ವಿಜಯನಗರ: ತುಂಗಭದ್ರಾ ಜಲಾಶಯದಲ್ಲಿ ಅಳವಡಿಸಲಾಗಿರುವ ನೂತನ ಕ್ರೆಸ್ಟ್ ಗೇಟ್‌ಗಳನ್ನು ಮೂವರು ಮುಖ್ಯಮಂತ್ರಿಗಳು ಉದ್ಘಾಟಿಸಿದ ಅಪರೂಪದ ಸಮಾರಂಭಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಅಣೆಕಟ್ಟೆಯಲ್ಲಿ ನೂತನವಾಗಿ ಅಳವಡಿಸಲಾದ ೩೩ ಕ್ರೆಸ್ಟ್‌ಗೇಟ್‌ಗಳನ್ನು ಗುರುವಾರ ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ.
ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಕೇಂದ್ರ ಸಚಿವ ಸಿ.ಆರ್.ಪಾಟೀಲ್, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರುಗಳು ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್‌ಗಳನ್ನು ಒಂದೇ ವೇಳೆ ತೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡ್ಯಾಂ ಮೇಲ್ಭಾಗಕ್ಕೆ ಶಾಸಕರು ಹಾಗೂ ಸಂಸದರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.
೨೦೨೪ರ ಆಗಸ್ಟ್ ೧೦ರಂದು ರಾತ್ರಿ ತುಂಗಭದ್ರಾ ಅಣೆಕಟ್ಟೆಯ ೧೯ನೇ ಕ್ರೆಸ್ಟ್‌ಗೇಟ್ ಕೊಚ್ಚಿಕೊಂಡು ಹೋಗಿತ್ತು. ಈ ಘಟನೆ ದೇಶಾದ್ಯಂತ ಆತಂಕ ಸೃಷ್ಟಿಸಿತ್ತು. ಪರಿಣಾಮವಾಗಿ ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗಿದ್ದಲ್ಲದೇ ರೈತರಲ್ಲಿ ಕಳವಳ ಮೂಡಿಸಿತ್ತು. ಈ ಘಟನೆ ನಡೆದ ತಕ್ಷಣ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಂಡಿದ್ದರು. ತಜ್ಞರ ಸಲಹೆ ಮೇರೆಗೆ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ನೀರಿನ ಹರಿವನ್ನು ನಿಯಂತ್ರಿಸಲಾಗಿತ್ತು. ಆದಾಗ್ಯೂ ಸುಮಾರು ೩೫ ಟಿಎಂಸಿ ಅಡಿ ನೀರು ನದಿಗೆ ಹರಿದು ಹೋಗಿತ್ತು. ನಂತರ ಸರ್ಕಾರ ಎಲ್ಲ ೩೩ ಕ್ರೆಸ್ಟ್‌ಗೇಟ್‌ಗಳನ್ನು ಬದಲಿಸುವ ಮಹತ್ವದ ನಿರ್ಧಾರ ಕೈಗೊಂಡಿತ್ತು.




