Mysore
24
broken clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಓದುಗರ ಪತ್ರ: ಶ್ರೀಕಂಠೇಶ್ವರ ದೇಗುಲದ ಆನೆ ಗೌರಿ ಕರೆತರಲು ನಿರ್ಲಕ್ಷ್ಯವೇಕೆ?

ಓದುಗರ ಪತ್ರ

ನಂಜನಗೂಡಿನ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾನದ ಪಟ್ಟದ ಆನೆ ಗೌರಿಯನ್ನು ಕಾಲಿನ ಗಾಯ ಹಾಗೂ ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ೨೦೧೭ರಲ್ಲಿ ಬೆಂಗಳೂರಿನ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆನೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿ ಸುಮಾರು ೮ ವರ್ಷಗಳೇ ಕಳೆದಿದ್ದು, ಗುಣಮುಖವಾಗಿರುವ ಆನೆಯನ್ನು ಇನ್ನೂ ಕರೆತಂದಿಲ್ಲ.

ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಸಾಂಪ್ರದಾಯಿಕ ಕೈಂಕರ್ಯಗಳು, ಉತ್ಸವ, ಮೆರವಣಿಗೆಗಳಲ್ಲಿ ಸದಾ ಮುಂಚೂಣಿಯಲ್ಲಿ ಕಾಣುತ್ತಿದ್ದ ಗೌರಿ ಆನೆ ಇಲ್ಲದೆ ತೊಂದರೆಯಾಗುತ್ತಿದೆ.

ಆನೆ ತಂಗಲು ನಿರ್ಮಿಸಿದ್ದ ದೇವಸ್ಥಾನದ ಮುಂಭಾಗದ ಶೆಡ್ ಕೂಡ ಖಾಲಿಯಾಗಿ ಬಿಕೋ ಎನ್ನುತ್ತಿದ್ದು, ಗೌರಿಯ ದರ್ಶನಕ್ಕೆ ಆಗಾಗ್ಗೆ ಬರುತ್ತಿದ್ದ ಶಾಲಾ ಮಕ್ಕಳು, ಭಕ್ತ ಸಮೂಹ ನಿರಾಸೆಯಿಂದ ತೆರಳುತ್ತಿದ್ದಾರೆ. ಧಾರ್ಮಿಕ ಹಾಗೂ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವಂತಹ ಈ ದೇಗುಲ ಅತಿ ಹೆಚ್ಚು ಆದಾಯ ಬರುವ ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾಗಿದ್ದು, ಹುಂಡಿಯ ಹಣ, ಧಾರ್ಮಿಕ ಸೇವಾ ಕಾರ್ಯಗಳ ಶುಲ್ಕಗಳಿಂದಾಗಿ ವಾರ್ಷಿಕ ಸುಮಾರು ೧೦-೧೫ ಕೋಟಿ ರೂ. ಆದಾಯ ಬರುತ್ತಿದೆ.

ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಆನೆ ಕರೆ ತರಲು ಹಿಂದೇಟು ಹಾಕುತ್ತಿರುವುದಾದರೂ ಯಾವ ಕಾರಣಕ್ಕೆ? ಇನ್ನಾದರೂ ಶ್ರೀಕಂಠೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಶಾಸಕರಾದ ದರ್ಶನ್ ಧ್ರುವ ನಾರಾಯಣ ಅವರು ದೇವಾಲಯದ ಪಟ್ಟದ ಆನೆ ಗೌರಿಯನ್ನು ವಾಪಸ್ ಕರೆ ತರಲು ಕ್ರಮ ಕೈಗೊಳ್ಳಬೇಕಾಗಿದೆ.

– ಅನಿಲ್ ಕುಮಾರ್, ನಂಜನಗೂಡು

 

 

Tags:
error: Content is protected !!