ಸುಂಟಿಕೊಪ್ಪ: ಕೊಡಗರಹಳ್ಳಿಯ ಜನವಸತಿ ಪ್ರದೇಶದಲ್ಲಿ ಕಾಡಾನೆಯೊಂದು ಸಂಚರಿಸುವ ಮೂಲಕ ಈ ಭಾಗದ ನಿವಾಸಿಗಳಲ್ಲಿ ಅತಂಕ ಮೂಡಿಸಿದ ಘಟನೆಯೊಂದು ವರದಿಯಾಗಿದೆ.
ಕಾಡಾನೆಯೊಂದು ರಾತ್ರಿ ವೇಳೆ ತೋಟಗಳಿಗೆ ಲಗ್ಗೆಯಿಟ್ಟು ಕೃಷಿ ಫಸಲನ್ನು ನಾಶಗೊಳಿಸುತ್ತಿರುವುದು ಮಾತ್ರವಲ್ಲದೆ ಶುಕ್ರವಾರದಂದು ಬೆಳ್ಳಂಬೆಳಿಗ್ಗೆ ೬ ಗಂಟೆಯ ಸಂದರ್ಭ ರಾಜಾರೋಷವಾಗಿ ಜನ ವಸತಿ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಸಂಚಾರ ನಡೆಸುತ್ತಿರುವುದು ಆತಂಕ ಸೃಷ್ಟಿಸಿದೆ. ಮೊಟ್ಟಂಡ ಕುಟ್ಟಪ್ಪನವರ ತೋಟದಿಂದ ಮುಖ್ಯರಸ್ತೆಗೆ ಬಂದ ಆನೆ ಗ್ರಾಮ ಪಂಚಾಯಿತಿ ಮತ್ತು ಸ್ಕೂಲ್‌ಬಾಣೆ ನಡುವಿನ ಕಂಬಿಬಾಣೆ ರಸ್ತೆಯಲ್ಲಿ ಸಂಚರಿಸಿ ಪಂಚಾಯಿತಿ ನೌಕರ ಧನಂಜಯ ಎಂಬವರ ಮನೆ ಸಮೀಪದ ತೋಟದೊಳಗೆ ಸಾಗಿ ಹೋಗಿದೆ.
ಮುಖ್ಯ ರಸ್ತೆ ಬದಿಯಲ್ಲಿ ವಾಹನಗಳು ನಿಂತಿದ್ದು, ಅದೃಷ್ಟವಶಾತ್ ಜನತೆಯ ಓಡಾಟ ವಿರಳವಾಗಿತ್ತು. ಈ ಕಾಡಾನೆಯು ಹೊರಗೆ ಬರುತ್ತಿದ್ದಂತೆ ಘೀಳು ಇಟ್ಟ ಹಿನ್ನಲೆಯಲ್ಲಿ ಸುತ್ತ ಮುತ್ತಲಿನ ನಿವಾಸಿಗಳು ಹೊರಬಾರದೆ ಜೀವ ಭಯದಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.
ಇಲ್ಲಿಯ ತನಕ ಕಾಡಾನೆಗಳು ಕೃಷಿ ಫಸಲಿನ ತೋಟ ಹಾಗೂ ಗದ್ದೆಗಳಲ್ಲಿ ಕಾಣಿಸಿಕೊಂಡು ಕೃಷಿಫಸಲನ್ನು ತಿಂದು ಕೆಲವೊಮ್ಮೆ ಕಾಡಿಗೆ ಹಿಂತಿರುಗದೆ ತೋಟಗಳಲ್ಲಿಯೇ ಬಿಡುಬಿಡುತ್ತಿದ್ದವು. ಅಲ್ಲದೆ ಕಾಡಾನೆಗಳು ತೋಟದ ಭದ್ರತೆಗೆ ಅಳವಡಿಸಿದ ಬೇಲಿಗಳನ್ನು ನಾಶಗೊಳಿಸುತ್ತಿರುವುದು ಸರ್ವೆ ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಮುಖ್ಯ ರಸ್ತೆ, ಜನವಸತಿ ಪ್ರದೇಶಗಳಲ್ಲಿ ಸಂಚಾರ ನಡೆಸುವುದು ಆರಂಭಿಸಿರುವುದ್ದರಿಂದ ಗ್ರಾಮಸ್ಥರು ಆತಂಕ ಪಡುವಂತಾಗಿದೆ ಅರಣ್ಯ ಇಲಾಖೆ ಕಾಡಾನೆಗಳ ನಿಯಂತ್ರಣ ಮತ್ತು ಮುಂದಾಗಲಿರುವ ಭಾರೀ ಅನಾಹುತಗಳು ಘಟಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.




