ಬೆಂಗಳೂರು : ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ನಗರದ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಪೂರ್ಣ ಭಾಷಣವನ್ನು ಓದಿದರು.
ಕಳೆದ ವಾರ ವಿಧಾನಮಂಡಲ ಅಧಿವೇಶನದ ವೇಳೆ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಕೇವಲ ಮೊದಲ ಮತ್ತು ಕೊನೆಯ ಸಾಲುಗಳನ್ನು ಓದಿ ನಿರ್ಗಮಿಸಿದ್ದರು. ಇದು ವಿವಾದ ಕೂಡ ಸೃಷ್ಟಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ, ವಿಧಾನಮಂಡಲ ಜಂಟಿ ಅಧಿವೇಶನದ ಸಂದರ್ಭದಲ್ಲಿ ಉಂಟಾದ ವಿವಾದದ ನಂತರ ಗಣರಾಜ್ಯೋತ್ಸವ ಭಾಷಣಕ್ಕೆ ಸಂಬಂಧಿಸಿದಂತೆ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು.
ಆದರೆ, ಈ ಬಾರಿ ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಪೂರ್ಣವಾಗಿ ಓದಿದರು. ಭಾಷಣದಲ್ಲಿ ಸಂವಿಧಾನದ ಮಹತ್ವ, ರಾಜ್ಯದ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಆರ್ಥಿಕ ಬೆಳವಣಿಗೆ, ಜನರ ಏಳಿಗೆಗೆ ಸರ್ಕಾರದ ಬದ್ಧತೆ ಮತ್ತು ರಾಷ್ಟ್ರೀಯ ಏಕತೆಯನ್ನು ಒತ್ತಿ ಹೇಳಲಾಗಿದೆ ಎಂದು ತಿಳಿದುಬಂದಿದೆ.
ಇದು ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಇತ್ತೀಚಿನ ಉದ್ವಿಗ್ನತೆಯ ನಂತರದ ಸಕಾರಾತ್ಮಕ ಬೆಳವಣಿಗೆಯಾಗಿ ಕಂಡುಬಂದಿದೆ. ರಾಜ್ಯಪಾಲರು ಭಾಷಣದಲ್ಲಿ “ಜೈ ಹಿಂದ್, ಜೈ ಕರ್ನಾಟಕ” ಎಂದು ಕೊನೆಗೊಳಿಸಿದರು.





