ಪಿ.ಶಿವಕುಮಾರ್
ಜೆಜೆಎಂ ಯೋಜನೆ ವಿಫಲ; ನೀರಿಗಾಗಿ ಪಂಪ್‌ಸೆಟ್‌ಗಳಿಗೆ ಅಲೆದಾಡುತ್ತಿರುವ ಗ್ರಾಮಸ್ಥರು
ದೊಡ್ಡ ಕವಲಂದೆ: ನಂಜನಗೂಡು ತಾಲ್ಲೂಕಿನ ಗಟ್ಟವಾಡಿಪುರ ಗ್ರಾಮದಲ್ಲಿ ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಗ್ರಾಮಸ್ಥರು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ.
ಮನೆಮನೆಗೆ ನಲ್ಲಿ ಮೂಲಕ ಶುದ್ಧ ನೀರು ಪೂರೈಸಬೇಕಿದ್ದ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಸಂಪೂರ್ಣ ವಿಫಲವಾಗಿರುವುದು ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಗ್ರಾಮದಲ್ಲಿ ೧,೫೦೦ ಜನಸಂಖ್ಯೆ ಇದೆ. ಜಲ ಜೀವನ್ ಮಿಷನ್ ಯೋಜನೆಯ ಪೈಪ್‌ಲೈನ್ ಕಾಮಗಾರಿ ಮುಗಿದಿದ್ದರೂ ಮನೆ ಮನೆಗೆ ನೀರು ಬಂದಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು,ಅದರಲ್ಲೂ ಮಹಿಳೆಯರು ದಿನನಿತ್ಯ ಅರ್ಧ ಕಿ.ಮೀ. ದೂರದ ಹೊಲ-ಗದ್ದೆಗಳಲ್ಲಿರುವ ರೈತರ ಪಂಪ್‌ಸೆಟ್‌ಗಳಿಗೆ ಹೋಗಿ ನೀರು ತರುತ್ತಿದ್ದಾರೆ.
ಬಿಂದಿಗೆ ಹಿಡಿದು ನೀರಿಗಾಗಿ ಪರದಾಡುತ್ತಿದ್ದು, ಗ್ರಾಮಸ್ಥರು ಸೈಕಲ್ ಮತ್ತು ಬೈಕ್‌ಗಳಲ್ಲಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು ಕಲ್ಪಿಸುವ ಜವಾಬ್ದಾರಿ ಹೊಂದಿರುವ ದೊಡ್ಡ ಕವಲಂದೆ ಗ್ರಾಮ ಪಂಚಾಯಿತಿ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪೈಪ್‌ಲೇನ್ ಹಾಕಿ, ನಲ್ಲಿ ಅಳವಡಿಸಿ ೨ ವರ್ಷಗಳಾಗಿದ್ದರೂ ಇಲ್ಲಿಯವರೆಗೆ ಸರಿಯಾಗಿ ನೀರು ಬಂದಿಲ್ಲ. ದೂರು ನೀಡಿದರೂ ಪಂಚಾಯಿತಿ ಅಧಿಕಾರಿಗಳು ಗ್ರಾಮದ ಕಡೆ ತಿರುಗಿಯೂ ನೋಡುತ್ತಿಲ್ಲ. ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಹೇಳಿದರೆ, ನೀರಾವರಿ ಇಲಾಖೆ ಅಧಿಕಾರಿಗಳನ್ನು ಕೇಳಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಚುನಾವಣೆ ಬಂದಾಗ ಮಾತ್ರ ವೋಟು ಕೇಳಲು ಬರುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಮೂಲಸೌಕರ್ಯ ಕಲ್ಪಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಕ್ಷಣ ಸಮಸ್ಯೆ ಬಗೆಹರಿಸದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
” ಒಂದೂವರೆ ತಿಂಗಳಿನಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಽಕಾರಿಗಳಿಗೆ ತಿಳಿಸಿದರೆ ಅವರು ಜೆಜೆಎಂ ಅವರಿಗೆ ಹೇಳುತ್ತಾರೆ. ಜೆಜೆಎಂ ಅಧಿಕಾರಿಗಳಿಗೆ ಹೇಳಿದರೆಅವರು ಪಿಡಿಒ ಅವರಿಗೆ ಹೇಳಿ ಎಂದು ಅಲೆದಾಡಿಸುತ್ತಿದ್ದಾರೆ. ಗ್ರಾಮಸ್ಥರು ರೈತರ ಪಂಪ್‌ಸೆಟ್‌ಗಳಿಗೆ ಹೋಗಿ ಕುಡಿಯುವ ನೀರನ್ನು ತರುವಂತಾಗಿದೆ. ೪ ದಿನಗಳಿಗೊಮ್ಮೆ ನೀರನ್ನು ಬಿಡುತ್ತಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ ಸರಿಯಾಗಿ ಪೈಪ್‌ಲೇನ್ ಮಾಡದೆ ಇರುವುದರಿಂದ ಮನೆಗಳಿಗೆ ನೀರು ತಲುಪುತ್ತಿಲ್ಲ. ಕೂಡಲೇ ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿಯ ಮುಂಭಾಗ ಉಗ್ರ ಹೋರಾಟ ನಡೆಸಲಾಗುತ್ತದೆ.”
-ಮಹದೇವಶೆಟ್ಟಿ, ಗ್ರಾಮಸ್ಥರು
” ಗಟ್ಟವಾಡಿಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವುದು ನನ್ನ ಗಮನಕ್ಕೆ ಬಂದಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಪಂ ಅಧಿಕಾರಿಗಳಿಗೆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದೇನೆ. ಪೈಪ್‌ಲೈನ್ ಮತ್ತು ಮೋಟಾರ್ ಸರಿಪಡಿಸಿ ನೀರನ್ನು ಪೂರೈಸಲು ಸೂಚಿಸಿದ್ದೇನೆ.”
-ಜೆರಾಲ್ಡ್ ರಾಜೇಶ್, ತಾಪಂ ಇಒ




