Mysore
29
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಬೋರ್‌ವೆಲ್, ಪಂಪ್‌ಸೆಟ್ ಕೇಬಲ್‌ ಕಳ್ಳತನ ಯುವಕರಿಗೆ ಧರ್ಮದೇಟು

ಮಂಡ್ಯ : ಬೋರ್‌ವೆಲ್, ಪಂಪ್‌ಸೆಟ್ ಕೇಬಲ್ ಕಳವು ಮಾಡುತ್ತಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ಮೂವರನ್ನು ಸಾರ್ವಜನಿಕರೇ ಹಿಡಿದು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ತಾಲೂಕಿನ ಗಂಟಗೌಡನಹಳ್ಳಿ ಗೇಟ್ ಬಳಿ ಇಂದು ಮಧ್ಯಾಹ್ನ ನಡೆದಿದೆ.

ತಾಲೂಕಿನ ಸಾತನೂರು ಗ್ರಾಮದ ಭೈರೇಶ್ (೧೮) ತರುಣ್ (೧೮) ಹಾಗೂ ಮತ್ತೋರ್ವ ಅಪ್ರಾಪ್ತ ಬಾಲಕನನ್ನು ಸಾರ್ವಜನಿಕರೇ ಹಿಡಿದು ಕಂಬಕ್ಕೆ ಕಟ್ಟಿ, ಅವರಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾಲೂಕಿನ ಹೊಳಲು ಸಮೀಪದ ಚಂದಗಾಲು ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಆರೋಪಿಗಳು ಪಂಪ್‌ಸೆಟ್ ಕೇಬಲ್ ಕಳವು ಮಾಡುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಹಿಡಿಯಲು ಯತ್ನಿಸಿದಾಗ ಎಲ್ಲರೂ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಅವರನ್ನು ಹಿಂಭಾಲಿಸಿಕೊಂಡು ಬರುವ ವೇಳೆ ಗಂಟಗೌಡನಹಳ್ಳಿ ಗೇಟ್ ಸಮೀಪ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸುವಾಗ ಸಿಕ್ಕಿ ಬಿದ್ದಿದ್ದಾರೆ.

ತಕ್ಷಣ ಅವರನ್ನು ಹಿಡಿದು ಗ್ರಾಮಸ್ಥರೊಂದಿಗೆ ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಪಿಎಸ್‌ಐ ಕಾಶಿನಾಥ್ ಬುಗಲಿ ಮತ್ತು ಸಿಬ್ಬಂದಿ ಧಾವಿಸಿ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಭೈರೇಶ್, ತರುಣ್ ಅವರುಗಳು ತಾಲೂಕಿನ ತಂಗಳಗೆರೆ, ಉಪ್ಪರಕನಹಳ್ಳಿ, ದ್ಯಾಪಸಂದ್ರ, ಮಾಯಪ್ಪನಕೊಪ್ಪಲು ಸೇರಿದಂತೆ ವಿವಿಧೆಡೆ ಕಳ್ಳತನ ನಡೆಸಿದ್ದಾರೆ ಎಂದು ಹೇಳಲಾಗಿದೆ. ವಿಚಾರಣೆ ನಂತರ ಸತ್ಯಾಂಶ ಹೊರಬರಲಿದೆ. ಈ ಸಂಬಂಧ ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!