ಎಸ್.ನಾಗಸುಂದರ್ ಪಾಂಡವಪುರ
ಪಾಂಡವಪುರ: ದಾನಿಗಳ ನೆರವು, ಸ್ಥಳೀಯರ ಸಹಕಾರದಿಂದ ಆರಂಭಗೊಂಡ ಶಾಲೆಯು ನೂರು ವರ್ಷಗಳ ಗಡಿ ದಾಟಿ ಹೆಜ್ಜೆ ಮುಂದಿರಿಸಿದೆ. ಒಂದು ವರ್ಷದ ಹಿಂದಷ್ಟೇ ಶತಮಾನದ ಸಂಭ್ರಮದಲ್ಲಿ ಮಿಂದೆದ್ದ ಶಾಲೆಯು ಪದವಿ ಪೂರ್ವ ಕಾಲೇಜೂ ಆಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದೆ.
ತಾಲ್ಲೂಕಿನ ಕನ್ನಂಬಾಡಿ ಅಣೆಕಟ್ಟೆಯ ಹಿನ್ನೀರಿನ ಮೇಲ್ಭಾಗದಲ್ಲಿರುವ ಬನ್ನಂಗಾಡಿ ಗ್ರಾಮದ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಬಡವರು, ದುರ್ಬಲರು, ಶೋಷಿತರು ಸೇರಿದಂತೆ ರೈತ ಮಕ್ಕಳಿಗೆ ಅನುಕೂಲವಾಗು ವಂತೆ ಶಿಕ್ಷಣ ನೀಡಿ ಸಮಾಜದ ಮುನ್ನೆಲೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
೧೯೨೫ರಲ್ಲಿ ಆರಂಭಗೊಂಡ ಈ ಸರ್ಕಾರಿ ಶಾಲೆಗೆ ಸೂಕ್ತವಾದ ಕಟ್ಟಡವೇ ಇರದಿದ್ದ ಕಾಲದಲ್ಲಿ ಸನಿಹದಲ್ಲೇ ಇದ್ದ ದೊಡ್ಡಮ್ಮ ದೇವಿ ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿತ್ತು. ನಂತರದಲ್ಲಿ ದಾನಿಗಳು ಒಬ್ಬೊಬ್ಬರಾಗಿ ಮುಂದೆ ಬಂದರು. ಶಾಲೆಗಾಗಿ ಭೂಮಿದಾನ ಮಾಡಿದವರು, ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರು ಅನೇಕರಿದ್ದಾರೆ. ಅವರಲ್ಲಿ ಬಿ.ಟಿ.ಚಲುವೇಗೌಡ, ಬಿ.ಎನ್. ಪುಟ್ಟಸ್ವಾಮಿಗೌಡ, ದೊಡ್ಡತಮ್ಮೇಗೌಡ, ಸಣ್ಣ ತಮ್ಮೇಗೌಡ, ಬಿ.ಸಿ.ಚಲುವೇಗೌಡ, ದೊಡ್ಡೇಗೌಡ… ಹೀಗೆ ಅನೇಕ ಮಹನೀಯರು ಗ್ರಾಮದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ತನು, ಮನ ಮತ್ತು ಧನವನ್ನು ಅರ್ಪಿಸಿದ್ದಾರೆ.
ಆರಂಭದಲ್ಲಿ ೧ರಿಂದ ೪ನೇ ತರಗತಿವರೆಗೆ ಇದ್ದ ಶಾಲೆ ನಂತರದಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಕೂಡ ಆಗಿ ಉನ್ನತೀಕರಣಗೊಂಡಿದೆ. ಪ್ರಸ್ತುತ ೧ರಿಂದ ೭ನೇ ತರಗತಿಯವರೆಗೆ ಸುಮಾರು ೧೩೦ ವಿದ್ಯಾರ್ಥಿಗಳು, ಹೈಸ್ಕೂಲಿನಲ್ಲಿ ೧೪೦ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು ೫೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
೧೦ ಎಕರೆಗಳಷ್ಟು ವಿಶಾಲವಾದ ಜಾಗ ಹೊಂದಿರುವ ಈ ಶಾಲಾ ಸಮುಚ್ಚಯದ ಆವರಣದಲ್ಲಿ ಒಂದು ಪಾರ್ಶ್ವದಲ್ಲಿ ಶಾಲಾ ಕಾಲೇಜು ಕಟ್ಟಡ ಇದ್ದರೆ, ಮತ್ತೊಂದು ಭಾಗದಲ್ಲಿ ಪಶು ಆಸ್ಪತ್ರೆ, ಗ್ರಾಮ ಪಂಚಾಯಿತಿ ಹಾಗೂ ಸಾರ್ವ ಜನಿಕ ಆಸ್ಪತ್ರೆ ಕಟ್ಟಡಗಳಿವೆ. ದೊಡ್ಡದಾದ ಕಾಂಪೌಂಡ್ ಇದ್ದು, ಒತ್ತುವರಿಯಾಗಿದ್ದ ಶಾಲೆಗೆ ಸೇರಿದ ೩ ಎಕರೆ ಪ್ರದೇಶವನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ.
” ಬನ್ನಂಗಾಡಿಯ ಈ ಶತಮಾನದ ಸರ್ಕಾರಿ ಶಾಲೆ ಭೌತಿಕವಾಗಿ ಬಹಳ ಚೆನ್ನಾಗಿದೆ. ಉತ್ತಮ ಕಲಿಕಾ ವಾತಾವರಣವಿದೆ. ರಾಜ್ಯ ಸರ್ಕಾರ ಕೆಪಿಎಸ್ ಆರಂಭಿಸಿ ಎಲ್‌ಕೆಜಿ, ಯುಕೆಜಿ ಆರಂಭಿಸುತ್ತಿದೆ. ಹಾಗಾಗಿ ಬನ್ನಂಗಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.”
-ಎ.ಪಿ.ಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕರು
” ನಾನು ಕೂಡ ಈ ಶಾಲೆಯಲ್ಲಿ ಸೂಕ್ತವಾದ ಕಟ್ಟಡವಿರದಿದ್ದ ಸನ್ನಿವೇಶದಲ್ಲಿ ದೊಡ್ಡಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಕುಳಿತು ಪಾಠ ಕೇಳಿ ಬೆಳೆದಿದ್ದೇನೆ. ಶಿಥಿಲಗೊಂಡಿದ್ದ ಶಾಲಾ ಕಟ್ಟಡವನ್ನು ಕೆಡವಿ ಹೊಸದಾದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಹಿಂದೆಲ್ಲಾ ಹೆಚ್ಚು ವಿದ್ಯಾರ್ಥಿಗಳು ತುಂಬಿದ್ದರು. ಇಲ್ಲಿ ಓದಿದ ಅನೇಕ ಮಂದಿ ಉತ್ತಮ ಬದುಕು ಕಂಡುಕೊಂಡಿರುವುದು ಸಂತಸದ ಸಂಗತಿ.”
-ಬಿ.ಪಿ.ಶ್ರೀನಿವಾಸ್, ಮಾಜಿ ಸದಸ್ಯ, ತಾಪಂ, ಬನ್ನಂಗಾಡಿ
” ಬನ್ನಂಗಾಡಿ ಗ್ರಾಮದ ಶತಮಾನ ಪೂರೈಸಿರುವ ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕ ಪ್ರತಿಭಾವಂತರು ಇಂದು ದೊಡ್ಡ ಹುದ್ದೆಗಳಲ್ಲಿದ್ದಾರೆ. ನನಗೆ ತಿಳಿದಂತೆ ಇಂಜಿನಿಯರಿಂಗ್ ಓದಿ ನೈಜೀರಿಯಾದಲ್ಲಿ ಇಂಜಿನಿಯರ್ ಆಗಿರುವ ಬಿ.ಸಿ.ಪುಟ್ಟೇಗೌಡ, ಬನ್ನಂಗಾಡಿಯ ಸಾಹಿತಿ ಸಿದ್ದಲಿಂಗಯ್ಯ, ಬೆಂಗಳೂರಿನ ಕೆಇಬಿ ಇಂಜಿನಿಯರ್ ಸುಬ್ಬೇಗೌಡ ಮುಂತಾದವರು ನಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.”
-ಬಿ.ಎಚ್.ಕೃಷ್ಣೇಗೌಡ, ಗ್ರಾಮಸ್ಥರು
” ಬನ್ನಂಗಾಡಿ ಗ್ರಾಮದ ಶತಮಾನದ ಸರ್ಕಾರಿ ಶಾಲೆ, ಗ್ರಾಮದ ಮುಖಂಡರು, ಯುವ ಮಿತ್ರರ ಪರಿಶ್ರಮದಿಂದಾಗಿ ಈ ಮಟ್ಟಕ್ಕೆ ಬೆಳೆದಿದೆ. ಶಾಲೆಯಲ್ಲಿ ಎಲ್ಲ ರೀತಿಯ ಸೌಲಭ್ಯಗಳೂ ಇದ್ದು , ನಾವು ಕೂಡ ಆಗಾಗ್ಗೆ ಭೇಟಿ ನೀಡಿದ ಶಾಲೆಗೆ ಬೇಕಾದ ಅನುಕೂಲ ಕಲ್ಪಿಸಲು ಶ್ರಮಿಸುತ್ತೇವೆ.”
-ಬಿ.ಡಿ.ಹುಚ್ಚೇಗೌಡ, ತಾಪಂ ಮಾಜಿ ಅಧ್ಯಕ್ಷರು
” ನಮ್ಮ ಶತಮಾನೋತ್ಸವದ ಸರ್ಕಾರಿ ಶಾಲೆ ಕೆಪಿಎಸ್ ಆಗಿ ಆಯ್ಕೆಯಾಗಿದ್ದು ಯುಕೆಜಿ , ಎಲ್‌ಕೆಜಿ ಕೂಡ ಆಗಿದೆ. ಒಂದು ಲಕ್ಷ ರೂ. ಅನುದಾನ ಬಂದಿದ್ದು, ಅದರಲ್ಲಿ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಎಸ್ ಡಿಎಂಸಿಯಿಂದ ಕೂಡ ಶಾಲೆಗೆ ಬೇಕಾದ ಸೌಲಭ್ಯ ದೊರಕಿಸಲು ಹೆಗಲು ನೀಡಿದೆ.”
-ಸುಲೋಚನಾ, ಮುಖ್ಯೋಪಾಧ್ಯಾಯರು ಬನ್ನಂಗಾಡಿ ಸರ್ಕಾರಿ
” ಶಾಲೆಯಲ್ಲಿ ೧ರಿಂದ ೧೨ನೇ ತರಗತಿಯವರೆಗೆ ಎಲ್ಲಾ ಸೌಲಭ್ಯಗಳಿದ್ದು, ವಿಶಾಲವಾದ ಮೈದಾನ, ಕೊಠಡಿಗಳಿವೆ. ದಾಖಲಾತಿ ಹೆಚ್ಚು ಮಾಡಲು ವಿಷಯವಾರು ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.”
-ಧರ್ಮಶೆಟ್ಟಿ, ಬಿಇಒ, ಪಾಂಡವಪುರ
” ಬನ್ನಂಗಾಡಿ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ರಾಜ್ಯದ ವಿವಿಧೆಡೆ ಸರ್ಕಾರದ ಅನೇಕ ಹುದ್ದೆಗಳಲ್ಲಿದ್ದಾರೆ. ಶತಮಾನೋತ್ಸವ ಆಚರಿಸಿದ ಹಳೆಯ ವಿದ್ಯಾರ್ಥಿಗಳ ತಂಡ ಇದೀಗ ಒಂದೊಂದು ಬ್ಯಾಚ್‌ನವರೂ ಒಗ್ಗೂಡಿ ಪ್ರವಾಸ ಕೈಗೊಳ್ಳುತ್ತಿದ್ದೇವೆ.”
-ನಂದೀಶ್, ಹಳೆಯ ವಿದ್ಯಾರ್ಥಿ





