Mysore
34
few clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗೆ ಗ್ರೇಡ್‌ ಬೇಡ ಅಂಕ ನೀಡಿ ; ಹೈಕೋರ್ಟ್‌ ಮತ್ತೊಮ್ಮೆ ಆದೇಶ

ಬೆಂಗಳೂರು : ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ಬೇಡ, ಅಂಕವನ್ನೇ ನೀಡಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಹೈಕೋರ್ಟ್ ಆದೇಶ ಮರುಪರಿಶೀಲನೆ ಕೋರಿದ್ದ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಇ.ಎಸ್.ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠ, ಪ್ರಸಕ್ತ ಸಾಲಿಗೆ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ಆದೇಶ ನೀಡಿದೆ. ಸರ್ಕಾರದ ಪರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ರು. ಆದ್ರೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ಅರ್ಜಿ ವಜಾಗೊಂಡಿದೆ.

ಸರ್ಕಾರದ ಪರ ಎ.ಜಿ ವಾದ ಏನಿತ್ತು?
ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಅನುತ್ತೀರ್ಣಗೊಂಡಿದ್ದರು. ಹೀಗಾಗಿ ವಿದ್ಯಾರ್ಥಿಗಳ ಮೇಲೆ ಒತ್ತಡ ಕಡಿಮೆ ಮಾಡಲು ಕ್ರಮ ವಹಿಸಿ, ಸೂಕ್ತ ತಿದ್ದುಪಡಿಯೊಂದಿಗೆ ನಿಯಮ ರಚಿಸಲು ಸರ್ಕಾರ ಕರಡು ರೂಪಿಸುತ್ತಿದೆ. ಅಂಕದ ಬದಲು ಗ್ರೇಡ್ ನೀಡಲಾಗುತ್ತಿದೆ ಎಂದು ಎಜಿ ವಾದ ಮಂಡಿಸಿದ್ರು.

ಹೈಕೋರ್ಟ್ ಪೀಠ ತರಾಟೆ
ಸರ್ಕಾರಕ್ಕೆ ನ್ಯಾ.ಇ.ಎಸ್.ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠ ಕೆಲ ಪ್ರಶ್ನೆ ಕೇಳುವ ಮೂಲಕ ತರಾಟೆಗೆ ತೆಗೆದುಕೊಂಡಿದೆ. ಎಸ್ಎಸ್ಎಲ್ ಸಿ ಪರೀಕ್ಷೆ ಅಧಿಸೂಚನೆ ಹೊರಡಿಸಿದಾಗಲೇ ಇದನ್ನು ಸ್ಪಷ್ಟಪಡಿಸಬೇಕಿತ್ತು. ಅಧಿಸೂಚನೆಯಲ್ಲಿಲ್ಲದ ಗ್ರೇಡ್ ಪದ್ದತಿಯನ್ನು ಈಗ ಅನುಷ್ಟಾನಗೊಳಿಸುತ್ತಿದ್ದೀರಿ. ಪಿಯುಸಿಯಲ್ಲಿ ಈಗ 83 % ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ನೀವು ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ ಎಂದು ಕೋರ್ಟ್ ಗರಂ ಆಗಿದೆ.

ನಿಯಮ ರೂಪಿಸಿದ ಬಳಿಕ ಸರ್ಕಾರ ಸೂಕ್ತವೆನಿಸಿದ ಕ್ರಮ ಕೈಗೊಳ್ಳಬಹುದು. ನಿಯಮ ರೂಪಿಸುವ ಮುಂಚಿನ ಪರೀಕ್ಷೆಯ ಅಂಕ ಪದ್ದತಿ ಬದಲಾವಣೆ ಸೂಕ್ತವಲ್ಲ ಎಂದು ಅಭಿಪ್ರಾಯ ತಿಳಿಸುವ ಮೂಲಕ, 2025-26 ನೇ ಸಾಲಿಗೆ ಹಿಂದಿ ಭಾಷೆಗೆ ಅಂಕ ನೀಡಲು ಹೈಕೋರ್ಟ್ ಆದೇಶ ನೀಡಿದೆ.

Tags:
error: Content is protected !!