ಮೈಸೂರು : ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದದಿಂದ ಸಂಪರ್ಕ ಸಾಧಿಸಿ ರಾಜ್ಯದ ಅಭಿವೃದ್ಧಿ ಮಾಡುವುದು ಅಗತ್ಯವಿದೆ. ಹಿಂದಿನ ಸಿಎಂ ಸಿದ್ದರಾಮಯ್ಯ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಬಿಟ್ಟರೆ ಬೇರೇನೂ ಮಾಡಲಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರಸರ್ಕಾರ ಉದಾರವಾಗಿ ಅನುದಾನ ನೀಡುತ್ತಾ ಬಂದಿದೆಯೇ ಹೊರತು ಯಾವ ಯೋಜನೆಗಳಲ್ಲೂ ಅನುದಾನ ಕಡಿತ ಮಾಡಿಲ್ಲ. ಕೇಂದ್ರ ನೀಡಿದ ಅನುದಾನವನ್ನು ಬಳಕೆ ಮಾಡಿಕೊಂಡು ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸುವ ಕೆಲಸ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನೀತಿ ಆಯೋಗದ ಸಭೆಗೆ ಹೋಗಲಿಲ್ಲ, ಜಿಎಸ್‌ಟಿ ಕೌನ್ಸಿಲ್ ಸಭೆಗೆ ಹೋಗಲಿಲ್ಲ. ಕೇಂದ್ರದ ಸಚಿವರೊಂದಿಗೆ ಸಮನ್ವಯತೆ ಸಾಧಿಸಿ ಆಗಬೇಕಾದ ಕೆಲಸಗಳ ಬಗ್ಗೆ ಹೆಚ್ಚು ಗಮನಹರಿಸಲಿಲ್ಲ. ಬದಲಿಗೆ ಕೇಂದ್ರದ ಮೇಲೆ ಗೂಬೆ ಕೂರಿಸಿ ಕೈ ಚೆಲ್ಲಿ ಕುಳಿತಿದ್ದು ಬಿಟ್ಟರೆ ಗಂಭೀರವಾಗಿ ಪ್ರಯತ್ನ ಮಾಡಲಿಲ್ಲ ಎಂದು ಟೀಕಿಸಿದರು.
ಬೇರೆ ರಾಜ್ಯಗಳು ರಾಜಕೀಯ ಬದಿಗೊತ್ತಿ ಕೇಂದ್ರದೊಂದಿಗೆ ಉತ್ತಮ ಸಂಬಂಧ ಹೊಂದಿವೆ. ಈಗಿನ ಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದುತ್ತಾರೆ ಎನ್ನುವ ವಿಶ್ವಾಸ, ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಭೇಟಿ ಮಾಡಿ ಚರ್ಚಿಸಬೇಕು. ರಾಜ್ಯದ ಸಂಸದರು, ಸಚಿವರು ಅಭಿವೃದ್ದಿ ವಿಚಾರದಲ್ಲಿ ಸದಾ ಕೈ ಜೋಡಿಸುತ್ತಾರೆ ಎಂದರು.
ತಮಿಳುನಾಡು ರಾಜ್ಯದ ಮುಖ್ಯಮಂತ್ರಿಯಾಗಿ ಜೋಸೆ-ವಿಜಯ್ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಕಾವೇರಿ ನದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಆದರೆ,ಕರ್ನಾಟಕದ ಸಿಎಂ ಸೇರಿದಂತೆ ಯಾವುದೇ ಸಚಿವರು ಕಾವೇರಿ,ಮೇಕೆದಾಟು ಇನ್ನಿತರ ಜಲ ವಿವಾದಗಳ ಬಗ್ಗೆ ಮಾತನಾಡಲ್ಲ. ಕರ್ನಾಟಕದಲ್ಲಿ ಮಳೆ ಬಂದರೂ,ಬರದಿದ್ದರೂ ತಮಿಳುನಾಡಿಗೆ ನೀರು ಹರಿಸುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಬೇಸರಿಸಿದರು.




