ರಸ್ತೆಗಳ ಬಾಳಿಕೆ ಹೆಚ್ಚಳ ; ಬಫರ್ ಜೋನ್ ಇಲ್ಲದಿದ್ದರೆ ಸಂಕಷ್ಟ
ವಿಶ್ವನಾಥ್ ಶಂಕರಪ್ಪ
ರಸ್ತೆ ವೈಟ್ ಟಾಪಿಂಗ್ ಮಾಡುವುದು ಎಂದರೆ, ಹಾಲಿ ದುಸ್ಥಿತಿಯಲ್ಲಿರುವ ಡಾಂಬರು ರಸ್ತೆಯ ಮೇಲೆ ಪೋರ್ಟ್‌ಲ್ಯಾಂಡ್ ಸಿಮೆಂಟ್ ಕಾಂಕ್ರೀಟ್ ಪದರವನ್ನು ಹಾಕುವುದು. ಡಾಂಬರ್ ರಸ್ತೆಯಲ್ಲಿ ಕಳಪೆ ಮಟ್ಟದ ಮಣ್ಣಿನ ಅಡಿ ಪದರ, ಸರಿಯಾಗಿ ಸಂಕುಚಿತಗೊಳಿಸದ ರಸ್ತೆಯಲ್ಲಿ ಭಾರಿ ವಾಹನಗಳ ಚಲನೆಯಿಂದ ಉಂಟಾಗುವ ರೇಖಾಂಶದ ತಗ್ಗುಗಳು (ರಟ್ಟಿಂಗ್) ಆಗುತ್ತಿದ್ದಲ್ಲಿ ಮಾತ್ರ, ಆ ರಸ್ತೆಗೆ ವೈಟ್ ಟಾಪಿಂಗ್ ಕೈಗೊಳ್ಳುವುದು ಎಂದು ವಿಶ್ಲೇಷಿಸಲಾಗಿದೆ.
ಈ ರೀತಿ, ರಸ್ತೆಯನ್ನು ತಾಂತ್ರಿಕವಾಗಿ ಪುನರುಜ್ಜೀವನ ಗೊಳಿಸುವುದರಿಂದ, ಕಡಿಮೆ ನಿರ್ವಹಣೆ, ರಸ್ತೆಯ ಭಾರ ಹೊರುವ ಸಾಮರ್ಥ್ಯ ಹೆಚ್ಚಾಗುವುದರೊಂದಿಗೆ ಪದೇ ಪದೇ ಉಂಟಾಗುವ ಪಾಟ್ ಹೋಲ್ ಸಮಸ್ಯೆಯನ್ನು ನೀಗಿಸುತ್ತದೆ ಹಾಗೂ ರಸ್ತೆ ಬಾಳಿಕೆ ಅವಽಯು ಸುಮಾರು ೨೦ ವರ್ಷಗಳಿಗೂ ಅಧಕವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ರಾತ್ರಿಯ ವೇಳೆ ಬೆಳಕಿನ ಪ್ರತಿಫಲನ ಹೆಚ್ಚಾಗಿದ್ದು, ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ವಿಶ್ಲೇಷಿಸಿದೆ. ರಸ್ತೆಗೆ ವೈಟ್ ಟಾಪಿಂಗ್ ಅಳವಡಿಸುವಲ್ಲಿ ಟೆಂಡರ್ ಶುವರ್(tender sure-ನಗರ ರಸ್ತೆ ಅನುಷ್ಠಾನ ವಿಶ್ಲೇಷಣೆ) ಮಾದರಿಯನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿರುತ್ತದೆ.
ಟೆಂಡರ್ ಶುವರ್ ಪ್ರಕಾರ ರಸ್ತೆಗೆ ವೈಟ್ ಟಾಪಿಂಗ್ ಅಳವಡಿಸಲು ನಿಗದಿಪಡಿಸಲಾದ ಸ್ಟ್ಯಾಂಡರ್ಡ್ ಡ್ರಾಯಿಂಗ್‌ನಲ್ಲಿ ನಮೂದಿಸಿರುವಂತೆ ರಸ್ತೆಯ ಅಗಲ, ರಸ್ತೆಯ ಎರಡೂ ಬದಿಗೆ ಬಫರ್ ಜೋನ್, ಫುಟ್‌ಪಾತ್ ಹಾಗೂ ಚರಂಡಿ ಅಳವಡಿಸಲು ಅಗತ್ಯವಾದ ಭೂಮಿ ಇರುವುದನ್ನು ಖಚಿತಪಡಿಸಿಕೊಂಡು, IRC SP ೭೬ ೨೦೧೫ ಪ್ರಕಾರ ದುಸ್ಥಿತಿಯಲ್ಲಿರುವ ಡಾಂಬರು ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುತ್ತದೆ.
ಅದರಂತೆ ವೈಟ್ ಟಾಪಿಂಗ್ ಮಾಡಲು ಪ್ರಸ್ತಾಪಿಸಿರುವ ಹಾಲಿ ದುಸ್ಥಿತಿಯಲ್ಲಿರುವ ಡಾಂಬರ್ ರಸ್ತೆಯ ಕ್ಯಾರಿಯೇಜ್ ಭಾಗದಲ್ಲಿ ಒಳಬರುವ ಎಲ್ಲಾ ಮೂಲಸೌಕರ್ಯ ವ್ಯವಸ್ಥೆಗಳಾದ ನೀರು ಸರಬರಾಜು ಕೊಳವೆ, ಒಳಚರಂಡಿ ಕೊಳವೆ ಹಾಗೂ ಕೇಬಲ್‌ಗಳನ್ನು ನಿಗದಿತ ಬಫರ್ ಜೋನ್ ಭಾಗಕ್ಕೆ ಸ್ಥಳಾಂತರಿಸಬೇಕಾಗಿರುತ್ತದೆ. ಟೆಂಡರ್ ಶುವರ್ ಪ್ರಕಾರ ರಸ್ತೆ ವೈಟ್ ಟಾಪಿಂಗ್ ಮಾಡಿದ ನಂತರ ಯಾವುದೇ ಕಾರಣಕ್ಕೂ, ರಸ್ತೆಯನ್ನು ಕತ್ತರಿಸಲು ಅಥವಾ ಇತರ ಯಾವುದೇ ಹೆಚ್ಚುವರಿ ಕಾಮಗಾರಿಯನ್ನು ಕೈಗೊಳ್ಳಲು ಅವಕಾಶವಿರುವುದಿಲ್ಲ.
ಡಾಂಬರ್ ರಸ್ತೆಯು ಸ್ವಾಭಾವಿಕವಾಗಿ ಫ್ಲೆಕ್ಸಿಬಲ್(ಮೆದುವಾದ) ಪೇವರ್ ಆಗಿದ್ದು, ಕಂಪನ ತೀರಾ ಕಡಿಮೆ ಇರುತ್ತದೆ. ವಾಹನ ಟೈರ್‌ಗಳಿಗೆ ರಸ್ತೆ ಮೇಲೆ ಹಿಡಿತ ಹೆಚ್ಚಾಗಿರುತ್ತದೆ. ಇದರಿಂದ ಸುರಕ್ಷತೆ ಹೆಚ್ಚು ಇರುತ್ತದೆ. ಟೈರ್‌ಗಳ ಬಾಳಿಕೆ ಹೆಚ್ಚಾಗುವುದರೊಂದಿಗೆ, ವಾಹನದ ಬಿಡಿ ಭಾಗಗಳ ಸವೆಯುವಿಕೆ ಗಣನೀಯವಾಗಿ ಕಡಿಮೆ ಇರುತ್ತದೆ.
ಆದರೆ ವೈಟ್ ಟಾಪಿಂಗ್ ಅಳವಡಿಕೆಯಿಂದ ರಸ್ತೆಯ ಪೇವರ್ ರಿಜಿಡ್ (ಗಡಸು) ಆಗಿದ್ದು ಕಂಪನ ಬಹಳ ಹೆಚ್ಚಾಗಿರುತ್ತದೆ. ವೈಟ್ ಟಾಪಿಂಗ್‌ನಲ್ಲಿ ರಸ್ತೆ ಹಿಡಿತ ಹೆಚ್ಚಿಸಲು ನಿಯಮಿತ ಅಂತರದಲ್ಲಿ ಗ್ರೂವ್ ಕಟಿಂಗ್ ಮಾಡಲಾಗುತ್ತದೆ. ಈ ರೀತಿಯ ಒರಟು ಮೇಲ್ಮೈಯಿಂದಾಗಿ ಟೈರ್‌ಗಳ ಸವೆಯುವಿಕೆ ಹೆಚ್ಚಾಗಿ ಬಾಳಿಕೆ ಅವಧಿ ಗಣನೀಯವಾಗಿ ಕಡಿಮೆಯಾಗುತ್ತದೆ. ಹಾಗೂ ಅಽಕ ಕಂಪನದಿಂದ ವಾಹನದ ಬಿಡಿಭಾಗಗಳ ಸವೆಯುವಿಕೆ ಹೆಚ್ಚಾಗಿರುತ್ತದೆ.
ರಸ್ತೆಯಲ್ಲಿ ಮಾಡಲಾದ ಗ್ರೂವ್ ಕಟಿಂಗ್ ಭಾಗ ಸವೆದು ಹೊರಬರುವ ಮರಳು ಮತ್ತು ಮಳೆಗಾಲದಲ್ಲಿ ರಸ್ತೆಯ ಹಿಡಿತ ಕಡಿಮೆಯಾಗಿ ಉಂಟಾಗುವ ಜಾರುವಿಕೆಯಿಂದ ಅಪಘಾತಗಳ ಸಂಭವನೀಯತೆ ಹೆಚ್ಚಾಗಿರುತ್ತದೆ.
ಡಾಂಬರ್ ರಸ್ತೆಯ ಹಾಗೆ ವೈಟ್ ಟಾಪಿಂಗ್ ರಸ್ತೆಯಲ್ಲಿ ವಾಹನ ಚಾಲನೆ ಆಹ್ಲಾದಕರ ಹಾಗೂ ಸುಖಮಯವಾಗಿರುವುದಿಲ್ಲ. ಮುಖ್ಯವಾಗಿ ರಸ್ತೆ ನಿರ್ಮಾಣದಲ್ಲಿ ಇಂಜಿನಿಯರಿಂಗ್ ನೈತಿಕತೆ, ನೀತಿ, ನಿಯಮ ಹಾಗೂ ಗುಣಮಟ್ಟವನ್ನು ಕಾಪಾಡಿದಲ್ಲಿ, ರಸ್ತೆಯ ನಿರೀಕ್ಷಿತ ಬಾಳಿಕೆಯನ್ನು ಖಚಿತಪಡಿಸಬಹುದಾಗಿರುತ್ತದೆ.
ಪ್ರಸ್ತುತ ಮೈಸೂರು ನಗರದಲ್ಲಿ ಹಾಲಿ ಇರುವ ಡಾಂಬರ್ ರಸ್ತೆಗಳು ದುಸ್ಥಿತಿಯಲ್ಲಿವೆಯೇ ಹಾಗೂ ವೈಟ್ ಟಾಪಿಂಗ್ ಮಾಡಲು ಟೆಂಡರ್ ಶುವರ್ ನಿಬಂಧನೆಗಳಂತೆ ಯಾವ ಮಾನದಂಡಗಳು ಹಾಗೂ irc sp ೭೬ ೨೦೧೫ ಅನುಸರಿಸಿ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಅನುಷ್ಠಾನ ಪ್ರಾಽಕಾರವು ಸಾರ್ವಜನಿಕ ತಿಳಿವಳಿಕೆ ನೀಡಲು ಕ್ರಮವಹಿಸಬೇಕಿರುತ್ತದೆ.
(ಲೇಖಕರು, ನಿವೃತ್ತ ಉಪಮುಖ್ಯ ಅಭಿಯಂತರು)




