Mysore
25
broken clouds

Social Media

ಗುರುವಾರ, 14 ಮೇ 2026
Light
Dark

ನೀಟ್‌ ಪರೀಕ್ಷೆಯ ರದ್ದು, ಕೇಂದ್ರ ಸರ್ಕಾರದ ಬಹು ದೊಡ್ಡ ಹಗರಣ: ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು: ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು ಮಾಡುವ ಮೂಲಕ ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ ಲಕ್ಷಾಂತರ ಜೀವನದ ಜೊತೆ ಚೆಲ್ಲಾಟವಾಡಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇ.೩ರಂದು ನಡೆದಿದ್ದ ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ರದ್ದುಪಡಿಸಿದ ಕೇಂದ್ರ ಸರ್ಕಾರವನ್ನು ಸಚಿವರು ಟೀಕಿಸಿದ್ದಾರೆ.

ಈ ಕುರಿತು ವರಿಗಾರರೊಂದಿಗೆ ಮಂಗಳವಾರ ಮಾತನಾಡಿರುವ ಸಚಿವರು, ನೀಟ್‌ ಎನ್ನುವುದು ಕೇಂದ್ರ ಸರ್ಕಾರದ ಬಹುದೊಡ್ಡ ಹಗರಣವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ನೀಟ್‌ನಲ್ಲಿ ಒಂದಲ್ಲ ಒಂದು ಗೊಂದಲಗಳು, ಅಕ್ರಮಗಳು ನಡೆಯುತ್ತಲೇ ಇವೆ. ಇದಕ್ಕೆ ಕೊನೆಯೇ ಇಲ್ಲದಂತಾಗಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ಹೊಣೆ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಮತ್ತೊಮ್ಮೆ ಬಹುದೊಡ್ಡ ಅಚಾತುರ್ಯವಾಗಿದೆ ಎಂದು ಡಾ. ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರವೇ ಇದರ ಸಂಪೂರ್ಣ ಹೊಣೆ ಹೊರಬೇಕಾಗಿದೆ. ತಪ್ಪಿತಸ್ಥರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಬೇಕಾಗಿದೆ. ಇದು ಕೇಂದ್ರ ಸರ್ಕಾರ ಅಮರ್ಥತತೆಗೆ ಸಾಕ್ಷಿಯಾಗಿದೆ. ಇದರಲ್ಲಿ ಭಾಗಿಯಾದವರಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈಗ ಮತ್ತೊಮ್ಮೆ ಪರೀಕ್ಷೆ ನಡೆಸುವುದರಿಂದ ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತಾಗುತ್ತದೆ. ವಿದ್ಯಾರ್ಥಿಗಳು, ಕುಟುಂಬದವರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಮಾನಸಿಕ ಒತ್ತಡವೂ ಹೆಚ್ಚಾಗಲಿದೆ ಎಂದು ಡಾ. ಪಾಟೀಲ್‌ ವಿವರಿಸಿದ್ದಾರೆ.

ಪ್ರತಿ ವರ್ಷ ಆಗುತ್ತಿರುವ ಪ್ರಮಾದವನ್ನು ಸರಿ ಮಾಡಲು ಕೇಂದ್ರ ಸರ್ಕಾರಕ್ಕೆ ಆಗುತ್ತಿಲ್ಲ ಎಂದರೆ ಇದು ನಿಜಕ್ಕೂ ಅಸಮರ್ಥ ಸರ್ಕಾರವಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ ಎಂದರೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ ಎಂದೇ ಅರ್ಥ. ಕೇಂದ್ರ ಬಿಜೆಪಿ ಭ್ರಷ್ಟ ಸರ್ಕಾರವಾಗಿದೆ. ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೊಡ್ಡ ದೊಡ್ಡ ಭಾಷಣ ಮಾಡುವುದಲ್ಲ. ಇಂಥ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರಕಿಸಿಕೊಡಬೇಕು. “ಪರೀಕ್ಷಾ ಪೇ ಚರ್ಚಾ” ಮಾಡುವವರು ಈ ಪರೀಕ್ಷೆಯಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಲಿ ಎಂದು ಡಾ. ಪಾಟೀಲ್‌ ಹೇಳಿದ್ದಾರೆ.

ಕರ್ನಾಟಕದಲ್ಲಿ ನಾವು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿದಾಗ ಇಂಥ ಯಾವುದೇ ಪ್ರಮಾದ ನಡೆದಿಲ್ಲ. ನಮ್ಮ ಪರೀಕ್ಷಾ ಮಾದರಿಯು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಡಾ. ಶರಣಪ್ರಕಾಶ ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ, ಪ್ರಧಾನಿಗೆ ಪರೀಕ್ಷೆ ನಡೆಸುವ ಗಂಧ ಗಾಳಿ ಗೊತ್ತಿಲ್ಲ. ಅದಕ್ಕಾಗಿ ಪ್ರತಿ ವರ್ಷ ತಪ್ಪುಗಳ ಮೇಲೆ ತಪ್ಪು ಎಸಗುತ್ತಲೇ ಇದೆ. ಇಂಥವರಿಗೆ ಜನರು ತಕ್ಕ ಪಾಠ ಕಲಿಸಬೇಕಾಗಿದೆ ಎಂದು ವಿವರಿಸಿದ್ದಾರೆ.

ವಿದ್ಯಾರ್ಥಿಗಳು ನೀಟ್‌ ಗಾಗಿ ಸಾಕಷ್ಟು ಪರಿಶ್ರಮ ಪಟ್ಟು ಮಾನಸಿಕ ಒತ್ತಡದಿಂದ ಮುಕ್ತರಾಗಿದ್ದರು. ಈಗ ಪರೀಕ್ಷೆ ರದ್ದು ಮಾಡಿದ್ದರಿಂದ ಅವರ ಮೇಲೆ ಒತ್ತಡ ಹೇರಿದಂತಾಗಿದೆ. ಆದರೆ ವಿದ್ಯಾರ್ಥಿಗಳು ಈ ಜೀವನ ಕಷ್ಟಕಾಲದಲ್ಲಿ ಯಾವುದೇ ಆತಂಕಕ್ಕೆ ಒಳಗಾಗದೇ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗೆ ಸಿದ್ಧರಾಗಬೇಕಾಗಿದೆ. ಇದೇ ನನ್ನ ಆತ್ಮೀಯ ಸಲಹೆ ಎಂದು ಡಾ. ಶರಣಪ್ರಕಾಶ ಪಾಟೀಲ್‌ ತಿಳಿಸಿದ್ದಾರೆ.

 

Tags:
error: Content is protected !!