Mysore
26
scattered clouds

Social Media

ಭಾನುವಾರ, 31 ಮೇ 2026
Light
Dark

ಭಾನುವಾರದ ಹಾಡುಪಾಡು | ಶಾಲೆಯೆಂಬ ಕಟ್ಟಡಗಳಿಗೆ ಜೀವ ಬರುವ ಹೊತ್ತು…..

ಕನಸುಗಂಗಳ ಈ ಹುಡುಗಿಯರ ಕಲರವದಿಂದಾಗಿ ಜಡವಾಗಿದ್ದ ಕಟ್ಟಡಗಳಿಗೆ ಜೀವ ಬರುತ್ತದೆ. ಅವರ ನಡಿಗೆಯ ಚುರುಕುತನದಿಂದ ಸುತ್ತಲಿನ ಪರಿಸರ ಚಲನಶೀಲವಾಗುತ್ತದೆ.

ಸುಧಾ ಆಡುಕಳ

 

ಶಾಲೆಗಳು ಪ್ರಾರಂಭವಾಗುವ ವಾರದ ಮೊದಲೇ ಪಿ.ಯು. ಕಾಲೇಜುಗಳು ಆರಂಭಗೊಂಡಿವೆ. ವರ್ಷದ ರಜೆಯನ್ನು ವ್ಯಾಪಿಸಿಕೊಂಡ ಜನಗಣತಿ ಕಾರ್ಯ ಹೊಸ ವರ್ಷಾರಂಭದ ಉತ್ಸಾಹವನ್ನು ಚೂರು ಮಂಕಾಗಿಸಿದೆ. ಕಳೆದ ವರ್ಷದ ಶೈಕ್ಷಣಿಕ ಕೆಲಸ ಮುಗಿಯುವ ಮೊದಲೇ ನಿಗದಿಗೊಂಡ ಗಡಿ ಗುರುತಿಸುವಿಕೆ ಮತ್ತು ಮನೆಪಟ್ಟಿಯ ಕಾರ್ಯದಲ್ಲಿ ಇಡಿಯ ರಜೆ ಸರಸರನೆ ಕಳೆದುಹೋಗಿದೆ.

ವರ್ಷವಿಡೀ ಉಡುವ ಕಾಟನ್ ಸೀರೆಯನ್ನು ತೊಳೆದು ಗಂಜಿ ಹಾಕಿ ಬಿಸಿಲಿನಲ್ಲಿ ಒಣಗಿಸಿ, ಇಸ್ತ್ರಿ ಮಾಡಿ ಜೋಡಿಸುವಷ್ಟೂ ಸಮಯ ಸಿಗದಿರುವ ಬಗ್ಗೆ ಅಸಮಾಧಾನ ಹೆಪ್ಪುಗಟ್ಟಿದೆ. ಸೀರೆಯ ಬದಲು ಬಿರುಬೇಸಿಗೆಯಲ್ಲಿ ನಾವೇ ಒಣಗಿದ ಕಾರಣ ದೈಹಿಕ ಸುಸ್ತು ಕಾಡುತ್ತಿದೆ. ಕಾಲೆಳೆದುಕೊಂಡು ಕಾಲೇಜಿಗೆ ಪ್ರವೇಶಿದ ಗಳಿಗೆಯಲ್ಲೇ ಪ್ರವೇಶದ್ವಾರದಲ್ಲಿ ರಾರಾಜಿಸುತ್ತಿದ್ದ ವಿಶಿಷ್ಟ ಶ್ರೇಣಿ ಪಡೆದ ನೂರರಷ್ಟು ಮಕ್ಕಳ ಫೋಟೋ ನಡಿಗೆಗೆ ಚೂರು ಹುರುಪನ್ನು ತುಂಬಿದೆ.

ಕಾಲೇಜಿನ ಮುಂಬಾಗಿಲಲ್ಲೇ ನಮ್ಮ ಬರವನ್ನು ಕಾಯುತ್ತಿದ್ದ ಆ ಕನಸುಗಂಗಳ ಹುಡುಗಿ, “ಮೇಡಂ, ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ನಾ ಪಾಸಾದೆ. ಇನ್ಮುಂದೆ ಚಂದ ಓದ್ತೇನೆ.” ಎಂದು ಕಣ್ಣರಳಿಸಿದಾಗ ತಲೆ ನೇವರಿಸುತ್ತೇನೆ. ತಾಯಿಯಿಲ್ಲದ ಆ ಹುಡುಗಿ ಮದರ್ಸ್ ಡೇಗೆ ನನಗೆ ಸಂದೇಶ ಕಳಿಸಿದ್ದಾಳೆ. ಮನೆಯ ಏಕಮಾತ್ರ ದುಡಿಯುವ ಜೀವವಾದ ಅವಳ ತಂದೆ ಡಯಾಲಿಸೀಸ್ ಪೇಶಂಟ್, ತಮ್ಮ, ತಂಗಿಯರಿನ್ನೂ ಚಿಕ್ಕವರು. ಅವರೆಲ್ಲರಿಗೂ ತಾಯಿಯಾಗಿರುವ ಈ ಹುಡುಗಿ ಚೈತನ್ಯದ ಚಿಲುಮೆಯಂತೆ ಸದಾ ಚಿಮ್ಮುತ್ತಿರುತ್ತಾಳೆ.

ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣಳಾದರೂ ಮತ್ತೆ ಹಠದಿಂದ ಪರೀಕ್ಷೆ ಬರೆದು ಪಾಸಾಗಿ ನಿಂತು ನಗುವ ಅವಳೆದುರು ನಮ್ಮೊಳಗಿನ ಜಡತ್ವ ಕರಗಿಹೋಗುತ್ತದೆ. ಅಟೆಂಡೆನ್ಸ್ ಶೀಟನ್ನು ಅವಳ ಕೈಗಿಟ್ಟು ಯಾರೆಲ್ಲ ಬಂದಿದ್ದಾರೆ ನೋಡಿ ಬಾ ಎಂದು ಕಳಿಸುತ್ತೇನೆ. ಕಾಲೇಜಿನ ಎದುರೆಲ್ಲಾ ಸಾಲು, ಸಾಲು ಬಟ್ಟೆಯ ಬ್ಯಾಗುಗಳು, ಅದನ್ನು ಕಾಯುತ್ತ ಕುಳಿತ ಅಮ್ಮಂದಿರು, ಅವರ ಸೆರಗು ಹಿಡಿದೆಳೆವ ಪುಟ್ಟ ಕೂಸುಗಳು, ಪಕ್ಕದಲ್ಲೇ ಅರಿವೆಯಲ್ಲಿ ಕಟ್ಟಿತಂದ ಬುತ್ತಿಯ ಗಂಟುಗಳು… ಯಾವುದೇ ಜಾಹೀರಾತುಗಳ ಹಂಗಿಲ್ಲದೇ ರಾಜ್ಯದ ಹತ್ತೆಂಟು ಜಿಲ್ಲೆಗಳಿಂದ ಈ ತಾಯಂದಿರು ಅವರ ಸಂಬಂಽಕರು ಯಾರೋ ಹೇಳಿದರೆಂದು ನಮ್ಮ ಕಾಲೇಜಿಗೆ ಮಗಳನ್ನು ಸೇರಿಸಲು ಸಾಲುಗಟ್ಟುತ್ತಾರೆ.

ಸರಕಾರ ನೀಡಿದ ಉಚಿತ ಸಾರಿಗೆ ಸೌಲಭ್ಯವನ್ನು ಉಪಯೋಗಿಸಿಕೊಂಡು ಊರಿನಿಂದ ನೇರವಾಗಿ ಕಾಲೇಜಿನ ಅಂಗಳಕ್ಕೆ ಬಂದಿಳಿಯುತ್ತಾರೆ. ಹಾಸ್ಟೆಲ್ಲುಗಳು ಪ್ರಾರಂಭವಾಗಲು ತಡವಿರುವುದರಿಂದ ರಾತ್ರಿಯಿಳಿಯುವ ಮುನ್ನ ಹತ್ತಿರದ ಯಾವುದಾದರೂ ಪಿ.ಜಿ.ಯಲ್ಲಿ ಮಗಳನ್ನು ಬಿಟ್ಟು ಊರಿನ ಬಸ್ ಹತ್ತುವ ಧಾವಂತದಲ್ಲಿರುತ್ತಾರೆ. ಕೆಲವೇ ನೂರು ರೂಪಾಯಿಗಳ ಫೀಸುಗಳಿಗಾಗಿ ತಮ್ಮ ಸೆರಗಿನಂಚಿನಲ್ಲಿ ಕಟ್ಟಿರುವ ಪುಡಿಗಾಸನ್ನು ತಡಕಾಡುತ್ತಾರೆ. ಕಡಿಮೆಯಾದ ಹತ್ತೊ, ಇಪ್ಪತ್ತನ್ನು ಅಲ್ಲಿರುವ ಶಿಕ್ಷಕರೇ ಭರಿಸಿದಾಗ ಅವರನ್ನು ಕೃತಜ್ಞತೆಯ ನೋಟದಲ್ಲಿ ಮುಳುಗಿಸುತ್ತಾರೆ. ಹನಿಗಣ್ಣಾಗುತ್ತ ಕರುಳಕುಡಿಯನ್ನು ತರಗತಿಯೊಳಗೆ ಬೀಳ್ಕೊಡುತ್ತಾರೆ.

ಕನಸುಗಂಗಳ ಈ ಹುಡುಗಿಯರ ಕಲರವದಿಂದಾಗಿ ಜಡವಾಗಿದ್ದ ಕಟ್ಟಡಗಳಿಗೆ ಜೀವ ಬರುತ್ತದೆ. ಅವರ ನಡಿಗೆಯ ಚುರುಕುತನದಿಂದ ಸುತ್ತಲಿನ ಪರಿಸರ ಚಲನಶೀಲವಾಗುತ್ತದೆ. ಅವರ ನಗೆಬುಗ್ಗೆಯ ಮೇರುಗಿಗೆ ಬಾನಂಚಿನ ಮೋಡ ಕೆಳಗಿಳಿದು ಬಿರುಮಳೆಯಾಗತೊಡಗುತ್ತದೆ. ಎರಡು ವರ್ಷಗಳ ಕಾಲ ಈ ಕಾವುಗೂಡಿನಲ್ಲಿ ತಮ್ಮ ಕನಸುಗಳ ಮೊಟ್ಟೆಯನ್ನು ಕಾಪಿಡುವ ಹುಡುಗಿಯರು ಪಿ.ಯು. ಮುಗಿಯುವ ಹೊತ್ತಿಗಾಗಲೇ ಬೇಗನೆ ಕೆಲಸ ಸಿಗುವ, ನಾವಿನ್ನೂ ಕೇಳಿಯೇ ಇರದ ಥರಾವರಿ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ಅಚ್ಚರಿ ಮೂಡಿಸುತ್ತಾರೆ. ಶೈಕ್ಷಣಿಕ ಸಾಲದ ನೆರವಿನಿಂದ ಓದಿ ಮನೆಗೆ ಊರುಗೋಲಾಗಿ ನಿಲ್ಲುತ್ತಾರೆ.

ಟೆಂಟ್ ಹೌಸಿನಿಂದ ಚಂದದ ಮನೆಗೆ ಕುಟುಂಬವೊಂದು ವರ್ಗಾವಣೆಯಾಗುವ ಈ ಪವಾಡವನ್ನು ನಾವೆಲ್ಲರೂ ಕಣ್ತುಂಬಿಸಿಕೊಳ್ಳುತ್ತಲೇ ನಮ್ಮೊಳಗಿನ ಶಿಕ್ಷಕರನ್ನು ಪುನಶ್ಚೇತನಗೊಳಿಸಿಕೊಳ್ಳುತ್ತೇವೆ.
preesugathu@gmail.com

Tags:
error: Content is protected !!