Mysore
26
overcast clouds

Social Media

ಶನಿವಾರ, 04 ಜುಲೈ 2026
Light
Dark

ಮನುಷ್ಯ ಕುಲದ ಪ್ರಜ್ಞಾವಂತಿಕೆ ವಿಕಾಸಕ್ಕೆ ಗಾಂಧೀಜಿ ಕೈಮರ

ಗಾಂಧಿಜಿಯವರ ಜೀವನ ಚರಿತ್ರೆ ದೇಶ, ಖಂಡಗಳ ಗಡಿ ದಾಟಿ ಮನುಷ್ಯರೆಲ್ಲರ ಒಳಿತನ್ನು ಬಯಸುವ ಬಯಕೆಯನ್ನು ಭಾವಿಸಿ, ಜೀವಿಸಿ ತೋರಿಸಿದವರ ಪುಣ್ಯ ಕಥೆ. ಒಳಿತಿಗೆ ಎದುರಾಗುವ ಎಲ್ಲ ವಿಘ್ನಗಳನ್ನು ಧೈರ್ಯವಾಗಿ ಎದುರಿಸಿ ನಿಂತವರು ಗಾಂಧಿ. ಮನುಷ್ಯ ಕುಲದ ಪ್ರಜ್ಞಾವಂತಿಕೆ ವಿಕಾಸವಾಗಬೇಕಾದ ದಿಕ್ಕಿಗೆ ಗಾಂಧಿಜಿಯ ಜೀವನ ಒಂದು ಕೈಮರ. ಪುಣ್ಯವಶಾತ್ ಗಾಂಧಿಜಿಯ ಜೀವಿತದ ಕಾಲದಲ್ಲಿ ಸತ್ಯಕ್ಕಾಗಿ ಜೀವನವನ್ನೇ ಪಣಕ್ಕೊಡ್ಡಿ ಗಟ್ಟಿಯಾಗಿ ನಿಲ್ಲಲು ಅವಕಾಶವಿತ್ತು. ಅವರ ಆತ್ಮಕಥೆಗೆ ನೂರು ವರ್ಷವೇನು ಸಾವಿರ ವರ್ಷಗಳೇ ಆದರೂ ಅದು ಸತ್ಯಕ್ಕಾಗಿ ನಿಲುವ ಛಲವ ದೀಪ್ತಗೊಳಿಸು ಎನ್ನೊಳು ಎಂಬ ಹಂಬಲವನ್ನು ಮತ್ತೆ ಮತ್ತೆ ಮೊರೆಯುವ, ಮನುಕುಲದ ಒಳಿತುಗಳ ಕಥೆ. ಇದಕ್ಕೆ ಸರಿಸಾಟಿಯಾದದ್ದು ನಮಗೆ ಮತ್ತೆಲ್ಲೂ ಸಿಗುವುದಿಲ್ಲ.

ದ್ವೇಷದ ನಡುವೆ ಪ್ರೀತಿಯನ್ನು ಎತ್ತಿ ಹಿಡಿಯುವ, ವೈರಿಗಳ ನಡುವೆ ಸ್ನೇಹವನ್ನು ಬಿತ್ತುವ, ಸ್ವಾರ್ಥಿಗಳ ನಡುವೆ ನಿಸ್ವಾರ್ಥ ನಿಲುವನ್ನು ಗೆಲ್ಲುವಂತೆ ಮಾಡಬಲ್ಲ ಆದರೂ ಮಗುವಿನಂತೆ ಸರಳವಾಗಿ ಬದುಕಿದ ಮಹಾತ್ಮನ ಆತ್ಮಕಥೆಗೆ ನೂರು ವರ್ಷ ಆಗಿರುವುದು ಸಂಭ್ರಮಿಸಬೇಕಾದ ವಿಷಯ. ಗಾಂಧಿಯ ಬದುಕಿನಿಂದ ಸೂರ್ತಿ ಪಡೆಯದೆ ಬದುಕುವುದು ಆತ್ಮವಂಚಕರಿಗೆ ಮಾತ್ರ ಸಾಧ್ಯ. ಇಂತಹ ಆತ್ಮವಂಚಕರೇ ನಮ್ಮ ನಡುವೆ ಹೆಚ್ಚಿರಬಹುದು. ಆದರೇನು? ಗಾಂಧಿಯ ಬೆಳಕನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದು ಮತ್ತೆ ಮತ್ತೆ ನಮ್ಮ ನಾಡನ್ನು ಬೆಳಗುತ್ತಲೇ ಇರುತ್ತದೆ.

-ಜಿ.ಎಸ್.ಜಯದೇವ, ದೀನಬಂಧು ಟ್ರಸ್ಟ್, ಚಾಮರಾಜನಗರ 

Tags:
error: Content is protected !!