Mysore
22
haze

Social Media

ಭಾನುವಾರ, 08 ಫೆಬ್ರವರಿ 2026
Light
Dark

ಹೆಬ್ಬಾತು ಹಕ್ಕಿಗಳ ಸ್ವರ್ಗ ಹದಿನಾರು ಕೆರೆ!

ಮೈಸೂರು: ಸಾವಿರಾರು ಕಿ.ಮೀ. ದೂರದಿಂದ ವಲಸೆ ಬರುವ ಹಕ್ಕಿಗಳಿಗೆ ಅದರಲ್ಲೂ ವಿಶೇಷವಾಗಿ ಮಂಗೋಲಿಯಾದಿಂದ ಸಾವಿರಾರು ಕಿಲೋಮೀಟರ್ ದೂರ ವಲಸೆ ಬರುವ ಬಾರ್ -ಹೆಡೆಡ್ ಹೆಬ್ಬಾತು ಗಳಿಗೆ ನಂಜನಗೂಡು ತಾಲ್ಲೂಕಿನ ಸುತ್ತೂರು ಬಳಿ ಇರುವ ಹದಿನಾರು ಕೆರೆಯು ಇದೀಗ ಒಂದು ಸಮೃದ್ಧ ಸ್ವರ್ಗವಾಗಿ ಮಾರ್ಪಟ್ಟಿದೆ.

ಚಳಿಗಾಲದ ಋತುವಿನಲ್ಲಿ ವಾಸಿಸಲು ಅತೀ ಪ್ರಿಯವಾದ ತಾಣವೆಂದು ಕಂಡುಕೊಂಡಿರುವ ಹಿಮಾಲಯ ದಂತಹ ಅತೀ ಎತ್ತರದವರೆಗೆ ಹಾರುವ ಶಕ್ತಿ ಹೊಂದಿರುವ ನೂರಾರು ಪಕ್ಷಿಗಳು ಹದಿನಾರು ಕೆರೆಯಲ್ಲಿ ಆಶ್ರಯ ಪಡೆದಿವೆ. ಹೀಗಾಗಿ ಮೈಸೂರು ನಗರದಿಂದ ಸುಮಾರು ೨೫ ಕಿಮೀ ದೂರದಲ್ಲಿರುವ ಚಿಕ್ಕಯ್ಯನ ಛತ್ರ ಹೋಬಳಿಯಲ್ಲಿರುವ ವಿಶಾಲವಾದ ಹದಿನಾರು ಕೆರೆಯು ಮತ್ತೊಮ್ಮೆ ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯ ಉತ್ಸಾಹಿಗಳಿಗೆ ಒಂದು ವಿಶಿಷ್ಟ ತಾಣವಾಗಿದೆ. ಹೆಬ್ಬಾತು ಪಕ್ಷಿಗಳು ತಲೆಯ ಮೇಲೆ ವಿಶಿಷ್ಟವಾದ ಕಪ್ಪು ಪಟ್ಟಿಗಳನ್ನು ಹೊಂದಿವೆ. ವಿಶಿಷ್ಟವಾದ ಹಾರ್ನಿಂಗ್ ಕರೆಗಳಿಂದ ಹೆಬ್ಬಾತುಗಳನ್ನು(ಬಾರ್ ಹೆಡೆಡ್ ಗೀಸ್) ಸುಲಭವಾಗಿ ಗುರುತಿಸಬಹುದಾಗಿದೆ. ಈ ಧ್ವನಿಯು ಕೆರೆಯಾದ್ಯಂತರಿಂಗಣಿಸುತ್ತಿದೆ. ವಿಶ್ವದಲ್ಲೇ ಅತೀ ಎತ್ತರಕ್ಕೆ ಹಾರುವ ಪಕ್ಷಿಗಳ ವರ್ಗದಲ್ಲಿ ಒಂದಾಗಿರುವ ಬಾರ್-ಹೆಡೆಡ್ ಹೆಬ್ಬಾತು ಹಕ್ಕಿಗಳು, ಮಂಗೋಲಿಯಾ, ಕಜಕಿಸ್ತಾನ್ ಮತ್ತು ರಷ್ಯಾದಂತಹ ಪ್ರದೇಶಗಳಿಂದ ಪ್ರತಿವರ್ಷ ಸುಮಾರು ೪,೮೫೦ ಕಿ. ಮೀ.ನಷ್ಟು ಅಸಾಧಾರಣ ವಲಸೆಯನ್ನು ಕೈಗೊಳ್ಳುತ್ತವೆ. ಅವುಗಳು ಪ್ರಯಾಣಿಸುವ ಸಮಯದಲ್ಲಿ ಅವು ಮೌಂಟ್ ಎವರೆಸ್ಟ್‌ಗಿಂತ ಹೆಚ್ಚಿನ ಎತ್ತರದಲ್ಲಿ ಹಾರಬಲ್ಲ ಶಕ್ತಿಯನ್ನು ಹೊಂದಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗಮನಾರ್ಹವಾಗಿ ಹದಿನಾರು ಕೆರೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೆಬ್ಬಾತುಗಳು ವಲಸೆ ಬಂದಿರುವುದನ್ನು ಕಾಣಬಹುದಾಗಿದೆ. ಇದು ತುಂಬಾ ನಾಚಿಕೆ ಮತ್ತು ಸೂಕ್ಷ್ಮ ಪಕ್ಷಿಯಾಗಿದ್ದು, ಸುಮಾರು ೫೦೦ರಿಂದ ೬೦೦ ಮೀಟರ್ ದೂರದಲ್ಲಿರುವ ಮನುಷ್ಯರ ಉಪಸ್ಥಿತಿಯನ್ನು ಗಮನಿಸಿ ಹಾರಿ ಹೋಗುತ್ತವೆ. ನೆರೆಯ ಕಳಲೆ ಕೆರೆ ಹಾಗೂ ಕಬಿನಿ ಹಿನ್ನೀರಿನಂತಹ ಜಲಮೂಲಗಳ ನಡುವೆ ಹಾರಾಟ ಮಾಡುವುದನ್ನು ಗಮನಿಸಬಹುದಾಗಿದೆ.

 

 

 

Tags:
error: Content is protected !!