Mysore
35
few clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

ಸೈಕಲ್ಲು, ಸಿರೀಂದ್ರ ಮತ್ತು ನನ್ನ ನಟರಾಜ ಸರ್ವೀಸು

ಭಾರತಿ ಬಿ.ವಿ.

ಅವನೆದುರು ಮಾನ ತೆಗೆದ ಸೈಕಲ್ಲಿನ ಸಹವಾಸ ನನಗೆ ಮತ್ತೆ ಬೇಕೆನ್ನಿಸಲಿಲ್ಲ

ನಾವೆಲ್ಲ ‘ನಟರಾಜ ಸರ್ವೀಸ್’ನಲ್ಲೇ ಬದುಕು ಕಳೆದವರು. ನಮ್ಮ ಮನೆಯಲ್ಲಿ ಸೈಕಲ್ ಇರಲಿಲ್ಲ. ಆಸುಪಾಸಿನಲ್ಲಿ ಯಾರೂ ಸೈಕಲ್ ಹೊಡೆಯುತ್ತಿದ್ದುದು ನೆನಪಿಲ್ಲ. ಮಂತ್ರದಂಡದ ನೆರವಿನಿಂದ ಕಲಿತಳೋ ಅನ್ನುವಂತೆ ಅಕ್ಕ ಒಂದು ದಿನ ಯಾರದ್ದೋ ಎರವಲು ಸೈಕಲ್ ತುಳಿಯುವುದನ್ನು ನೋಡಿ ಒಂದೇ ಆಶ್ಚರ್ಯ! ಹೇಗೆ, ಯಾವಾಗ, ಯಾರಿಂದ ಕಲಿತಳೋ ಅಂತ ಆಶ್ಚರ್ಯವಷ್ಟೇ! ಹೊಟ್ಟೆ ಉರಿಯೆಲ್ಲ ಆಗುತ್ತಿರಲಿಲ್ಲ. ಯಾಕೆಂದರೆ ನನಗೆ ಅದೆಲ್ಲ ಯಾವತ್ತೂ ಮಾಡಬೇಕು ಅನ್ನಿಸುತ್ತಲೇ ಇರಲಿಲ್ಲ, ಇನ್ನು ಉರಿ ಎಲ್ಲಿಂದ ಬರಬೇಕು. ಆದರೆ ಅಕ್ಕ ಕಲಿತು, ತಂಗಿ ಕಲಿಯದಿದ್ದರೆ ಇಡೀ ಜಗತ್ತು ಕಿಚ್ಚು ಹಚ್ಚುವ ಕೆಲಸಕ್ಕೆ ಸೀಮೆಎಣ್ಣೆ, ಬೆಂಕಿಪೊಟ್ಟಣ ಹಿಡಿದು ನಿಂತುಬಿಡುತ್ತದೆ!

‘ನಿಮ್ಮಕ್ಕ ಅಷ್ಟು ಚೆನ್ನಾಗಿ ಸೈಕಲ್ ಹೊಡೀತಾಳೆ. ನಿನಗೆ ಬರಲ್ವಾ?’ ದಶದಿಕ್ಕುಗಳಿಂದ ಅದೇ ಪ್ರಶ್ನೆ! ಈಗಾಗಿದ್ದರೆ ‘ಅವಳು ಸೈಕಲ್ ಹೊಡೆದರೆ ನಾನು ಯಾಕೆ ಕಲಿಯಬೇಕು. ಎದ್ದೋಗ್ರಿ ಸುಮ್ನೆ’ ಅನ್ನುತ್ತಿದ್ದೆನೇನೋ. ಆದರೆ ಆಗ ಆ ಪ್ರಶ್ನೆ ಮಹಾ ಹಿಂಸೆ ಮಾಡಿಬಿಟ್ಟಿತು. ನಿಜಕ್ಕೂ ಹೇಳಬೇಕೆಂದರೆ ಅಕ್ಕ ಅವಳ ಪಾಡಿಗವಳು ಮನಸ್ಸಿಗೆ ಬಂದಿದ್ದು ಮಾಡಿಕೊಂಡು ಇರುತ್ತಿದ್ದಳು. ನಾನೂ ನನಗಿಷ್ಟವಾದದ್ದು ಮಾಡಿಕೊಂಡು ಇರುತ್ತಿದ್ದೆ. ಆದರೆ ಜಗತ್ತು ಮಾತ್ರ ಅಪಾರವಾಗಿ ನೊಂದುಕೊಂಡು ಬಿಟ್ಟಿತ್ತು! ಹೀಗೇ ಅಂದೂ ಅಂದೂ ನನಗೆ ಕೊನೆಗೊಮ್ಮೆ ಸೈಕಲ್ ಕಲಿತೇ ಬಿಡಬೇಕು ಅನ್ನುವಷ್ಟು ರೋಷ ಉಕ್ಕಿಬಿಟ್ಟಿತು.

ಸರಿ, ನನಗೆ ಯಾರು ಕಲಿಸಬೇಕು ಪಾಪ ಬಲಿಪಶು ಅಕ್ಕನನ್ನು ಬಿಟ್ಟು! ಈ ಸೋಮಾರಿ ಮಗಳು ಕಲಿಯುತ್ತೇನೆ ಅಂದಿದ್ದೇ ತಡ, ಅಪ್ಪ ಅಕ್ಕನ ಹೆಗಲ ಮೇಲೆ ಆ ಜವಾಬ್ದಾರಿ ಹೊರೆಸಿಬಿಟ್ಟರು. ಅವಳಿಗೆ ಒಪ್ಪದೇ ಬೇರೇನು ದಾರಿಯಿತ್ತು! ನಮ್ಮ ಶಾಲೆ ಮುಗಿಯುತ್ತಿದ್ದುದೇ ಸಂಜೆ ೫.೩೦ಕ್ಕೆ. ಹಾಗಾಗಿ ಶನಿವಾರ, ಭಾನುವಾರ ಕಲಿಸುವುದು ಎಂಬ ನಿರ್ಧಾರಕ್ಕೆ ಬರಲಾಯಿತು. ಒಂದು ಶನಿವಾರ ಸಂಜೆ ಎದುರು ಮನೆಯವರ ಸೈಕಲ್ ಎರವಲು ಪಡೆದು ತಳ್ಳಿಕೊಂಡು ಕಾರ್ಡ್ ರೋಡಿನ ಪಕ್ಕದ ಸರ್ವೀಸ್ ರೋಡಿಗೆ ಹೊರಟೆವು… ಅಂದರೆ ಅಕ್ಕ ಸೈಕಲ್ ತಳ್ಳಿಕೊಂಡು ಮತ್ತು ನಾನು ಕೈ ಬೀಸಿಕೊಂಡು ಹೊರಟೆವು! ಪಾಪ ಅವಳು ಯಾಕೆ ಸೈಕಲ್ ಹೊಡೆದುಕೊಂಡು ಹೋಗದೆ ತಳ್ಳಿಕೊಂಡು ಬಂದಳೋ ಗೊತ್ತಿಲ್ಲ. ಮನೆಯ ಹಿರಿಯ ಮಕ್ಕಳ ಪಾಡು ಬೇಡಪ್ಪಾ ಬೇಡ. ಅಪ್ಪ-ಅಮ್ಮ ನನ್ನ ಜೊತೆಗೇ ನಡೆದುಕೊಂಡು ಹೋಗು ಎಂದು ಅವಳಿಗೆ ಹೇಳಿದ್ದಿರಬಹುದು. ಅಕ್ಕ ತುಂಬ ಸಣ್ಣ ಯಾವಾಗಲೂ. ನಾನು ದುಡುಮಿ. ಅಕ್ಕನಿಗಿಂತ ೧೫-೨೦ ಕೆಜಿ ಹೆಚ್ಚು ಇದ್ದಿರಬಹುದು.

ಅವಳ ಎತ್ತರವೂ ನನಗಿಂತ ನಾಲ್ಕೈದು ಇಂಚು ಕಡಿಮೆ. ನಾನು ಏಳನೆಯ ಕ್ಲಾಸಿಗೇ ಐದೂಮುಕ್ಕಾಲು ಅಡಿ ಬೆಳೆದಿದ್ದೆ. ಅಗಲ ಭುಜ, ಅಗಲಗಲ ದೇಹದ ನಾನು ಕೈ ಬೀಸಿಕೊಂಡು ನಡೆಯುತ್ತಿದ್ದರೆ, ಅಕ್ಕ ಉಸ್ಸೋ ಪುಸ್ಸೋ ಅನ್ನುತ್ತ ಸೈಕಲ್ ತಳ್ಳಿಕೊಂಡು ನಡೆದು, ಈಗಿನ ವಾರಿಯರ್ ಬೇಕರಿಯ ಪಕ್ಕದ ಸರ್ವೀಸ್ ರೋಡ್ ತಲುಪುವುದರಲ್ಲಿ ಅವಳ ಜೀವ ಬಾಯಿಗೆ ಬಂದು, ತಾಳ್ಮೆಯೂ ಮುಗಿದಿರಬೇಕು.

ಸೈಕಲ್ ಸ್ಟ್ಯಾಂಡ್ ಹಾಕಿ ನಿಲ್ಲಿಸಿದವಳೇ ‘ಹೂ ಹತ್ತು’ ಅಂದಳು. ಹೇಗೆ ಹತ್ತುವುದು ಅಷ್ಟು ಎತ್ತರದ ಸೈಕಲ್ ಮೇಲೆ! ‘ಇಲ್ವಾ ಅಷ್ಟುದ್ದ ದೇಹ… ಹತ್ತೇ’ ಗದರಿದಳು. ಈ ಕಾಲಿಟ್ಟರೆ ಆ ಕಾಲು ಎತ್ತಲು ಬರುತ್ತಿಲ್ಲ, ಆ ಕಾಲು ಎತ್ತಿದರೆ ಈ ಕಾಲು ಎತ್ತಲಾಗುತ್ತಿಲ್ಲ. ಹೇಗೋ ಪ್ರಯತ್ನಿಸಿ ಅಂತೂ ಹತ್ತೇಬಿಟ್ಟೆ. ಅಬ್ಬ ಜಗತ್ತು ಗೆದ್ದ ಖುಷಿ. ಅಕ್ಕ ‘ಈಗ ಹಾಗೇ ದೇಹ ಮುಂದೆ ತಳ್ಕೊಂಡು ಸ್ಟ್ಯಾಂಡ್ ತೆಗಿ’ ಅಂದಳು. ಹೇಗೆ ಗುರೂ ಹೇಗೆ!! ತಲೆಬುಡ ಅರ್ಥವಾಗಲಿಲ್ಲ. ‘ಥು ನಿಂದೊಂದು ಗೋಳು’ ಅಕ್ಕ ಬಯ್ಯುತ್ತ ತಾನೇ ತಳ್ಳಲು ಪ್ರಯತ್ನಿಸಿದಳು. ನನ್ನ ತೂಕದ ಜೊತೆ ತಳ್ಳಲು ಅವಳಿಗೆ ಆಗಲೇ ಇಲ್ಲ. ಬೆವರು ಸುರಿದು ಸುಸ್ತಾಗಿ ಕೊನೆಗೆ ಆ ಪ್ರಯತ್ನ ಕೈಬಿಟ್ಟು ‘ಇಳಿ ಕೆಳಗೆ. ಸ್ಟ್ಯಾಂಡ್ ಹಾಕಲ್ಲ ಹಾಗೇ ಹತ್ತಿ ಕೂತ್ಕೋ’ ಅಂದಳು. ‘ಸ್ಟ್ಯಾಂಡ್ ಹಾಕದೆ ಹತ್ತಿ ಕೂತ್ಕೊಳೋದಾ! ಸೈಕಲ್ ಮುಂದೆ ಜರುಗಿ ಹೋಗಲ್ವಾ’ ಅಂತ ಮತ್ತೆ ಗೋಳು ಮೋರೆ ಹಾಕಿದೆ. ಸರಿ ಅಕ್ಕನಾದ ಕರ್ಮಕ್ಕೆ ಸೈಕಲ್ ತಳ್ಳಿಕೊಂಡು ಯಾರದೋ ಮನೆಯ ಮುಂದಿನ ಕಟ್ಟೆಯ ಪಕ್ಕ ನಿಲ್ಲಿಸಿ ‘ಅದರ ಮೇಲೆ ಹತ್ತಿ ಸೈಕಲ್ ಮೇಲೆ ಕೂತ್ಕೋ’ ಎಂದಳು. ಕಟ್ಟೆಯ ಮೇಲೇನೋ ಹತ್ತಿದೆ. ಸೈಕಲ್ ಮೇಲೆ ಕಾಲು ಹಾಕುವಾಗ ದೇಹ ಸ್ವಲ್ಪವೂ ಕಂಟ್ರೋಲಿಗೆ ಸಿಗುತ್ತಿಲ್ಲ. ಅಕ್ಕ ನನ್ನ ಪಕ್ಕದಲ್ಲಿ ಸೈಕಲ್ ಹಿಡಿದು

ನಿಂತವಳು ‘ಹತ್ತು ಬೇಗ ಬೇಗ. ನೀನು ಸೈಕಲ್ ಹತ್ತೋದು ಕಲಿಯಕ್ಕೇ ಒಂದಿನ ಆಯ್ತು’ ಅಂತ ಗದರಿದಳು. ಮೊದಲೇ ಗಾಬರಿಯಾಗಿದ್ದ ನಾನು ಹತ್ತಿ ಕೂತವಳು ಪೂರಾ ಭಾರ ಅವಳ ಮೇಲೆ ಹಾಕಿಬಿಟ್ಟೆ. ‘ಲೇ ಬ್ಯಾಲೆನ್ಸ್ ಮಾಡೇ’ ಜೋರಾಗಿ ಅರಚಿದಳು. ಅಯ್ಯ ಬ್ಯಾಲೆನ್ಸ್ ಮಾಡಕ್ಕೆ ಬಂದಿದ್ರೆ ಅವಳು ಕಲಿಸೋದೇನಿತ್ತು… ಸೈಕಲ್ ಹೊಡ್ಕೊಂಡು ಹೋಗಿರ್ತಿರಲಿಲ್ಲವಾ! ಹಲ್ಲು ಕಚ್ಚಿ ‘ಆಗ್ತಿಲ್ವೇ’ ಎಂದು ಅರಚಿದೆ. ಅವಳ ಸಣ್ಣ ದೇಹದ ಮೇಲೆ ನನ್ನ ಭಾರ ಪೂರ್ತಿ ಬಿದ್ದು ಅವಳು ಒದ್ದಾಡುತ್ತಾ ಹಾಗೂ ಹೀಗೂ ಪಕ್ಕಕ್ಕೆ ಸರಿದು ಬಿಡಿಸಿಕೊಂಡಳು. ನಾನು ಧೊಪ್ಪೆಂದು ನೆಲಕ್ಕೆ ಬಿದ್ದೆ.

ಹಿಮಾಲಯ ಪರ್ವತದಿಂದ ನೆಲಕ್ಕೆ ಬಿದ್ದಂತಾಗಿ ಸಿಟ್ಟು, ನೋವು, ದುಃಖ, ಅವಮಾನ, ಹತಾಶೆ ಎಲ್ಲವೂ ಮುತ್ತಿಕೊಂಡು, ಅಡಿಯಲ್ಲಿ ಸಿಕ್ಕಿಕೊಂಡ ಕಾಲು ಬಿಡಿಸಿಕೊಳ್ಳುವಾಗಲೇ ಪಕ್ಕದಲ್ಲಿ ಬೈಕ್ ಸದ್ದಾಯಿತು. ಥು ಯಾರೋ ನೋಡಿಬಿಟ್ಟರಲ್ಲ ಈ ಅವಸ್ಥೆ ಅಂತ ಅವಮಾನದಿಂದ ತಲೆಯೆತ್ತಿದರೆ ಸಿರೀಂದ್ರ! ಅಯ್ಯೋ ಚೆಲುವ ಸಿರೀಂದ್ರ! ಅಕಟಕಟಾ ಈ ಸಮಯದಲ್ಲಿ ಈ ಜಗತ್ತಿನಲ್ಲಿ ಇದೇ ರಸ್ತೆಯಲ್ಲೇ ಅವನು ಬರಬೇಕಿತ್ತಾ? ಇನ್ಯಾವ ರಸ್ತೆಯೂ ಇರಲಿಲ್ಲವಾ? ಅವನು ಎರಡು ಸಲ ಹಿಂದಕ್ಕೆ ತಿರುಗಿ ನೋಡಿದವನೇ ಸಾಗಿ ಹೊರಟುಹೋದ. ದಪ್ಪ ಮೀಸೆಯಡಿಯಲ್ಲಿನ ಅವನ ತುಟಿಗಳು ನಕ್ಕವೇ… ಛೇ… ನಾನು ಸ್ತಂಭೀಭೂತಳಾಗಿ ಅವನು ಹೋದ ದಿಕ್ಕನ್ನೇ ನೋಡಿದೆ. ಹೀಗೆ ನಾನು ಸಿರೀಂದ್ರನೆದುರು ಅವಮಾನಿತಳಾದ ದುಃಖದಲ್ಲಿದ್ದರೆ, ಸಂತ್ರಸ್ತೆ ಅಕ್ಕ ಹೈರಾಣಾಗಿದ್ದವಳು ಇದ್ದಕ್ಕಿದ್ದಂತೆ ಕಾನೂನು ಕೈಗೆತ್ತಿಕೊಂಡವಳೇ ‘ಥು ಶನಿ ನೀನು. ಸ್ವಂತ ಪ್ರಯತ್ನಾನೇ ಮಾಡಲ್ಲ. ಎಮ್ಮೆ ಥರ ಇಡೀ ಮೈ ಭಾರ ಅಷ್ಟೂ ನನ್ನ ಮೇಲೇ ಬಿಡ್ತೀಯಲ್ಲ. ನಾಚಿಕೆ ಆಗಲ್ವಾ. ನಿಂಗೆ ಯಾವಳು ಕಲಿಸಕ್ಕಾಗತ್ತೆ. ಮನೆಗೆ ಸೈಕಲ್ ನೀನೇ ತಳ್ಕೊಂಡು ಬಾ ಶನಿ’ ಅಂತ ರಪರಪರಪ ಬಯ್ದವಳು ನನ್ನನ್ನು ನಡುರಸ್ತೆಯಲ್ಲಿ ಬಿಟ್ಟು ಹೊರಟೇಹೋದಳು… ಜೋರಾಗಿ ಅತ್ತುಕೊಳ್ಳೋಣವೆಂದರೆ ಸಿರೀಂದ್ರ ಮತ್ತೆ ಆ ದಾರಿಯಲ್ಲಿ ಬಂದು ನನ್ನನ್ನು ಈ ಸ್ಥಿತಿಯಲ್ಲಿ ನೋಡಿಬಿಟ್ಟರೆ ಅನ್ನುವ ಆತಂಕ! ತರಚಿದ ಮಂಡಿ, ಕೈಗಳಲ್ಲಿ ಸೈಕಲ್ ತಳ್ಳುತ್ತಾ ಹೊರಟಿದ್ದೇ ಕಡೇ ದಿನ ಅದನ್ನು ಮುಟ್ಟಿದ್ದು. ಸಿರೀಂದ್ರನೆದುರು ಮಾನ ತೆಗೆದ ಸೈಕಲ್ಲಿನ ಸಹವಾಸ ನನಗೆ ಮತ್ತೆ ಬೇಕೆನ್ನಿಸಲಿಲ್ಲ. ಆದರೂ ಈಗಲೂ ಒಮ್ಮೊಮ್ಮೆ ನಾನು ಏರು ರಸ್ತೆಯಲ್ಲಿ ‘ಲೂನಾ’ದಲ್ಲಿ ಜುಯ್ಯಂತ ಸ್ಟೈಲಾಗಿ ಬಂದು ಗಕ್ಕಂತ ನಿಲ್ಲಿಸುವ ಕನಸು ಬೀಳುತ್ತಿರುತ್ತದೆ. ಕನಸಿನಲ್ಲಿ ಸೈಕಲ್‌ನಿಂದ ಲೂನಾಗೆ ಬಡ್ತಿ ದೊರಕಿದ್ದು ಹೇಗೋ ಗೊತ್ತಿಲ್ಲ! ಅಂದಹಾಗೆ ಆ ಚೆಲುವ, ಆ ದಪ್ಪಮೀಸೆಯ ಸಿರೀಂದ್ರ ಯಾರು ಅಂದಿರಾ… ಮತ್ತೊಮ್ಮೆ ಆ ಕತೆ ಬರೆಯುತ್ತೇನೆ ಇರಿ…

Tags:
error: Content is protected !!