ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ ಮೈಸೂರಿನ ಮುಖ್ಯ ರೈಲು ನಿಲ್ದಾಣದಿಂದ ಬೆಳಿಗ್ಗೆ ೮.೩೫ ಕ್ಕೆ ಹೊರಡುವ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಗಾಡಿಯಲ್ಲಿ, ಮೊದಲೇ ಕಾಯ್ದಿರಿಸಿದ ಹವಾನಿಯಂತ್ರಿತ ಬೋಗಿಗಳನ್ನು ಜೋಡಿಸಿರುತ್ತಾರೆ ಎಂಬುದು ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ತಿಳಿದಿರುವುದಿಲ್ಲ.
ಹೀಗಾಗಿ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ರೈಲು ಗಾಡಿಯಲ್ಲಿ ಹವಾನಿಯಂತ್ರಿತ ಬೋಗಿಗಳನ್ನು ರೈಲು ಎಂಜಿನ್‌ನ ಹಿಂಭಾಗದಲ್ಲಿ ಅಥವಾ ರೈಲು ಗಾಡಿಯ ಕೊನೆಯಲ್ಲಿ ಜೋಡಣೆ ಮಾಡಿದರೆ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಸಾಮಾನ್ಯವಾಗಿ ರೈಲು ಪ್ರಯಾಣಿಕರು ಪ್ಲಾಟ್ ರ್ಮ್ ನ ಮಧ್ಯದಲ್ಲಿ ನಿಂತಿರುತ್ತಾರೆ. ಈ ರೈಲು ಗಾಡಿಯು ಮುಖ್ಯ ರೈಲು ನಿಲ್ದಾಣದಲ್ಲಿ ಕೇವಲ ಐದು ನಿಮಿಷಗಳು ಮಾತ್ರ ನಿಲ್ಲುವುದರಿಂದ ಸಾಮಾನ್ಯ ವರ್ಗದ ಪ್ರಯಾಣಿಕರು ಯಾವ ಬೋಗಿಯನ್ನು ಹತ್ತಬೇಕು ಎಂದು ಪರದಾಡುತ್ತಿರುತ್ತಾರೆ ( ಈ ರೈಲು ಗಾಡಿಯು ಅಶೋಕ್‌ಪುರಂ ರೈಲು ನಿಲ್ದಾಣವನ್ನು ಬೆಳಿಗ್ಗೆ ೮.೨೦ ಕ್ಕೆ ಬಿಟ್ಟು ಮುಖ್ಯ ರೈಲು ನಿಲ್ದಾಣಕ್ಕೆ ೮.೩೦ ಕ್ಕೆ ಬಂದು , ೮.೩೫ ಕ್ಕೆ ಹೊರಡುತ್ತದೆ). ಸಾಮಾನ್ಯವಾಗಿ ಎಲ್ಲ ರೈಲು ಗಾಡಿಗಳಲ್ಲಿ ಮಧ್ಯದ ಐದಾರು ಬೋಗಿಗಳು ಕಾಯ್ದಿರಿಸಿದ ಹವಾನಿಯಂತ್ರಿತ ಬೋಗಿಗಳಾಗಿರುತ್ತವೆ. ಇದು ಆಗಾಗ್ಗೆ ಪ್ರಯಾಣ ಮಾಡುವ ಪ್ರಯಾಣಿಕರಿಗಷ್ಟೇ ತಿಳಿದಿರುತ್ತದೆ, ಕೆಲವು ಸಾಮಾನ್ಯ ಪ್ರಯಾಣಿಕರು ಬೋಗಿಯನ್ನು ಹುಡುಕಲು ಸಮಯ ಸಾಲದೇ ಸಮಸ್ಯೆ ಉಂಟಾಗುತ್ತಿದೆ.ಈ ಕಾರಣಕ್ಕಾಗಿ ಕಾಯ್ದಿರಿಸಿದ ಹವಾನಿಯಂತ್ರಿತ ಬೋಗಿಗಳನ್ನು ರೈಲಿನ ಕೊನೆಗೆ ಹಾಕುವುದರಿಂದ ಸಾಮಾನ್ಯ ವರ್ಗದ ರೈಲು ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
– ಬೂಕನಕೆರೆ ವಿಜೇಂದ್ರ, ಮೈಸೂರು




