ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ನೀಡಿದ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹಣ, ಆಭರಣಗಳ ಕಳ್ಳತನ ಪ್ರಕರಣ
ರಾಮಭಕ್ತರ ವಿಶ್ವಾಸವನ್ನು ಮರು ಸ್ಥಾಪಿಸುವ ಕೆಲಸವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮಾಡಬೇಕಿದೆ.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ನೀಡಿದ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹಣ ಹಾಗೂ ಚಿನ್ನ, ಬೆಳ್ಳಿ, ಮುತ್ತು, ರತ್ನ, ವಜ್ರದಆಭರಣಗಳ ಕಳ್ಳತನ ನಡೆದಿರುವ ಪ್ರಕರಣ ದೇಶದಲ್ಲಿ ಹಿಂದುತ್ವದ ರಾಜಕಾರಣ ಮಾಡುವ ಬಿಜೆಪಿ ಹಾಗೂ ಅದರ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ಕ್ಕೆ ಬಹುದೊಡ್ಡ ಅಗ್ನಿ ಪರೀಕ್ಷೆ.ಪ್ರಭು ಶ್ರೀರಾಮನ ಮಂದಿರಕ್ಕಾಗಿ ಶಿಲಾ ಪೂಜೆ ಆದಾಗಿನಿಂದ ಭವ್ಯ ಮಂದಿರದ ಉದ್ಘಾಟನೆಯಾಗುವವರೆಗೆ ಹಾಗೂ ಉದ್ಘಾಟನೆಯ ನಂತರದಿಂದ ಇಲ್ಲಿಯವರೆಗೆ ಕೋಟ್ಯಂತರ ಜನರು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಸಾವಿರಾರು ಕೋಟಿ ರೂಪಾಯಿ ದೇಣಿಗೆಯನ್ನು ಹಾಗೂ ಲೆಕ್ಕವಿಲ್ಲದಷ್ಟು ಆಭರಣಗಳನ್ನು ಮಂದಿರಕ್ಕೆ ಕಾಣಿಕೆಯಾಗಿ ಅರ್ಪಿಸಿದ್ದಾರೆ. ಆದರೆ, ಆ ದೇಣಿಗೆಯನ್ನು ಮಂದಿರದ ಆಡಳಿತ ಜವಾಬ್ದಾರಿ ಹೊತ್ತಿರುವ ‘ರಾಮ ಭಕ್ತರ ವೇಷದ ಖದೀಮರು’ ನುಂಗಿ ನೀರು ಕುಡಿದಿದ್ದಾರೆ. ಕೋಟ್ಯಂತರ ರಾಮ ಭಕ್ತರ ಭಾವನೆ, ನಂಬಿಕೆಗಳೊಂದಿಗೆ ಚೆಟವಾಡಿದ್ದಾರೆ ಎಂಬುದು ಈಗಷ್ಟೇ ಗೊತ್ತಾಗಿದೆ.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಜಾಗವೇ ಶ್ರೀರಾಮನ ಜನ್ಮಭೂಮಿ, ಆಜಗದ ಭವ್ಯ ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ಹಿಂದೂಗಳ ೫೦೦ ವರ್ಷಗಳ ಕನಸು ಎಂದೇ ಹಿಂದೂ ಸಂಘಟನೆಗಳು ಹೇಳುತ್ತ ಬಂದಿವೆ. ಇದೇ ವಿಚಾರವನ್ನಿಟ್ಟುಕೊಂಡು ದೇಶದಲ್ಲಿ ದೊಡ್ಡ ರಾಜಕೀಯ ಆಂದೋಲನವನ್ನೂ ನಡೆಸಿವೆ.ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆದ ರಾಮ ಜನ್ಮಭೂಮಿ ಆಂದೋಲನದ ಹಿಂದಿನ ಶಕ್ತಿ ಆರ್‌ಎಸ್‌ಎಸ್ ಮತ್ತು ಈ ಆಂದೋಲನದ ನೇರ ರಾಜಕೀಯ ಫಲಾನುಭವಿ ಭಾರತೀಯ ಜನತಾ ಪಾರ್ಟಿ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ರಾಮ ಜನ್ಮಭೂಮಿ ಆಂದೋಲನದ ಫಲವಾಗಿ ದೇಶದ ರಾಜಕೀಯದಲ್ಲಿ ಬಿಜೆಪಿಯ ಶುಕ್ರದೆಸೆ ಆರಂಭವಾಗಿತ್ತು. ಇಂದು ರಾಜಕೀಯವಾಗಿ ಬಿಜೆಪಿ ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ಈ ದೇಣಿಗೆ ಕಳ್ಳತನದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮಂದಿರ ಆಂದೋಲನದ ಆರ್ಥಿಕ ಫಲಾನುಭವಿಗಳು ಯಾರು ಎಂಬ ಪ್ರಶ್ನೆಗಳೆದ್ದಿವೆ.
ಈ ದೇಣಿಗೆ ಕಳ್ಳತನದ ಕುರಿತಂತೆ ಅತ್ಯಂತ ಪ್ರಾಮಾಣಿಕವಾದ, ಪಾರದರ್ಶಕವಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಮೂಲಕ ರಾಮಭಕ್ತರ ಭಾವನೆಗಳಿಗೆ ಆಗಿರುವ ಘಾಸಿಗೆ ತುಸು ಮುಲಾಮು ಹಚ್ಚುವ ಹಾಗೂ ರಾಮಭಕ್ತರ ವಿಶ್ವಾಸವನ್ನು ಮರು ಸ್ಥಾಪಿಸುವ ಕೆಲಸವನ್ನು ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ಉತ್ತರ ಪ್ರದೇಶದಲ್ಲಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮಾಡಬೇಕಿದೆ.
ವರ್ಷಗಳಿಂದ ನಡೆದಿತ್ತು ಅಕ್ರಮ!: ರಾಮ ಮಂದಿರ ಆಂದೋಲನದ ಕಾಲದಿಂದಲೂ ದೇಣಿಗೆಯಲ್ಲಿ ಅವ್ಯವಹಾರ ನಡೆದಿರುವ ಸುದ್ದಿಗಳು ಕ್ಷೀಣ ಧ್ವನಿಯಲ್ಲಿ ಕೇಳುತ್ತಲೇ ಇದ್ದವು. ಆದರೆ, ನೇರವಾಗಿ ಯಾರೂ ಇಂಥ ಆರೋಪಗಳನ್ನು ಮಾಡುತ್ತಿರಲಿಲ್ಲ. ಈ ಬಗ್ಗೆ ಗೊತ್ತಿದ್ದವರೂ ಗೊತ್ತಿಲ್ಲದಂತೆ ಇರುವುದೇ ಕ್ಷೇಮ ಎಂದುಕೊಂಡಿದ್ದರು. ಈ ಬಗ್ಗೆ ಕೆಲವೇ ಕೆಲವರು ಚರ್ಚೆ ಮಾಡುತ್ತಿದ್ದರಾದರೂ ಕೊನೆಗೆ ಹೆದರಿಕೊಂಡು ‘ನಾವು ಏನೂ ಹೇಳಿಯೇ ಇಲ್ಲ, ನೀವು ಏನೂ ಕೇಳಿಯೇ ಇಲ್ಲ’ ಎಂಬಂತೆ ಸೇಫ್ ಗೇಮ ಮೊರೆ ಹೋಗುತ್ತಿದ್ದರು. ಆದರೆ, ಜೂನ್ ತಿಂಗಳಲ್ಲಿ ಈ ದೇಣಿಗೆ ಕಳ್ಳತನದ ಸುದ್ದಿ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಇದಕ್ಕಿಂತಲೂ ಮೊದಲು ರಾಮ ಜನ್ಮಭೂಮಿ ಟ್ರಸ್ಟ್‌ಗೆ ಭೂಮಿ ಖರೀದಿಸುವಾಗ ಭಾರೀ ಪ್ರಮಾಣದ ಹಗರಣ ನಡೆದಿರುವ ಬಗ್ಗೆಯೂ ಆರೋಪಗಳಿದ್ದವು. ರವಿ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಎಂಬವರು ೨ ಕೋಟಿ ರೂಪಾಯಿಗೆ ಖರೀದಿ ಮಾಡಿದ್ದ ಭೂಮಿಯನ್ನು ತಾವು ಖರೀದಿ ಮಾಡಿದ ದಿನವೇ ಕೇವಲ ಹತ್ತು ನಿಮಿಷಗಳ ನಂತರ ರಾಮ ಜನ್ಮಭೂಮಿ ಟ್ರಸ್ಟ್‌ಗೆ ೧೮ ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಹತ್ತು ನಿಮಿಷಗಳ ಅಂತರದಲ್ಲಿ ನಡೆದ ಈ ಎರಡೂ ಖರೀದಿಗಳಿಗೂ ಸಾಕ್ಷಿಗಳು ಅವರವರೇ ಆಗಿದ್ದರು. ಇದು ಒಂದು ಉದಾಹರಣೆ ಮಾತ್ರ. ಮಾರುಕಟ್ಟೆ ದರಕ್ಕಿಂತ ಹಲವು ಪಟ್ಟು ಹೆಚ್ಚಿನ ದರದಲ್ಲಿ ಟ್ರಸ್ಟ್ ಭೂಮಿ ಖರೀದಿಸಿದ ಉದಾಹರಣೆಗಳು ಬೇಕಾದಷ್ಟಿವೆ.
ಹಿಂದುತ್ವ ರಾಜಕಾರಣದ ಹಿಂದಿನ ಉದ್ದೇಶವೇ ಪ್ರಶ್ನಾರ್ಹ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಬನ್ಸಲ್ ಹೆಸರಿನ ಈ ಎಲ್ಲ ಅಕ್ರಮಗಳು ನಡೆದಿವೆ. ಭೂ ಹಗರಣ ಮತ್ತು ದೇಣಿಗೆ ಕಳ್ಳತನಕ್ಕೆ ಹಲವಾರು ಸಾಕ್ಷ್ಯಗಳೂ ದೊರೆತಿವೆ. ಮಂದಿರದ ಆಡಳಿತ ನಿರ್ವಹಣೆಯಲ್ಲಿ ನಡೆದಿರುವ ಅಕ್ರಮ ಹಾಗೂ ದೇಣಿಗೆ ದರೋಡೆಯ ವಿಚಾರದಲ್ಲಿ ಚಂಪತ್ ರಾಯ್ ಜೊತೆಗೆ ಇನ್ನೊಬ್ಬ ಟ್ರಸ್ಟಿ ಅನಿಲ್ ಮಿಶ್ರಾ, ಟ್ರಸ್ಟ್‌ನ ಖಜಂಚಿ ಗೋವಿಂದದೇವ್ ಗಿರಿ ಹಾಗೂ ಮಂದಿರ ನಿರ್ಮಾಣದ ಉಸ್ತುವಾರಿ ವಹಿಸಿದ್ದ ಕರ್ನಾಟಕದ ಗೋಪಾಲರಾವ್ ನಾಗರಕಟ್ಟೆ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿವೆ. ಈ ವಿಷಯವೀಗ ದೇಶದ ಮನೆಮನೆಗೂ ತಲುಪಿರುವುದರಿಂದ ಹಿಂದುತ್ವದ ರಾಜಕಾರಣದ ಹಿಂದಿನ ಉದ್ದೇಶವೇ ಪ್ರಶ್ನಾರ್ಹವಾಗಿದೆ.
ದೊಡ್ಡ ಕಳ್ಳರ ರಕ್ಷಣೆ?: ದೇಶಾದ್ಯಂತ ಈ ವಿಷಯದಲ್ಲಿ ಭಾರೀ ಒತ್ತಡ ನಿರ್ಮಾಣವಾದ ನಂತರ ಯೋಗಿ ಅದಿತ್ಯನಾಥ್ ಸರ್ಕಾರ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡಿದೆ. ಈ ಎಸ್‌ಐಟಿ ನೀಡಿರುವ ಮಧ್ಯಂತರ ವರದಿಯ ಪ್ರಕಾರ ಕಳೆದ ೪೦ ದಿನಗಳಲ್ಲಿ ೭೦ ಬಾರಿ ದೇಣಿಗೆ ಕಳ್ಳತನ ನಡೆದಿರುವುದು, ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು ೨೦೦ ಕೋಟಿ ರೂಪಾಯಿ ಕಳ್ಳತನ ಆಗಿರುವುದು ಮೇಲ್ನೋಟಕ್ಕೆ ತಿಳಿದಿದೆ. ದೇಣಿಗೆ ಹಣ ಎಣಿಕೆ ನಡೆಯುವ ಜಗದಲ್ಲಿನ ಎಂಟು ತಿಂಗಳ ಸಿಸಿಟಿವಿ ದೃಶ್ಯಗಳು ಡಿಲೀಟ್ ಆಗಿವೆ.
ಭಕ್ತರು ಕಾಣಿಕೆಯ ರೂಪದಲ್ಲಿ ನೀಡಿದ್ದ ನೂರಾರು ಕೆಜಿ ಚಿನ್ನ, ಬೆಳ್ಳಿಯ ಆಭರಣಗಳು, ವಜ್ರದ ಹಾರವೂ ಕಳವಾಗಿವೆ ಎಂದು ಹೇಳಲಾಗಿದೆ. ಈ ಸಂಬಂಧ ಚಂಪತ್ ರಾಯ್ ಅವರ ಆಪ್ತ ರಾಮಶಂಕರ್ ಯಾದವ್, ಅನಿಲ್ ಮಿಶ್ರಾ ಸಂಬಂಧಿಗಳಾದ ಅನುಕಲ್ಪ ಮಿಶ್ರಾ, ಲವಖುಶ್ ಮಿಶ್ರಾ ಹಾಗೂ ಅವಿನಾಶ್ ಶುಕ್ಲ, ಮನೀಶ್ ಯಾದವ್, ಸುಭಾಷ್ ಶ್ರೀವಾಸ್ತವ್, ಕರುಣೇಶ್ ಪಾಂಡೆ ಮತ್ತು ರಾಮಶಂಕರ್ ಮಿಶ್ರಾ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, ಈ ಎಲ್ಲ ಬಂಧಿತರು ವರ್ಷಗಳಿಂದ ನಡೆಯುತ್ತಿರುವ ದೇಣಿಗೆ ಹಣದ ಲೂಟಿ ಪ್ರಕರಣದಲ್ಲಿ ಸಣ್ಣ ಪಾತ್ರಧಾರಿಗಳು ಮಾತ್ರ. ಪ್ರಮುಖವಾಗಿ ಆರೋಪಿಗಳೆನ್ನಲಾದ ಚಂಪತ್ ರಾಯ, ಅನಿಲ್ ಮಿಶ್ರಾ, ಗೋಪಾಲ್ ರಾವ್ ಮತ್ತು ಗೋವಿಂದದೇವ್ ಗಿರಿ ಅವರನ್ನು ರಕ್ಷಿಸುವು ದಕ್ಕಾಗಿಯೇ ಈ ಎಸ್‌ಐಟಿ ರಚಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪ್ರಕರಣ ಸಾರ್ವಜನಿಕಗೊಂಡು ಹದಿಮೂರು ದಿನಗಳ ನಂತರ ಎಸ್‌ಐಟಿ ರಚನೆ ಮಾಡಲಾಗಿತ್ತು. ೨೧ ದಿನಗಳ ನಂತರ ಎಫ್ಐಆರ್ ದಾಖಲಾಯ್ತು. ಈ ಲೂಟಿಯಲ್ಲಿ ಟ್ರಸ್ಟ್‌ನ ಕೆಲವರು ನೇರವಾಗಿ ಭಾಗಿಯಾಗಿರಬಹುದು, ಇನ್ನೂ ಕೆಲವರು ಕರ್ತವ್ಯಲೋಪ ಎಸಗಿರಬಹುದು. ಅದೇನೇ ಇದ್ದರೂ ಟ್ರಸ್ಟ್‌ನ ಎಲ್ಲ ಸದಸ್ಯರೂ ಈ ಹಗರಣಕ್ಕೆ ಜವಾಬ್ದಾರರು ಎಂಬುದಂತೂ ಸತ್ಯ. ಆದರೆ, ದುರದೃಷ್ಟವಶಾತ್ ಎಸ್‌ಐಟಿ ವರದಿಯನ್ನು ಇಂಥ ಆರೋಪಿ ಸ್ಥಾನದಲ್ಲಿರುವ ಟ್ರಸ್ಟ್‌ನ ಪದನಿಮಿತ್ತ ಸದಸ್ಯರ ಕೈಗೇ ಕೊಡಲಾಗಿದೆ.
ಲೂಟಿ ವಿಚಾರ ಸಾರ್ವಜನಿಕಗೊಳ್ಳುವ ಮೊದಲೇ ಉತ್ತರ ಪ್ರದೇಶದ ಪೊಲೀಸರ ನೆರವಿನಿಂದ ಟ್ರಸ್ಟ್‌ನ ಸಿಬ್ಬಂದಿ ಆರೋಪಿಗಳ ಮನೆ ಮೇಲೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ನಗದು ವಶಪಡಿಸಿಕೊಂಡಿದ್ದರು. ಆದರೆ, ಅಧಿಕೃತವಾಗಿ ಪೊಲೀಸರಿಗೆ ದೂರು ಮಾತ್ರ ಸಲ್ಲಿಸಿರಲಿಲ್ಲ. ಅದೇ ಕಾರಣಕ್ಕೆ ದೇಣಿಗೆ ಲೂಟಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂಬ ಸಂಶಯಗಳು ಉಂಟಾಗಿವೆ.
ದೂರು ಕೊಟ್ಟವರೇ ಕಿಕ್‌ಔಟ್: ಅಂತಾರಾಷ್ಟ್ರೀಯ ಸಿಂಧಿ ಸಮಾಜದಿಂದ ಮಂದಿರಕ್ಕೆ ೨೦೦ ಕೆಜಿ ಬೆಳ್ಳಿಯನ್ನು ದೇಣಿಗೆ ಕೊಟ್ಟಿದ್ದರೂ ಟ್ರಸ್ಟ್ ವತಿಯಿಂದ ರಶೀದಿ ಕೊಟ್ಟಿರಲಿಲ್ಲ. ಆ ಬೆಳ್ಳಿ ಎಲ್ಲಿದೆ ಎಂಬ ಬಗ್ಗೆ ಈಗ ಯಾವುದೇ ಮಾಹಿತಿ ಇಲ್ಲ. ರಾಮನ ವಿಗ್ರಹಕ್ಕೆ ಹಾಕಲು ವಜ್ರದ ಹಾರವೊಂದನ್ನು ಭಕ್ತರು ದೇಣಿಗೆ ಕೊಟ್ಟಿದ್ದರು. ಮತ್ತೋರ್ವ ಭಕ್ತರು ಚಿನ್ನದ ಪಾದುಕೆಗಳನ್ನು ಕಾಣಿಕೆಯಾಗಿ ನೀಡಿದ್ದರು. ಹೀಗೆಯೇ ಇನ್ನೂ ನೂರಾರು ಭಕ್ತರು ಚಿನ್ನ, ಬೆಳ್ಳಿ, ವಜ್ರಗಳನ್ನು ಕಾಣಿಕೆಯಾಗಿ ನೀಡಿದ್ದರೂ ಯಾರಿಗೂ ರಶೀದಿ ಕೊಟ್ಟಿರಲಿಲ್ಲ. ಅವೆಲ್ಲವೂ ಈಗ ಮಾಯವಾಗಿವೆ ಎಂಬ ಆರೋಪಗಳಿವೆ. ೨೦೨೧ರ ಪ್ರತಿದಿನ ಸುಮಾರು ೫ ಲಕ್ಷ ರೂಪಾಯಿ ದೇಣಿಗೆ ಕಳ್ಳತನ ನಡೆಯುತ್ತಿತ್ತು ಎಂದು ಆಗ ಲೆಕ್ಕಪತ್ರ ವಿಭಾಗದ ಜವಾಬ್ದಾರಿ ಹೊತ್ತಿದ್ದ ಮಹಿಪಾಲ್ ಸಿಂಗ್ ಎಂಬವರು ಚಂಪತ್ ರಾಯ್ ಮತ್ತು ಗೋಪಾಲ್ ರಾವ್ ಅವರಿಗೆ ದೂರು ನೀಡಿದ್ದರು. ಆದರೆ, ಕಳ್ಳತನ ತಡೆಯುವ ಬದಲಿಗೆ ಮಹಿಪಾಲ್ ಸಿಂಗ್ ಅವರನ್ನೇ ನೌಕರಿಯಿಂದ ಕಿತ್ತು ಹಾಕಲಾಗಿತ್ತು. ಅದೇ ರೀತಿ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಇಂಜಿನಿಯರ್ ದೀನಾನಾಥ್ ವರ್ಮಾ ಎಂಬವರು ನಿರ್ಮಾಣ ಸಾಮಗ್ರಿ ಖರೀದಿಯಲ್ಲಿ ಶೇ.೪೦ ಕಮಿಷನ್ ಅನ್ನು ಟ್ರಸ್ಟ್ ಸದಸ್ಯರು ಪಡೆಯುತ್ತಿದ್ದರು ಎಂದು ದೂರಿದಾಗ ಅವರನ್ನೂ ನಿರ್ಮಾಣ ಕಾರ್ಯದಿಂದ ಹೊರಗೆ ಅಟ್ಟಲಾಗಿತ್ತು. ಕುಂಭಮೇಳದ ಸಂದರ್ಭದಲ್ಲಿ ಸುಮಾರು ೧೬ ಕೋಟಿ ಜನರು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದ್ದು, ಈ ಅವಧಿಯಲ್ಲಿ ಬಂದಿರುವ ದೇಣಿಗೆ ೮೪ ಕೋಟಿ ರೂಪಾಯಿ ಮಾತ್ರ ಎಂದು ಟ್ರಸ್ಟ್ ಹೇಳಿದೆ. ಅಂದರೆ, ಪ್ರತಿ ವ್ಯಕ್ತಿ ದೇಣಿಗೆ ಹಾಕಿದ್ದು ಕೇವಲ ೫ ರೂಪಾಯಿ ಎಂದು ತೋರಿಸಲಾಗಿದೆ. ಇದೂ ಕೂಡ ಸುಳ್ಳು. ಈ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ ಎಂಬ ದೂರುಗಳಿವೆ.



