ನವೀನ್ ಡಿಸೋಜ
ಜಿಲ್ಲೆಯ ಶಾಸಕರಿಗೆ ಅವಕಾಶ ನೀಡಲು ಆಗ್ರಹ; ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರ ಒತ್ತಾಯ
ಮಡಿಕೇರಿ: ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ಮೊದಲ ಸುತ್ತಿನಲ್ಲಿ ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ದೊರೆಯದಿದ್ದರೂ ಮುಂದಿನ ಸಂಪುಟ ವಿಸ್ತರಣೆ ಸಂದರ್ಭ ಯಲ್ಲಾದರೂ ಕೊಡಗಿಗೆ ಸಚಿವ ಸ್ಥಾನ ನೀಡಬೇಕೆನ್ನುವ ಒತ್ತಾಯ ಕೇಳಿ ಬಂದಿದೆ.
ಮೊದಲ ಸುತ್ತಿನಲ್ಲಿ ಪ್ರಭಾವಿ ೧೩ ಮಂದಿ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದು, ಕಿರಿಯ ಶಾಸಕರಿಗೆ ಅವಕಾಶ ನೀಡಿಲ್ಲ. ಆದರೆ, ಇನ್ನೂ ಪೂರ್ಣ ಪ್ರಮಾಣದ ಕ್ಯಾಬಿನೆಟ್ ರಚನೆಯಾಗದ ಹಿನ್ನೆಲೆಯಲ್ಲಿ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ನಮ್ಮವರಿಗೆ ಸ್ಥಾನ ಕೊಡಿ ಎಂಬ ಕೂಗು ಕೊಡಗಿನಲ್ಲಿ ಜೋರಾಗುತ್ತಿದೆ. ಕೊಡವ ಸಮಾಜಗಳು,ಸಂಘ ಸಂಸ್ಥೆಗಳು, ರಾಜಕಾರಣಿಗಳು, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಧ್ವನಿ ಎತ್ತಿದ್ದಾರೆ.
ಕೆಲವರು ಜಿಲ್ಲೆಯ ಇಬ್ಬರಿಗೂ ಸಚಿವ ಸ್ಥಾನ ಕೇಳಿದರೆ, ಕೆಲವರು ಎ.ಎಸ್.ಪೊನ್ನಣ್ಣ ಸಚಿವರಾಗಬೇಕು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಡಾ.ಮಂಥರ್ ಗೌಡ ಅವರನ್ನು ಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಜಿಲ್ಲೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳನ್ನೂ ಕೈಗೊಳ್ಳಲಾಗುತ್ತಿದೆ.
೨೦೧೨-೧೩ರ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಬಿಜೆಪಿಯ ಎಂ.ಪಿ.ಅಪ್ಪಚ್ಚು ರಂಜನ್ ಕ್ರೀಡಾ ಸಚಿವರಾಗಿದ್ದರು. ಆದರೆ, ಅದು ಕೇವಲ ೯ ತಿಂಗಳು ಮಾತ್ರ. ಇದಾದ ಬಳಿಕ ಇಲ್ಲಿಯವರೆಗೂ ಜಿಲ್ಲೆಗೆ ಸಚಿವ ಸ್ಥಾನ ಲಭಿಸಿಲ್ಲ. ದಶಕಗಳ ಬಳಿಕ ಇಬ್ಬರೂ ಶಾಸಕರು ಕಾಂಗ್ರೆಸ್‌ನಿಂದ ಗೆದ್ದಿದ್ದರೂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಚಿವ ಸ್ಥಾನ ಲಭಿಸಿರಲಿಲ್ಲ. ಅದರ ಬದಲಾಗಿ ಎ.ಎಸ್ .ಪೊನ್ನಣ್ಣ ಅವರನ್ನು ಸಿಎಂ ಕಾನೂನು ಸಲಹೆಗಾರರಾಗಿ ನೇಮಕ ಮಾಡಿ ಕ್ಯಾಬಿನೆಟ್ ಸ್ಥಾನಮಾನ ನೀಡಲಾಗಿತ್ತು.
ಎ.ಎಸ್.ಪೊನ್ನಣ್ಣ ಅವರಿಗೆ ಕ್ಯಾಬಿನೆಟ್ ಸ್ಥಾನಮಾನದಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಒಂದಷ್ಟು ಅನುಕೂಲವಾಗಿದೆಯಾದರೂ ಜಿಲ್ಲೆಯ ಒಬ್ಬರು ಸಚಿವರಾಗಿದ್ದರೆ, ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇನ್ನಷ್ಟು ಅನುಕೂಲವಾಗುತ್ತಿತ್ತು ಎಂಬುದು ಕೊಡಗಿನ ಜನರ ಅಭಿಪ್ರಾಯ. ಈಗ ಮೊದಲ ಪಟ್ಟಿಯಲ್ಲಿ ನಮ್ಮ ಶಾಸಕರ ಹೆಸರಿಲ್ಲದಿದ್ದರೂ, ಮುಂದೆ ಸಂಪುಟ ವಿಸ್ತರಣೆ ಸಂದರ್ಭದಲ್ಲಾ ದರೂ ಜಿಲ್ಲೆಯನ್ನು ಪರಿಗಣಿಸಬಹುದು ಎಂಬುದು ಜನರ ನಿರೀಕ್ಷೆಯಾಗಿದೆ.
ಸ್ವಾತಂತ್ರ್ಯ ನಂತರವೂ ಸುಮಾರು ೧೦ ವರ್ಷಗಳ ಕಾಲ ಕೊಡಗು ಪ್ರತ್ಯೇಕ ರಾಜ್ಯವಾಗಿಯೇ ಇತ್ತು. ಆಗಿಲ್ಲಿ ಮುಖ್ಯಮಂತ್ರಿ ಯನ್ನೊಳಗೊಂಡ ೨೪ ಸಚಿವರ ಸಚಿವ ಸಂಪುಟವೇ ಇತ್ತು. ಬಳಿಕ ಕರ್ನಾಟಕದೊಂದಿಗೆ ವಿಲೀನವಾದ ಕೊಡಗಿಗೆ ರಾಜ್ಯ ಸರ್ಕಾರಗಳಲ್ಲಿ ಪ್ರಾತಿನಿಧ್ಯ ಸಿಕ್ಕಿದ್ದು ಅಷ್ಟಕ್ಕಷ್ಟೇ. ಆದರೆ, ೧೯೯೯ರಲ್ಲಿ ಕಾಂಗ್ರೆಸ್ ಸರ್ಕಾರ ಅಽಕಾರಕ್ಕೆ ಬಂದಾಗ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರು. ಆ ಸಂಪುಟದಲ್ಲಿ ಜಿಲ್ಲೆಯ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಎಂ. ಎಂ.ನಾಣಯ್ಯ, ಟಿ.ಜಾನ್ ಮತ್ತು ಸುಮಾ ವಸಂತ್ ಸಚಿವರಾಗಿ ಪೂರ್ಣಾವಧಿಗೆ (೨೦೦೪ರವರೆಗೆ) ಕೆಲಸ ಮಾಡಿದ್ದರು. ಇದಾದ ಬಳಿಕ ಸಚಿವರಾಗಿದ್ದು, ಅಪ್ಪಚ್ಚು ರಂಜನ್ ಅದೂ ೯ ವರ್ಷಗಳ ಬಳಿಕ.
ಸಚಿವ ಸ್ಥಾನ ಏಕೆ ಬೇಕು?:
ಭೌಗೋಳಿಕವಾಗಿಯೂ, ಸಾಮಾಜಿಕವಾಗಿಯೂ ಕೊಡಗು ಜಿಲ್ಲೆಯ ರಾಜ್ಯದ ಇತರೆ ಜಿಲ್ಲೆಗಳಿಗಿಂತ ತೀರಾ ಭಿನ್ನವಾಗಿದೆ. ಬೇರೆ ಯಾವುದೇ ಜಿಲ್ಲೆಯಲ್ಲಿಲ್ಲದ ಕೊಡಗನ್ನಷ್ಟೇ ಕಾಡುತ್ತಿರುವ ಜ್ವಲಂತಸಮಸ್ಯೆಗಳು ಇಲ್ಲಿವೆ. ಹೊರಗಿನಿಂದ ಬರುವ ಸಚಿವರಿಗೆ ಕೊಡಗನ್ನು ಸಂಪೂರ್ಣ ವಾಗಿ ತಿಳಿದುಕೊಳ್ಳುವುದಕ್ಕೇ ಒಂದು ಅವಧಿ ಸಾಲುವುದಿಲ್ಲ. ಅದರಲ್ಲೂ ದೂರದ ಊರಿನಿಂದ ಕೊಡಗಿನ ಉಸ್ತುವಾರಿ ವಹಿಸಿಕೊಳ್ಳುವ ಸಚಿವರು ಕೆಡಿಪಿ ಸಭೆಗಳಿಗೆ, ವೀಕೆಂಡ್ ವಿಸಿಟ್‌ಗೆ, ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ಮಾಡಲು ಮಾತ್ರ ಸೀಮಿತವಾಗುತ್ತಾರೆಂಬ ಆರೋಪ ಜನರದ್ದಾಗಿದೆ. ಹಾಗಾಗಿ ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ಸಿಕ್ಕರೇ ಅಭಿವೃದ್ಧಿಗೆ ಅನುಕೂಲವಾದೀತು ಎಂಬುದು ಕೊಡಗಿನವರ ಬಯಕೆಯಾಗಿದೆ.
” ಈ ಬಾರಿ ಹಿರಿಯರಿಗೆ ೧೩ ಸ್ಥಾನಗಳನ್ನು ನೀಡಲಾಗಿದೆ. ೨ನೇ ಪಟ್ಟಿಯಲ್ಲಿ ಕೊಡಗಿಗೆ ಒಂದು ಸಚಿವ ಸ್ಥಾನ ಸಿಗಲಿದೆ. ಜಿಲ್ಲೆಯ ಇಬ್ಬರೂ ಶಾಸಕರು ಪ್ರತಿಭಾವಂತರು ಮತ್ತು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಅದಕ್ಕೆ ಪೂರಕವಾಗಿ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ಹಿಂದೆಂದೂ ಕಾಣದಂತಹ ದೊಡ್ಡ ಮಟ್ಟದದಲ್ಲಿ ಎದ್ದಿದೆ. ಜೂ.೧೨ರ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾಹಿತಿಯಿದೆ. ಆ ಸಂದರ್ಭದಲ್ಲಿ ಜಿಲ್ಲೆಯ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗುವ ಸಂಪೂರ್ಣ ವಿಶ್ವಾಸವಿದೆ.”
ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ





