Mysore
21
broken clouds

Social Media

ಶನಿವಾರ, 21 ಫೆಬ್ರವರಿ 2026
Light
Dark

ಓದುಗರ ಪತ್ರ: ಉಚಿತ ಕೊಡುಗೆಗಳ ಬಗ್ಗೆ ಪರಾಮರ್ಶೆ ಅಗತ್ಯ

ಓದುಗರ ಪತ್ರ

ಉಚಿತ ಕೊಡುಗೆ ಪ್ರಕಟಿಸುವ ರಾಜಕೀಯ ಪಕ್ಷಗಳ ನಡೆಗೆ ಕಳೆದ ಗುರುವಾರ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿರುವುದು ಸ್ವಾಗತಾರ್ಹವಾಗಿದೆ. ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಮತ ದಾರರನ್ನು ಸೆಳೆಯಲು ಘೋಷಣೆ ಮಾಡುವ ಉಚಿತ ಕೊಡುಗೆಗಳಿಂದ ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ.

ಈ ಹಿಂದೆ ಒಂದೆರಡು ರಾಜ್ಯಗಳಿಗೆ ಸೀಮಿತವಾಗಿದ್ದ ಉಚಿತ ಕೊಡುಗೆಗಳು ಈಗ ದೇಶಾ ದ್ಯಂತ ಮತದಾರರನ್ನು ಸೆಳೆಯುವ ಅಸ್ತ್ರಗಳಂತೆ ಬಳಕೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹೇಗಾದರೂ ಸರಿ ಅಧಿಕಾರಕ್ಕೇರಲೇ ಬೇಕು ಎಂಬ ಉಮೇದಿನೊಂದಿಗೆ ರಾಜಕೀಯ ಪಕ್ಷಗಳು ಚುನಾವಣೆ ಪೂರ್ವದಲ್ಲಿ ಘೋಷಿಸುವ ಉಚಿತ ಕೊಡುಗೆಗಳು ಜಾರಿಗೆ ಬಂದರೆ ಅವುಗಳ ಹೊರೆಬೀಳುವುದು ತೆರಿಗೆದಾರರ ಮೇಲೆ ತಾನೆ? ಒಂದು ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲು ಸಾರ್ವಜನಿಕರ ಹಣವನ್ನು ಈ ರೀತಿ ಬೇಕಾಬಿಟ್ಟಿ ಪೋಲು ಮಾಡುವುದು ಎಷ್ಟು ಸರಿ? ಎಂಬ ಬಗ್ಗೆ ಪರಾಮರ್ಶೆ ಆಗಬೇಕಿದೆ.

ಉಚಿತ ಘೋಷಣೆಗಳ ಜಾರಿಯಿಂದಾಗಿ ರಾಜ್ಯ ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿಯುತ್ತದೆ. ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಘೋಷಿಸುವ ಉಚಿತ ಕೊಡುಗೆಗಳಿಂದ ಆರ್ಥಿಕತೆಯ ಮೇಲಾಗುವ ಗಂಭೀರ ಪರಿಣಾಮಗಳನ್ನು ಅರಿತು ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಹಾಗೂ ನ್ಯಾಯಾಲಯಗಳು ಒಂದು ಒಮ್ಮತದ ನಿರ್ಧಾರ ಕೈಗೊಳ್ಳುವುದು ತುರ್ತು ಅವಶ್ಯವಾಗಿದೆ.

– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

Tags:
error: Content is protected !!