ತಿದ್ದಾರಲ್ಲ ಎನಿಸಿ, ಅವರನ್ನು ನಾನೇ ಮಾತಿಗೆಳೆದೆ. ‘ಅಯ್ಯೋ ಅದೇನೋ ವೋಟ್ ಕಾರ್ಡ್ ಎಲ್ಲ ಹಾಳಾಗೋಗಿದ್ದವಂತಲ್ಲ ಸ್ವಾಮಿ, ಅದುಕ್ಕ ಹೊಸ ವೋಟು ಕಾರ್ಡ್ ಕೊಡ್ತಾರಂತೆ. ಹಳೆ ವೋಟ್ ಕಾರ್ಡ್ ಹುಡುಕ ಬನ್ನಿ ಎಂದು ಹೇಳೀಕಳ್ಸವ್ರೆ. ಹಾಳಾದ್ದು ಎಷ್ಟು ತಡಕಿದ್ರು ಕಣ್ಗೇ ಬೀಳವಲ್ದು .ಹಳೇದನ್ನ ತಂದುಕೊಡ್ಳಿಲ್ಲ ಅಂದ್ರೆ ಮುಂದಿನ್ ವರ್ಷದಿಂದ ನಾವು ವೋಟ್ ಹಾಕಂಗಿಲ್ವಂತೆ ಅದೇನು ಸುಡುಗಾಡೋ ಅದೇನು ಕಥೆಯೋ ಹೋಗತ್ತಗೆ’ ಎಂದ. ನನಗೆ ಇವರು ಏನು ಹೇಳುತ್ತಿದ್ದಾರೆ ಎಂದು ತಕ್ಷಣಕ್ಕೆ ಅರ್ಥವಾಯಿತು. ಅವರು ಮಾತಾಡಿದ್ದು ಎಸ್‌ಐಆರ್ ಬಗ್ಗೆ. ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತಿರುವುದರ ಬಗ್ಗೆ.

ಅಷ್ಟಕ್ಕೇ ನಾನು ಸುಮ್ಮನೆ ಇರದೆ ‘ಹಂಗಂದ್ರೆ ಆಗುತ್ತಾ ಗೌಡ್ರೆ, ನೀನು ಈ ದೇಶದ ಪ್ರಜೆ. ಸರ್ಕಾರ ಕೇಳಿದಾಗ ದಾಖಲೆ ಕೊಡಬೇಕಾದ್ದು ನಿನ್ನ ಕರ್ತವ್ಯ. ಮುಂದಿನ ವರ್ಷದಿಂದ ನಿನ್ ವೋಟು ಇಲ್ಲ ಅಂದ್ರೆ ನೀನು ಈ ದೇಶದಲ್ಲಿ ಬದುಕುವುದೇ ವೇಸ್ಟು. ಹಳೇ ವೋಟು ಕಾರ್ಡು ಹುಡುಕಿ ಕೊಡೋದಲ್ವಾ?’ ಎಂದು ಸುಮ್ಮನೆ ಮಾದೇಗೌಡನ ಕಾಲು ಎಳೆದೆ. ‘ಅಯ್ಯೋ ಹೋಗಿ ಸ್ವಾಮಿ, ಈ ವೋಟು ಇದೆಲ್ಲ ಬರೋದಕ್ಕಿಂತ ಮುಂಚೆ ನಮ್ಮ ತಾತ ಮುತ್ತಾತನ ಕಾಲದಿಂದಲೂ ಕೂಡ ಈ ಕಾಡಲ್ಲಿ ವಾಸಮಾಡಿಕೊಂಡು ಬಂದಿವಿ. ನಾವೇನು ವೋಟ್ ಹಾಕಿ ಬೇರೆ ನಮ್ಮ ಬದುಕು ಚನ್ನಾಗಿದ್ದದ? ಕೂಲಿ ನಾಲಿ ಮಾಡೋದು ತಪ್ಪೋಗಿದ್ದ? ಹೋಗಿ ಸ್ವಾಮಿ, ಇವರ ಓಟು ಬ್ಯಾಡ, ಇವರ ಸವಾಸವೂ ಬ್ಯಾಡ ಹೆಂಗೋ ನಮ್ ತಾತನ್ ಕಾಲದಲ್ಲಿ ಬದುಕ್ತಿದ್ರಲ್ಲ ಹಂಗೆ ಬದುಕ್ತೀವಿ ಎಂದ. ಹೇ ಅದು ಅಂಗಲ್ಲ ಕಣಪ್ಪ.ನೀನೇನೋ ನಿಮ್ ತಾತನ ಕಾಲದಿಂದ ವಾಸ ಮಾಡ್ತಾ ಇದ್ದಿ ಸರಿ. ನಿಮ್ ಬೆಟ್ಟಕ್ಕೆ ಇತ್ತೀಚಿಗೆ ಬಂದು ಸರ‍್ಕೊಂಡು ನಾವೂ ಹಳಬ್ರೇ ನಮಗೂ ಜಾಗ ಕೊಡಿ ಅಂದ್ರೆ ಬುಟ್ ಬುಡ್ತೀರಾ? ಎಂದೆ. ಅದೆಂಗೆ ಬುಡಕಾಯ್ತದೆ ಸ್ವಾಮಿ? ಇದು ನಮ್ ತಾತ ಸಂಪಾದಿಸಿದ ಅಲ್ವಾ ಎಂದ. ಇದು ಹಂಗೆ ತಿಳ್ಕೋ. ಈ ದೇಶಕ್ಕೇ ಬೇರೆ ಕಡೆಯಿಂದ ವಲಸಿಗರು ಬಂದು ನಾವೂ ಇಲ್ಲಯವರೇ ಅಂತ ಸುಳ್ಳು ವೋಟ್ ಕಾರ್ಡು ಇಟ್ಕೊಂಡವ್ರೆ ಅಂಥವ್ರನ್ನ ಕಂಡು ಹಿಡಿಯೋಕೆ ಮತ್ತೆ ನಿಮ್ಮತ್ರ ಎಲ್ಲಾ ಮಾಹಿತಿ ಕೇಳ್ತಾ ಇರೋದು ಎಂದೆ. ಹಂಗ್ರಾ, ಅದೆಲ್ಲಾ ಸರಿ ಕಣ್ ಸ್ವಾಮಿ ಐದರ‍್ಸಕ್ಕೊಂದ್ಸಾರ್ತಿ ನಾವು ವೋಟ್ ಕಾರ್ಡು ಈಚೆ ತೆಗೆಯೋದು.ಈಗ ಅದೆಲ್ಲಿದ್ದಾತು ಅಂತ ತಡಕೋದು ಯೋಳಿ ಎಂದ. ನೀನು ಸರಿಯಾಗಿ ಎಸ್‌ಐಆರ್‌ಗೆ ಮಾಹಿತಿಯನ್ನು ಕೊಟ್ಟರೆ ಮಾತ್ರ ನೀನು ಈ ದೇಶದ ನಿವಾಸಿ ಅಂತ. ನೀನು ಸರಿಯಾಗಿ ಅವರಿಗೆ ಮಾಹಿತಿ ಒದಗಿಸದಿದ್ದರೆ ನೀನು ಈ ದೇಶದಲ್ಲಿ ವಾಸ ಮಾಡುವವನಲ್ಲ ಎಂದು ನಿನ್ನ ಅರ್ಹತೆಯನ್ನು ರದ್ದು ಮಾಡುತ್ತಾರೆ ಎಂದೆ. ಇದಕ್ಕಿಂತ ಹೆಚ್ಚು ಅದರ ಬಗ್ಗೆ ಹೇಳೋಕೆ ಹೋದರೆ ಇನ್ನ ಏಣೇನೋ ಅರ್ಥ ಮಾಡ್ಕೊಂಡು ಫಜೀತಿ ಆದಾತು ಎಂದು ಅವರನ್ನು ಸಾಗಹಾಕಿದೆ.

ಹೊರಜಗತ್ತಿನ ಯಾವುದೇ ವಿದ್ಯಾಮಾನಗಳಿಗೂ ಈ ಸೋಲಿಗರ ಸ್ಪಂದನೆ ಮಾತ್ರ ಇಷ್ಟೇ! ಅವರ ತಂಟೆಗೆ ಹೋಗದೇ ನೀವು ಏನೇ ಮಾಡಿಕೊಂಡರೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಎಸ್‌ಐಆರ್ ವಲಸೆ, ಮತ ಪರಿಷ್ಕರಣೆ ಎಂದೆಲ್ಲಾ ಅವರಿಗೆ ಹೇಳಿದರೆ ಸುಲಭವಾಗಿ ಅರ್ಥವಾಗುವುದಿಲ್ಲ. ಆ ಕಾರಣಕ್ಕಾಗಿ ನಮ್ಮದೇ ಸರ್ಕಾರಿ ಶಾಲೆಯ ಮಾಸ್ತರರು ಹಳೇ ವೋಟು ಕಾರ್ಡು ಉಪಯೋಗ ಇಲ್ಲ. ಹಳೇದು ಕೊಟ್ಟು ಹೊಸಾದು ಪಡೆಯಿರಿ ಎಂದು ಅವರನ್ನು ಕಾರ್ಡು ತರಲು ಕಳಿಸಿದ್ದರು. ಯರಕನಗದ್ದೆ ಕಾಲೋನಿಯಲ್ಲಿ ವಾಸ ಮಾಡುವ ಮಾದಮ್ಮನ ಕಥೆಯೆ ಬೇರೆ. ಅಲ್ಲಾ ಕಣ್ ಸ್ವಾಮಿ, ವೋಟಾಕಾಗ ಮಾತ್ರ ನಾವಿರೋ ಜಾಗಕ್ಕೆ ಜೀಪು ಕಳ್ಸಿ ಕರೆಸ್ಕೋಂತಾರೆ. ಆಮೇಲೆ ನಮ್ ಸುದ್ದೀಗೆ ಬರಲ್ವಾಲ್ಲ ಸ್ವಾಮಿ, ಎಂದು ತಮಾಷೆಯಾಗಿ ತನ್ನ ಎಲೆ ಅಡಿಕೆ ಬಾಯಿಯನ್ನು ಜೋರಾಗಿ ಅಗಲಿಸಿ ನಗುತ್ತಾ ಈ ವೋಟುಪಾಟು ಎಲ್ಲಾ ಕಟ್ಕೊಂಡು ನಮ್ಗೇನಾಗ್ಬೇಕು ಬುಡಿ ಸ್ವಾಮಿ.ಹೆಂಗಿದ್ರೂ ಕಾಡಲ್ಲಿ ಪುಳ್ಳೆ ಆಯೋದು ತಪ್ಪಿದ್ದಾ? ಎನ್ನುತ್ತಾಳೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ಈ ಕಾಡು ಸೋಲಿಗರ ಮನಸು ಮಾತ್ರ ನಾಗರಿಕ ಜಗತ್ತಿಗೆ ಒಗ್ಗಿಕೊಳ್ಳಲು ಇನ್ನ ಕಷ್ಟ ಪಡುತ್ತಿರುವುದ ಕಂಡು ಸೋಜಿಗವಾಯಿತು.

(ಲೇಖಕರು ಬಿಳಿಗಿರಿರಂಗನ ಬೆಟ್ಟ ಯರಕನ ಗದ್ದೆ ಪೋಡಿನಲ್ಲಿ ಶಿಕ್ಷಕ)

 

Tags:
error: Content is protected !!