ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ಸಫಾರಿ ಪುನಾರಂಭವಾಗಿರುವುದರಿಂದ ವನ್ಯಜೀವಿಗಳಿಗೆ ತೊಂದರೆ ಆಗಿಲ್ಲ. ನಮ್ಮ ಹೊಟ್ಟೆ ಹೊರೆಯಲು ಸಹಾಯವಾಗಿದೆ…
ಕಾಡ್ಗಿಚ್ಚು ನಂದಿಸುವ ಸಂದರ್ಭಗಳಲ್ಲಿ ಕೆಲ ರೆಸಾರ್ಟ್ಗಳ ಮಾಲೀಕರು ಕೂಡ ಅರಣ್ಯ ಇಲಾಖೆಗೆ ಸಹಾಯ ಮಾಡುತ್ತಾರೆ.., ೨೦- ೨೫ ವರ್ಷಗಳಿಂದ ರೆಸಾರ್ಟ್ ನಡೆಸುತ್ತಿದ್ದೇವೆ… ಆಗಿನಿಂದಲೂ ಇಲ್ಲದ ಸಮಸ್ಯೆ ಈಗ ಹೇಗೆ ಸೃಷ್ಟಿಯಾಗುತ್ತದೆ..? ಸಫಾರಿ ಆರಂಭಿಸಬೇಕು ಎಂದು ಒತ್ತಾಯ ಮಾಡುತ್ತಿದ್ದ ಹಲವರು, ಅದರಿಂದ ಆಗಿರುವ ಅನುಕೂಲ ಹಾಗೂ ರೈತರು, ಪರಿಸರವಾದಿಗಳು ಎತ್ತಿರುವ ಪ್ರಶ್ನೆಗಳನ್ನು ಕುರಿತು ‘ಆಂದೋಲನ’ ದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಸಫಾರಿ ವಾಹನಗಳ ಓಡಾಟದ ಶಬ್ದಗಳಿಗೆ ಕಾಡು ಪ್ರಾಣಿಗಳು ಹೊಂದಿಕೊಂಡಿರುತ್ತವೆ. ಆದರೆ, ಕಾಡಿನಲ್ಲಿ ಲಂಟಾನ ಮತ್ತಿತರ ಅನಗತ್ಯ ಗಿಡ-ಗಂಟಿಗಳು ದಟ್ಟವಾಗಿ ಬೆಳೆದಾಗ ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸಲು ಸಾಧ್ಯವಾಗುವುದಿಲ್ಲ. ಬಹುಶಃ ಅಂತಹ ಸಂದರ್ಭಗಳಲ್ಲಿ ವನ್ಯಜೀವಿಗಳು ಅದರಲ್ಲಿಯೂ ಆನೆ, ಹುಲಿಯಂತಹ ಪ್ರಾಣಿಗಳು ಕಾಡಂಚಿನ ಗ್ರಾಮಗಳತ್ತಧಾವಿಸಬಹುದು ಅಷ್ಟೆ ಎನ್ನುತ್ತಾರೆ ಸ್ಥಳೀಯ ಬುಡಕಟ್ಟು ನಿವಾಸಿಗಳು.
ರೆಸಾರ್ಟ್‌ಗಳು ಶೇ.೮೦ರಷ್ಟು ಸ್ಥಳೀಯರಿಗೆ ಕೆಲಸ ನೀಡಿವೆ. ದಶಕಗಳಿಗೂ ಹೆಚ್ಚು ಕಾಲದಿಂದ ಈ ಬಂಡೀಪುರ ಅರಣ್ಯದಲ್ಲಿ ರೆಸಾರ್ಟ್‌ಗಳು, ಹೋಂ ಸ್ಟೇಗಳು ಇವೆ. ಆದರೆ, ಅವುಗಳಿಂದ ಪರಿಸರಕ್ಕೆ ಧಕ್ಕೆ ಆಗಿಲ್ಲ. ಇನ್ನು ಕಾಡುಪ್ರಾಣಿಗಳು ರೈತರ ಜಮೀನುಗಳು ಅಥವಾ ಸ್ಥಳೀಯ ನಿವಾಸಿಗಳ ಮೇಲೆ ದಾಳಿ ಮಾಡುವುದಕ್ಕೂ ಸಫಾರಿಗೂ ಯಾವುದೇ ಸಂಬಂಧ ಇಲ್ಲ ಎಂಬುದು ರೆಸಾರ್ಟ್‌ನ ಕೆಲ ಉದ್ಯೋಗಿಗಳ ನುಡಿ.
ರೈತರು ಹಾಗೂ ಪರಿಸರವಾದಿಗಳು ಆರೋಪಿಸುವಂತೆ ಸಫಾರಿ ಪುನಾರಂಭದಿಂದ ಕೃಷಿಗಾಗಲಿ,ಕಾಡುಪ್ರಾಣಿಗಳಿಗಾಗಲಿ, ಪರಿಸರಕ್ಕಾಗಲಿ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂಬುದನ್ನೂ ಅವರು ಒತ್ತಿ ಹೇಳುತ್ತಾರೆ.
ರೆಸಾರ್ಟ್‌ಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ನಮ್ಮ ಬದುಕು ನಡೆಯುತ್ತಿದೆ. ಅಲ್ಲದೆ, ಕೆಲ ಸಂದರ್ಭಗಳಲ್ಲಿ ರೆಸಾರ್ಟ್‌ಗಳ ಮಾಲೀಕರು ಅರಣ್ಯ ರಕ್ಷಣೆ ಸಂಬಂಧ ಅಧಿಕಾರಿಗಳ ಜೊತೆ ಕೈಜೋಡಿ ಸುವುದೂ ಇದೆ ಎಂದು ರೆಸಾರ್ಟ್‌ನ ಸಿಬ್ಬಂದಿಯೊಬ್ಬರು ಅಭಿಪ್ರಾಯಿಸುತ್ತಾರೆ.
ಪ್ರವಾಸಿಗರು ಬಹುತೇಕ ಸಫಾರಿಗಾಗಿಯೇ ಆಗಮಿಸುತ್ತಾರೆ. ಅವರು ಬಂದರೆ ನಮ್ಮಂತಹ ಉಡುಗೊರೆ ಅಂಗಡಿ ಇಟ್ಟುಕೊಂಡಿರುವವರಿಗೆ ಒಂದಷ್ಟು ವ್ಯಾಪಾರ ಆಗುತ್ತದೆ. ಈ ವ್ಯಾಪಾರವನ್ನೇ ನಂಬಿಕೊಂಡಿರುವ ನಮಗೆ ಸಫಾರಿ ಬಂದ್ ಆಗಿದ್ದಾಗ ಆತಂಕ ಸೃಷ್ಟಿಯಾಗಿತ್ತು ಎನ್ನುತ್ತಾರೆ ಬಂಡೀಪುರ ಅರಣ್ಯದಲ್ಲಿ ಉಡುಗೊರೆಗಳ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿಯೊಬ್ಬರು.
ಒಟ್ಟಾರೆ ರೈತರು, ಪರಿಸರ ಮತ್ತು ಪ್ರವಾಸೋದ್ಯಮ ಯಾವುದಕ್ಕೂ ಸಮಸ್ಯೆ ಆಗುವುದಿಲ್ಲ ಎನ್ನುತ್ತಾರೆ ಸಫಾರಿಗಾಗಿ ಒತ್ತಾಯಿಸಿದ್ದ ಬಹುತೇಕ ಮಂದಿ. ನಾನೂ ರೈತನ ಮಗನೆ. ರೈತರ ಸಮಸ್ಯೆಗಳು ಅರ್ಥವಾಗುತ್ತವೆ. ನಮ್ಮ ಜಮೀನುಗಳಿಗೂ ಆಗಾಗ ಆನೆಗಳು ದಾಳಿ ಮಾಡುತ್ತವೆ. ಆದರೆ, ಸಫಾರಿ ವಾಹನಗಳ ಓಡಾಟಕ್ಕೂ ಆನೆ ದಾಳಿಗೂ ಸಂಬಂಧ ಇಲ್ಲ. ಆದರೆ, ಬೆಳೆ ನಷ್ಟವಾದ ರೈತರ ಸಂಕಷ್ಟವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂದು ಬಂಡೀಪುರದ ಸೆರಾಯ್ ರೆಸಾರ್ಟ್‌ನ ಇಂಜಿನಿಯರ್ ಮಂಜುನಾಥ್ ಹೇಳಿದರು.
ನಮ್ಮ ರೆಸಾರ್ಟ್‌ನಲ್ಲಿ ಶೇ.೮೦ರಷ್ಟು ಸ್ಥಳೀಯರು ಕೆಲಸ ಮಾಡುತ್ತಾರೆ. ರೆಸಾರ್ಟ್ ಬಂದ್ ಆಗಿಬಿಟ್ಟರೆ ಅವರಿಗೆ ಸಂಬಳ ಕೊಡಲು ನಮ್ಮಿಂದ ಸಾಧ್ಯವಾಗುವುದಿಲ್ಲ ಎಂದರು.
ಸಫಾರಿಯಿಂದ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆ ಆಗುವುದಿಲ್ಲ. ಪ್ರವಾಸಿಗರ ಪ್ರವೇಶಕ್ಕೆ ಒಂದೇ ಮಾರ್ಗ ನಿಗದಿಪಡಿಸಲಾಗಿದೆ. ಅಲ್ಲದೆ, ಮೊಬೈಲ್ ಫೋನ್ಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಽ ಸಲಾಗಿದೆ ಎಂದು ಬಂಡೀಪುರ ಡೊಸಲ್ಡನ್ ರೆಸಾಟ್ ನ ಕಾರ್ತಿಕ್ ದೇವೈ ಅಭಿಪ್ರಾಯಪಟ್ಟರು. ಬಂಡೀಪುರದಲ್ಲಿ ರೆಸಾರ್ಟ್‌ಗಳಿವೆ, ಹೋಂ ಸ್ಟೇಗಳಿವೆ. ಆದರೆ ಯಾವುದರಿಂದಲೂ ಪರಿಸರಕ್ಕೆ ತೊಂದರೆ ಇಲ್ಲ. ೨೦೧೨ರಲ್ಲಿ ಪರಿಸರ ಸೂಕ್ಷ ವಲಯ ನಿಯಮಾವಳಿ ಜಾರಿಯಾದ ನಂತರ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಯಾವುದೇ ಹೊಸ ರೆಸಾರ್ಟ್ ಗಳನ್ನು ನಿರ್ಮಿಸಲು ಅವಕಾಶ ನೀಡಿಲ್ಲ ಎಂದು ಅವರು ತಿಳಿಸಿದರು.
” ನಮ್ಮ ಸೆರಾಯ್ ರೆಸಾರ್ಟ್‌ಗೆ ಹಾಲು, ಹಣ್ಣು, ತರಕಾರಿಗಳು ಇತ್ಯಾದಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಸ್ಥಳೀಯ ರೈತರಿಂದಲೇ ಖರೀದಿಸುತ್ತೇವೆ. ಅಲ್ಲದೆ, ಎಸ್‌ಎಸ್ ಎಲ್‌ಸಿ ಅಥವಾ ಪಿಯುಸಿ ವ್ಯಾಸಂಗ ಅನುತ್ತೀರ್ಣರಾದ ಮಕ್ಕಳಿಗೆ ಜೀವನ ರೂಪಿಸಿಕೊಳ್ಳಲು ಪೂರಕವಾದ ಹಲವು ತರಬೇತಿಗಳನ್ನು ನೀಡುತ್ತಿದ್ದೇವೆ. ಹುಲಿ ದಾಳಿ ಪ್ರಕರಣಗಳು ನಡೆಯುವುದಿಲ್ಲ. ಯಾವಾಗಲೋ ಬೇಟೆ ಆಡಲು ಶಕ್ತಿಹೀನವಾದ ಹುಲಿ ಮನುಷ್ಯರ ಮೇಲೆ ದಾಳಿ ಮಾಡಬಹುದು ಅಷ್ಟೆ. ಸಫಾರಿ ಸ್ಥಗಿತಗೊಂಡರೆ ನೂರಾರು ಜನರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ.”
-ಮಂಜುನಾಥ್, ಇಂಜಿನಿಯರ್, ಸೆರಾಯ್ ರೆಸಾರ್ಟ್, ಬಂಡೀಪುರ
” ಸಫಾರಿ ವಾಹನಗಳ ಶಬ್ದಕ್ಕೆ ಕಾಡು ಪ್ರಾಣಿಗಳು ಹೊಂದಿಕೊಂಡಿವೆ. ಹುಲಿಗಳು ಆಹಾರಕ್ಕಾಗಿ ಜಿಂಕೆ, ಕಾಡೆಮ್ಮೆಯಂತಹ ಪ್ರಾಣಿಗಳನ್ನು ಬೇಟೆಯಾಡುತ್ತವೆಯೇ ಹೊರತು, ಮನುಷ್ಯರನ್ನಲ್ಲ. ಅಲ್ಲದೆ, ಸಫಾರಿಯಿಂದ ಕೃಷಿಗಾಗಲಿ, ಕೃಷಿಕರಿಗಾಗಲಿ ತೊಂದರೆ ಇಲ್ಲ. ದನಕರುಗಳು ಮೇವಿಗಾಗಿ ಕಾಡಿಗೂ ಬರುತ್ತವೆ. ಯಾವಾಗಲೋ ಒಮ್ಮೆ ಮಾತ್ರ ಅವುಗಳ ಮೇಲೆ ಕಾಡುಪ್ರಾಣಿಗಳು ದಾಳಿ ಮಾಡಬಹುದು. ಕಾಡುಪ್ರಾಣಿಗಳು ಸಫಾರಿ ವಾಹನಗಳ ಶಬ್ದಕ್ಕೆ, ಸ್ಥಳೀಯವಾಗಿರುವ ಜನ-ಮನಕ್ಕೆ ಹೊಂದಿಕೊಂಡಿವೆ.”
-ಪುಟ್ಟಮ್ಮ, ಸದಸ್ಯರು, ಜಿಲ್ಲಾ ಅರಣ್ಯ ಹಕ್ಕು ಸಮಿತಿ, ಕಾರೆಮಾಳ, ಬಂಡೀಪುರ ಅರಣ್ಯ ವಲಯ
” ಸಫಾರಿ ನಿಂತರೆ ಪ್ರವಾಸಿಗರು ಬರಲ್ಲ. ಆಗ ಇದನ್ನೇ ನಂಬಿರುವ ನಮಗೆ ಸಂಬಳ ಸಿಗಲ್ಲ. ವ್ಯವಹಾರ ನಡೆದರೆ ಮಾತ್ರ ರೆಸಾರ್ಟ್ ಮಾಲೀಕರು ನಮಗೆ ಸಂಬಳ ನೀಡುತ್ತಾರೆ. ಕಾಡ್ಗಿಚ್ಚು ತಡೆಗೆ ಫೈರ್‌ಲೈನ್ ನಿರ್ಮಿಸಲು ರೆಸಾರ್ಟ್ ಮಾಲೀಕರು ಅರಣ್ಯ ಇಲಾಖೆಗೆ ಊಟ, ಮತ್ತಿತರ ಸಹಕಾರ ನೀಡುತ್ತಾರೆ. ಹೀಗಾಗಿ ರೆಸಾರ್ಟ್‌ಗಳಿಂದ ಅರಣ್ಯ ಮತ್ತು ವನ್ಯಜೀವಿಗಳಿಗೆ ಹಾನಿ ಇಲ್ಲ.”
-ಪ್ರತಾಪ್, ವನವಿಹಾರ ರೆಸಾರ್ಟ್ ಸಿಬ್ಬಂದಿ
” ಸಫಾರಿ ಸ್ಥಗಿತವಾಗಿದ್ದ ಸಮಯದಲ್ಲಿಯೂ ಮಾನವ – ವನ್ಯಪ್ರಾಣಿ ಸಂಘರ್ಷ ನಡೆದಿದೆ. ನನ್ನದೇ ೩ ಹಸುಗಳು ಸಾವಿಗೀಡಾಗಿದ್ದು, ಅದಕ್ಕೆ ಪರಿಹಾರವೂ ಬಂದಿದೆ. ಸಫಾರಿ ಕೇಂದ್ರದಲ್ಲಿ ನಾನು ಗಿಫ್ಟ್ ಅಂಗಡಿ ನಡೆಸುತ್ತಿದ್ದೇನೆ. ಮೂರು ತಿಂಗಳಿಂದ ಸಫಾರಿ ಬಂದ್ ಆಗಿ ಅಪಾರ ನಷ್ಟವಾಗಿದೆ. ಅಂಗಡಿಯಲ್ಲಿ ಇಬ್ಬರು ಯುವತಿಯರು ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಸಫಾರಿ ಆರಂಭವಾಗದಿದ್ದರೆ, ಇನ್ನು ಕೆಲ ದಿನಗಳಲ್ಲಿ ಅವರನ್ನು ಕೆಲಸದಿಂದ ತೆಗೆದು ಹಾಕಬೇಕಿತ್ತು.”
-ವಿವೇಕ್ ಜಕ್ಕಳ್ಳಿ , ಸಫಾರಿ ಸೆಂಟರ್ ಬಳಿಯ ಗಿಫ್ಟ್ ಶಾಪ್ ಮಾಲೀಕ





