Mysore
24
broken clouds

Social Media

ಸೋಮವಾರ, 27 ಏಪ್ರಿಲ 2026
Light
Dark

ಸಫಾರಿ ಆದಾಯದ ಶೇ.35 ಭಾಗ ಕಾಡಿನಂಚಿನ ಜನಕಲ್ಯಾಣಕ್ಕೆ ಬಳಕೆ : ಖಂಡ್ರೆ

ಬೆಂಗಳೂರು : ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಗ್ರಾಮಗಳಲ್ಲಿ ಸಭೆ ನಡೆಸಿ, ಸ್ಥಳೀಯರ ಅಗತ್ಯಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಉನ್ನತಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಸಚಿವರು, ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಪುನಾರಂಭ ಮಾಡಿರುವ ಬಗ್ಗೆ ಕೆಲವರು ಮಾತ್ರವೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಮನವರಿಕೆ ಮಾಡಿ ಜೊತೆಗೆ ಯುವಜನರಿಗೆ ಕೌಶಲ್ಯ ತರಬೇತಿ ನೀಡಬೇಕು, ಕಾಡಿನಂಚಿನ ಶಾಲೆ ಕಾಲೇಜುಗಳಿಗೆ ಅಗತ್ಯ ಸಲಕರಣೆ ನೀಡಬೇಕು. ವನ್ಯಜೀವಿಗಳು ನಾಡಿಗೆ ಬಂದಾಗ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಅರಿವು ಮೂಡಿಸಲೂ ತಿಳಿಸಿದರು.

ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್, ಎ.ಪಿಸಿಸಿಎಫ್ ಬಿಸ್ವಜಿತ್ ಮಿಶ್ರ, ಮನೋಜ್ ರಾಜನ್, ಸಿಎಫ್ ಪ್ರಭಾಕರನ್, ಕೊಪ್ಪ ವಲಯದ ಡಿಸಿಎಫ್ ಶಿವಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

ಹಿರಿಯ ಅಧಿಕಾರಿಗಳು ಕ್ಷೇತ್ರಕ್ಕೆ ಹೋಗುವಂತೆ ಸೂಚನೆ
ಬೇಸಿಗೆ ಹಿನ್ನೆಲೆಯಲ್ಲಿ ಮುಂದಿನ 2-3 ತಿಂಗಳು ಅತ್ಯಂತ ಕ್ಲಿಷ್ಟಕರವಾಗಿದ್ದು, ಹಿರಿಯ ಅಧಿಕಾರಿಗಳು ವನ್ಯಜೀವಿ -ಮಾನವ ಸಂಘರ್ಷ ಇರುವ ಪ್ರದೇಶಕ್ಕೆ ತೆರಳಿ, ಅಧಿಕಾರಿ, ಸಿಬ್ಬಂದಿಗೆ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

Tags:
error: Content is protected !!