ಮಂಜು ಕೋಟೆ
ಕೋಟೆ: ಅಂದಾಜು ೫ ಕೋಟಿ ರೂ. ನಷ್ಟ; ಕಂಗಾಲಾದ ರೈತರು, ಸಾರ್ವಜನಿಕರು
ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಸುರಿದ ಭಾರೀ ಗಾಳಿ-ಮಳೆಗೆ ರೈತರು ಮತ್ತು ಸಾರ್ವಜನಿಕರ ೫ ಕೋಟಿ ರೂ. ಮೌಲ್ಯದ ಬೆಳೆಗಳು, ಮನೆ, ಆಸ್ತಿಪಾಸ್ತಿ ನಾಶವಾಗಿದ್ದು, ಮುಖ್ಯ ರಸ್ತೆ ಬದಿಯ ದೊಡ್ಡ ಮರಗಳು, ವಿದ್ಯುತ್ ಕಂಬಗಳು ಬಿರುಗಾಳಿಗೆ ಧರೆಗುರುಳಿವೆ.
ಬಿಸಿಲಿನ ತಾಪಮಾನದಿಂದ ಬಸವಳಿದಿದ್ದ ಸಾರ್ವಜನಿಕರಿಗೆ ಮಳೆ ಖುಷಿ ನೀಡಿತಾದರೂ ಬಿರುಗಾಳಿ ಮತ್ತು ಮಳೆಯಿಂದ ಬಾಳೆ, ಅಡಕೆ, ತೆಂಗು ಬೆಳೆಗಳು, ಮನೆಗಳ ಶೀಟುಗಳು, ಬೃಹತ್ ಮರಗಳು, ವಿದ್ಯುತ್ ಕಂಬಗಳು ನಾಶವಾಗಿದ್ದು, ರೈತರು, ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಮಳೆ ಪ್ರಮಾಣಕ್ಕಿಂತ ಬಿರುಗಾಳಿ ಹೆಚ್ಚಾಗಿದ್ದರಿಂದ ತಾಲ್ಲೂಕಿನ ಹೈರಿಗೆ, ಮಟಕೆರೆ, ಚೆನ್ನೇಗೌಡನ ಹುಂಡಿ, ಹ್ಯಾಂಡ್‌ಪೋಸ್ಟ್, ಕೋಟೆ, ಎರೆಹಳ್ಳಿ, ಚೌಡಳ್ಳಿ, ಜಕ್ಕಳ್ಳಿ, ಕೊಳ್ಳೇಗೌಡನಹಳ್ಳಿ, ಶಿರಮಳ್ಳಿ, ಯಲಮತ್ತೂರು, ಅನಗಟ್ಟಿ ಗ್ರಾಮಗಳಲ್ಲಿ ೧೫೦ ಎಕರೆ ಪ್ರದೇಶದಲ್ಲಿ ರೈತರು ಬೆಳೆದಿದ್ದ ಬಾಳೆ, ೧೫ ಎಕರೆಯಲ್ಲಿ ಬೆಳೆದಿದ್ದ ವಿವಿಧ ತರಕಾರಿಗಳು, ೫ ಎಕರೆಯಲ್ಲಿ ಬೆಳೆ ದಿದ್ದ ಅಡಕೆ, ೨೫ ತೆಂಗಿನ ಮರಗಳು, ೧೫ ಮನೆಗಳು ಐದು ಶೆಡ್‌ಗಳು, ರಸ್ತೆ ಬದಿಯಲ್ಲಿದ್ದ ೯ ದೊಡ್ಡ ಮರಗಳು, ೧೫ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನಾಶವಾಗಿವೆ.
ಬಿರುಗಾಳಿ ಮಳೆಗೆ ನಾಶವಾಗಿದ್ದರಿಂದ ರೈತ ಕುಟುಂಬದವರು ಕಂಗಾಲಾಗಿದ್ದರು. ವಾಸವಾಗಿದ್ದ ಮನೆಗಳ ಚಾವಣಿಗಳು ಗಾಳಿಗೆ ಹಾರಿ ಹೋಗಿವೆ. ಗೋಡೆ ಕುಸಿದು ಬಿದ್ದಿದೆ. ರಸ್ತೆ ಬದಿ ಇದ್ದ ಮರಗಳು ಮನೆಗಳ ಮೇಲೆ ಬಿದ್ದು ಮನೆಗಳು ಜಖಂಗೊಂಡಿವೆ. ಮನೆಯಲ್ಲಿದ್ದವರು ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶನಿವಾರ ಬೆಳಿಗ್ಗೆ ಮಳೆ ಹಾನಿ ಸ್ಥಳಗಳಿಗೆ ತಹಸಿಲ್ದಾರ್ ಶ್ರೀನಿವಾಸ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ನೇತ್ರಾವತಿ, ಅರಣ್ಯ ಅಧಿಕಾರಿ ರವಿಕುಮಾರ್, ಸೆಸ್ಕ್ ಅಧಿಕಾರಿ ಚಂದ್ರಕುಮಾರ್, ಅರುಣ್, ಕಂದಾಯ ಅಧಿಕಾರಿ ವಿಶ್ವನಾಥ್, ಸಹನ, ಗಂಗಾಧರ್, ಪಿಡಿಒ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
” ಶುಕ್ರವಾರ ಸುರಿದ ಮಳೆ ಮತ್ತು ಗಾಳಿಗೆ ಕಸಬಾ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಪ್ರದೇಶಗಳು ಮತ್ತು ಮನೆಗಳು ಹಾನಿಯಾಗಿವೆ. ನಾನು ಅನೇಕ ಕಡೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕಂದಾಯ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗರು ಪ್ರತಿಯೊಂದು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು ಎಂದು ಸೂಚಿಸಿದ್ದೇನೆ. ನಂತರ ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿಯನ್ನು ಸಲ್ಲಿಸಲಾಗುವುದು.”
-ಶ್ರೀನಿವಾಸ್, ತಹಸಿಲ್ದಾರ್
” ತೋಟಗಾರಿಕೆ ಬೆಳೆಗಳಾದ ಬಾಳೆ, ತರಕಾರಿ, ಅಡಕೆ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಮಳೆಯಿಂದಾಗಿ ಹಾನಿಗೊಳಗಾಗಿದ್ದು, ನಾನು, ಇನ್ನಿತರ ಅಧಿಕಾರಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿದ್ದೇವೆ. ನಷ್ಟದ ಬಗ್ಗೆ ವರದಿ ತಯಾರಿಸಿ ಮೇಲಧಿಕಾರಿಗಳಿಗೆ, ಸರ್ಕಾರಕ್ಕೆ ಕಳುಹಿಸಲಾಗುವುದು.”
-ನೇತ್ರಾವತಿ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ





