ಗೋವಿಂದರಾಜು
ದಲಿತ ವಿದ್ಯಾರ್ಥಿಗಳ ಉನ್ನತ ಓದಿಗೆ ಆಸರೆಯಾಗಿರುವ ಅವ್ವ
ಅದು ಉತ್ತರಪ್ರದೇಶದ ಒಂದು ಇಂಜಿನಿಯರಿಂಗ್ ಕಾಲೇಜ್. ಪದವಿ ಕಲಿತು ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದು ಹುಡುಗನೊಬ್ಬ ಅಲ್ಲಿಗೆ ಪ್ರವೇಶ ಪಡೆದುಕೊಳ್ಳುತ್ತಾನೆ. ಆದರೆ, ಅಲ್ಲಿ ಕಲಿ ಯುವ ವೇಳೆಯಲ್ಲಿಯೇ ದಲಿತ ಎಂಬ ಕಾರಣಕ್ಕೆ ಹಲವಾರು ಅಡೆತಡೆಗಳು ಎದುರಾಗುತ್ತವೆ.
ತಾರತಮ್ಯ ಅನುಭವಿಸಿದ ಹುಡುಗನಿಗೆ ನನ್ನ ತರಹ ತನ್ನ ಸಮುದಾಯದ ಮುಂದಿನ ಪೀಳಿಗೆ ಇಂಥ ತಾರತಮ್ಯ ಅನುಭವಿಸಬಾರದು ಎಂಬ ಕನಸು ಹುಟ್ಟಿಕೊಳ್ಳುತ್ತದೆ. ಹಾಗೆ ಕನಸು ಕಂಡ ಹುಡುಗ ಅನೂಪ್ ಕುಮಾರ್ ಮತ್ತು ಆತನ ಕನಸಿನ ಕೂಸು ನಳಂದ ಅಕಾಡೆಮಿ. ಇದು ದೇಶದ ಉದ್ದಗಲಕ್ಕೂ ದಲಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಲು ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಸಲಹೆ, ಸಹಕಾರ, ಸಹಾಯಹಸ್ತ ಚಾಚುತ್ತಿರುವ ಮಮತೆಯ ಅಕಾಡೆಮಿ.
ಆರಂಭವಾಗಿದ್ದು ೧೯೯೫ ಮತ್ತು ೧೯೯೮ರ ನಡುವೆ. ಆದರೆ, ವಿಧ್ಯುಕ್ತವಾಗಿ ಕಾರ್ಯಾರಂಭವಾಗಿದ್ದು ೨೦೧೩ರಲ್ಲಿ ವಾರ್ಧ್ ಎಂಬ ಪ್ರದೇಶದಲ್ಲಿ. ಸಾಮಾಜಿಕ ಅಸಮಾನತೆಯನ್ನು ಮೆಟ್ಟಿ ನಿಂತು ತಳ ಸಮುದಾಯದ ದಲಿತ ವಿದ್ಯಾರ್ಥಿ ಗಳು ಸಮಾನ ಅವಕಾಶವನ್ನು ಪಡೆದು ಉನ್ನತ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಅವಕಾಶ ಕಲ್ಪಿಸುವುದು ಈ ಅಕಾಡೆಮಿಯ ಉದ್ದೇಶ ಮತ್ತು ಕನಸಾಗಿದೆ.
ಸ್ನಾತಕೋತ್ತರ ಪದವಿ ಪಡೆಯುವ ಸಲುವಾಗಿ, ನವದೆಹಲಿಯ ಜವಾ ಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯಕ್ಕೆ ಜುಲೈ ೨೦೦೧ರಲ್ಲಿ ಪ್ರವೇಶ ಪಡೆಯುವ ಅನೂಪ್ ಕುಮಾರ್ ಅಂಬೇಡ್ಕರ್ ಆಶಯಗಳನ್ನು ಹೊತ್ತ ಅಲ್ಲಿನ ಸಂಘಟನೆಯಾದ ‘ಯುನೈಟೆಡ್ ದಲಿತ್ ಸ್ಟೂಡೆಂಟ್ ಫೋರಂ’ನ ಸದಸ್ಯರಾಗುತ್ತಾರೆ. ಅಲ್ಲಿ ಗ್ರಾಮೀಣ ಹಿನ್ನೆಲೆ ಮತ್ತು ಇಂಗ್ಲಿಷ್ ಅರಿವಿಲ್ಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಮತ್ತು ಇಂಗ್ಲಿಷ್ ಕಲಿಸಲು ಸಮಾನ ಮತ್ತು ಗುಣಮಟ್ಟದ ಶಿಕ್ಷಣದ ಆಶಯ ಹೊತ್ತು ಪುಟ್ಟ ಗ್ರಂಥಾಲಯ ಹಾಗೂ ಕಂಪ್ಯೂಟರ್ ಕೇಂದ್ರವೊಂದನ್ನು ವಸತಿ ನಿಲಯದ ಒಂದು ಕೋಣೆಯಲ್ಲಿ ಆರಂಭಿಸುತ್ತಾರೆ.
ದಲಿತ ವಿದ್ಯಾರ್ಥಿಗಳ ಮೊದಲ ವೃತ್ತಪತ್ರಿಕೆ ಮತ್ತು ಸಮ್ಮೇಳನ: ಅಲಕ್ಷಿತ ಮತ್ತು ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಧ್ವನಿಯಾಗುವ ಸಲುವಾಗಿ ೨೦೦೪ರಲ್ಲಿ ಇನ್ಸೈಟ್ ಎಂಬ ವೃತ್ತಪತ್ರಿಕೆಯನ್ನು ಆರಂಭ ಮಾಡುತ್ತಾರೆ. ವಿಶೇಷವೆಂದರೆ ಭಾರತದ ೮೦ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗುತ್ತಾರೆ. ಉನ್ನತ ಶಿಕ್ಷಣದಲ್ಲಿ ಜಾತಿ ಆಧಾರಿತ ತಾರತಮ್ಯ ವಿರೋಧಿಸುವ ಸಲುವಾಗಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿಗಳನ್ನು ಸಂಘಟಿಸುವ ಸಲುವಾಗಿ ೨೦೦೬ರ ಅಕ್ಟೋಬರ್ ತಿಂಗಳಿನಲ್ಲಿ ರಾಷ್ಟ್ರೀಯ ದಲಿತ ವಿದ್ಯಾರ್ಥಿ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾರತದ ೨೦ ವಿಶ್ವವಿದ್ಯಾನಿಲಯಗಳ ೮೦ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದು ಹೆಚ್ಚುಗಾರಿಕೆಯಾಗಿದೆ.
ಹೆಮ್ಮೆಯ ವಿಷಯವೆಂದರೆ, ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಅನೂಪ್ ಕುಮಾರ್ ೨೦೦೬ರಲ್ಲಿ ಜೆ.ಎನ್.ಯು.ನಲ್ಲಿಯೇ ‘ಇನ್ಸೈಟ್ ಫೌಂಡೇಶನ್’ ಆರಂಭಿಸುತ್ತಾರೆ. ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸಿ ಉನ್ನತ ಶಿಕ್ಷಣದಲ್ಲಿ ಸಮಾನ ಅವಕಾಶ ಪಡೆಯುವುದು ಹೇಗೆ ಎಂಬುದನ್ನು ಮನವರಿಕೆ ಮಾಡಿಕೊಡುವುದನ್ನು ಮುಖ್ಯ ಉದ್ದೇಶವನ್ನಾಗಿಸಿಕೊಂಡು ಅದರ ಭಾಗವಾಗಿ ಸದರಿ ಸಮುದಾಯದ ವಿದ್ಯಾರ್ಥಿಗಳಿಗೆ ಸಹಾಯವಾಣಿ ಮೂಲಕ ಶೈಕ್ಷಣಿಕ ಪ್ರಯಾಣದ ದಿಕ್ಸೂಚಿಯಾಗಿ ಫೌಂಡೇಶನ್ ಕಾರ್ಯನಿರ್ವಹಿಸುತ್ತಿದೆ. ೨೦೦೬ರಿಂದ ೨೦೧೨ವರೆಗೆ ದೇಶಾದ್ಯಂತ ವಿಶ್ವವಿದ್ಯಾನಿಲಯಗಳಲ್ಲಿ ಹಲವಾರು ಕಾರ್ಯಚಟುವಟಿಕೆಗಳನ್ನು ನಡೆಸುವುದರ ಮೂಲಕ ಒಂದು ಸಂಪರ್ಕ ಸೇತುವೆಯನ್ನು ನಿರ್ಮಾಣ ಮಾಡಿಕೊಡುತ್ತದೆ.
ಈ ಸಂದರ್ಭದಲ್ಲಿ ಇನ್ಸೈಟ್ ಸಂಸ್ಥೆಯು ಒಂದು ಗಂಭೀರ ವಿಷಯವನ್ನು ಎದುರಿಸಬೇಕಾಗಿ ಬರುತ್ತದೆ. ಹಲವಾರು ಹೆಸರಾಂತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯದ ಜ್ವಾಲೆಯ ಫಲವಾಗಿ ಹಲವಾರು ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ವಿಷಮ ಪರಿಸ್ಥಿತಿ ಫೌಂಡೇಶನ್ ಮುಂದಿರುತ್ತದೆ. ೨೦೧೧-೧೨ರವರೆಗೆ ಜರುಗಿದ ಇಂತಹ ೨೨ ಪ್ರಕರಣಗಳನ್ನು ಕೇಂದ್ರೀಕರಿಸಿ ನಾಲ್ಕು ಭಾಗಗಳಾಗಿ, ‘ದ ಡೆತ್ ಆಫ್ ಮೆರಿಟ್’ ಎಂಬ ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡುತ್ತದೆ. ಇದು ಉನ್ನತ ಶಿಕ್ಷಣದಲ್ಲಿ ದಲಿತ ವಿದ್ಯಾರ್ಥಿಗಳಿಗೆ ಆಗುತ್ತಿರುವ ಕಠೋರ ಸತ್ಯ ಹಾಗೂ ವ್ಯವಸ್ಥೆಯ ಅನ್ಯಾಯವನ್ನು ಎಳೆಎಳೆಯಾಗಿ ಜನರ ಮುಂದೆ ಬಿಚ್ಚಿಡುತ್ತದೆ.
ರಾಷ್ಟ್ರೀಯ ಮಟ್ಟದ ದಲಿತ ಮತ್ತು ಆದಿವಾಸಿ ಹೆಣ್ಣುಮಕ್ಕಳ ಪ್ರಥಮ ಸಮ್ಮೇಳನ: ಅಲಕ್ಷಿತ ಸಮುದಾಯಗಳ ಹೆಣ್ಣುಮಕ್ಕಳಲ್ಲಿ ಸಾಮುದಾಯಿಕ ಸಶಕ್ತೀಕರಣವನ್ನು ಹುಟ್ಟು ಹಾಕುವ ಸಲುವಾಗಿ ಮುಂಬೈನ ಟಿ.ಐ.ಎಸ್.ಎಸ್. ಸಂಸ್ಥೆಯ ಸಹಯೋಗದಲ್ಲಿ ‘ಇನ್ಸೈಟ್ ಫೌಂಡೇಶನ್’ ೨೦೧೩ರಲ್ಲಿ ರಾಷ್ಟ್ರೀಯ ಮಟ್ಟದ ಆದಿವಾಸಿ ಮತ್ತು ದಲಿತ ಹೆಣ್ಣು ಮಕ್ಕಳ ಪ್ರಥಮ ಸಮ್ಮೇಳನವನ್ನು ಆಯೋಜಿಸುತ್ತದೆ. ಅದರಲ್ಲಿ ಚಳವಳಿಗಾರರು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಪರಿಣತರು ಹೀಗೆ ದೇಶದ ಸುಮಾರು ೩೦೦ ಹೆಣ್ಣುಮಕ್ಕಳು ಭಾಗವ ಹಿಸಿ ಮತ್ತೊಂದು ಶೈಕ್ಷಣಿಕ ಚಳವಳಿಗೆ ನಾಂದಿಯಾಗಿದ್ದಂತೂ ನಿಜ. ಹೀಗಿರುವಾಗಲೇ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿ ಸರ್ಕಾರದ ಗಮನವನ್ನು ಸೆಳೆಯಿತು. ಆದರೆ ಫಲಿತಾಂಶ ಶೂನ್ಯ. ಸಂತ್ರಸ್ತನಿಗಾಗಲಿ ಅಥವಾ ಆತನ ಕುಟುಂಬಕ್ಕಾಗಿ ನ್ಯಾಯ ಮರೀಚಿಕೆಯಾಗಿ ಉಳಿಯುತ್ತದೆ. ಆಗಲೇ ಅನೂಪ್ ಕುಮಾರ್ ಅವರಿಗೆ ನೇರವಾಗಿ ತಳಮಟ್ಟದಲ್ಲಿ ಕೆಲಸ ನಿರ್ವಹಿಸಬೇಕು ಎಂಬುದು ಮನದಟ್ಟಾಗುತ್ತದೆ. ೨೦೧೩ ಜುಲೈನಲ್ಲಿ ಅವರು ವಾರ್ಧಾಗೆ ಹೋಗಿ ಅಲ್ಲಿನ ‘ಡಾ.ಅಂಬೇಡ್ಕರ್ ಸಮಾಜ ಸೇವೆ’ ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರ ಜೊತೆಗೆ ಮಾರ್ಗದರ್ಶನ ನೀಡಲು ಆರಂಭಿಸಿದರು.
ಐದು ತಿಂಗಳ ಸತತ ಪರಿಶ್ರಮದ ಫಲವಾಗಿ ವಾರ್ಧಾ ಜಿಲ್ಲೆಯ ೨೪ ವಿದ್ಯಾರ್ಥಿಗಳು ಟಿ.ಐ.ಎಸ್.ಎಸ್. ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಬರೆದು ೧೧ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಐದು ವಿದ್ಯಾರ್ಥಿಗಳು ಅಂತಿಮಸುತ್ತಿಗೆ ಪ್ರವೇಶ ಪಡೆದರು. ಇದು ಬಹುಮುಖ್ಯ ತಿರುವು ಪಡೆದುಕೊಂಡಿತು. ಗ್ರಾಮೀಣ ಮರಾಠಿ ಮಾಧ್ಯಮ ಅಥವಾ ಪ್ರಾದೇಶಿಕ ಮಾತೃ ಭಾಷೆ, ರಾಜ್ಯ ಭಾಷೆ ಹಿನ್ನೆಲೆಯ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನ ಪಡೆದರೆ ವಿಶೇಷ ಪರಿಣತಿ ಪಡೆದು ರಾಷ್ಟ್ರೀಯ ಮಟ್ಟದ ಪರೀಕ್ಷೆಯನ್ನೂ ಜಯಿಸ ಬಲ್ಲರು ಎಂಬುದು ನಿಜವಾಯಿತು. ಈ ಯಶಸ್ಸು ವಾರ್ಧಾದ ಇಂಜಿನಿಯ ರಿಂಗ್ ಪದವೀಧರ ಕಪಿಲ್ ವಾಂಖೆಡೆ ಸಹಯೋಗದಲ್ಲಿ ಗ್ರಾಮೀಣ ಭಾಗದ ಮತ್ತು ನಿರ್ಲಕ್ಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿ, ಗುಣಮಟ್ಟದ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡುವ ನಳಂದ ಅಕಾಡೆಮಿಯನ್ನು ಹುಟ್ಟು ಹಾಕಲು ಕಾರಣವಾಯಿತು.
ಸಪ್ನ ಜಂಬೂಲ್ಕರ್ ಮತ್ತು ಮೀನಾಕ್ಷಿ ಜೀವಾನೇ ಅವರ ಮಾರ್ಗದರ್ಶನದಲ್ಲಿ ಸ್ನೇಹಿತರ ನೆರವಿನೊಂದಿಗೆ ಸುಬೇದಾರ್ ರಾಮ್ ಜಿ ಅಂಬೇಡ್ಕರ್ ಸಾರ್ವಜನಿಕ ಗ್ರಂಥಾಲಯವನ್ನು ೨೦೧೪ರಲ್ಲಿ ಆರಂಭಿಸಿ, ಅಂಬೇಡ್ಕರ್ ಸಮಾಜ ಸೇವೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಆಸಕ್ತರಿಗೆ ಕಲಿಕೆಗೆ ನೆರವಾಗತೊಡಗಿತು. ೨೦೧೯ರ ನಂತರ ೧೫ ಬುದ್ಧ ವಿಹಾರಗಳಲ್ಲಿ ವಿಸ್ತಾರಗೊಂಡ ಗ್ರಂಥಾಲಯಗಳಿಗೆ ‘ಅಭಿಯಾನ್’ ಅವರ ಹೆಸರನ್ನಿಟ್ಟು ನಡೆಸಲಾಗುತ್ತಿದೆ. ಜೊತೆಗೆ ಸ್ಥಳೀಯ ಬೌದ್ಧ ಸಮುದಾಯದ ನೆರವಿನೊಂದಿಗೆ ಸಮ್ಯಕ್ ಬುದ್ಧ ವಿಹಾರದಲ್ಲಿ ನಳಂದ ಅಕಾಡೆಮಿಯ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಾದ ಖಾಯಂ ಜಾಗ ದೊರೆಯಿತು. ಈ ಎಲ್ಲದರ ಪರಿಣಾಮವಾಗಿ ೨೦೧೬ರಿಂದ ದೇಶದ ಉದ್ದಗಲದಿಂದ ಹಲವಾರು ನಿರ್ಲಕ್ಷಿತ ಸಮುದಾಯಗಳ ವಿದ್ಯಾರ್ಥಿಗಳು ಇನ್ನೂ ಹೆಚ್ಚಾಗಿ ಕಲಿಕೆಗೆ ಸಹಾಯ ಅರಸಿ ಇಲ್ಲಿಗೆ ಬರಲು ಆರಂಭಿಸಿದರು.
ಬದಲಾವಣೆಯ ಹರಿಕಾರ ಪ್ರೊಫೆಸರ್ ಅಭಿಯಾನ್ ಹುಮಾನೆ: ನಳಂದ ಅಕಾಡೆಮಿಗೆ ೨೦೧೬ರಲ್ಲಿ ಪ್ರಥಮವಾಗಿ ಭೇಟಿ ಕೊಟ್ಟ ಸರ್ ಅಭಿಯಾನ್ ಹುಮಾನೆ ಅವರು ವಿದ್ಯಾರ್ಥಿಗಳ ಆಸಕ್ತಿ ಮತ್ತು ತಂಡದ ಉತ್ಸಾಹವನ್ನು ಮನಗಂಡು ಅವಿರತವಾಗಿ ತರಗತಿಗಳನ್ನು ತೆಗೆದುಕೊಳ್ಳುವುದು ಮತ್ತು ಮಾರ್ಗದರ್ಶನ ನೀಡುವುದನ್ನು ಮುಂದುವರಿಸಿದರು. ಅದೇ ವರ್ಷ ಸುಮಾರು ೨೦೦ ಅಂಬೇಡ್ಕರ್ ವಾದಿ ಯುವಜನರು ಮತ್ತು ವಿವಿಧ ಕ್ಷೇತ್ರಗಳ ಪರಿಣತರ ಜೊತೆ ಸಂವಾದ, ಸಹಯೋಗ ಮತ್ತು ಸಾಮುದಾಯಿಕ ಚಟುವಟಿಕೆಗಳನ್ನು ನಡೆಸುವ ಎರಡು ದಿನಗಳ ‘ನಾಗಪುರ್ ಕಲೆಕ್ಟಿವ್’ ಎಂಬ ಸಮ್ಮೇಳನವನ್ನು ಅಭಿಯಾನ್ ಹುಮಾನೆ , ಅನೂಪ್ ಕುಮಾರ್ ಮತ್ತು ಮಂಗೇಶ್ ದಹಿವಾಲೆ ಸೇರಿ ನಡೆಸಿ ಯಶಸ್ವಿಯಾಗಿದ್ದಲ್ಲದೆ, ಸಮುದಾಯದಲ್ಲಿ ಅರಿವು ವಿಸ್ತಾರಗೊಂಡಿತು.
ಈ ಯಶಸ್ಸು ೨೦೧೭ರಲ್ಲಿ ‘ಸಂಘಮಿತ್ರ ಕಲೆಕ್ಟಿವ್’ ಎಂಬ ಸಮ್ಮೇಳನದಲ್ಲಿ ೫೦೦ ಜನ ಹೆಣ್ಣುಮಕ್ಕಳು ಉನ್ನತ ಶಿಕ್ಷಣದ ಮಹತ್ವವನ್ನು ಅರಿಯಲು ಕಾರಣವಾಯಿತು. ನಾಗ್ಪುರದ ನಾಗಲೋಕ್‌ನಲ್ಲಿ ೨೦೨೩ರ ಡಿಸೆಂಬರ್ ೩೦ ಮತ್ತು ೩೧ರಂದು ‘ಬದಲಾವಣೆಯ ನಿಜ ಹರಿಕಾರರು: ಉನ್ನತ ಶಿಕ್ಷಣದಲ್ಲಿ ಸಾವಿತ್ರಿ ಮಕ್ಕಳ ಸಂಭ್ರಮಾಚರಣೆ’ ಎಂಬ ವಿಷಯದಡಿ ವಿದ್ಯಾರ್ಥಿನಿಯರ ಸಮ್ಮೇಳನವು ನಡೆಯಿತು.
ವಿಶೇಷವೇನೆಂದರೆ ಬರದಿಂದ ಹಲವಾರು ಸಾವು ನೋವನ್ನು ಅನುಭವಿಸಿದ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಸುಮಾರು ೨೫೦ ಜನ ಯುವತಿಯರು ಭಾಗವಹಿಸಿ ತಮ್ಮ ಅನುಭವ ಹಂಚಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡರು. ಆಗಲೇ ಸ್ಥಳೀಯ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಸಲುವಾಗಿ ಒಂದು ತಿಂಗಳ ಕಾಲ ಬೇಸಿಗೆ ವಿಜ್ಞಾನ ಶಿಬಿರವನ್ನು ಆಯೋಜಿಸಿ ಹಲವಾರು ಕ್ರಿಯಾಶೀಲ ಚಟುವಟಿಕೆಗಳನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಯಶಸ್ಸಿನ ಹರವು ಪ್ರೊ.ಅಭಿಯಾನ್ ಹುಮಾನೆ ಅವರಲ್ಲಿ ಮಹತ್ತರ ಬದಲಾವಣೆಯನ್ನು ತಂದಿತು. ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ತಮ್ಮ ವೃತ್ತಿಯನ್ನು ತ್ಯಜಿಸಿ ನಳಂದ ಪ್ರಯೋಗಶಾಲೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಹೀಗೆ ಸಲೀಸಾಗಿ ಸಿಕ್ಕ ಶೈಕ್ಷಣಿಕ ಗೆಲುವು ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿದ ತತ್ಪರಿಣಾಮ ೨೦೧೮ರಿಂದ ನಳಂದ ಅಕಾಡೆಮಿಯು ‘ಕ್ರಾಂತಿಜ್ಯೋತಿ ಸಾವಿತ್ರಿ ಫುಲೆ ಶಿಕ್ಷಣ ಜಾತ್ರೆ’ ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ವಾರ್ಧಾ ಜಿಲ್ಲೆಯಲ್ಲಿ ಹಮ್ಮಿಕೊಳ್ಳುತ್ತಾ ಬಂದಿದೆ. ಉನ್ನತ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ ಕುರಿತು ಸಂಪನ್ಮೂಲ ವ್ಯಕ್ತಿಗಳು ಆಕಾಂಕ್ಷಿಗಳಿಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.
ಹತ್ತು ವರ್ಷ ಅಮೆರಿಕದಲ್ಲಿ ಶಿಕ್ಷಣ ಪಡೆದು ನಂತರ ನಳಂದ ಅಕಾಡೆಮಿಗೆ ಸೇರಿಕೊಂಡು ಉಚಿತವಾಗಿ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುತ್ತಿದ್ದ ಶಿಕ್ಷಕ, ಕಥೆಗಾರ, ಮಾರ್ಗದರ್ಶಕ, ಕಲಾವಿದ, ವಿಜ್ಞಾನಿ ಮತ್ತು ಬದಲಾವಣೆ ಹರಿಕಾರ ಪ್ರೊ.ಅಭಿಯಾನ್ ಹುಮಾನೆ ಅವರು ೨೦೧೯ರ ಫೆಬ್ರವರಿ ೮ನೇ ತಾರೀಖು ಮರಣ ಹೊಂದು ತ್ತಾರೆ. ಹೊಸತನಕ್ಕೆ ತೆರೆದುಕೊಂಡ ನಳಂದ ಕೋವಿಡ್ -೧೯ ಪಿಡುಗಿನ ನಂತರ ‘ಡಿಜಿಟಲ್ ನಳಂದ’ ಎಂಬ ಉಚಿತ ಆನ್‌ಲೈನ್ ಕಲಿಕಾ ವೇದಿಕೆಯನ್ನು ಆರಂಭಿಸಿದೆ. ಇಲ್ಲಿ ಸುಮಾರು ೨೦೦ ಮಾರ್ಗದರ್ಶಕರು ದೇಶದ ೧೮ ಸಾವಿರಕ್ಕೂ ಹೆಚ್ಚು ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ನಳಂದ ಅಕಾಡೆಮಿಯ ವಸತಿ ಸಂಕೀರ್ಣ: ನಳಂದ ಅಕಾಡೆಮಿಯಲ್ಲಿ ಮಹತ್ತರ ಬದಲಾವಣೆಗೆ ಕಾರಣರಾದ ಪ್ರೊ. ಅಭಿಯಾನ್ ಹುಮಾನೆ ಅವರ ತಂದೆ ಶಶಿಕಾಂತ್ ಹುಮಾನೆ ಮತ್ತು ತಾಯಿ ಕಾಂತ ಅವರು ವಾರ್ಧಾ ಜಿಲ್ಲೆಯ ವೈಫಾದ್ ಎಂಬಲ್ಲಿ ನೀಡಿದ ೫೦ ಲಕ್ಷ ರೂ. ಮೌಲ್ಯದ ೯.೧೫ ಎಕರೆ ಜಾಗದಲ್ಲಿ ‘ನಳಂದ ಅಭಿಯಾನ್ ಕ್ಯಾಂಪಸ್’ ಎಂಬ ವಸತಿ ಸಂಕೀರ್ಣವನ್ನು ೨೦೨೦ರಲ್ಲಿ ಆರಂಭಿಸಲಾಯಿತು. ಆಧುನಿಕ ತರಗತಿ ಕೊಠಡಿಗಳು, ಅಧ್ಯಾಪಕರ ಕೊಠಡಿಗಳು, ಆಡಳಿತ ಕಚೇರಿ, ವಸತಿ ನಿಲಯ, ಊಟದ ಕೊಠಡಿ, ವಸತಿ ಸಂಕೀರ್ಣ ಮತ್ತು ಇನ್ನಿತರ ಸವಲತ್ತುಗಳನ್ನು ಒಳಗೊಂಡ ೨೦೦ ವಿದ್ಯಾರ್ಥಿಗಳು ಕಲಿಯಬಲ್ಲ ಕಟ್ಟಡವು ೨೦೨೬ ಅಂದರೆ ಈ ವರ್ಷವೇ ಆರಂಭಗೊಳ್ಳಲಿದೆ.
ಅಂತರ್ಶಿಸ್ತೀಯ ಸಂಶೋಧನೆಯನ್ನು ನಡೆಸುವ ಸಲುವಾಗಿ ೨೦೨೨ರಲ್ಲಿ ಸಮ್ಯಕ್ ಕೇಂದ್ರವನ್ನು ಆರಂಭಿಸಲಾಗಿದ್ದು, ಇಲ್ಲಿ ವಿಚಾರಸಂಕಿರಣಗಳು, ಕಾರ್ಯಾಗಾರಗಳು ಮತ್ತು ಸಂಬಂಧಿತ ಸಂಶೋಧನೆ, ಬೌದ್ಧಿಕ ಚಟುವಟಿಕೆಗಳು ನಡೆಯುತ್ತಿವೆ.
” ಕೇರಳದ ಕಣ್ಣೂರಿನ ಅಂಜರಕಾಂಡಿ ದಂತವೈದ್ಯ ಕಾಲೇಜಿನಲ್ಲಿ ಜಾತಿ ತಾರತಮ್ಯ ಅವಮಾನದಿಂದ ೨೨ ವರ್ಷದ ಮೊದಲ ವರ್ಷದ ದಲಿತ ವಿದ್ಯಾರ್ಥಿ ಆರ್.ಎಲ್.ನಿತಿನ್‌ರಾಜ್ ಆತ್ಮಹತ್ಯೆ ಮಾಡಿಕೊಂಡರು. ಈ ಹಿಂದೆ, ಅಂದರೆ ೨೦೧೬ ಜನವರಿ ೧೭ರಂದು ಅದೇ ಕಾರಣಕ್ಕೆ ಹೈದರಾಬಾದ್ ವಿಶ್ವವಿದ್ಯಾನಿಲಯದ ೨೬ರ ಹರಯದ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯ ನಿಯಂತ್ರಣಕ್ಕೆ ಅವರ ಹೆಸರಿನಲ್ಲೇ ರೋಹಿತ್ ವೇಮುಲ ಕಾಯ್ದೆ ಜಾರಿಯಾಗಿದೆ. ಆದರೂ, ಶೈಕ್ಷಣಿಕ ಶೋಷಣೆ ನಿಂತಿಲ್ಲ ಎಂಬುದು ಸತ್ಯ ಮತ್ತು ವಿಷಾದನೀಯ. ಇಂತಹ ಸಂದರ್ಭದಲ್ಲಿ ನಳಂದ ಅಕಾಡೆಮಿ, ಅಂತಹ ಸಮಸ್ಯೆಯಲ್ಲಿರುವವರಿಗೆ ಪರಿಹಾರ ಒದಗಿಸಬಲ್ಲದು.”
” ದೇಶ ಪ್ರಕಾಶಿಸುತ್ತಿದೆ ಎಂಬ ಹುಸಿ ಘೋಷಣೆಯ ಅಬ್ಬರಗಳ ಮರೆಯಲ್ಲಿ ನಳಂದ ಅಕಾಡೆಮಿ ಸಮ ಸಮಾಜ ನಿರ್ಮಾಣ ಮಾಡಲು ಒಲವುಳ್ಳ ಎಲ್ಲಾ ಸಾಂವಿಧಾನಿಕ ಮನಸ್ಸುಗಳಲ್ಲಿ ಭರವಸೆಯ ಬೀಜ ಬಿತ್ತಿ, ಸಮಾನತೆಯ ಕನಸಿಗೆ ನೀರೆರೆಯುತ್ತಿದೆ.”





