Mysore
27
overcast clouds

Social Media

ಸೋಮವಾರ, 06 ಜುಲೈ 2026
Light
Dark

ಒಡನಾಡಿ ಸ್ಟ್ಯಾನ್ಲಿ ಅವರ ವಾರದ ಅಂಕಣ ; ಕೋಟಿಗೊಬ್ಬರೇ ಕೋಟಿ….!

ʻಬದುಕಿ ನಿರ್ಗಮಿಸುವುದಾದರೆ ಕೋಟಿಯವರಂತೆ ಬಾಳಿ ಹೊರಡಬೇಕುʼ

ಕನ್ನಡದ ಪಾಪು, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರು ಸಂಪಾದಕರಾಗಿದ್ದ ಧಾರವಾಡದ ‘ವಿಶ್ವವಾಣಿ’ ಪತ್ರಿಕೆಯ ಸಾಮಾನ್ಯ ವರದಿಗಾರರೊಬ್ಬರು ಮುಂದೊಂದು ದಿನ “ನನ್ನ ಜೀವಮಾನದಲ್ಲಿ ಇವರಂತಹ ಪತ್ರಕರ್ತನನ್ನು ನೋಡಿಲ್ಲ” ಎಂದು ಪಾಪುರವರೇ ಉದ್ಗರಿಸುವ ಮಟ್ಟಿಗೆ ಪತ್ರಿಕಾ ಧರ್ಮವನ್ನು ತನ್ನ ಕೆಂಪಂಗಿ ಹೊದ್ದ ಎದೆಯ ಗೂಡಲ್ಲಿ ಕಾಪಿಟ್ಟು ಬದುಕಿದವರು ರಾಜಶೇಖರ ಕೋಟಿ! ಹಿರಿಯರೂ, ಪತ್ರಿಕಾರಂಗದಲ್ಲಿ ‘ಆಂದೋಲನ’ದ ಪರಮ ಪ್ರತಿಸ್ಪರ್ಧಿ ಎಂದೆನಿಸಿದ್ದ, ಮೈಸೂರು ಮಿತ್ರದ ಸಂಪಾದಕರಾಗಿದ್ದ ಕೆ. ಬಿ. ಜಿ. ಅವರ ಪ್ರಕಾರ ಕೋಟಿಯೊಬ್ಬರು “ಕ್ರುಸೇಡರ್” ವರ್ಗದ ಸಂಪಾದಕ. ತತ್ವಬದ್ಧ ಧೈರ್ಯಶಾಲಿ, ಸರಳ ಸಜ್ಜನ ಸಮಾಜವಾದಿ! ಹೀಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪ್ರಾಮಾಣಿಕ ಸಂಸ್ಮರಣೆಗೆ ಪಾತ್ರರಾಗುವ ಭಾಗ್ಯ ಎಲ್ಲರಿಗೂ ಲಭಿಸಲಾರದು. ಅವರು ನಮ್ಮನ್ನಗಲಿದ ದಿನ ಕರುನಾಡಿನ ಅಪಾರ ಜನಸಾಗರ ಹರಿಸಿದ ಅಶ್ರುತರ್ಪಣ, ಗೌರವಾದರವು ಕೋಟಿಯವರ ಮೂಲಕ ಸಮಸ್ತ ಪತ್ರಿಕಾರಂಗಕ್ಕೆ ಸಂದ ಗೌರವವಾಗಿತ್ತು. ಹಾಗೆ ನುಡಿದಂತೆ ನಡೆದು, ಜೀವಪರವಾಗಿ ಮತ್ತು ಸತ್ಯಪರವಾಗಿ “ಇದ್ದದ್ದು ಇದ್ದಾಂಗ” ಪ್ರಕಟಿಸುತ್ತಾ ಹೆಸರಿಗೆ ತಕ್ಕಂತೆ ಬಾಳಿದ್ದವರು ರಾಜಶೇಖರ ಕೋಟಿ! ಈ ಭಾಗ್ಯ ಒಂದು ಕಾಲಘಟ್ಟದಲ್ಲಿ ಎಲ್ಲೋ ಕೋಟಿ ಜನರಲ್ಲಿ ಕೋಟಿಯಂತಹವರೊಬ್ಬರಿಗೆ ಮಾತ್ರ ಸಿಕ್ಕಿದ್ದರೆ, ಅದು ಅವರ ವೃತ್ತಿ ಮತ್ತು ಬದುಕಿನ ಧ್ಯಾನದ ಫಲವೆಂದರೆ ಅತಿಶಯೋಕ್ತಿಯಾಗಲಾರದು. ಅವರಷ್ಟು ಪ್ರಮಾಣದಲ್ಲಿ ಕರುನಾಡಿನ ನೆಲ, ಜಲ, ಭಾಷೆ, ಪ್ರಕೃತಿ, ಜಾತಿ ವಿನಾಶ, ರೈತ, ದಲಿತ, ಮಹಿಳಾ ಸಮುದಾಯಗಳ ರಕ್ಷಣೆಗೆ ತೊಡಗಿಸಿಕೊಂಡಿದ್ದ ಪತ್ರಕರ್ತ ಮತ್ತೊಬ್ಬರಿಲ್ಲ. ಅವರಿಗೆ ಮೈಸೂರು ರೇಸ್ ಕೋರ್ಸ್ ನಿಭಾಯಿಸಲು ಬರುತ್ತಿತ್ತು. ಹಾಗೆಯೇ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಚೈತನ್ಯವೂ ಇತ್ತು. ಹಾಗಾಗಿ ಅವರ ಅಂತಿಮ ಯಾತ್ರೆಯಲ್ಲಿ ಸಿಕ್ಕ ಪ್ರೀತಿಪೂರ್ವಕ ವಿದಾಯವನ್ನು ಕಂಡು “ಬದುಕಿ ನಿರ್ಗಮಿಸುವುದಾದರೆ ಕೋಟಿಯವರಂತೆ ಬಾಳಿ ಹೊರಡಬೇಕು” ಎಂದು ನನ್ನಂತೆಯೇ ಪ್ರತಿಯೊಬ್ಬರಿಗೂ ಅನಿಸಿದ್ದರೆ ಆಶ್ಚರ್ಯವೇನಿಲ್ಲ.

ಪರಶು ಹಾಗೂ ನನ್ನ ವೈಯಕ್ತಿಕ ಬದುಕಿನಲ್ಲಿ ಮತ್ತು ಒಡನಾಡಿಯ ಪಯಣದಲ್ಲಿ ಕೋಟಿಯವರ ಪಾತ್ರ ಬಹಳ ಹಿರಿದಾದುದು. ೩೭ ವರ್ಷಗಳ ಹಿಂದೆ ನಮಗೆ ‘ಆಂದೋಲನ’ ಪತ್ರಿಕೆಯ ಸಖ್ಯ ದೊರೆಯದೇ ಹೋಗಿದ್ದಲ್ಲಿ, “ಲೋ ಚೆನ್ನಾಗಿ ಬರೀತೀರಾ. ಬರಿರೋ” ಎಂದು ರಾಮಣ್ಣ (ಹಾಡುಪಾಡು ರಾಮು) ಅಂದು ನಮ್ಮ ಹಿಂದೆ ದುಂಬಾಲು ಬೀಳದೇ ಹೋಗಿದ್ದರೆ, ಅದರ ಪ್ರಯುಕ್ತ ನಾವು ಮೈಸೂರಿನ ಜಟಕಾಗಳ ಹಾಡು – ಪಾಡು ಕುರಿತು ಲೇಖನ ಬರೆಯಲು ಹೊರಡದ್ದಿದ್ದರೆ, ಪ್ರಾಯಶಃ ಒಡನಾಡಿ ಸಂಸ್ಥೆ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ ಎಂಬುದು ಇಂದಿಗೂ ನಮ್ಮ ಬಲವಾದ ನಂಬಿಕೆ. ಅಷ್ಟೇ ಅಲ್ಲ, ರಾಜಶೇಖರ ಕೋಟಿಯವರು ನಮ್ಮ ದಿನನಿತ್ಯದ ಹೋರಾಟದ ಬದುಕಿನ ಭಾಗವಾಗಿ, ಅವರ ಉಸಿರಿರುವವರೆಗೂ ಸಮಚಿತ್ತದೊಡನೆ ಒಡನಾಡಿಯ ಭಾಗವಾಗಿ ಉಳಿದರು. ಅದು ಕಾಕತಾಳಿಯವೋ, ಪ್ರಕೃತಿಯ ಪೂರ್ವ ನಿರ್ಧಾರವೋ ತಿಳಿಯದು. ಕೋಟಿಯವರನ್ನು ಬಿಟ್ಟರೆ ಅಷ್ಟು ಸುದೀರ್ಘವಾಗಿ ನಮ್ಮ ಒಡನಾಡಿಯಾಗಿದ್ದು ರಾಜಕೀಯ ಮುತ್ಸದ್ದಿ ಶ್ರೀನಿವಾಸ ಪ್ರಸಾದ್ ಅವರು ಮಾತ್ರ! ಅಂದಿನ ದುರಿತ ದಿನಗಳಲ್ಲಿ ಒಡನಾಡಿಯ ನೊಂದ ಮಹಿಳೆಯರ ಪರವಾದ ನಿಲುವನ್ನು ಭಸ್ಮ ಮಾಡಲು ಭಯಾನಕ ಸರಣಿ ಚಿತಾವಣೆಗಳು ಹೆಣೆಯಲ್ಪಡುತ್ತಿದ್ದವು ಹಾಗೂ ಬಹುತೇಕ ಸಂದರ್ಭಗಳಲ್ಲಿ ಅವುಗಳ ಉಸ್ತುವಾರಿ ಭ್ರಷ್ಟ ಅಧಿಕಾರಿಗಳದ್ದೇ ಆಗಿತ್ತು.

ಈ ಸಂದರ್ಭಗಳು ಕೋಟಿಯವರ ನಿದ್ರೆ ಕೆಡಿಸಿದ್ದವು. ಸುಡುವ ಈ ದ್ವೇಷಾಗ್ನಿಯಿಂದ ನಮ್ಮನ್ನು ಬಚಾವ್ ಮಾಡಲು ಕೋಟಿಯವರು ತಮ್ಮ ಅನಾರೋಗ್ಯದ ನಡುವೆಯೂ ತಡರಾತ್ರಿಗಳಲ್ಲಿ ತಮ್ಮನ್ನು ಇನ್ನಿಲ್ಲದಂತೆ ತೊಡಗಿಸಿಕೊಳ್ಳುತ್ತಿದ್ದುದನ್ನು ನಾವೆಂದಿಗೂ ಮರೆಯಲಾರೆವು.

ರಾಜಶೇಖರ ಕೋಟಿ, ಪ್ರೊ. ಕೆ. ರಾಮದಾಸ್, ರಾಜ್ಯ ರೈತ ಸಂಘದ ಪ್ರೊ. ನಂಜುಂಡಸ್ವಾಮಿ, ಪ್ರೊ. ಜಿ. ಎಚ್. ನಾಯಕ, ಹಿರಿಯ ಗಾಂಽವಾದಿ ಮೇಲುಕೋಟೆಯ ಸುರೇಂದ್ರ ಕೌಲಗಿ, ಸಮತಾ ವೇದಿಕೆಯ ಮೀರಕ್ಕ, ಹಾಡು – ಪಾಡು ರಾಮಣ್ಣ, ಅಂತಾರಾಷ್ಟ್ರೀಯ ಕಲಾವಿದ ಹಾಗೂ ವಾಸ್ತುಶಿಲ್ಪಿ ಕೆ. ಟಿ. ಶಿವಪ್ರಸಾದ್. . . ಹೀಗೆ ಅನೇಕ ಸಾಮಾಜಿಕ ಶಿಕ್ಷಕರು ನಮ್ಮ ಬೆಳವಣಿಗೆಯ ಹಂತದಲ್ಲಿ ಲಭಿಸಿದ್ದುದು ನಮ್ಮ ಪುಣ್ಯವಾಗಿತ್ತು. ಈ ಪ್ರಾತಃಸ್ಮರಣೀಯರು ನಮ್ಮ ಬದುಕಿನಲ್ಲಿ ನೈತಿಕ ಬೇಲಿಯಾಗಿಯೂ ಕಾರ್ಯ ನಿರ್ವಹಿಸಿದ್ದರಿಂದಲೇ ನಮ್ಮಲ್ಲಿ ಅವರ ಕೆಲವು ಅಂಶಗಳು ಎದೆಯಲ್ಲಿ ಬಿತ್ತಲ್ಪಟ್ಟವು. ನಾವು ಅಲೆಗಳ ಹೊಡೆತಕ್ಕೆ ತೇಲಿ ಹೋಗದೆ ಗಟ್ಟಿಯಾಗಿ ಉಳಿದುಕೊಂಡೆವು.

ಕೋಟಿಯವರ ಎದೆಯಲ್ಲಿ ಸದಾ ಹೊತ್ತಿ ಉರಿಯುತ್ತಿದ್ದ ಕೆಂದೊಂದಿಗಳಲ್ಲಿ ಅವರ ಜಾತ್ಯತೀತ ನಿಲುವು ಅತ್ಯಂತ ಪ್ರಕಾಶಮಾನವಾದುದು. ಅಂರ್ತಜಾತಿ, ಅಂರ್ತಧರ್ಮೀಯ ಸರಳ ವಿವಾಹಗಳ ಮೂಲಕವಷ್ಟೇ ಸಾಮಾಜಿಕ ಬದಲಾವಣೆ ಸಾಧ್ಯವೆಂದು ಅರಿತಿದ್ದ ಕೋಟಿಯವರು, ಈ ನಿಟ್ಟಿನಲ್ಲಿ ತಮ್ಮನ್ನರಸಿ ಬರುತ್ತಿದ್ದ ಅವಕಾಶಗಳನ್ನು ಎಂದಿಗೂ ಉಪೇಕ್ಷಿಸಿದವರಲ್ಲ. ಹಾಗಾಗಿ ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೆ. ಅವರ ನಂಬಿಕೆಯಂತೆಯೇ ನಾನು ಮತ್ತು ಕುಮುದಿನಿ ಅತ್ಯಂತ ಸಹಜವಾಗಿ, ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟೆವು. ಕಾಲಾಂತರದಲ್ಲಿ ಕುಮುದಿನಿ ತಮ್ಮ ವಿ ಕೇರ್ ಸಂಸ್ಥೆಯ ಮೂಲಕ ಪೌರಕಾರ್ಮಿಕ ಸಮುದಾಯದ ಸಶಕ್ತತೆ ಮತ್ತು ಅವರ ಘನತೆಯ ಜೀವನಕ್ಕಾಗಿ ನಡೆಸುತ್ತಿದ್ದ ಚಟುವಟಿಕೆಗಳು ಅವರಿಗೆ ಹಿತ ನೀಡುವಂತಹುಗಳಾಗಿದ್ದವು ಅಲ್ಲದೆ ಆ ಕಾಲೋನಿಗಳಿಗೆ ಶೃದ್ಧೆಯಿಂದ ಬಂದು ಕಾಲೋನಿಯವರು ತಯಾರಿಸಿದ ಭೋಜನವನ್ನು ಅವರೊಂದಿಗೆ ಪಂಕ್ತಿಯಲ್ಲಿ ಸ್ವೀಕರಿಸುತ್ತಿದ್ದರು. ಒಡನಾಡಿಯೊಂದರಲ್ಲೇ ಕೋಟಿಯವರು ಸುಮಾರು ನೂರಕ್ಕೂ ಹೆಚ್ಚು ಸರಳ ವಿವಾಹಗಳನ್ನು ಸಾಕ್ಷೀಕರಿಸಿದ್ದರು.

ತಮ್ಮ ನಂಬಿಕೆಗಳಿಗೆ ಜೀವ ತುಂಬುವ ಪ್ರತೀ ಸರಳ ವಿವಾಹದಲ್ಲೂ ಕೋಟಿಯವರು ತಮ್ಮೆಲ್ಲಾ ಸಮಸ್ಯೆಗಳನ್ನು ಬದಿಗಿಟ್ಟು ಮಗುವಿನಂತೆ ತಮ್ಮ ಪತ್ನಿ ನಿರ್ಮಲಾರವರೊಂದಿಗೆ ಸೇರಿ ಸಂಭ್ರಮಿಸುತ್ತಿದ್ದುದನ್ನು ನಾವು ಕಣ್ಣಾರೆ ಕಂಡವರಾಗಿದ್ದೇವೆ. ಹಾಗಾಗಿ ಪರಶು ಮತ್ತು ನಾನು ವಿಶೇಷ ಆಸ್ಥೆ ವಹಿಸಿ, ಒಡನಾಡಿಯ ಆವರಣದಲ್ಲಿ ರಾಜಶೇಖರ ಕೋಟಿಯವರ ಹೆಸರಿನಿಂದ ಕರೆಯಲ್ಪಡುವ ವಿವಾಹ ಸಭಾಂಗಣವನ್ನು ಈ ಸರಳ ಸಂಭ್ರಮದ ಅಗತ್ಯವುಳ್ಳವರಿಗಾಗಿ ತೆರೆದಿಡಲು ನಿರ್ಧರಿಸಿ, ಕಟ್ಟಡದ ಮುಂಭಾಗ ಕೋಟಿಯವರ ಪುತ್ತಳಿಯೊಂದನ್ನು ಪ್ರತಿಷ್ಠಾಪಿಸಿ ಲೋಕಾರ್ಪಣೆ ಮಾಡಿದೆವು.

ಪತ್ರಿಕೋದ್ಯಮ, ಸಾಮಾಜಿಕ ಹಾಗೂ ಭಾಷಾ ಚಳವಳಿಗಳಲ್ಲಿ ಸಾಮಾಜಿಕ ಬದ್ಧತೆಯಿಂದ ತೊಡಗಿಸಿಕೊಂಡಿದ್ದ ಕೋಟಿಯವರನ್ನು ನೆನೆಯುತ್ತಲೇ ಅಂದು ‘ಪತ್ರಿಕೋದ್ಯಮ ಹಾಗೂ ಸಾಮಾಜಿಕ ಜವಾಬ್ದಾರಿ’ ಎಂಬ ವಿಷಯವಾಗಿ ಸಮಾಲೋಚನೆಯನ್ನು ಏರ್ಪಡಿಸಿದ್ದೆವು. ಇದೊಂದು ಸಾಮಾಜಿಕ ಜವಾಬ್ದಾರಿ, ಹಿರಿಯ ಸಹೋದರರಂತಿದ್ದ ಕೋಟಿಯವರಿಗೆ ನಾವು ನೀಡಬೇಕಾಗಿದ್ದ ಋಣ ಸಂದಾಯದ ಒಂದು ಸಣ್ಣ ಭಾಗ ಮತ್ತು ನಾವು ತೋರಬಹುದಾದ ಪ್ರೀತಿಪೂರ್ವಕ ಗೌರವವೆಂದೇ ತಿಳಿದಿದ್ದೇವೆ.

ರಾಜಶೇಖರ ಕೋಟಿಯವರ ಅನಿರೀಕ್ಷಿತ ನಿರ್ಗಮನವು ಒಡನಾಡಿಯ ಪಾಲಿಗೆ ನಿರ್ವಾತವನ್ನೇ ಸೃಷ್ಟಿಸಿತು. ಆದಾಗ್ಯೂ, ಸದಾ ಕಾಡುವ ಅವರ ನೆನಪುಗಳು ಹಾಗೂ ಅವರು ನಂಬಿ ಬದುಕುತ್ತಿದ್ದ ಮೌಲ್ಯಗಳನ್ನು ಸ್ಛೂರ್ತಿಯನ್ನಾಗಿಸಿಕೊಂಡು ಒಡನಾಡಿ ಮುಂದೆ ಸಾಗುತ್ತಿದೆ.

ನಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನಕ್ಕೆ ತಮ್ಮ ಬದುಕನ್ನೇ ನಿದರ್ಶನವಾಗಿಸಿ, ಪ್ರೀತಿ, ಸಹಾನುಭೂತಿ, ಬದ್ಧತೆಗಳಂತಹ ಮೌಲ್ಯಗಳನ್ನು ತುಂಬಿ, ಪತ್ರಿಕಾ ವೃತ್ತಿಯನ್ನೇ ಆರಾಧಿಸುತ್ತಾ, ಅಜಾತಶತ್ರುವಾಗಿ ಬದುಕಿ, ಭೌತಿಕವಾಗಿ ನಮ್ಮನ್ನಗಲಿದರೂ, ಬೌದ್ಧಿಕವಾಗಿ, ಜನಮಾನಸದ ಗುಡಿಗಳಲ್ಲಿ, ನಿತ್ಯ ಜರುಗುವ ಹೋರಾಟಗಳ ಎದೆಯ ಆಶಯಗಳಲ್ಲಿ ಉಸಿರಾಗಿ ಸಲ್ಲುತ್ತಿರುವ, ಸಮಾಜಕ್ಕಾಗಿ ನೈತಿಕವಾಗಿ ಬಾಳಿ, ಹೆಸರಿಗೆ ತಕ್ಕಂತೆ ಬದುಕಿದ ಕೋಟಿಯವರಂತಹ ಹಿರಿಯ ಚೇತನಕ್ಕೆ ಅವರು ಉಳಿಸಿ ಹೋದ ಆಶಯಗಳನ್ನು ಚಿಗುರಿಸುವುದನ್ನು ಹೊರತುಪಡಿಸಿ ಬದಲಿಗೆ ನಾವೇನು ನೀಡಬಲ್ಲೆವು?

Tags:
error: Content is protected !!