Mysore
20
clear sky

Social Media

ಮಂಗಳವಾರ, 17 ಮಾರ್ಚ್ 2026
Light
Dark

ಒಳಮೀಸಲಾತಿ ವಿಚಾರದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯ ಆರೋಪ: ಜಿಲ್ಲಾ ಬಲಗೈ ಸಮುದಾಯದ ಒಕ್ಕೂಟ ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಒಳಮೀಸಲಾತಿ ವಿಚಾರದಲ್ಲಿ ನಾಗಮೋಹನ್ ದಾಸ್ ನೀಡಿರುವ ವರದಿಯು ಅವೈಜ್ಞಾನಿಕವಾಗಿದ್ದು ಹಂಚಿಕೆ ಮತ್ತು ರೋಸ್ಟರ್ ಬಿಂದುಗಳಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಖಂಡಿಸಿ ಸೋಮವಾರ ಹನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಹನೂರು ತಾಲೂಕು ಹಾಗೂ ಚಾಮರಾಜನಗರ ಜಿಲ್ಲಾ ಬಲಗೈ ಸಮುದಾಯದ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಹನೂರು, ಕೊಳ್ಳೇಗಾಲ ತಾಲೂಕಿನ ಹಲವು ಗ್ರಾಮಗಳಿಂದ ಆಗಮಿಸಿದ ಬಲಗೈ ಸಮುದಾಯದ ಸಂಘಟನೆಗಳ ಮುಖಂಡರು ಯುವಕರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಜಮಾಯಿಸಿ ನಂತರ ಅಲ್ಲಿಂದ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು

ನಂತರ ಬೃಹತ್ ಪ್ರತಿಭಟನಾ ಮೆರವಣಿಗೆ ಸಾಗಿ ಪಟ್ಟಣದ ನಾಡಪ್ರಭು ಕೆಂಪೇಗೌಡ ವೃತ್ತ, ಖಾಸಗಿ ಬಸ್ ನಿಲ್ದಾಣ, ದಿ.ಎಚ್‌.ನಾಗಪ್ಪ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ಸರ್ಕಲ್ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಚೈತ್ರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಂತರ ಬಲಗೈ ಸಮುದಾಯದ ಹೋರಾಟಗಾರರಾದ ಸಿ.ಕೆ ಮಂಜುನಾಥ್ ಮಾತನಾಡಿ, ಒಳ ಮೀಸಲಾತಿ ವರದಿಯು ಅವೈಜ್ಞಾನಿಕವಾಗಿದ್ದು, ರೋಸ್ಟರ್ ಬಿಂದುಗಳ ಹಂಚಿಕೆಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ನಾಗಮೋಹನ್ ದಾಸ್ ಒಬ್ಬ ಸವರ್ಣಿಯ, ಅವರಿಗೆ ನೊಂದವರ ಬಗ್ಗೆ ಏನು ಗೊತ್ತಿದೆ. ಹಾಗಾಗಿ ನಾಗಮೋಹನ್ ದಾಸ್ ವರದಿ ಜಾರಿಯಾಗಬಾರದು. ಒಂದು ವೇಳೆ ಜಾರಿಯಾದರೆ ತುಂಬಾ ಕಷ್ಟ ಆಗಲಿದೆ. ಜೀವಂತ ಇರುವ ಹೊಲಯ ಸಮುದಾಯದ ಜನರನ್ನು ಶವ ಪೆಟ್ಟಿಗೆಯಲ್ಲಿ ಹಾಕಿ ಹೂಳುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಸರಿಯಾದ ರೀತಿ ಕ್ರಮ ವಹಿಸದೆ ಇದ್ದಲ್ಲಿ ಹೋರಾಟ ತೀವ್ರವಾಗುತ್ತದೆ.

ಹಾಗಾಗಿ ಇದೇ ತಿಂಗಳ 25 ನೇ ತಾರೀಕು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.

 

Tags:
error: Content is protected !!