ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಟಿಪ್ಪರ್‌ಗಳ ಹಾವಳಿ ಹೆಚ್ಚಾಗಿ ಶಾಲಾ ಮಕ್ಕಳ ವಾಹಕ ಅಪಘಾತಕ್ಕೀಡಾಗಿ ಹಲವು ಮಕ್ಕಳಿಗೆ ಗಾಯಗಳಾಗಿದ್ದ ಪ್ರಕರಣದ ಬಳಿಕ ತಾಲ್ಲೂಕಿನಾದ್ಯಂತ ಟಿಪ್ಪರ್‌ಗಳು ಶಾಲೆಗಳ ಆರಂಭ ಮತ್ತು ಬಿಡುವ ಸಮಯದಲ್ಲಿ ಶಾಲೆಗಳ ಪರಿಮಿತಿ 200 ಮೀ. ಒಳಗೆ ಸಂಚರಿಸದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.
ಆದೇಶ ಉಲ್ಲಂಘಿಸಿದಲ್ಲಿ ಅಂತಹ ವಾಹನಗಳು ಮತ್ತು ಚಾಲಕರುಗಳನ್ನು ವಶಕ್ಕೆ ಪಡೆದು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಚಾಮರಾಜನಗರ ಜಿಲ್ಲೆಯ ಎಸ್‌ಪಿ ಎಚ್ಚರಿಕೆ ನೀಡಿದ್ದರು. ಆದರೆ, ಈ ಆದೇಶವನ್ನು ಉಲ್ಲಂಘಿಸಿದ 6 ಟಿಪ್ಪರ್ ಲಾರಿಗಳನ್ನು ಗುಂಡ್ಲುಪೇಟೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಗುಂಡ್ಲುಪೇಟೆ ಠಾಣೆಯ ಆರಕ್ಷಕ ನಿರೀಕ್ಷಕರಾದ ಎನ್.ಜಯಕುಮಾರ್ ಬೆಳಿಗ್ಗೆ 8.30ರಲ್ಲಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಇರುವ ದೊಡ್ಡುಂಡಿ ಭೋಗಪ್ಪ, ಶ್ರೀ ಮದ್ದಾನೇಶ್ವರ ಹಾಗೂ ಪದವಿ ಶಿಕ್ಷಣ ಕಾಲೇಜುಗಳ ಮಾರ್ಗವಾಗಿ ಮೈಸೂರು ಕಡೆಗೆ ಹೋಗುತ್ತಿದ್ದ 6 ಟಿಪ್ಪರ್ ಲಾರಿಗಳನ್ನು ಮತ್ತು ಚಾಲಕರನ್ನು ವಶಕ್ಕೆ ಪಡೆದು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.




