Mysore
24
overcast clouds

Social Media

ಬುಧವಾರ, 25 ಫೆಬ್ರವರಿ 2026
Light
Dark

ಸಫಾರಿ ಕಾಡಿನ ನಾಶಕ್ಕೆ ರಹದಾರಿ: ರೈತರ ಆರೋಪ

ಗಿರೀಶ್ ಹುಣಸೂರು

ರೆಸಾರ್ಟ್‌ಗಳ ಮಾಲೀಕರ ಹಿತಾಸಕ್ತಿ ಕಾಪಾಡುವ ಹುನ್ನಾರ

ಪ್ರವಾಸೋದ್ಯಮ ಅಭಿವೃದ್ಧಿ ಎಂಬುದು ನೆಪ

ಇಂದು ಸಫಾರಿ ವಿರೋಧಿಸಿ ಪ್ರತಿಭಟನೆ 

ಮೈಸೂರು: ಸಫಾರಿ ಪುನಾರಂಭವಾಗಿದೆ. ಹಲವು ರೈತ ಸಂಘಟನೆಗಳ ಮುಖಂಡರು ಸಫಾರಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ.

ಸಫಾರಿ ತೆರೆಮರೆಯಲ್ಲಿ ರೆಸಾರ್ಟ್ ಗಳ ಮಾಲೀಕರ ಹಿತಾಸಕ್ತಿ ಅಡಗಿದೆ. ಸಫಾರಿಯಿಂದ ವನ್ಯಜೀವಿಗಳ ಸ್ವಚ್ಛಂದ ಜೀವನಕ್ಕೆ ಅಡ್ಡಿಯಾಗುತ್ತದೆ. ಅಲ್ಲದೆ, ಪರಿಸರ ನಾಶಕ್ಕೆ ರಹದಾರಿ ನೀಡಿದಂತಾಗಿದೆ ಎಂಬುದು ಕೃಷಿ ಕ್ಷೇತ್ರದ ಹಲವು ಮುಖಂಡರ ಗಟ್ಟಿಧ್ವನಿಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಕುರುಬೂರು ಶಾಂತಕು ಮಾರ್ ಮತ್ತು ಬಡಗಲಪುರ ನಾಗೇಂದ್ರ ‘ಆಂದೋಲನ’ದಿನಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಅವರ ನುಡಿಗಳನ್ನು ಇಲ್ಲಿ ದಾಖಲಿಸಲಾಗಿದೆ.

ಇನ್ನೆಷ್ಟು ರೈತರ ಮಕ್ಕಳು ತಬ್ಬಲಿಗಳಾಗಬೇಕು?

ಪ್ರಾಣಿ ಭಯ ಹುಟ್ಟಿಸಿ ಕಾಡಂಚಿನ ರೈತರ ಒಕ್ಕಲೆಬ್ಬಿಸುವ ಯತ್ನ: ಹೊನ್ನೂರು ಪ್ರಕಾಶ್

ಕಾಡು ಪ್ರಾಣಿಗಳ ದಾಳಿಯ ಭಯ ಹುಟ್ಟಿಸಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ಚಾಮರಾಜನಗರ ಜಿಲ್ಲೆಯ ರೈತ ಮುಖಂಡ ಹೊನ್ನೂರು ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಂದೋಲನ’ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕಾಡು ಪ್ರಾಣಿಗಳ ದಾಳಿಯಿಂದ ಇನ್ನೆಷ್ಟು ರೈತರ ಪತ್ನಿ ಯರು ವಿಧವೆಯರಾಗಬೇಕು? ಇನ್ನೆಷ್ಟು ರೈತರ ಮಕ್ಕಳು ತಬ್ಬಲಿಯಾಗಬೇಕು ಎಂದು ಖಾರ ವಾಗಿ ಪ್ರಶ್ನಿಸಿದರು. ಗುಂಡ್ಲುಪೇಟೆ ತಾಲ್ಲೂಕಿನ ಗಡಿಯಲ್ಲಿ ಶೇ.೩೦ರಷ್ಟು ರೈತರ ಜಮೀನನ್ನು ಈಗಾಗಲೇ ಕೇರಳದವರು ಖರೀದಿಸಿದ್ದಾರೆ. ಇನ್ನುಳಿದ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ದಾಳಿಯ ಭಯ ಹುಟ್ಟಿಸಿ ರೈತರು, ರೈತರ ಮಕ್ಕಳನ್ನು ವ್ಯವಸಾಯದಿಂದ ವಿಮುಖರನ್ನಾಗಿಸಿ, ಕೊಟ್ಟಷ್ಟು ಹಣಕ್ಕೆ ರೈತರು ಜಮೀನು ಮಾರಿಕೊಳ್ಳಲಿ ಎಂಬ ಹುನ್ನಾರ ‘ಸಫಾರಿ’ ಪುನಾರಂಭದ ಹಿಂದೆ ಅಡಗಿದೆ ಎಂದರು.

ಹೊರಗಿನಿಂದ ಬಂದವರಿಗೆ ಕಾಡುಪ್ರಾಣಿಗಳನ್ನು ತೋರಿಸುವುದೇ ಪ್ರವಾಸೋದ್ಯಮವೇ? ರೆಸಾರ್ಟ್ ಮಾಲೀಕರ ತಾಳಕ್ಕೆ ತಕ್ಕಂತೆ ಈ ಸರ್ಕಾರ ಕುಣಿಯುತ್ತಿದೆ. ೩-೪ ಸಾವಿರ ಜನರ ಜೀವನದ ಪ್ರಶ್ನೆ ಎನ್ನುವವರಿಗೆ ಹುಲಿ ಸಂರಕ್ಷಿತ ಪ್ರದೇಶದ ಲ್ಲಿನ ರೆಸಾರ್ಟ್‌ಗಳಲ್ಲಿ ಅಷ್ಟು ಜನ ಏಕೆ ಇದ್ದಾರೆ ಎಂದು ಪ್ರಕಾಶ್ ಪ್ರಶ್ನಿಸಿದರು. ರಾತ್ರಿಯಾದರೆ ಬಂಡೀ ಪುರ ಅರಣ್ಯದ ಗೇಟ್ ಪೊಲೀಸರಿಗೂ ತೆರೆಯು ವುದಿಲ್ಲ. ಆದರೆ, ರೆಸಾರ್ಟ್‌ಗಳ ವಾಹನಗಳಿಗೆ ತೆರೆದುಕೊಳ್ಳುತ್ತದೆ. ರಾತ್ರಿ ವೇಳೆ ಇಷ್ಟ ಬಂದಂತೆ ಅರಣ್ಯದೊಳಗೆ ಆಟ ಆಡುತ್ತಾರೆ.

ಇದಕ್ಕೆ ಹತ್ತಾರು ವರ್ಷಗಳಿಂದ ಬಂಡೀಪುರದಲ್ಲೇ ಠಿಕಾಣಿ ಹೂಡಿರುವ ಆರ್‌ಎಫ್‌ಒಗಳ ಕುಮ್ಮಕ್ಕು ಇದೆ. ಹುಲಿ ದಾಳಿ ಯಿಂದ ಮಾನವ ಜೀವ ಹಾನಿ ಆಯಿತು ಎಂದು ಸಚಿವ ಈಶ್ವರ್ ಬಿ. ಖಂಡ್ರೆ ಸಫಾರಿ ಬಂದ್ ಮಾಡಲಿಲ್ಲ. ಅದರಲ್ಲಿ ಭ್ರಷ್ಟಾಚಾರದ ವಾಸನೆ ಇದೆ. ಡೆಹ್ರಾ ಡೂನ್‌ನಿಂದ ಬಂದಿದ್ದ ತಜ್ಞರ ಏಕಮುಖ ವರದಿ ಆಧಾರದ ಮೇಲೆ ಸರ್ಕಾರ ಸಫಾರಿ ಪುನಾರಂಭ ಮಾಡಿದೆಯೇ? ಹಾಗಿದ್ದರೆ ಸ್ಥಳೀಯ ರೈತರು, ಜನರ ಅಭಿಪ್ರಾಯ ಮುಖ್ಯವಲ್ಲವೇ ಎಂದು ಅವರು ಪ್ರಶ್ನಿಸಿದರು.

ಬಂಡೀಪುರ ಅರಣ್ಯ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ೧೯೯೨-೯೩ರ ನಿಯಮ ಮೀರಿಅಕ್ರಮವಾಗಿ ಹತ್ತಾರು ರೆಸಾರ್ಟ್‌ಗಳು ತಲೆ ಎತ್ತಿವೆ. ಈ ನಿಯಮದ ಪ್ರಕಾರ ಒತ್ತುವರಿ ಮಾಡುವಂತಿಲ್ಲ, ರೆಸಾರ್ಟ್‌ನಲ್ಲಿ ಈಜುಕೊಳ ನಿರ್ಮಿಸುವಂತಿಲ್ಲ. ಆದರೆ, ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಅಕ್ರಮವಾಗಿ ರೆಸಾರ್ಟ್ಗಳನ್ನು ನಿರ್ಮಿಸಲಾಗಿದೆ. ಪಕ್ಕದ ಮುದುಮಲೈಅರಣ್ಯ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್‌ಗಳನ್ನು ಬಂದ್ ಮಾಡಿಸಲಾಗಿದೆ. ಇಲ್ಲೇಕೆ ಆ ಕೆಲಸ ಸಾಧ್ಯ ವಿಲ್ಲ. ಇವರನ್ನು ಹೀಗೆಯೇ ಬಿಟ್ಟರೆ ಬಂಡೀಪುರ ಅರಣ್ಯವೇ ಇಲಾಖೆಯ ಕೈತಪ್ಪುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ರೆಸಾರ್ಟ್‌ಗಳವರು ಸಫಾರಿ ವಾಹನಗಳನ್ನು ಕೆರೆಗಳ ಸಮೀಪವೇ ಕರೆದೊಯ್ಯುತ್ತಾರೆ. ಜತೆಗೆ ರೆಸಾರ್ಟ್‌ಗಳವರು ಪರಿಸರ ಸೂಕ್ಷ್ಮ ಪ್ರದೇಶ ದಲ್ಲಿ ಬೃಹತ್ ಲೈಟ್‌ಗಳನ್ನು ಅಳವಡಿಸಿ, ಫೈರ್ ಕ್ಯಾಂಪ್ ಮಾಡಿ, ಜೋರು ಶಬ್ದದಲ್ಲಿ ಸಂಗೀತ ಹಾಕಿ ಜನರನ್ನು ಕುಣಿಸಿ ಮೋಜು-ಮಸ್ತಿ ಮಾಡುತ್ತಿರು ವುದರಿಂದ ಭಯಗೊಂಡ ಹುಲಿ, ಆನೆ ಮೊದಲಾದ ವನ್ಯಪ್ರಾಣಿಗಳು ಅರಣ್ಯ ದಿಂದ ಹೊರಬಂದು ಜನ – ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ ಎಂದು ಹೊನ್ನೂರು ಪ್ರಕಾಶ್ ಹೇಳಿದರು.

” ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ ಅಕ್ರಮ ರೆಸಾರ್ಟ್‌ಗಳನ್ನು ಮುಚ್ಚಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಸಫಾರಿ ಪುನಾರಂಭ ವಿರೋಧಿಸಿ ಬುಧವಾರದಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಮೈಸೂರು-ಚಾಮರಾಜನಗರ ಎರಡೂ ಜಿಲ್ಲೆಗಳ ರೈತ ಮುಖಂಡರು ಸಾಮೂಹಿಕ ನಾಯಕತ್ವದಲ್ಲಿ ಪ್ರತಿಭಟನೆ ಮಾಡಲಿದ್ದೇವೆ. ಅದಕ್ಕೂ ಸರ್ಕಾರ ಬಗ್ಗದಿದ್ದಲ್ಲಿ ಮಾ.೨, ೩ರಂದು ಉಪವಾಸ ಸತ್ಯಾಗ್ರಹ ನಡೆಸಲಾಗುವುದು.”

-ಹೊನ್ನೂರು ಪ್ರಕಾಶ್, ರೈತ ಸಂಘದ ಜಿಲ್ಲಾ ಮುಖಂಡ, ಚಾಮರಾಜನಗರ

ಸಫಾರಿ ಪುನರಾರಂಭ ಸರಿಯಲ್ಲ: ಕುರುಬೂರು: 

ಪರಿಸರ ಸಂರಕ್ಷಣೆಯ ಜೊತೆಗೆ ಅರಣ್ಯಗಳಲ್ಲಿ ವನ್ಯಪ್ರಾಣಿಗಳಿಗೆ ಭಯ ಮುಕ್ತ ವಾತಾವರಣವನ್ನು ರೂಪಿಸುವ ಬದಲಿಗೆ ಸರ್ಕಾರ ವನ್ಯಜೀವಿ ಸಫಾರಿಗೆ ಮತ್ತೆ ಅನುಮತಿ ನೀಡಿರುವುದು ಸರಿಯಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಹುಲಿ, ಆನೆಗಳ ಸಂಖ್ಯೆ ಹೆಚ್ಚಿದೆ ಎಂದು ಸರ್ಕಾರವೇ ಅಂಕಿ ಅಂಶಗಳನ್ನು ನೀಡಿದೆ. ಆದರೂ ಅರಣ್ಯದೊಳಗೆ ಮಾನವನ ಹಸ್ತಕ್ಷೇಪ ಕಡಿಮೆ ಮಾಡುತ್ತಿಲ್ಲ. ಹೀಗಾಗಿ ಹುಲಿ, ಆನೆಗಳು ಅರಣ್ಯದಿಂದ ಹೊರ ಬಂದು ಜನ-ಜಾನುವಾರುಗಳನ್ನು ಬಲಿ ಪಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಬೇಕಿದೆ. ಕಾಡಂಚಿನ ಜನರು ಇನ್ನೂ ಭಯದ ವಾತಾವರಣದಲ್ಲಿರುವಾಗ ಸಫಾರಿ ಪುನರಾರಂಭ ಮಾಡಿದ್ದು ಸರಿಯಲ್ಲ ಎಂದಿದ್ದಾರೆ.

” ಮೈಸೂರಿನಲ್ಲಿ ಬುಧವಾರ ಕರೆ ನೀಡಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಲಿದ್ದಾರೆ. ಸರ್ಕಾರ ಎಚ್ಚೆತ್ತು ಅರಣ್ಯದ ಒಳಗೆ ಇರುವ ರೆಸಾರ್ಟ್ಗಳನ್ನು ಮುಚ್ಚಿಸುವ ಕೆಲಸ ಮಾಡಬೇಕು. ಈ ಹೋರಾಟದ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ.”

-ಕುರುಬೂರು ಶಾಂತಕುಮಾರ್, ಅಧ್ಯಕ್ಷ, ರೈತ ಸಂಘಟನೆಗಳ ಒಕ್ಕೂಟ

 

ಪ್ರವಾಸೋದ್ಯಮಕ್ಕೆ ಬೇರೆ ಮಾರ್ಗ ಅನುಸರಿಸಲಿ: ಬಡಗಲಪುರ ನಾಗೇಂದ್ರ

ಹುಲಿ ಸಂರಕ್ಷಿತ ಅರಣ್ಯಪ್ರದೇಶಗಳಲ್ಲಿ ಸಫಾರಿ ರದ್ದು ಮಾಡಿ ಎಂಬ ಒತ್ತಾಯವನ್ನು ರೈತ ಸಂಘ ಮೊದಲಿನಿಂದಲೂ ಮಾಡುತ್ತಾ ಬಂದಿದೆ. ಹುಲಿ ದಾಳಿಯಿಂದ ಮಾನವ ಜೀವ ಹಾನಿಯಾದಾಗ ಚಾಮರಾಜನಗರದಲ್ಲಿ ನಡೆದ ಮೊದಲ ಸಭೆಯಲ್ಲೂ ಇದನ್ನೇ ಪ್ರತಿಪಾದನೆ ಮಾಡಿದ್ದೇವೆ. ಕಾಡೊಳಗಿನ, ಸುತ್ತಮುತ್ತ ಇರುವ ರೆಸಾರ್ಟ್‌ಗಳನ್ನು ಮುಚ್ಚಿ ಎಂಬ ಒತ್ತಾಯವನ್ನೂ ಮಾಡಿದ್ದೇವೆ.

ಸಫಾರಿ ಬಂದ್ ಆದ ಮೇಲೆ ಮಾನವ-ವನ್ಯಜೀವಿ ಸಂಘರ್ಷ ಕಡಿಮೆಯಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅವರೇ ಹೇಳಿಕೆ ನೀಡಿದ್ದರು. ಆದರೂ ಯಾವ ಒತ್ತಡಕ್ಕೆ ಮಣಿದು ಸಫಾರಿ ಪುನಾರಂಭ ಮಾಡಿದ್ದಾರೋ ಗೊತ್ತಿಲ್ಲ. ಸರ್ಕಾರ ಪ್ರವಾಸೋದ್ಯಮವನ್ನು ಬೇರೆ ರೀತಿಯಲ್ಲಿ ಮಾಡಲಿ, ಸಫಾರಿ ಪುನರಾರಂಭಿಸಿರುವುದು ಒಳ್ಳೆಯದಲ್ಲ ಎಂದು ಬಡಗಲಪುರ ನಾಗೇಂದ್ರ ಎಚ್ಚರಿಸಿದರು.

” ಅರಣ್ಯಗಳಲ್ಲಿ ಮಾನವನ ಚಟುವಟಿಕೆಗಳು ಹೆಚ್ಚಾಗಿ ಗಾಬರಿಗೊಂಡ ಕಾಡುಪ್ರಾಣಿಗಳು ಕಾಡಂಚಿನ ಗ್ರಾಮಗಳಿಗೆ ಬಂದು ಇಲ್ಲಿ ಪೊದೆಗಳಲ್ಲಿ ಅಡಗಿಕೊಂಡು ಜನ-ಜಾನುವಾರುಗಳ ಮೇಲೆ ದಾಳಿ ಮಾಡುತ್ತವೆ. ವನ್ಯಜೀವಿ ಸಫಾರಿ ರದ್ದುಪಡಿಸುವಂತೆ ‘ಸೇವ್ ಕಬಿನಿ’ ತಂಡ ಸೇರಿದಂತೆ ಯಾರೇ ಹೋರಾಟ  ಮಾಡಿದರೂ, ರೈತಸಂಘದ ಬೆಂಬಲ ಇದೆ.”

– ಬಡಗಲಪುರ ನಾಗೇಂದ್ರ, ಅಧ್ಯಕ್ಷ, ರಾಜ್ಯ ರೈತ ಸಂಘ

 

 

 

Tags:
error: Content is protected !!