Mysore
26
haze

Social Media

ಶನಿವಾರ, 28 ಮಾರ್ಚ್ 2026
Light
Dark

ಹೀಗಾದರೂ ಆದರೆ ಭ್ರಮೆಗಳು ಕರಗಿ ಆಧ್ಯಾತ್ಮಿಕ ವಿನಯದ ಪರಿಚಯವಾಗಬಹುದೇನೋ…

ಸುಕನ್ಯಾ ಕನಾರಳ್ಳಿ

ಒಂದು ಮಠ. ಅಲ್ಲಿ ಮರಿಸ್ವಾಮಿಯಾಗಿದ್ದವರು ಪೀಠಾಧಿಪತಿ ತೀರಿಕೊಂಡ ಮೇಲೆ ಏನೇನೋ ಕಾರಣಗಳ ದೆಸೆಯಿಂದ ಪೀಠವನ್ನು ಏರಲು ಆಗದೆ ಹೋಯಿತು. ಆ ಕಹಿಯನ್ನು ಆತ ಜೀರ್ಣಿಸಿಕೊಳ್ಳಲು ಆಗದೆ ಕೊನೆಗೆ ಮಾನಸಿಕ ಚಿಕಿತ್ಸೆಯ ಮೊರೆ ಹೋಗಬೇಕಾಯಿತು.

ಚಿಕಿತ್ಸೆಗೆ ಆತನನ್ನು ಹೊತ್ತು ಹಾಕಿದವರ ಭಯವೇನೂ ಕಮ್ಮಿ ಇರಲಿಲ್ಲ. ಮಠದ ಗುಟ್ಟುಗಳನ್ನೆಲ್ಲ ಬಲ್ಲ ಈತ ಎಲ್ಲೆಂದರಲ್ಲಿ ಒದರಿಬಿಟ್ಟರೆ? ಅವರ ಕೇಸ್ ಇವರ ಹತ್ತಿರವೇ ಬಂತು. ತುಂಬ ಯೋಚಿಸಿದ ನಂತರ ಈ ನನ್ನ ಸ್ನೇಹಿತರು ಹಾಕಿದ ಷರತ್ತು: ‘ಆತ ಒಂದು ವರ್ಷದ ಮಟ್ಟಿಗೆ ಕಾವಿ ಹಾಕಬಾರದು. ಹಾಗಿದ್ದಲ್ಲಿ ಮಾತ್ರ ನಾನು ಚಿಕಿತ್ಸೆಯನ್ನು ಆರಂಭಿಸುತ್ತೇನೆ.’ ಆತ ಸಂಪೂರ್ಣವಾಗಿ ಗುಣ ಹೊಂದಿದ್ದು ಸುಖಾಂತ್ಯವೇ. ಆದರೆ ಅದರ ಪೂರ್ತಿ ಯಶಸ್ಸನ್ನು ಹೊತ್ತುಕೊಳ್ಳಲು ಇಷ್ಟಪಡದ ಪ್ರಾಮಾಣಿಕತೆ ಈ ಮನಶಾಸ್ತ್ರಜ್ಞರದ್ದು. ಅದರ ಬಗ್ಗೆ ಮಾತಾಡುತ್ತಾ, ‘ನಿಜ ಏನು ಗೊತ್ತಾಮ್ಮ? ಕಾವಿ ಹೆಚ್ಚಿನಂಶ ಅವರ ಅಹಮನ್ನು ಇನ್ನಿಲ್ಲದಂತೆ ಉಬ್ಬಿಸುತ್ತದೆ. ಅದರಲ್ಲೂ ಜನ ಬಂದು ಕಾಲಿಗೆ ಬೀಳುವಾಗ, “ಪೂಜ್ಯ… ಪೂಜ್ಯ’ ಅಂತೆಲ್ಲ ಸಂಬೋಽಸುವಾಗ ಒಂದು ರೀತಿಯ ಅಡಿಕ್ಷನ್ ಪ್ರಾರಂಭವಾಗುತ್ತೆ. ಆತನ ನಿಜವಾದ ಬಂಡವಾಳ ಈ ವೇಷ -ಲಾಂಛ ನವೇ ಆಗಿತ್ತು. ಕಾವಿ ಹೋದ ಮೇಲೆ ತನ್ನ ಮಾತಿಗೆ ಬೆಲೆಯೇ ಇಲ್ಲ ಎಂದು ಅರಿವಾಗಿ ತೆಪ್ಪಗಾದರು,’ ಎಂದರು.

ಭೇಷ್! ಎಂದುಕೊಂಡೆ. ಇಂಗ್ಲೆಂಡಿನಿಂದ ಬಂದ ಬಟ್ಟೆಯನ್ನು ತಿರಸ್ಕರಿಸಿ ಖಾದಿ, ಉಪ್ಪು ಇತ್ಯಾದಿ ದಿನನಿತ್ಯದ ಬಳಕೆಯ ವಸ್ತುಗಳ ಮೂಲಕ ಬ್ರಿಟಿಷ್ ಸಾಮ್ರಾಜ್ಯವನ್ನು ಅಲ್ಲಾಡಿಸಿದ ಗಾಂಽಜಿ ನೆನಪಿಗೆ ಬಂದಿದ್ದರು. ಕಾವಿಧಾರಿಗಳಿಗೆ ಏಳು ವರ್ಷದ ಕೆಲಸಕ್ಕೆ ಒಂದು ವರ್ಷದ ರಜೆ ಇದ್ದರೆ ಹೇಗೆ ಎಂಬ ಅದ್ಭುತ ಯೋಚನೆ ಹೊಳೆದಿದ್ದು ಆಗಲೇ. ಭ್ರಮೆಗಳು ಕರಗಿ ಆಧ್ಯಾತ್ಮಿಕ ವಿನಯದ ಪರಿಚಯವಾಗಬಹುದು!

ನನ್ನ ಮನಶಾಸ್ತ್ರ ಪ್ರಾಧ್ಯಾಪಕ-ಸ್ನೇಹಿತರು ಅದ್ಭುತವಾದ ಛಾಯಾಗ್ರಾಹಕ ಕೂಡ. ಅವರು ತುಂಬಾ ವರುಷಗಳ ಹಿಂದೆ ಕ್ಲಿಕ್ಕಿಸಿದ್ದ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಜನ ಮುಗಿಬಿದ್ದಿದ್ದರು. ಅದರ ಹಕ್ಕನ್ನು ಉದಾರವಾಗಿ ಯಾರಿಗೋ ದಾನ ಮಾಡಲಾಗಿತ್ತು. ಪಡೆದುಕೊಂಡಾತ ಅದೆಷ್ಟು ಪ್ರತಿಗಳನ್ನು ಹಾಕಿಸಿದರೆಂದರೆ ತನ್ನ ಮಗಳ ಮದುವೆಗೆ ಹೊಂಚಿದ ಹಣ ಬಂದಿದ್ದು ಅದರಿಂದಲೇ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು. ಪುಟ್ಟರಾಜ ಗವಾಯಿಗಳು ಪಂಡಿತ ವೆಂಕಟೇಶ್ ಕುಮಾರ್ ಅವರ ಗುರು. ಅವರ ಜೊತೆ ಈ ಮನಶಾಸ್ತ್ರಜ್ಞರು ಗವಾಯಿಗಳನ್ನು ನೋಡಲು ಹೋದಾಗ, ‘ಈ ಸ್ನೇಹಿತರುಯಾವ ಸ್ವಾಮೀಜಿಗಳನ್ನೂ ಹುಡುಕಿಕೊಂಡು ಹೋಗುವುದಿಲ್ಲ, ಆದರೆ ನಿಮ್ಮನ್ನ ಭೇಟಿ ಮಾಡಲೇಬೇಕು ಅಂತ ಬಂದಿದಾರೆ’, ಅಂತ ವೆಂಕಟೇಶ್ ಕುಮಾರ್ ಪರಿಚಯ ಮಾಡಿಕೊಟ್ಟರಂತೆ. ಆಗ ಗವಾಯಿಗಳು, ‘ಅವರು ಬಂದಿ ರೋದು ನಾನು ಮಠಾಧಿಪತಿ ಅಂತಲ್ಲ, ಕಲಾವಿದ ಅಂತ ಕಣ್ ಲೇ!’ ಎಂದರಂತೆ. ಅದು ಅದ್ಭುತ ಚೇತನವೊಂದು ಕಲೆಗೆ ಸಲ್ಲಿಸಿದ ನಮನದಂತೆ ನನಗೆ ಕೇಳಿಸಿತ್ತು! ಅಂದ ಹಾಗೆ ಅವರೇ ಹೇಳಿದಂತೆ ಪುಟ್ಟರಾಜ ಗವಾಯಿಗಳ ಪೇಟ ಮಾತ್ರ ಕಾವಿ. ಉಳಿದ ವಸ್ತ್ರವೆಲ್ಲ ಅಚ್ಚ ಬಿಳಿ. ಪ್ರಜ್ಞಾಪೂರ್ವಕ ಆಯ್ಕೆ!

Tags:
error: Content is protected !!